ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಉದ್ದೇಶ ಒಳ್ಳೆಯದಾಗಿದ್ದಾಗ ಎಲ್ಲವೂ ಒಳಿತಾಗುತ್ತದೆ

ನವೀನ ಕುಮಾರ್‌ ಹೊಸದುರ್ಗ
Published 11 ಮಾರ್ಚ್ 2024, 0:22 IST
Last Updated 11 ಮಾರ್ಚ್ 2024, 0:22 IST
ಅಕ್ಷರ ಗಾತ್ರ

ಒಮ್ಮೆ ಒಂದು ಕಾಡಿನಲ್ಲಿ ಗರ್ಭಿಣಿ ಹರಿಣಿಯೊಂದು ತನ್ನ ಪ್ರಸವಕ್ಕಾಗಿ ಸೂಕ್ತ ಸ್ಥಳವನ್ನು ಅರಸುತ್ತಿತ್ತು. ತನ್ನ ಸಂತಾನವನ್ನು ಸರಿಯಾದ ಸ್ಥಳದಲ್ಲಿ ಈ ಜಗತ್ತಿಗೆ ತರುವ ಆಲೋಚನೆ ಅದರದ್ದು. ಆದರೆ ಇದ್ದಕ್ಕಿದ್ದಂತೆ ಕಾಡಿನಲ್ಲಿ ಎದ್ದ ಕಾಳ್ಗಿಚ್ಚು ಆ ಗರ್ಭಿಣಿ ಜಿಂಕೆಯನ್ನು ಆತಂಕದಿಂದ ಓಡುವಂತೆ ಮಾಡಿತು. ಓಡುತ್ತಾ ಓಡುತ್ತಾ ಅದು ಒಂದು ನದಿ ದಂಡೆಗೆ ಬಂದಿತು.  ಮುಂದೆ ಹೋಗುವಂತಿಲ್ಲ, ಹಿಂದಿನಿಂದ ಕಾಳ್ಗಿಚ್ಚು. ಅದೇ ಸಮಯಕ್ಕೆ ಒಂದು ಹುಲಿ ಅದನ್ನು ಕಬಳಿಸಲು ಸಿದ್ಧವಾಗಿ ಕುಳಿತಿತ್ತು.  ಇನ್ನೊಂದು ಬದಿಯಿಂದ ವ್ಯಾಧನೊಬ್ಬ ಜಿಂಕೆಯನ್ನು ಬೇಟೆಯಾಡಲು ತನ್ನ ಬಿಲ್ಲಿಗೆ ಬಾಣವೇರಿಸಿ ಸಿದ್ಧನಾಗಿದ್ದ. ಇಂತಹ ವಿಷಮ ಪರಿಸ್ಥಿತಿಯಲ್ಲಿ ತನ್ನ ಹಾಗೂ ತನ್ನ ಸಂತಾನದ ಕಥೆ ಮುಗಿಯಿತೆಂದು ಜಿಂಕೆ ಚಿಂತಿತವಾಯಿತು. ಆದರೆ ಅದೇ ಸಮಯಕ್ಕೆ ಇದ್ದಕ್ಕಿದ್ದಂತೆ ಕಾರ್ಮೋಡ ಕವಿದು, ಜೋರಾಗಿ ಸುರಿದ ಮಳೆ ಕಾಳ್ಗಿಚ್ಚನ್ನು ಹಠಾತ್ತನೆ ನಂದಿಸಿತು. ಆಗ ಆಗಸದಲ್ಲಿ ಹೊಮ್ಮಿದ ಕೋಲ್ಮಿಂಚೊಂದು ಆ ಬೇಟೆಗಾರನ ಕಣ್ಣಿಗೆ ಬಡಿದು ಅವನನ್ನು ಕುರುಡನನ್ನಾಗಿಸಿ, ಅವನು ಬಿಟ್ಟ ಬಾಣ ಗುರಿ ತಪ್ಪಿ ಬಾಯ್ಕಳೆದು ನಿಂತಿದ್ದ ವ್ಯಾಘ್ರನನ್ನು ಸಾಯಿಸಿಬಿಟ್ಟಿತು.

ಹೀಗೆ ಏಕಾಏಕಿ ಸಂಭವಿಸಿದ ಘಟನೆಗಳು ಜಿಂಕೆಯ ಬದುಕಲ್ಲಿ ಕವಿದಿದ್ದ ಕಾರ್ಮೋಡವನ್ನು ದೂರಾಗಿಸಿ ಅದು ನಿಶ್ಚಿಂತೆಯಿಂದ ತನ್ನ ಮರಿಗೆ ಜನ್ಮ ನೀಡುವಂತಾಯ್ತು.

ನಾವು ಮಾಡುವ ಕೆಲಸದ ಉದ್ದೇಶ ಒಳ್ಳೆಯದಾಗಿದ್ದರೆ, ಅದರಲ್ಲಿ ಪ್ರಾಮಾಣಿಕತೆ ಇದ್ದರೆ ಪರಿಸ್ಥಿತಿ ಎಷ್ಟೇ ಕಷ್ಟಕರವಾಗಿದ್ದರೂ, ಅದು ಅನುಕೂಲಕರ ವಾತಾವರಣವಾಗಿ ಪರಿವರ್ತಿತವಾಗಬಹುದು.  ನಮ್ಮ ಕರ್ತವ್ಯವನ್ನು ತಾಳ್ಮೆಯಿಂದ ಪ್ರಾಮಾಣಿಕವಾಗಿ ನಿರ್ವಹಿಸುವುದಷ್ಟೇ ನಮ್ಮ ಕೆಲಸ. ಹೊರಗಿನ ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಇದಕ್ಕಾಗಿ ಕೊರಗುತ್ತಾ ಕೂರುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಕಾರ್ಯವನ್ನು ನಮ್ಮ ಆತ್ಮ ತೃಪ್ತಿಗೆ ಅನುಗುಣವಾಗಿ, ಒಳ್ಳೆಯ ಮನಸ್ಸಿನಿಂದ ನಿರ್ವಹಿಸುತ್ತಿದ್ದರೆ ಪ್ರತಿಕೂಲ ವಾತಾವರಣವೂ, ಅನುಕೂಲಕರವಾಗಿ ಬದಲಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT