ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬಾಲ್ಯಕ್ಕೆ ಮದುವೆ ಸಂಕೋಲೆ

ಲಾಕ್‌ಡೌನ್ ಸಂದರ್ಭ: ರಾಜ್ಯದಲ್ಲಿ ಹೆಚ್ಚಿದ ಬಾಲ್ಯ ವಿವಾಹ
Last Updated 28 ಆಗಸ್ಟ್ 2021, 23:15 IST
ಅಕ್ಷರ ಗಾತ್ರ

ಬಾಗಲಕೋಟೆ: ಮಕ್ಕಳ ಗುಂಪಿನ (ಚಿಲ್ಡ್ರನ್ಸ್ ಕ್ಲಬ್) ಫೋನ್ ಕರೆಗೆ ಓಗೊಟ್ಟಿದ್ದ ಇಲ್ಲಿನ ಮಕ್ಕಳ ಸಹಾಯ ವಾಣಿ ಸದಸ್ಯರು ಸಮೀಪದ ಮುರನಾಳ ಗ್ರಾಮದ ಮನೆಯೊಂದಕ್ಕೆ ಈಚೆಗೆ ತಡರಾತ್ರಿ ತೆರಳಿದ್ದರು. ನಸುಕಿನಲ್ಲಿ ಹಸೆ ಮಣೆ ಏರಬೇಕಿದ್ದ 16ರ ಹರೆಯದ ಬಾಲಕಿಯನ್ನು ಬಾಲ್ಯವಿವಾಹದ ಸಂಕೋಲೆಯಿಂದ ರಕ್ಷಿಸಿದ್ದರು.

ಬಾಲಕಿ ಮೂಡುಬಿದಿರೆಯ ವಸತಿ ಶಾಲೆಯೊಂದರ ವಿದ್ಯಾರ್ಥಿನಿ. ಪೋಷಕರು ದುಡಿಯಲು (ಗುಳೇ) ಅಲ್ಲಿಗೆ ಹೋಗಿದ್ದರು. ಕೋವಿಡ್ ಲಾಕ್‌ ಡೌನ್ ಕಾರಣ ಊರಿಗೆ ಮರಳಿದ್ದರು. ಈ ಅವಧಿಯಲ್ಲೇ ಮಗಳ ಮದುವೆ ಮಾಡುವ ತರಾತುರಿಯಲ್ಲಿ ಇದ್ದರು. ಅಧಿಕಾರಿಗಳು ಮನೆಬಾಗಿಲು ಬಡಿದಾಗ, ಪೋಷಕರು ಹುಡುಗಿಯನ್ನು ಕಂಬಳಿಯಲ್ಲಿ ಸುತ್ತಿ ಮಂಚದ ಕೆಳಗೆ ಮುಚ್ಚಿಟ್ಟಿದ್ದರು.

ಪಕ್ಕದ ವೀರಾಪುರದಲ್ಲಿ, 30 ವರ್ಷದ ವ್ಯಕ್ತಿಗೆ ಎರಡನೇ ಮದುವೆ ಮಾಡಲು ಹೊರಟಿದ್ದ ಮುಧೋಳ ತಾಲ್ಲೂಕಿನ ಚಿಚಖಂಡಿಯ 12 ವರ್ಷದ ಬಾಲಕಿಯನ್ನು ರಕ್ಷಿಸಿ ಎಫ್‌ಐಆರ್ ದಾಖಲಿಸಲಾಯಿತು. ಬಂದವರಿಗೆ ತೋರಿಸಲೆಂದೇ ವಿವಾಹಿತೆಯೊಬ್ಬರನ್ನು ಮದುಮಗಳ ದಿರಿಸಿನಲ್ಲಿ ಅಲ್ಲಿ ಕೂರಿಸಿದ್ದರು..

ಮುರನಾಳ, ವೀರಾಪುರದ ಬಾಲೆಯರು ಸಂಬಂಧಿಸಿದವರ ಸಕಾಲಿಕ ಮಧ್ಯಪ್ರವೇಶದಿಂದ ತಪ್ಪಿಸಿಕೊಂಡರು. ಆದರೆ, ಕೋವಿಡ್‌ ಲಾಕ್‌ಡೌನ್ ವೇಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಾಲಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯವಿವಾಹದ ಸಂಕೋಲೆಗೆ ಕೊರಳೊಡ್ಡಿದ್ದಾರೆ. ಇದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ–ಅಂಶವೇ ಪುಷ್ಟೀಕರಿಸುತ್ತದೆ.

ಕೋವಿಡ್ ತಂದಿತ್ತ ಅಭದ್ರತೆ: ಕೋವಿಡ್‌ ಸಾಂಕ್ರಾಮಿಕವು ಬದುಕನ್ನುಅನಿಶ್ಚಿತಗೊಳಿಸಿದೆ. ಸಾವಿನ ಆತಂಕ,
ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೀಡಾದವರು ಬಾಲ್ಯವಿವಾಹ ಮಾಡಲು ಮುಂದಾಗುತ್ತಿದ್ದಾರೆ. ಸೋಂಕಿನಿಂದ ಅಪ್ಪ–ಅಮ್ಮ ಇಬ್ಬರಲ್ಲಿ ಒಬ್ಬರು ಸಾವಿಗೀಡಾದರೂ ಹದಿಹರೆಯದ ಮಕ್ಕಳು ಹಸೆಮಣೆ ಏರಬೇಕಾಗಿದೆ.

‘ಈ ಮೊದಲು ಶಾಲೆಗೆ ಬಾಲಕಿ ಗೈರುಹಾಜರಾದರೆ ಆಕೆಯ ಗೆಳತಿಯರು ಗಮನಿಸುತ್ತಿದ್ದರು. ಶಿಕ್ಷಕರು ಪ್ರಶ್ನಿಸುತ್ತಿದ್ದರು. ಮದುವೆ ಸಂಗತಿ ಗೊತ್ತಾದರಂತೂ ಮಕ್ಕಳ ಕ್ಲಬ್‌ಗಳು ಕಾರ್ಯೋನ್ಮುಖವಾಗುತ್ತಿದ್ದವು. ಶಾಲೆಗಳಿಲ್ಲದೆ ನಿಗಾವಣೆ
ಮಾಡುವುದು ಕಷ್ಟವಾಗಿದೆ’ ಎಂದು ರೀಚ್ ಸ್ವಯಂ ಸೇವಾ ಸಂಸ್ಥೆ ಸಂಯೋಜಕ ಜಿ.ಎನ್.ಕುಮಾರ್ ಹೇಳುತ್ತಾರೆ.

ಲಾಕ್‌ಡೌನ್‌ ಮೊದಲ ಅವಧಿಯಲ್ಲಿ ಹಳ್ಳಿ–ಹಳ್ಳಿಗಳಲ್ಲೂ ಪೊಲೀಸರ ಓಡಾಟವಿತ್ತು. ಯಾವುದೇ ಚಟುವಟಿಕೆಗೆ ಆಸ್ಪದ ಇರಲಿಲ್ಲ. ಆದರೆ ಎರಡನೇ ಅವಧಿ ಅದಕ್ಕೆ ವ್ಯತಿರಿಕ್ತವಾಗಿತ್ತು ಎನ್ನುತ್ತಾರೆ. ಮದುವೆ ತಡೆಯಲು ಅಧಿಕಾರಿಗಳು ಬಾರದಂತೆ ತಡೆಯಲು ಸರ್ಕಾರಿ ರಜೆ, ಹಬ್ಬ–ಹರಿದಿನ, ಭಾನುವಾರ ಬೆಳಗಿನ ಜಾವ ಇಲ್ಲವೇ ತಡರಾತ್ರಿ ಧಾರೆ ಮುಹೂರ್ತ ಇಟ್ಟುಕೊಳ್ಳಲಾಗುತ್ತಿದೆ.

ಸೆಕ್ಷನ್ 13 ಬಳಕೆಗೆ ಸೂಚನೆ: ‘ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯವಿವಾಹ ಹೆಚ್ಚಿವೆ. ಮೈಸೂರು, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ ಮುಂಚೂಣಿಯಲ್ಲಿವೆ. ಇದು ನಮ್ಮ ಗಮನಕ್ಕೂ ಬಂದಿದೆ. ಅದಕ್ಕೆ ತಡೆ ಹಾಕಲು ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಸೆಕ್ಷನ್ 13 ಬಳಸಿಕೊಳ್ಳುವಂತೆ ಎಲ್ಲ ಬಾಲ್ಯ ವಿವಾಹ ತಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ‘ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ವಾಳ್ವೇಕರ ಹೇಳುತ್ತಾರೆ.

ಸೆಕ್ಷನ್ 13 ಈ ಮೊದಲು ಅಷ್ಟಾಗಿ ಬಳಕೆ ಆಗುತ್ತಿರಲಿಲ್ಲ. ಯಾರಾದರೂ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಸಿಕ್ಕರೆ ತಕ್ಷಣ ಆಯಾ ಜಿಲ್ಲೆಯ ಹಿರಿಯ ಸಿವಿಲ್ ನ್ಯಾಯಾಲಯ ಇಲ್ಲವೇ ಕೌಟುಂಬಿಕ ನ್ಯಾಯಾಲಯದಿಂದ ಅದಕ್ಕೆ ತಡೆಯಾಜ್ಞೆ (ಇಂಜೆಂಕ್ಷನ್) ಕೊಡಿಸಬಹುದಾಗಿದೆ. ನಿಗದಿತ ವಯಸ್ಸು ತುಂಬುವವರೆಗೂ ಮಕ್ಕಳಿಗೆ ಮದುವೆ ಮಾಡದಂತೆ ಪೋಷಕರಿಗೆ ನೀಡುವ ಸೂಚನೆಯನ್ನೂ ಒಳಗೊಂಡಿರುತ್ತದೆ. ಪಿಡಿಒ ಸೇರಿದಂತೆ 17 ವಿವಿಧ ಇಲಾಖೆಗಳ ಅಧಿಕಾರಿ–ಸಿಬ್ಬಂದಿ ಸಿಎಂಪಿಒ ಮನ್ನಣೆ ಹೊಂದಿದ್ದಾರೆ.

’ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ತಪ್ಪಿತಸ್ಥರಿಗೆ ಈಗಿರುವ ಗರಿಷ್ಠ 2 ವರ್ಷ ಶಿಕ್ಷೆಯನ್ನು 5ರಿಂದ 7 ವರ್ಷಗಳಿಗೆ ಹೆಚ್ಚಿಸುವಂತೆ, ಹೆಚ್ಚಿನ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಲು ಮಾರ್ಗಸೂಚಿ ರೂಪಿಸುವಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ‘ ಎಂದು ಭಾರತಿ ಹೇಳುತ್ತಾರೆ.

1098ಗೆ ಕರೆ ಮಾಡಲು ಜಾಗೃತಿ:

ಬಾಲ್ಯ ವಿವಾಹ ನಡೆದ ಗ್ರಾಮಗಳಿಗೆ ಮಕ್ಕಳ ಕಲ್ಯಾಣ ಸಮಿತಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ತೆರಳಿ, ಬಾಲ್ಯ ವಿವಾಹ ನಡೆಯುವ ಬಗ್ಗೆ ಮಾಹಿತಿ ದೊರೆತರೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡುವಂತೆ ಜನರಿಗೆ ಕರಪತ್ರ ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹಾಸನದ ಮಕ್ಕಳ ಕಲ್ಯಾಣ ಸಮಿತಿಯ ಮಂಜುನಾಥ್‌ ಹೇಳುತ್ತಾರೆ.

ಒಂದು ಕಾಲದಲ್ಲಿ ಹೆಚ್ಚು ಬಾಲ್ಯ ವಿವಾಹ ನಡೆಯುತ್ತಿದ್ದ ಚಾಮರಾಜನಗರದಲ್ಲಿ ಈಗ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳ ಆಯೋಜನೆಯಿಂದ ಮಕ್ಕಳ ಸಹಾಯವಾಣಿಗೆ ಹೆಚ್ಚಿನ ಕರೆಗಳು ಬರುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಬಾಲೆಯರ ರಕ್ಷಣೆಗೆ ‘ಸುರಕ್ಷಿಣಿ’ ಪೋರ್ಟಲ್:

ಬಾಲ್ಯವಿವಾಹದಿಂದ ರಕ್ಷಣೆಗೊಳಗಾದ ಬಾಲಕಿಯರಿಗೆ 18 ವರ್ಷದವರೆಗೆ ಮದುವೆ ಮಾಡದಂತೆ ನಿಗಾ ವಹಿಸಲು ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಭೂಬಾಲನ್ ‘ಸುರಕ್ಷಿಣಿ’ ಹೆಸರಿನ ವೆಬ್‌ ಪೋರ್ಟಲ್ ಆರಂಭಿಸಿದ್ದಾರೆ. ಇದು ರಾಜ್ಯದಲ್ಲಿಯೇ ಮೊದಲ ಪ್ರಯೋಗ.

ಬಾಲ್ಯ ವಿವಾಹ ತಡೆದಾಗ, ಸಂಬಂಧಿಸಿದ ಬಾಲಕಿಯರ ವಿವರ ಪೋರ್ಟಲ್‌ನಲ್ಲಿ ದಾಖಲಾಗಲಿದೆ. ನಂತರ ಅಂಗನವಾಡಿ ಕಾರ್ಯಕರ್ತೆಯಿಂದ ಮೊದಲುಗೊಂಡು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿವರೆಗಿನ ಅಧಿಕಾರಿ, ಸಿಬ್ಬಂದಿ ಆ ಬಾಲಕಿಯರ ಮನೆಗೆ ಆಗಾಗ ಭೇಟಿ ನೀಡಿ ಫೋಟೊ ಸಮೇತ ಆಕೆಯ ಸದ್ಯದ ಸ್ಥಿತಿಗತಿ ವಿವರವನ್ನು ಅದರಲ್ಲಿ ದಾಖಲಿಸಲಿದ್ದಾರೆ. ಇದು ಸಂಪೂರ್ಣ ಆಂತರಿಕ ವಿಚಾರ, ಹೊರಗಿನವರಿಗೆ ಮಾಹಿತಿ ನೀಡುವುದಿಲ್ಲ ಎಂದು ಪೋರ್ಟಲ್ ನಿರ್ವಹಣೆ ಮಾಡುವ ಅಧಿಕಾರಿ ಗಿರಿಯಾಚಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT