ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಸಿಟ್ಟಿನ ಕೈಗೆ ಸಿಕ್ಕಿಬಿದ್ದ ಮನಸ್ಸು

ನುಡಿ ಬೆಳಗು
Published 12 ಡಿಸೆಂಬರ್ 2023, 18:23 IST
Last Updated 12 ಡಿಸೆಂಬರ್ 2023, 19:31 IST
ಅಕ್ಷರ ಗಾತ್ರ

‘ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ, ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ, ನೆರೆಮನೆಯ ಸುಡದು ಕೂಡಲಸಂಗಮದೇವಾ’ ಎಂದು ಬಸವಣ್ಣನವರು ಕೋಪದ ಸ್ವರೂಪದ ಬಗ್ಗೆ ಹೇಳಿದ್ದಾರೆ.

ನನ್ನ ಕಂಡು ಸಿಟ್ಟಾಗುವವರ ಮೇಲೆ ತಿಳಿವಳಿಕೆ ಇರುವ ನಾನೇಕೆ ಕನಲಬೇಕು. ಅದರಿಂದ ನನಗಾಗುವ ಒಳಿತೂ ಇಲ್ಲ. ನಾ ಮುನಿದವರಿಗೆ ಆಗುವ ತೊಂದರೆಯೂ ಇಲ್ಲ. ದೇಹದ ಮೂಲಕ ವ್ಯಕ್ತವಾಗುವ ಕೋಪ ಸಮಾಜದಲ್ಲಿ ನನಗಿರುವ ಮಹತ್ವ, ಗೌರವ, ಮತ್ತು ದೊಡ್ಡತನಗಳನ್ನು ನಾಶ ಮಾಡುತ್ತದೆ. ಯಾರಿಗೂ ಕಾಣದಂತೆ ಮನದಲ್ಲೇ ಕೋಪವನ್ನು ಮುಚ್ಚಿಟ್ಟುಕೊಂಡರೆ ಅದು ನನ್ನ ತಿಳಿವಳಿಕೆ, ಬುದ್ಧಿಶಕ್ತಿ ಮತ್ತು ಮನಃಸ್ಥಿತಿಯನ್ನೇ ಕೊಲ್ಲುತ್ತದೆ.

ಮನುಷ್ಯನ ಕ್ರೋಧ ಬೆಂಕಿಯಂತೆ. ತಾನು ಹುಟ್ಟಿದ ಜಾಗವನ್ನು ಸುಟ್ಟು ನಾಶ ಮಾಡಿದ ಮೇಲೆಯೇ ಅದು ಬೇರೆ ಕಡೆ ನಾಲಿಗೆ ಚಾಚುವುದು. ಸಿಟ್ಟು ತಿಳಿಮನಸ್ಸನ್ನು ಅಕ್ಷರಶಃ ಸುಟ್ಟು ಕರಕಲಾಗುತ್ತದೆ. ಕೋಪ ಶಮನವಾದರೂ ಅದರ ತಾಪತಗ್ಗುವುದಿಲ್ಲ. ಅದು ಒಳಗೊಳಗೇ ನಮ್ಮ ವ್ಯಕ್ತಿತ್ವವನ್ನು ನಾಶ ಮಾಡುತ್ತದೆ. ಬೇರೆಯವರ ದಮನಿಸಲು ನಾವು ಬಳಸುವ ಸೆಡವು ಮೊದಲು ನಮ್ಮನ್ನೇ ದಹಿಸುತ್ತದೆ.

ಕೋಪದ ಜೊತೆ ಹುಟ್ಟುವ ಜಗಳ, ಬೈಗುಳ, ದ್ವೇಷ, ಹೊಡೆದು ಕೊಲ್ಲುವ ಆಲೋಚನೆಗಳು ಕೂಡ ಒಳಿತನ್ನು ತರುವಂತವಲ್ಲ. ಇಷ್ಟೆಲ್ಲಾ ಗೊತ್ತಿದ್ದರೂ ಮನುಷ್ಯರು ಕೋಪದ ಪಾಶದೊಳಗೆ ಸಿಕ್ಕಿ ಬೀಳುತ್ತಾರೆ. ಸಹಜವಾಗಿ ಅತಿ ಕೋಪಿಷ್ಠರು ಆತ್ಮೀಯರ ಸಲಹೆಗಳನ್ನು ತಡವಾಗಿ ಸ್ವೀಕರಿಸುತ್ತಾರೆ. ಒಳ್ಳೆಯ ವ್ಯಕ್ತಿಯೊಂದಿಗೆ ಇದ್ದರೆ ನಮ್ಮ  ಕೋಪವು ಬೇಗನೆ ಸಾಯುತ್ತದೆ ಎನ್ನುತ್ತಾರೆ. ಆದರೆ ಅಂತಹ ಒಳ್ಳೆಯವರು ಈಗೆಲ್ಲಿ ಸಿಗುತ್ತಾರೆ?

ಕನಲುವಿಕೆ ಒಂದು ಭಾವನಾತ್ಮಕ ವಿಚಾರ. ಪ್ರತಿ ಮನುಷ್ಯನಿಗೂ ಒಂದಲ್ಲ ಒಂದು ಸಂದರ್ಭಗಳಲ್ಲಿ ಕೋಪಕ್ಕೆ ತುತ್ತಾಗುತ್ತಾನೆ. ನಾನು ಎಂದಿಗೂ ಕೋಪ ಮಾಡಿಕೊಂಡಿಲ್ಲ ಎಂದು ಹೇಳುವ ವ್ಯಕ್ತಿಗಳು ಈಗ ಸಿಗುವುದೇ ಇಲ್ಲ. ಕೋಪಗಳಲ್ಲಿ ಮುಂಗೋಪ, ಹುಸಿಕೋಪ, ಉಗ್ರಕೋಪ, ದ್ವೇಷದ ಕೋಪ ಎಂದು ವಿಗಂಡಿಸಿ ನಮ್ಮ ಕ್ರೋಧದ ರೂಪ ಇದರಲ್ಲಿ ಯಾವುದೆಂದು ಹುಡುಕಿಕೊಳ್ಳಬಹುದು.

ಕೋಪಿಷ್ಠರ ಮಾತಷ್ಟೇ ಒರಟು, ಮನಸ್ಸು ಬಲು ಮೃದು ಎನ್ನುತ್ತಾರೆ ಕೆಲವರು. ಇದನ್ನು ಪೂರಾ ಒಪ್ಪುವುದು ಕೂಡ ಕಷ್ಟ.  ಕೋಪದಿಂದ ಉಂಟಾಗುವ ನಷ್ಟಗಳು ಹಲವಾರು. ಇದರಿಂದ ನೀವು ನಿಮ್ಮ ಸುಂದರ ಬಾಂಧವ್ಯಗಳನ್ನು ಕಳೆದುಕೊಳ್ಳಬಹುದು. ಅತಿಯಾದ ಕೋಪ ನಿಮ್ಮ ಆರೋಗ್ಯವನ್ನು ಕೂಡ ತಿಂದುಹಾಕುತ್ತದೆ. ಕೋಪದಿಂದ ದೇಹ, ಮನಸ್ಸಿಗಾಗುವ ದುಷ್ಪರಿಣಾಮಗಳು ಅನೇಕ. ಕೋಪ ಬರುವುದು ಒಂದು ನೈಸರ್ಗಿಕವಾದ ಪ್ರಕ್ರಿಯೆ. ಕೋಪ ಬಂದಾಗ ದೇಹದ ಒಳಗಿಟ್ಟುಕೊಂಡು ಕೊರಗುವುದಕ್ಕಿಂತ ಅದನ್ನು ಹೊರಕ್ಕೆ ಎಳೆದು ಹಾಕುವುದು ಒಳ್ಳೆಯದು ಎಂದು ಹಲವರು ಹೇಳುತ್ತಾರೆ. ಇದರ ಬದಲಿಗೆ ಕೋಪವೇ ಬರದಂತೆ ಅಭ್ಯಾಸ ಮಾಡಿಕೊಳ್ಳುವುದು ಇನ್ನೂ ಉತ್ತಮ. 

ವಿಷಯಗಳು ನಾವು ಅಂದುಕೊಂಡಂತೆ ಆಗದಿದ್ದಾಗ ಪ್ರತಿಯೊಬ್ಬರಿಗೂ ಕೋಪ ಬಂದೇ ಬರುತ್ತದೆ. ಹೀಗಾಗಿ ಹೀಗೆಯೇ ಆಗಬೇಕು ಎಂಬ ಹಟ ಹಿಡಿಯುವುದನ್ನು ಬಿಟ್ಟೇ ಬಿಡುವುದು ವಾಸಿ. ಈ ಜಗತ್ತಿನಲ್ಲಿ ನಾವಂದುಕೊಂಡಂತೆ ಏನೇನೂ ಆಗುವುದಿಲ್ಲ ಎಂಬ ಪರಮ ಸತ್ಯ ನಮಗೆ ಗೊತ್ತಿದ್ದರೆ ಒಳ್ಳೆಯದು. ಕೋಪದಲ್ಲಿ ಸ್ಫೋಟವಾಗುವ ಅನೇಕರು ಮುಂದಾಗುವ ದುಷ್ಪರಿಣಾಮಗಳನ್ನು ಮರೆತುಬಿಡುತ್ತಾರೆ. ಸಿಟ್ಟಿನ ಪದಗಳು ಮನುಷ್ಯನಿಗೆ ಗಾಸಿ ಮಾಡುವಷ್ಟು ಬೇರೆ ಏನು ಕೂಡ ಮಾಡಲಾರವು. ನಾವು ಆಡಿದ ಮಾತಿಗೆ ನಾವೇ ಬೆಲೆ ತೆರಬೇಕಾಗುತ್ತದೆ. ಸಿಟ್ಟಿನಲ್ಲಿ ನುಡಿದ ನುಡಿ ಬಹಳ ದಿನಗಳವರೆಗೆ ನಮ್ಮನ್ನು ಕಾಡಬಹುದು. ಕೋಪಿಸುವುದರಲ್ಲಿ ನಿಧಾನಿಯಾದವನು ತನ್ನ ದೊಡ್ಡತನದ ಕೇಡನ್ನು ತಿಳಿವಳಿಕೆಯ ಹದವನ್ನು ಎಂದೆಂದೂ ಕೆಡಿಸಿಕೊಳ್ಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT