ಕಾಲೇಜಿನಲ್ಲಿ ಓಶೋ ಹೊಸದಾಗಿ ಪ್ರಾಧ್ಯಾಪಕರಾಗಿ ನೇಮಕಗೊಂಡಾಗಿನ ಘಟನೆ. ಪಟ್ಟಣದಿಂದ ಕಾಲೇಜು ಸಾಕಷ್ಟು ದೂರದಲ್ಲಿದ್ದುದರಿಂದ ಪ್ರಾಧ್ಯಾಪಕರು ತಮ್ಮ ಊಟವನ್ನು ಜೊತೆಗೇ ತಂದು, ಉಣ್ಣಲು ಎಲ್ಲರೂ ಒಂದೇ ಮೇಜಿನ ಬಳಿ ಕುಳಿತುಕೊಳ್ಳುತ್ತಿದ್ದರು. ಅವರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ತನ್ನ ಊಟದ ಡಬ್ಬಿಯನ್ನು ತೆರೆದು ಒಳಗೆ ನೋಡಿ, ‘ಮತ್ತೆ ಆಲೂಗಡ್ಡೆ ಮತ್ತು ಚಪಾತಿ!’ ಎಂದು ಸ್ವಗತದಲ್ಲಿ ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿಸಿಕೊಂಡ ಓಶೋ ಬಹುಶಃ ಅವನಿಗೆ ಆಲೂಗಡ್ಡೆ ಮತ್ತು ಚಪಾತಿ ಇಷ್ಟವಿಲ್ಲ ಎಂದು ಭಾವಿಸುತ್ತಾರೆ.

ಆದರೆ, ಅವರು ಹೊಸಬರಾಗಿದ್ದರಿಂದ ಪ್ರತಿಕ್ರಿಯಿಸದೇ ಸುಮ್ಮನಿರುತ್ತಾರೆ. ಮರುದಿನ ಮತ್ತದೇ ಆಗುತ್ತದೆ. ಆ ಪ್ರಾಧ್ಯಾಪಕ ತನ್ನ ಊಟದ ಡಬ್ಬಿಯನ್ನು ತೆರೆದು ಒಳಗೆ ನೋಡಿ ‘ಅದೇ ಆಲೂಗಡ್ಡೆ, ಅದೇ ಚಪಾತಿ!’ ಎಂದು ನಿಟ್ಟುಸಿರು ಬಿಡುತ್ತಾನೆ.

ಹಾಗಾಗಿ ಓಶೋ ಆ ಪ್ರಾಧ್ಯಾಪಕರಿಗೆ, ‘ನಿಮಗೆ ಆಲೂಗಡ್ಡೆ ಇಷ್ಟವಿಲ್ಲದಿದ್ದರೆ, ನಿಮ್ಮ ಹೆಂಡತಿಗೆ ಬೇರೆ ಏನಾದರೂ ಮಾಡಲು ಏಕೆ ಹೇಳಬಾರದು?’ ಎಂದು ಕೇಳುತ್ತಾರಂತೆ.

ಆಗ ಅವರು, ‘ಹೆಂಡತಿ! ಯಾವ ಹೆಂಡತಿ? ನನ್ನ ಅಡುಗೆಯನ್ನು ನಾನೇ ಮಾಡುತ್ತೇನೆ?’ ಎಂದು ಉತ್ತರಿಸುತ್ತಾರೆ. ಅವರು ಬಯಸಿದ್ದರೆ ದಿನವೂ ಆಲೂಗಡ್ಡೆಯ ಬದಲು ಬೇರೆ ತರಕಾರಿಯನ್ನು ಮಾಡಬಹುದಿತ್ತು. ತಾವಾಗಿಯೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬದುಕಿನ ನಿಯಮಗಳನ್ನು ರೂಪಿಸಿಕೊಂಡಿರುವಾಗ ದೂರುವುದಾದರೂ ಯಾರನ್ನು, ಅಲ್ಲವೇ?

ನಮ್ಮ ಆಫೀಸಿನಲ್ಲೊಬ್ಬ ಹರಿಂದರ್ ಎನ್ನುವ ಸಿಬ್ಬಂದಿ ಹಳ್ಳಿಯಿಂದ ಬರುತ್ತಿದ್ದ. ಬೇರೆಯವರೊಂದಿಗೆ ಹೆಚ್ಚು ಬೆರೆಯದ ಅವನು ಒಬ್ಬನೇ ಕುಳಿತು ಉಣ್ಣುತ್ತಿದ್ದ. ಸ್ವಲ್ಪ ಸಲುಗೆಯುಂಟಾದಾಗ ಅವನು ದಿನವೂ ಆಲೂಗಡ್ಡೆಯ ಪಲ್ಯವನ್ನೇ ತರುತ್ತಿದ್ದುದು ಗೊತ್ತಾಯಿತು. ‘ಬೇರೆ ತರಕಾರಿ, ಸೊಪ್ಪು ತಿನ್ನಬೇಕು. ಬರೀ ಆಲೂಗಡ್ಡೆ ತಿನ್ನುವುದರಿಂದ ಏನು ಪೌಷ್ಟಿಕಾಂಶ ಸಿಗುತ್ತದೆ’ ಎಂದು ಭಾಷಣ ಕೊರೆದಾಗ ಆತ ಅತ್ಯಂತ ದುಃಖಿತನಾಗಿ, ‘ಹೌದು ಮೇಡಂ. ಆದರೆ ಏನು ಮಾಡುವುದು ನನ್ನ ಮಕ್ಕಳು ಆಲೂಗಡ್ಡೆ ಹೊರತಾಗಿ ಬೇರೆ ಯಾವ ತರಕಾರಿಯನ್ನೂ ತಿನ್ನುವುದಿಲ್ಲ. ಅವರಿಗಾಗಿ ನಾವೆಲ್ಲ ಆಲೂಗಡ್ಡೆಯನ್ನೇ ತಿನ್ನುತ್ತೇವೆ’ ಎಂದು ಉತ್ತರಿಸಿದ. ಇದು ಆಲೂಗಡ್ಡೆಯ ಕತೆಯಷ್ಟೇ ಅಲ್ಲ; ನಮ್ಮ ಬದುಕಿನಲ್ಲಿ ನಾವು ಅನುಭವಿಸುವ ಸುಖದುಃಖಗಳೂ ಈ ಆಲೂಗಡ್ಡೆಯಂತೆ ನಾವೇ ಇಷ್ಟಪಟ್ಟು ಸೃಷ್ಟಿಸಿಕೊಂಡವೂ ಆಗಿರಬಹುದು. ಗೋಳಾಟ, ಗೊಣಗಾಟವೇ ಅಭ್ಯಾಸವಾಗಿಹೋಗಿರುವ ನಾವೇ ಅದರಿಂದ ಮುಕ್ತರಾಗಬಯಸುವುದಿಲ್ಲ.

ಶ್ರೀಕೃಷ್ಣ ಹೇಳುವಂತೆ, ‘ಇದ್ದರೂ ಇಲ್ಲದಂತೆ, ಇಲ್ಲದಿದ್ದರೂ ಇದ್ದಂತೆ ಭಾವಿಸುತ್ತಾ ಪದ್ಮ ಪತ್ರಮಿವಾಂಬಸಿ– ತಾವರೆ ಎಲೆಯ ಮೇಲಿನ ನೀರ ಹನಿಯಂತಿರಬೇಕು’. ಅದು ಸಾಧ್ಯವೇ?

ಈ ಜೀವನ ನಿನ್ನದು. ಬೇರಾರೂ ಇಲ್ಲ. ನೀನು ನಗುತ್ತಿದ್ದರೆ, ನೀನು ನಗುತ್ತೀಯ; ಅಳುತ್ತಿದ್ದರೆ, ನೀನೊಬ್ಬನೇ ಅಳುತ್ತೀಯ. ಬೇರೆ ಯಾರೂ ಜವಾಬ್ದಾರರಲ್ಲ. ನಾವು ಏನೇ ಮಾಡಿದ್ದರೂ, ಏನೇ ಮಾಡುತ್ತಿದ್ದರೂ ಅಥವಾ ಏನೇ ಯೋಜನೆ ಹಾಕಿಕೊಂಡಿದ್ದರೂ ಅದು ನಮ್ಮಿಂದ ಹೊರತಾದದ್ದಲ್ಲ. ಅದು ನಮ್ಮದೇ ನಿರ್ಣಯ, ನಾವೇ ಸೃಷ್ಟಿಸಿಕೊಂಡ ಆಟ. ನಮ್ಮದೇ ಆಯ್ಕೆ. ನಾವು ಆನಂದದಿಂದಿದ್ದರೆ ಅದು ನಮ್ಮದೇ ಆಯ್ಕೆ. ನಾವು ನಮ್ಮ ಆಯ್ಕೆಯಿಂದ ದುಃಖಿಯಾಗಿದ್ದರೆ ಅಥವಾ ನಮ್ಮ ಆಯ್ಕೆಗಳಿಂದ, ನಿರ್ಣಯಗಳಿಂದ ಬೇಸತ್ತಿದ್ದರೆ, ಬಳಲಿದ್ದರೆ ಅದಕ್ಕೆಲ್ಲ ಜವಾಬ್ದಾರರು ನಾವೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.