ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಯಾರು ಅರ್ಥ ಮಾಡಿಕೊಳ್ಳಬೇಕು

ಕಲೀಮ್‌ ಉಲ್ಲಾ
Published 5 ಡಿಸೆಂಬರ್ 2023, 23:47 IST
Last Updated 5 ಡಿಸೆಂಬರ್ 2023, 23:47 IST
ಅಕ್ಷರ ಗಾತ್ರ

ಹಿರಿಯ ಗೆಳೆಯರೊಬ್ಬರು ಸಿಕ್ಕರು. ನಿವೃತ್ತರಾದ ಮೇಲೆ ಯಾರೂ ಮಾತಾಡಿಸಲು ಸಿಗುವುದಿಲ್ಲವೆಂದು ಕೊರಗಿದರು. ಎಲ್ಲರೂತಮ್ಮನ್ನು ಮರೆತಿದ್ದಾರೆ ಎಂಬ ಅಳಲು ಅವರನ್ನು ಕಾಡಿಸುತ್ತಿತ್ತು. ಮಾತುಗಳು ಮೃದುವಾಗಿ, ಹೃದಯ ಭಾರವಾಗಿದ್ದಂತೆ ಕಂಡಿತು.ಇನ್ನೂ ಬಗೆಹರಿಯದ ಮನೆಯ ಹಲವು ಸಮಸ್ಯೆಗಳ ಬಗ್ಗೆ ಮಾತಾಡಿದರು. ತಾವು ನಿರೀಕ್ಷೆ ಮಾಡಿದಂತೆ ಮಕ್ಕಳು ಬಾಳುತ್ತಿಲ್ಲ. ಮನೆಯಲ್ಲಿ ಸಿಗಬೇಕಾದ ಗೌರವ ದಕ್ಕುತ್ತಿಲ್ಲ. ಕಾಯಿಲೆ ಸತಾಯಿಸುತ್ತಿದೆ. ಮನೆಯ ಲೋನು ಬಾಕಿ ಇದೆ. ಹೀಗೇ ಉದ್ದ ಪಟ್ಟಿ
ಬೆಳೆಸಿದರು.

ಈ ಜಗತ್ತಿನಿಂದ ನೀವು ಗೌರವ ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ತಾವು ಅಧಿಕಾರದಲ್ಲಿದ್ದಾಗ, ಕೈ, ಕಾಲು, ತಲೆ ನೆಟ್ಟಗಿದ್ದಾ ಎಷ್ಟು ದರ್ಪದಿಂದ ನಡೆದುಕೊಂಡಿದ್ದೀರಿ ಎಂಬುದು ಮರೆತಿದ್ದೀರಿ. ನನ್ನನ್ನೂ ಸೇರಿದಂತೆ ಅನೇಕರಿಗೆ ತೀವ್ರವಾಗಿ ನೋಯಿಸಿದ್ದೀರಿ. ನಾನೀಗ ಮರೆತಿದ್ದೇನೆ. ಆದರೆ ಕೆಲವರು ಕಹಿಯನ್ನು ನುಂಗುವುದಿಲ್ಲ. ನಾಲಿಗೆ ಮೇಲೆ ಇಟ್ಟುಕೊಂಡು ಕಾಲ ಬಂದಾಗ ವಾಪಸ್ಸುಕೊಡುತ್ತಾರೆ. ನಮ್ಮ ಮಮತೆಯ ನಡವಳಿಕೆ, ತ್ಯಾಗಗುಣಗಳು ಮಾತ್ರ ನಮಗೆ ಆತ್ಮತೃಪ್ತಿ ಕೊಡುವ ಗೆಳೆಯರನ್ನು ಕುಟುಂಬವನ್ನು
ಕಟ್ಟಿ ಕೊಡಬಲ್ಲವು.

ನಾವು ಮತ್ತೊಬ್ಬರಿಂದ ಏನನ್ನೂ ನಿರೀಕ್ಷೆ ಮಾಡಬಾರದು. ಹೆಂಡತಿ, ಮಕ್ಕಳು, ಮಿತ್ರರು, ನೆರೆಹೊರೆಯವರು, ನೆಂಟರೆಲ್ಲರೂ ನಾನು ಅಪೇಕ್ಷೆ ಪಟ್ಟಂತೆ ಇರಬೇಕೆಂಬ ಆಲೋಚನೆಯೇ ತಪ್ಪು. ಈ ಪ್ರಕೃತಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮನುಷ್ಯನೂ ವಿಭಿನ್ನ. ವ್ಯಕ್ತಿಆಲೋಚಿಸುವ ರೀತಿ, ವಿಷಯ ಮತ್ತು ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವ ಬಗೆ ಎಲ್ಲವೂ ಬೇರೆ ಬೇರೆ. ಯಾರೂ ಯಾರಂತೆ
ಆಗುವುದಿಲ್ಲ ಮತ್ತು ಆಗಕೂಡದು.

ನಮ್ಮ ನಿರೀಕ್ಷೆಗಳನ್ನು ಮತ್ತೊಬ್ಬರು ಅರ್ಥ ಮಾಡಿಕೊಂಡು ಅದರಂತೆ ನಡೆದುಕೊಳ್ಳಬೇಕೆಂದು ಬಯಸುವುದು ಮೂರ್ಖತನ. ನೀವು ಯಾವತ್ತೂ ಯಾರ ನಿರೀಕ್ಷೆಗಳನ್ನೂ ಅರ್ಥ ಮಾಡಿಕೊಂಡವರಲ್ಲ. ಹಟ, ಒರಟುತನಗಳ ಮುಂದು ಮಾಡಿ ಬಾಳಿದವರು. ಹೀಗಿದ್ದಾಗಅನ್ಯರು ಮಾತ್ರ ನನ್ನ ಒಪ್ಪಿಕೊಳ್ಳಬೇಕು ಎಂದು ಯಾವ ಆಧಾರದ ಮೇಲೆ ಬಯಸುತ್ತಿದ್ದೀರಿ. ಆಸೆಯೇ ದುಃಖಕ್ಕೆ ಮೂಲ ಎಂದುಬುದ್ಧ ಹೇಳಿದ ಹಾಗೆ ಅತಿ ನಿರೀಕ್ಷೆಗಳೇ ಎಲ್ಲಾ ಶೋಕಗಳಿಗೆ ಮೂಲ. ನಿರೀಕ್ಷೆ ಬಿಡಿ. ಜೊತೆ ಬಾಳುವ ಎಲ್ಲರ ಮನಸುಗಳ ಅರ್ಥ
ಮಾಡಿಕೊಂಡು, ಹೊಂದಿಕೊಂಡು ಬದುಕುವ ಅಭ್ಯಾಸ ಇಟ್ಟುಕೊಳ್ಳಿ ಎಂದೆ. ಅವರು ದಿಟ್ಟಿಸಿ ನೋಡಿ ಹೊರಟು ಹೋದರು.

ಎಲ್ಲರೂ ಇಂತಹ ಬೇಗುದಿಯಲ್ಲೇ ನರಳುತ್ತಿದ್ದಾರೆಂದು ಭಾವಿಸುವುದು ತಪ್ಪು. ಮನಸ್ಸಿಗೆ ವಯಸ್ಸು ಮಾಡಿಕೊಳ್ಳದೆ, ಓದು, ಪ್ರವಾಸ, ವ್ಯವಸಾಯ, ಪೋಟೋಗ್ರಫಿಗಳಂತಹ ತಮ್ಮಿಷ್ಟದ ಹವ್ಯಾಸದಲ್ಲಿ ತೊಡಗಿಸಿಕೊಂಡ ಅನೇಕರಿದ್ದಾರೆ. ಹರೆಯದ ಹುಡುಗರಂತೆ ಚುರುಕಾಗಿದ್ದಾರೆ. ತಮ್ಮ ವೃತ್ತಿಗಳಿಂದ ಎಂದೂ ನಿವೃತ್ತರಾಗದ, ಬದುಕಿನ ಕನಿಷ್ಟ ಸುಖಗಾಣದ ರೈತರು, ಮಹಿಳೆಯರು, ಕಾರ್ಮಿಕರ ಬಗ್ಗೆ ಯೋಚಿಸಿದರೆ ನಮ್ಮೆಲ್ಲರ ರೋದನಗಳೇ ಅರ್ಥಹೀನ ಎನಿಸುತ್ತದೆ. ತಾಪತ್ರಯಗಳಿಲ್ಲದೆ ನಾವು ಜೀವಿಸುವ ಭರವಸೆಯನ್ನೇ ಇಟ್ಟುಕೊಳ್ಳಬಾರದು. ಇವುಗಳೊಂದಿಗೆ ಜೀವಿಸುವ ಕಲೆಯ ದಾರಿ ಹುಡುಕಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT