ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಮೌಲ್ಯವೆಂಬ ಅಮೃತಧಾರೆ

ನವೀನ ಕುಮಾರ್‌ ಹೊಸದುರ್ಗ
Published 17 ಮಾರ್ಚ್ 2024, 23:30 IST
Last Updated 17 ಮಾರ್ಚ್ 2024, 23:30 IST
ಅಕ್ಷರ ಗಾತ್ರ

2012ನೇ ಇಸವಿಯಲ್ಲಿ ಸ್ಪೇನ್ ದೇಶದ ನವ್ಹಾ ಪ್ರಾವಿನ್ಸ್‌ನಲ್ಲಿರುವ ಬುರ್ಲಾಡಾ ಎಂಬಲ್ಲಿ ನಡೆಯುತ್ತಿದ್ದ ಗುಡ್ಡಗಾಡು ಓಟದ ಸ್ಪರ್ಧೆಯೊಂದರ ಕೊನೆಯಲ್ಲಿ ಒಂದು ವಿಶಿಷ್ಟ ಘಟನೆ ಸಂಭವಿಸಿತು. ಈ ಸ್ಪರ್ಧೆಯಲ್ಲಿ ಎಲ್ಲರಿಗಿಂತಲೂ ದೊಡ್ಡ ಅಂತರದಲ್ಲಿ ಮುಂದಿದ್ದು, ಮೊದಲ ಸ್ಥಾನ ಗಳಿಸುವ ಎಲ್ಲ ಸಾಧ್ಯತೆಗಳಿದ್ದ ಲಂಡನ್ ಒಲಿಂಪಿಕ್ಸ್‌ನ 3000 ಮೀಟರ್ ಸ್ಪರ್ಧೆಯ ಕಂಚಿನ ಪದಕ ವಿಜೇತ ಕೀನ್ಯಾ ದೇಶದ ಏಬಲ್ ಮ್ಯೂಟಾಯ್, ಓಟದ ಕೊನೆಯ ಹಂತದಲ್ಲಿ ಗೊಂದಲಕ್ಕೆ ಒಳಗಾಗಿ ಅಂತಿಮ ಗೆರೆ ತಲುಪುವ ಮೊದಲೇ ತಾನು ಗೆದ್ದಿದ್ದೇನೆ ಎಂದು ಸುಮ್ಮನೆ ನಿಂತುಬಿಡುತ್ತಾರೆ. ಅವರ ಹಿಂದೆಯೇ ಎರಡನೇ ಸ್ಥಾನದಲ್ಲಿ ಇದ್ದ ಸ್ಪೇನ್ ದೇಶದ ಇವಾನ್ ಫರ್ನಾಂಡಿಸ್ ಅನಾಯ, ಹಿಂದಿನಿಂದ ‘ಅಂತಿಮಗೆರೆ ಇನ್ನೂ ಬಂದಿಲ್ಲ ಓಡು ಓಡು’ ಎಂದು ಸ್ಪ್ಯಾನಿಷ್ ಭಾಷೆಯಲ್ಲಿ ಕೂಗಿ ಹೇಳುತ್ತಾರೆ. ಆದರೆ ಸ್ಪ್ಯಾನಿಷ್ ಭಾಷೆ ಅರಿಯದ ಮ್ಯೂಟಾಯ್‌ಗೆ ಇದು ಅರ್ಥವಾಗದೆ ಅಲ್ಲಿಯೇ ನಿಲ್ಲುತ್ತಾರೆ. ಆದರೆ ಇವಾನ್ ಫರ್ನಾಂಡಿಸ್ ಅವರನ್ನು ಮುಂದಕ್ಕೆ ತಳ್ಳಿ ಗೆಲುವಿನ ಗೆರೆ ದಾಟಿಸಿ ಮ್ಯೂಟಾಯ್‌ಗೆ ಚಿನ್ನದ ಪದಕ ಸಿಗುವಂತೆ ಮಾಡುತ್ತಾರೆ. ಹಾಗೂ ತಾನು ಬೆಳ್ಳಿ ಪದಕಕ್ಕೆ ತೃಪ್ತರಾಗುತ್ತಾರೆ.

ಸ್ಪರ್ಧೆ ಮುಗಿದ ನಂತರ ಪತ್ರಿಕಾ ವರದಿಗಾರರು ಇವಾನ್ ಫರ್ನಾಂಡಿಸ್ ಅನಾಯ ಅವರನ್ನು ‘ನೀವೇಕೆ ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಬಿಟ್ಟುಕೊಟ್ಟಿರಿ’ ಎಂದು ಪ್ರಶ್ನಿಸಿದಾಗ, ‘ಈ ಓಟದ ಸ್ಪರ್ಧೆಯಲ್ಲಿ ಮ್ಯೂಟಾಯ್ ಮೊದಲಿಂದಲೂ ಬಹಳ ಮುನ್ನಡೆಯಲ್ಲಿದ್ದರು. ಹೀಗಾಗಿ ಚಿನ್ನದ ಪದಕ ಗೆಲ್ಲಲು ಅವರೇ ಅರ್ಹರಾಗಿದ್ದರು’ ಎಂದು ಉತ್ತರಿಸುತ್ತಾರೆ. ‘ಆದರೂ ನೀವು ನಿಯಮದ ಅನುಸಾರವಾಗಿಯೇ ವಿಜೇತರಾಗಬಹುದಿತ್ತು. ಕೈಯಲ್ಲಿದ್ದ ಗೆಲುವನ್ನು ನೀವೇಕೆ ಬಿಟ್ಟುಕೊಟ್ಟಿರಿ’ ಎಂದು ಪ್ರಶ್ನಿಸಿದ ವರದಿಗಾರರಿಗೆ ಇವಾನ್ ಫರ್ನಾಂಡಿಸ್ ಕೊಟ್ಟ ಉತ್ತರ ಬದುಕಿನಲ್ಲಿ ಮೌಲ್ಯದ ಮಹತ್ವ ಎಷ್ಟು ಎಂಬುದನ್ನು ಎತ್ತಿ ಹಿಡಿಯುತ್ತದೆ. ‘ಹೌದು ನಾನೇ ಗೆಲ್ಲಬಹುದಿತ್ತು. ಆದರೆ ಅದು ಅರ್ಹ ಗೆಲುವಾಗುತ್ತಿತ್ತೇ? ಮುನ್ನಡೆಯಲ್ಲಿದ್ದ ವ್ಯಕ್ತಿ ತನಗೆ ಅರಿವಿಲ್ಲದೇ ಗೊಂದಲದಲ್ಲಿರುವಾಗ ಅವನನ್ನು ದಾಟಿ ಮುನ್ನುಗ್ಗಿ ಗೆಲ್ಲುವುದು ನಿಜವಾದ ಗೆಲುವಲ್ಲ. ಹಾಗೆ ಗೆದ್ದಿದ್ದರೆ ನನ್ನ ಅಮ್ಮ ಏನೆಂದುಕೊಳ್ಳುತ್ತಿದ್ದಳು? ಇದು ಅವಳು ಹೇಳಿಕೊಟ್ಟ ಮೌಲ್ಯಗಳಿಗೆ ವಿರುದ್ಧವಲ್ಲವೇ?’

ಎಷ್ಟು ವಿಶೇಷವಾಗಿದೆಯಲ್ಲ ಈ ಚಿಂತನೆ, ಈ ಕ್ರೀಡಾ ಸ್ಫೂರ್ತಿ? ಇಂದು ಹೇಗಾದರೂ ಸರಿ ನಾವೇ ಗೆಲ್ಲಬೇಕು ಎಂಬ ಮನಃಸ್ಥಿತಿಯವರೇ ಎಲ್ಲೆಡೆಯೂ ಕಾಣಿಸುತ್ತಾರೆ. ತಮ್ಮ ಮಕ್ಕಳು ಹೇಗಾದರೂ ಸರಿ ಮೊದಲ ಸ್ಥಾನ ಗಳಿಸಲೇಬೇಕು ಎಂದು ಹಪಾಹಪಿಸುವ ಪೋಷಕರು ಅದಕ್ಕಾಗಿ ತಮ್ಮ ಮಕ್ಕಳ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಾರೆ. ತಾನು ಗೆಲ್ಲುವುದರ ಜೊತೆಗೆ ಇನ್ನೊಬ್ಬರನ್ನೂ ಗೆಲ್ಲಿಸುವ ಯೋಚನೆ ನಮ್ಮಲ್ಲಿರಬೇಕು. ಇದಕ್ಕೆ win-win situation ಎನ್ನುತ್ತಾರೆ. ‘ಸ್ಪರ್ಧೆಯಿಂದ ನಾವು ಗುರಿ ತಲುಪಬಹುದು. ಆದರೆ ಅಲ್ಲಿಂದ ಮುಂದೆ ಪ್ರಗತಿ ಸಾಧಿಸಲು ಸಹಕಾರವೇ ಬೇಕು’ ಎನ್ನುತ್ತಾರೆ ಫ್ರಾಂಕ್ ರೂಸ್ವೆಲ್ಟ್. ತಂಡವು ಯಶಸ್ಸು ಪಡೆಯಬೇಕಾದರೆ ಎಲ್ಲರೂ ಗೆಲ್ಲಬೇಕೆಂಬ ಸಹಕಾರಿ ಮನೋಭಾವವೇ ಅತ್ಯಗತ್ಯ. ಹಾಗೆಯೇ ನಮ್ಮ ಸಾಮರ್ಥ್ಯ ನಮ್ಮ ಗೆಲುವಿನ ಮೂಲವಾಗಬೇಕೇ ವಿನಃ ಬೇರೆಯವರ ದೌರ್ಬಲ್ಯವಲ್ಲ ಎಂಬ ಮೌಲ್ಯವನ್ನು ಇವಾನ್ ಫರ್ನಾಂಡಿಸ್‌ನ ತಾಯಿ ಅವನ ಬಾಲ್ಯದಿಂದಲೇ ಅವನಲ್ಲಿ ತುಂಬಿದ್ದಳು.

ಇಂತಹ ಮೌಲ್ಯ, ಮಾನವೀಯತೆಗಳನ್ನು ಸರಿಯಾಗಿ ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT