ಕಡಿದಾಳ್ ಮಂಜಪ್ಪನವರು ರಾಜಕಾರಣದಿಂದ ನಿವೃತ್ತಿ ಹೊಂದಿದ ಮೇಲೆ ಕರ್ನಾಟಕದ ಹೈಕೋರ್ಟ್ನಲ್ಲಿ ನ್ಯಾಯವಾದಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಆಗ ಯಾರೋ ಅವರನ್ನು ಏಕೆ ವಕೀಲವೃತ್ತಿ ಮಾಡುತ್ತಿದ್ದೀರಿ ಎಂದು ಕೇಳಿದಾಗ ಮಂಜಪ್ಪನವರು, ‘ಜೀವನೋಪಾಯಕ್ಕಾಗಿ’ ಎಂದು ಉತ್ತರಿಸಿದರು.

ಹೀಗೆ ಉತ್ತರಿಸಿದ ವ್ಯಕ್ತಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು ಎಂಬ ಸಂಗತಿಯನ್ನು ಹೇಳಿದರೆ ಈಗಿನ ಪೀಳಿಗೆಗೆ ನಂಬುವುದು ಕಷ್ಟವಾಗಬಹುದು. ಹತ್ತಾರು ವರ್ಷ ಮಂತ್ರಿಯಾಗಿದ್ದುಕೊಂಡು, ಕೆಲಕಾಲ ಮುಖ್ಯಮಂತ್ರಿ ಹುದ್ದೆಯನ್ನೂ ಅಲಂಕರಿಸಿದ ರಾಜಕಾರಣಿಯೊಬ್ಬರು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದನ್ನು ಇಂದಿನ ದಿನಮಾನದಲ್ಲಿ ಯಾರೂ ಊಹಿಸಲಾಗದು. ಕಾರಣ ರಾಜಕೀಯ ಪ್ರವೇಶಿಸಿದ ಮೇಲೆ ಮಂಜಪ್ಪನವರು ಸಾಲಗಾರರಾದರು. ಸಾಲ ತೀರಿಸಬೇಕಾದರೆ ಅವರು ವಕೀಲಿವೃತ್ತಿ ಕೈಗೊಳ್ಳಲೇಬೇಕಾಯಿತು. ಶಾಸಕರಾಗಿ ಒಂದು ಬಾರಿ ಅಧಿಕಾರ ಸಿಕ್ಕಿದರೆ ಮೂರು ತಲೆಮಾರು ಕುಳಿತು ತಿನ್ನುವಂತೆ ಆಸ್ತಿ ಮಾಡಿಡುವ ರಾಜಕಾರಣಿಗಳ ಮಧ್ಯೆ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಹೊಟ್ಟೆಪಾಡಿಗಾಗಿ ಯೋಚಿಸಬೇಕಾದ ಮಂಜಪ್ಪನಂಥವರು ನಮ್ಮ ರಾಜ್ಯದಲ್ಲಿ ಇದ್ದರು ಎಂಬ ಸಂಗತಿಯೇ ನಾವೆಲ್ಲ ಹೆಮ್ಮೆ ಪಡಬೇಕಾದದ್ದು.

ಹೀಗೆ ಮಂಜಪ್ಪನವರು ವಕೀಲಿವೃತ್ತಿ ಮಾಡುತ್ತಿರುವಾಗ ಅವರ ಮನೆಗೆ ಸರ್ ಎಂ.ವಿಶ್ವೇಶ್ವರಯ್ಯನವರು ಬಂದಿದ್ದರು. ‘ಬಹಳ ವರ್ಷಗಳಿಂದ ಮೈಸೂರು ರಾಜ್ಯದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ಗುರುತಿಸಿದ್ದೇನೆ. ನಿಮ್ಮ ಮನೆಗೆ ಸ್ಫೂರ್ತಿ ಪಡೆಯಲು ಬಂದಿದ್ದೇನೆ’ ಎಂದಿದ್ದರು ಸರ್ ಎಂವಿ.

ರಾಜಕಾರಣವೆಂದರೆ ದೀನ ದುರ್ಬಲರ ಉದ್ಧಾರಕ್ಕೆ ದಾರಿ ಮಾಡಿಕೊಡುವ ಒಂದು ಅತ್ಯುತ್ತಮವಾದ ಅವಕಾಶ. ಬಡತನ ನಿವಾರಣೆಗಾಗಿ ಶ್ರಮಿಸುತ್ತ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತ, ಅಧಿಕಾರದ ಅಮಲು ತಲೆಗೆ ಹತ್ತದಂತೆ ಎಚ್ಚರ ವಹಿಸುತ್ತ ಸಾಗಬೇಕಾದ ಸುದೀರ್ಘ ಹಾದಿ. ಆದರೆ ಅದು ಜನಪ್ರಿಯತೆ, ಸಂಪತ್ತಿಗೆ ರಹದಾರಿ ಎಂಬ ತಪ್ಪು ಅಭಿಪ್ರಾಯದಿಂದ ರಾಜಕೀಯ ಕಲುಷಿತಗೊಂಡಿದೆ. ಅಧಿಕಾರ ಇರುವುದೇ ತಮ್ಮ ಹಿತಕ್ಕಾಗಿ ಎಂದು ನಂಬಿದವರಿಗೆ ಈ ನಿರಾಕರಣೆ, ನಿರ್ಲಿಪ್ತಿಯ ಮನೋಭಾವ ಬಹುಶಃ ಅರ್ಥವೇ ಆಗಲಿಕ್ಕಿಲ್ಲ. ಜೇಡರ ದಾಸಿಮಯ್ಯ ಹೇಳಿರುವಂತೆ, ‘ಕರಿಯನಿತ್ತೊಡೆ ಒಲ್ಲೆ, ಸಿರಿಯನಿತ್ತೊಡೆ ಒಲ್ಲೆ, ಹಿರಿದಪ್ಪ ರಾಜ್ಯವಿತ್ತೊಡೆ ಒಲ್ಲೆ’ ಎಂಬ ನಿರಾಕರಣ ಮನೋಭಾವವನ್ನು ಕಿಂಚಿತ್ತಾದರೂ ತಮ್ಮೊಳಗೆ ಇಳಿಸಿಕೊಳ್ಳುವ ಮನೋಭಾವವಿರುವ ವ್ಯಕ್ತಿಗಳು ಬೆರಳೆಣಿಕೆಯಷ್ಟು. ಈ ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವವರನ್ನು ಹಗಲಿನಲ್ಲೇ ದೀಪ ಹಿಡಿದುಕೊಂಡು ಹುಡುಕಬೇಕಾಗಿರುವಂತಹ ಪರಿಸ್ಥಿತಿ ನಮ್ಮದು.

ಆದ್ದರಿಂದ ತಮ್ಮ ಎಪ್ಪತ್ತರ ಇಳಿವಯಸ್ಸಿನಲ್ಲೂ ಕರಿಕೋಟು ಹಾಕಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದ ಮಾಜಿ ಮುಖ್ಯಮಂತ್ರಿಯಾಗಿದ್ದ ಕಡಿದಾಳ್ ಮಂಜಪ್ಪನಂತಹ ಮಹಾನುಭಾವರನ್ನು ನಾವು ಆಗಾಗ ಸ್ಮರಿಸುತ್ತಿರಬೇಕು. ಎಳೆಯರಿಗೆ ಇಂತಹ ವಿಶಿಷ್ಟ ವ್ಯಕ್ತಿಗಳನ್ನು ಪರಿಚಯಿಸುತ್ತಿರಬೇಕು. ಆಗಲಾದರೂ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅಧಿಕಾರ, ಹಣದ ಹಿಂದೆ ಓಡುತ್ತಿರುವ ನಾವೆಲ್ಲ ಒಂದು ಕ್ಷಣ ನಿಂತು ಯೋಚಿಸಬಹುದು. ಆತ್ಮಾವಲೋಕನ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.