ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಕವಿ ಮತ್ತು ಪ್ರಭುತ್ವ

‍ಪ್ರೊ. ಎಂ. ಕೃಷ್ಣೇಗೌಡ
Published 8 ಫೆಬ್ರುವರಿ 2024, 23:42 IST
Last Updated 8 ಫೆಬ್ರುವರಿ 2024, 23:42 IST
ಅಕ್ಷರ ಗಾತ್ರ

ಸಾವಿರದ ಒಂಬೈನೂರ ಎಪ್ಪತ್ತನೆಯ ದಶಕ. ಆಗ ದೇವರಾಜ ಅರಸು ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.

ಒಮ್ಮೆ ಮುಖ್ಯಮಂತ್ರಿಯವರು ಧಾರವಾಡಕ್ಕೆ ಹೋಗಿದ್ದರು. ಧಾರವಾಡಕ್ಕೆ ಬಂದಮೇಲೆ ಸಾಧನಕೇರಿಗೆ ಹೋಗಿ ವರಕವಿ ದ. ರಾ. ಬೇಂದ್ರೆಯವರನ್ನು ಭೇಟಿಯಾಗಿ ಬರಬೇಕೆನ್ನಿಸಿತು ಅವರಿಗೆ. ಕವಿಗಳು ಮನೆಯಲ್ಲೇ ಇದ್ದಾರೆಂಬುದನ್ನು ಖಚಿತಪಡಿಸಿಕೊಂಡು ಮುಖ್ಯಮಂತ್ರಿಗಳು ಅವರ ಮನೆಗೆ ಹೋದರು. ಇದ್ದಕ್ಕಿದ್ದಂತೆ ಮುಖ್ಯಮಂತ್ರಿಗಳು ಮನೆಬಾಗಿಲಿಗೆ ಬಂದದ್ದನ್ನು ಕಂಡು ಬೇಂದ್ರೆಯವರಿಗೆ ಅತೀವ ಆನಂದವಾಯಿತು. ಮುಖ್ಯಮಂತ್ರಿಗಳನ್ನು ಸ್ವಾಗತಿಸಿ ಪ್ರೀತಿಯಿಂದ ಕೈಹಿಡಿದು ಮನೆಯೊಳಗೆ ಕರೆದುಕೊಂಡು ಹೋದರು. ಆದರೋಪಚಾರಗಳೆಲ್ಲಾ ಆದವು. ಆಮೇಲೆ ಮುಖ್ಯಮಂತ್ರಿ ಮತ್ತು ವರಕವಿ ಇಬ್ಬರೂ ಸುಮಾರು ಹೊತ್ತು ಕೂತು ಅದೂ ಇದೂ ಮಾತಾಡಿದರು. ಹರಟಿದರು. ಇಬ್ಬರಿಗೂ ಸಂತೋಷವಾಯಿತು. ಆಮೇಲೆ ‘ನಾನಿನ್ನು ಬರಲೇ?’ ಎಂದು ಮುಖ್ಯಮಂತ್ರಿ ಅರಸು ಅವರು ಎದ್ದು ನಿಂತು ನಮಸ್ಕರಿಸಿದರು.

ಬೇಂದ್ರೆಯವರು ಅವರನ್ನು ಅದೊಂದು ವಾತ್ಸಲ್ಯಭಾವದಿಂದ ಮುಟ್ಟಿ ಮೈದಡವಿ ಬಾಗಿಲಿಂದಾಚೆಯವರೆಗೂ ಕಳುಹಿಸಲು ಬಂದರು. ಆಗ ಅರಸು ಅವರು ಒಂದು ಕ್ಷಣ ನಿಂತು ‘ಕವಿಗಳೆ, ಮುಖ್ಯಮಂತ್ರಿಯಾಗಿ ನಾನು ಇಂದು ನಿಮ್ಮ ಮನೆಗೆ ಬಂದಿದ್ದೇನೆ. ಬಂದ ಹಾಗೇ ಮರಳಿ ಹೋಗಲು ನನಗೆ‌ ಇಷ್ಟವಿಲ್ಲ. ನನಗೆ ಈಗ ಅಧಿಕಾರವಿದೆ. ಅಧಿಕಾರವಿದ್ದಾಗ ಏನಾದರೂ ಮಾಡಬೇಕು. ನಾನೇನು ಮಾಡಬೇಕು ನಿಮಗೆ ಹೇಳಿ. ಮಾಡುತ್ತೇನೆ’.

ಮುಖ್ಯಮಂತ್ರಿಯವರು ಹಾಗೆ ಅಂದಾಗ ಬೇಂದ್ರೆಯವರು ಒಮ್ಮೆ ಗೊಳ್ಳನೆ ನಕ್ಕರು. ಅವರು ನಕ್ಕು ನಿಂತ ಮೇಲೆ ಬಂದ ಉತ್ತರ ಮಾತ್ರ ಅಲ್ಲಿದ್ದವರಿಗೆಲ್ಲಾ ಅನಿರೀಕ್ಷಿತವಾಗಿತ್ತು. 

‘ಹೌದಪಾ, ನೀ ಮುಖ್ಯಮಂತ್ರಿನss ಖರೆ. ಇರಬೌದು, ಆದರ ಕವೀಗೇನ್ ಮಾಡಂಗದೀ ನೀ? ಕವೀ ಅವನ ಪಾಡಿಗ ಅವನು ಬರಕೋಂತ ಇರಲಿ ಬಿಡು.... ನೀ ಏನರ ಮಾಡಬೇಕಂದರ ಮಂದೀಗ ಮಾಡು. ಈಗ ಹೋಗಿ ಬಾ, ಒಳ್ಳೇದಾಗಲಿ’.

ಮುಖ್ಯಮಂತ್ರಿಯವರು ಶಿರಬಾಗಿ ನಮಸ್ಕರಿಸಿ ಕಾರು ಹತ್ತಿದರು.

ಇದನ್ನು ಬೇಂದ್ರೆಯವರ ಸ್ವಾಭಿಮಾನ ಎಂದಷ್ಟೇ ಹೇಳಿಬಿಟ್ಟರೆ ಸಾಲದು. ಕವಿ ಮತ್ತು ಪ್ರಭುತ್ವದ ಸಂಬಂಧ ಹೇಗಿರಬೇಕೆಂಬುದಕ್ಕೆ ಇದು ವರಕವಿ ಬೇಂದ್ರೆ ಮಾಡಿದ ವ್ಯಾಖ್ಯಾನ ಅನ್ನಬಹುದೇನೋ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT