ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಮಾನವೀಯತೆಯ ಸ್ಪರ್ಶ

Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ಡಾ ಅಬ್ದುಲ್‌ ಕಲಾಂ ಅವರು ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದ ಸಂದರ್ಭ. ಹೈದರಾಬಾದಿನಲ್ಲಿ ಡಿಆರ್‌ಡಿಓ ಮುಖ್ಯಸ್ಥರಾಗಿದ್ದ ಕಲಾಮ್‌ ಅವರ ಪ್ರಯೋಗಾಲಯದಲ್ಲಿ ಅವರನ್ನು ಭೇಟಿಯಾಗಲು ಪ್ರೊಫೆಸರ್‌ ಪ್ರಸಾದ್‌ ಎಂಬ ಮೂಳೆತಜ್ಞರು ಬಂದರು. ಹೊರಗಿನ ಅತ್ಯಧಿಕ ಉಷ್ಣವನ್ನು ತಡೆಯಲು ಅಗ್ನಿ ಕ್ಷಿಪಣಿಯಲ್ಲಿ ಬಳಸಿದ್ದ ಕಾರ್ಬನ್‌ ಕಾರ್ಬೈಡ್‌ನ ಹೀಟ್‌ ಶೀಲ್ಡ್‌ ನೋಡಿ ವೈದ್ಯರು ಅಚ್ಚರಿಪಟ್ಟರು. ಅದನ್ನು ಮುಟ್ಟಿ, ಎತ್ತಿ ನೋಡಿ ಅಚ್ಚರಿಯಿಂದ ಇದು ಎಷ್ಟು ಹಗುರವಾಗಿದೆ ಆದರೆ ಅಷ್ಟೇ ಬಲಿಷ್ಠವಾಗಿದೆ ಎಂದು ಪದೇ ಪದೇ ಹೇಳಿದ ಪ್ರಸಾದ್‌ ಅವರು ಕಲಾಂರನ್ನು ತಮ್ಮ ಆಸ್ಪತ್ರೆಗೆ ಬರುವಂತೆ ಕೋರಿದರು.

ಕಲಾಂ ಅಲ್ಲಿಗೆ ಹೋದಾಗ ಅವರಿಗೆ ಸುಮಾರು ನಲವತ್ತು ಮಂದಿ ಹದಿನೈದು ವರ್ಷದೊಳಗಿನ ಮಕ್ಕಳನ್ನು ತೋರಿಸಿದರು ವೈದ್ಯರು. ಆ ಮಕ್ಕಳೆಲ್ಲ ಸುಮಾರು ನಾಲ್ಕು ಕೆಜಿ ತೂಕದ ಕ್ಯಾಲಿಪರ್ಸ್‌ ಅನ್ನು ಧರಿಸಿದ್ದರು. (ಕ್ಯಾಲಿಪರ್ಸ್‌ ಎಂದರೆ ನಡೆಯಲು ತೊಂದರೆಯಿರುವವರು ನಡೆಯಲು ಆಧಾರಕ್ಕಾಗಿ ಕಾಲಿಗೆ ಕಟ್ಟಿಕೊಳ್ಳುವ ಲೋಹದ ಸಲಕರಣೆ. ಇದನ್ನು ಬ್ರೇಸ್‌ ಎಂದೂ ಕರೆಯುತ್ತಾರೆ) ಕೆಲವು ಮಕ್ಕಳು ಭಾರದ ಕಾರಣದಿಂದ ಕಿರಿಕಿರಿಯಾಗಿ ಕ್ಯಾಲಿಪರ್ಸ್‌ ಅನ್ನು ಧರಿಸಿರಲಿಲ್ಲ. ವೈದ್ಯರನ್ನು ನೋಡಿದವರೇ ಗಡಿಬಿಡಿಯಿಂದ ಧರಿಸಲು ಶುರುಮಾಡಿದಾಗ ವೈದ್ಯರೆಂದರು, ‘ಸರ್‌, ಈ ಮಕ್ಕಳು ಕ್ಯಾಲಿಪರ್ಸ್‌ನ ಭಾರದಿಂದ ಬಹಳ ಸಂಕಟ ಪಡುತ್ತಿದ್ದಾರೆ, ಇವನ್ನು ಧರಿಸಿ ನಡೆಯುವುದು ಅವರಿಗೆ ಬಹುದೊಡ್ಡ ಸಮಸ್ಯೆ. ಈಗ ನಾವು ನಿಮ್ಮ
ಪ್ರಯೋಗಾಲಯದಲ್ಲಿ ನೋಡಿದ ವಸ್ತು ಬಹಳ ಹಗುರವಾಗಿ ಗಟ್ಟಿಯಾಗಿದೆ, ಈ ಮಕ್ಕಳಿಗೆ ಸಹಾಯ ಮಾಡಲು ನೀವು ಏನಾದರೂ ಮಾಡಬಹುದೇ?’

ಮುಂದೆ ಒಂದು ವಾರದಲ್ಲಿ ಕ್ಯಾಲಿಪರ್ಸ್‌ನ ಅಚ್ಚುಗಳು ತಯಾರಾದವು. ಮರುವಾರವೇ ಕೇವಲ ನಾನೂರು ಗ್ರಾಮಿನ ಕ್ಯಾಲಿಪರ್ಸ್‌ಗಳು ತಯಾರಾದವು. ಈ ಹಗುರ ಕ್ಯಾಲಿಪರ್ಸ್‌ ಧರಿಸಿದ ಮಕ್ಕಳು ಹತ್ತೇ ದಿನಗಳೊಳಗೆ ಆರಾಮವಾಗಿ ನಡೆಯುವುದು ಮಾತ್ರವಲ್ಲ ಓಡಲೂ ಪ್ರಾರಂಭಿಸಿದರು. ಅವರ ತಂದೆತಾಯಿಯರ ಕಣ್ಣುಗಳಲ್ಲಿ ನೀರು. ಆ ಕಣ್ಣೀರೇ ತಾವು ಜೀವನದಲ್ಲಿ ಪಡೆದ ಅತ್ಯುನ್ನತ ಪುರಸ್ಕಾರ ಎಂದಿದ್ದರು ಅಬ್ದುಲ್‌ ಕಲಾಂ.‌

ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಇವೆಲ್ಲವಕ್ಕೂ ಮಾನವೀಯತೆಯ ಸ್ಪರ್ಶವಿದ್ದಾಗ ಅದ್ಭುತಗಳು ಸೃಷ್ಟಿಯಾಗುತ್ತವೆ. ಅದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆ. ನಮ್ಮ ಉದ್ಯೋಗದ ಕ್ಷೇತ್ರ ಯಾವುದೇ ಇರಲಿ, ನಮ್ಮ ವ್ಯಾಪ್ತಿಯೊಳಗೇ ಕೊಂಚ ಸಮಾಜಮುಖಿಯಾಗಿ ಯೋಚಿಸಿದರೆ, ಸ್ವಲ್ಪ ಸಹಾನುಭೂತಿ, ಚೂರು ಕರುಣೆ ಎದೆಯಲ್ಲಿದ್ದರೆ ಇಂತಹ ಅದೆಷ್ಟೋ ಕೆಲಸಗಳು ಸಾಧ್ಯವಾಗುತ್ತವೆ. ಮತ್ತು ಇವೆಲ್ಲ ಸಂಗತಿಗಳು ಸೇರಿ ಸಮಾಜದಲ್ಲಿ ದೊಡ್ಡ ಬದಲಾವಣೆ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT