ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಜ್ಞಾನ

Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಊರ ತುಂಬಾ ಸುದ್ದಿ– ಸಂತ ತುಕಾರಾಂನನ್ನು ನೋಡಲು ಮತ್ತೊಬ್ಬ ಮಹಾನ್ ಸಂತ ಬರುತ್ತಿದ್ದಾನೆಂದು. ಬಾಯಿಂದ ಬಾಯಿಗೆ ಹರಡುತ್ತಾ ಈ  ವಿಷಯವಾಗಿ ಜನರಲ್ಲಿ ಸಂಚಲನ ಮೂಡಿತು. ‘ಏನನ್ನು ಮಾತಾಡುತ್ತಾರೆ ಆಧ್ಯಾತ್ಮವನ್ನು ಬಿಟ್ಟು... ನಮಗೂ ಒಂದಿಷ್ಟು ಒಳ್ಳೆಯ ಸಂಗತಿಗಳನ್ನು ಕೇಳುವ ಮಹದವಕಾಶ’ ಎಂದು ಮಾತಾಡಿಕೊಂಡರು ಕೆಲ ಹಿರಿಯರು. ಇನ್ನು ಕೆಲವರು, ‘ಇಲ್ಲ ಅವರಿಬ್ಬರೂ ಸಾಧಕರು ನಮಗವರ ಮಾತುಗಳು ಅರ್ಥವಾಗುತ್ತದೋ ಇಲ್ಲವೋ’ ಎಂದು ಸಂದೇಹವನ್ನು ವ್ಯಕ್ತಪಡಿಸಿದರು. ಹೀಗೆ ಅವರವರಿಗೆ ತೋಚಿದಂತೆ ಮಾತಾಡಿಕೊಂಡರು. 

ಸಂಜೆಯ ಹೊತ್ತಿಗೆ ಊರ ಮುಂದಿನ ಮರದ ಕೆಳಗೆ ಕುಳಿತಿದ್ದ ತುಕಾರಾಂನನ್ನು ಇನ್ನೊಬ್ಬ ಸಂತ ಬಂದು ಸೇರಿದ. ಕುತೂಹಲದಿಂದ ದೊಡ್ಡವರೆಲ್ಲಾ ಅಲ್ಲಿಗೆ ಬಂದು ಸೇರಿದರು. ಆಡುತ್ತಿದ್ದ ಮಕ್ಕಳನ್ನು ಗದರಿಸಿ ಸುಮ್ಮನಾಗಿಸಿ ದೂರ ಕಳಿಸಿದರು. ಯುವಕರು ಕೂಡ ಏನು ನಡೆಯಬಹುದು ಎಂದು ಬಂದು ನೆರೆದರು. ಊರ ಬಾವಿಯಿಂದ ಹೆಂಗಸರು ನೀರನ್ನು ಸೇದಿ ಕೊಡಗಳಲ್ಲಿ ತರುವಾಗ ಬಳೆಯ ಕಿಣಿಕಿಣಿ, ಕೊಡದ ನೀರ ತುಳುಕಾಟ ಕೇಳುವಷ್ಟು ನಿಶ್ಯಬ್ದ ಆವರಿಸಿತ್ತು ಸ್ವಲ್ಪ ಹೊತ್ತಿನಲ್ಲಿ ಅದೂ ಕೇಳದಂತಾಯಿತು. ಇಬ್ಬರು ಸಂತರು ಎದುರು ಕೂತೇ ಇದ್ದಾರೆ. ಊರವರೆಲ್ಲಾ ಮಾತಿಗಾಗಿ ಕಾಯುತ್ತಲೇ ಇದ್ದಾರೆ. 

ತಾಳ್ಮೆಗೆ ಎಲ್ಲೆ ಇರುತ್ತದೆ. ರಾತ್ರಿಯಾಗುತ್ತಿದ್ದಂತೆ ಒಬ್ಬೊಬ್ಬರಾಗಿ ಹೊರಡುತ್ತಾರೆ. ಆದರೆ ಇದ್ಯಾವುದರ ಕಡೆಗೂ ಗಮನವೇ ಇಲ್ಲದ ಇಬ್ಬರು ಸಂತರು ಎದುರು ಕೂತೇ ಇದ್ದಾರೆ ಮಾತೇ ಇಲ್ಲದೆ. 

ಕತ್ತಲೆ ಕಳೆದು ಬೆಳಕು ಹರಿಯುವಾಗ ಮತ್ತೆ ಊರಜನ ನಿದ್ದೆಯಿಂದ ತಿಳಿದೆದ್ದು ಓಡಿಬಂದು ನೋಡುತ್ತಾರೆ. ಮತ್ತೆ ಇಬ್ಬರೂ ಹಾಗೇ ಕೂತಿದ್ದಾರೆ ಸೂರ್ಯೋದಯವಾದಾಗ ಒಬ್ಬರಿಗೊಬ್ಬರು ನಮಸ್ಕರಿಸಿಕೊಂಡರು.  ಆ ಸಂತ ಅಲ್ಲಿಂದ ಹೊರಟೂ ಹೋದ. ಕುತೂಹಲ ತಡೆಯಲಾಗದೆ ಜನ ತುಕಾರಾಂಗೆ ‘ನೀವಿಬ್ಬರೂ ಏನು ಮಾತಾಡದೆ ಹೀಗೆ ಮೌನವಾಗಿ ಕುಳಿತಿದ್ದಿರಲ್ಲಾ’ ಎಂದು ಪ್ರಶ್ನಿಸುತ್ತಾರೆ. ಆಗ ತುಕಾರಾಂ, ‘ಮತ್ತೆ ಏನನ್ನು ಮಾಡಬೇಕಿತ್ತು? ನಿಮಗೆಲ್ಲಾ ಕೇಳುವ ಹಾಗೆ ಮಾತಾಡಬೇಕಿತ್ತಾ’ ಎನ್ನುತ್ತಾನೆ.

‘ನಮಗೆ ಕೇಳುವುದು ಬೇಡ ನಿಮಗಾದರೂ ಕೇಳಬೇಕಲ್ಲಾ? ಎಂದರು ನೆರೆದ ಜನ. ಮಾತಾಡುವುದು ಎಂದರೇನು? ಎಲ್ಲವನ್ನೂ ಬಾಯಿಬಿಟ್ಟು ಹೇಳಬೇಕೆನ್ನುವುದೇ? ಮೌನದಲ್ಲಿ ಸಂವಹನವಿಲ್ಲವೇ? ಮಳೆಬಿದ್ದ ತಕ್ಷಣ ಬೀಜಕ್ಕೆ ಮೊಳೆಯುವುದನ್ನು ಯಾವ ಮಾತು ಹೇಳಿಕೊಟ್ಟಿತು? ಎಲ್ಲರಿಗೂ ಎಲ್ಲವೂ ಹೇಳುವುದರಿಂದ ಅರ್ಥವಾಗುವುದಿಲ್ಲ. ಎಲ್ಲ ವಿಷಯಗಳನ್ನು ಎಲ್ಲರೂ ತಿಳಿದುಕೊಳ್ಳಲೂ ಬೇಕಿಲ್ಲ’ ಎನ್ನುತ್ತಾನೆ ತುಕಾರಾಂ.

ಜ್ಞಾನ ಎನ್ನುವುದು ಶೋಧವಾಗಬೇಕೇ ಹೊರತು, ನನಗೂ ಗೊತ್ತಿದೆ ಎನ್ನುವ ತೋರುಗಾಣಿಕೆಯಲ್ಲ ಎನ್ನುವುದನ್ನು ತುಕಾರಾಂ ಜಗತ್ತಿಗೆ ತಿಳಿಸಿದ್ದು ಹೀಗೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT