ಗುರುವಾರ , ಸೆಪ್ಟೆಂಬರ್ 16, 2021
29 °C
ಕೊರೊನಾ ಕಾರಣ ಮಕ್ಕಳ ಮನೆಗಳಿಗೆ ವಿತರಣೆ

ಒಳನೋಟ: ಮಕ್ಕಳ ಮೊಟ್ಟೆ, ಹಾಲು, ಕುಟುಂಬದವರ ಪಾಲು

ಅನಿತಾ ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ ಕಾರಣಕ್ಕೆ ಅಂಗನವಾಡಿಗಳು ಬಂದ್‌ ಆಗಿವೆ. ಹೀಗಾಗಿ ಮಕ್ಕಳ ಮನೆಗೇ ಮೊಟ್ಟೆ, ಹಾಲಿನಪುಡಿ ಸೇರಿ ಪೌಷ್ಟಿಕ ಆಹಾರವನ್ನು ಅಂಗನವಾಡಿ ಕಾರ್ಯಕರ್ತೆಯರು ವಿತರಿಸುತ್ತಿದ್ದಾರೆ. ಆದರೆ, ಕೆಲವೆಡೆ ಆಹಾರ ಕುಟುಂಬದವರ ನಡುವೆ ಹಂಚಿಕೆಯಾಗುವುದರಿಂದ ಮಗುವಿಗೆ ಪೂರ್ಣಪ್ರಮಾಣದಲ್ಲಿ ಆಹಾರ ಸಿಗುತ್ತಿಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಬಡತನ, ಅನಕ್ಷರತೆ ಕಾರಣ ಪೋಷಕರು ತಮ್ಮ ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೂ ಸರಿಯಾಗಿ ನಿಗಾ ವಹಿಸುವುದಿಲ್ಲ. ಕೋವಿಡ್‌ ಪೂರ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರದಲ್ಲೇ ಮಕ್ಕಳಿಗೆ ಪೌಷ್ಟಿಕ ಆಹಾರ ತಿನ್ನಿಸುತ್ತಿದ್ದರು. ಈಗ ಅನಿವಾರ್ಯವಾಗಿ ಮನೆಗೆ ತಲುಪಿಸುತ್ತಿದ್ದಾರೆ. ಆಹಾರವನ್ನು ಮಕ್ಕಳಿಗೆ ನೀಡಿ ಎಂದು ಪೋಷಕರಿಗೆ ತಿಳಿ ಹೇಳಿದರೂ ಕೇಳುವುದಿಲ್ಲ. ಅಪೌಷ್ಟಿಕತೆ ನಿವಾರಿಸುವ ಇಲಾಖೆಯ ಶ್ರಮವನ್ನು ಕೋವಿಡ್‌ ವ್ಯರ್ಥವಾಗಿಸುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ಓದಿ: ಒಳನೋಟ | ಅಪೌಷ್ಟಿಕ ಕರ್ನಾಟಕ: ಪೌಷ್ಟಿಕ ಆಹಾರ ‍ಪೂರೈಕೆಗೆ ಕೋವಿಡ್ ಅಡ್ಡಿ

‘ಮಕ್ಕಳು ಅಂಗನವಾಡಿಗೆ ಬರುವಾಗ ಮೊಟ್ಟೆ ಬೇಯಿಸಿ ತಿನ್ನಿಸುತ್ತಿದ್ದೆವು. ಹಾಲು ಕುಡಿಸುತ್ತಿದ್ದೆವು. ಕಡಲೆಕಾಳು, ಹೆಸರುಕಾಳು ಮೊಳಕೆ ಬರಿಸಿ ತಿನ್ನಿಸುತ್ತಿದ್ದೆವು. ಆದರೆ, ಪೋಷಕರು ಮಕ್ಕಳಿಗೆ ಈ ರೀತಿ ತಿನ್ನಿಸಲ್ಲ. ಕಾಳುಗಳನ್ನು ಸಾರು ಮಾಡಲು ಬಳಸುತ್ತಾರೆ. ಕೇಂದ್ರದಿಂದ ಅಳತೆ ಮಾಡಿ ಮಗುವಿಗೆ ನೀಡುವ ಆಹಾರ ಮನೆಯವರ ನಡುವೆ ಹಂಚಿಕೆಯಾಗುತ್ತಿದೆ. ಹೀಗಾಗಿ ಲಾಕ್‌ಡೌನ್‌ ತೆರವುಗೊಳಿಸಿದ ನಂತರದಲ್ಲಿ ಇಲಾಖೆ ಸೂಚನೆ ಮೇರೆಗೆ ತೀವ್ರ ಅಪೌಷ್ಟಿಕತೆ ಇರುವ ಮಗುವನ್ನು ಕೇಂದ್ರಕ್ಕೆ ಕರೆತಂದು ಆರೈಕೆ ಮಾಡುತ್ತಿದ್ದೇವೆ. ಉಳಿದ ಮಕ್ಕಳಿಗೆ ಮನೆಗಳಿಗೇ ತಲುಪಿಸುತ್ತಿದ್ದೇವೆ’ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದ್ದಾರೆ.

ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಅಲ್ಲೊಂದು, ಇಲ್ಲೊಂದು ಮನೆಗಳಿರುತ್ತವೆ. ಕಾರ್ಯಕರ್ತೆಯರು ಹರಸಾಹಸಪಟ್ಟು ಫಲಾನುಭವಿಗಳಿಗೆ ಆಹಾರ ತಲುಪಿಸುತ್ತಿದ್ದಾರೆ. ಮಲೆನಾಡಿನಲ್ಲಿ ಶೇ 25ರಷ್ಟು ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ ಸಮಸ್ಯೆ ಇದೆ.

ಕೋವಿಡ್‌ನ ಮೊದಲ ಮತ್ತು ಎರಡನೇ ಅಲೆಯ ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಯಕರ್ತೆಯರು ತರಕಾರಿ, ನೀರಿನ ಗಾಡಿ, ಬುಟ್ಟಿಗಳಲ್ಲಿ ಪೌಷ್ಟಿಕ ಆಹಾರವನ್ನು ಇಟ್ಟುಕೊಂಡು ಹೋಗಿ ಫಲಾನುಭವಿಗಳಿಗೆ ತಲುಪಿಸಿದ್ದಾರೆ ಎನ್ನುತ್ತಾರೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ದಾವಣಗೆರೆ ಜಿಲ್ಲಾ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌.

ಓದಿ: ಗಿರಿಜನರ ಆಹಾರ ಯೋಜನೆ: ಕೋವಿಡ್‌ ಕಾಲದಲ್ಲಿ ಹೊಟ್ಟೆ ತುಂಬಿಸಿತು

‘ಕೋವಿಡ್‌ ಕಾರಣದಿಂದ ವಲಸೆ ಹೋದವರು ಗ್ರಾಮಗಳಿಗೆ ವಾಪಸ್‌ ಬಂದಾಗ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಅಗತ್ಯಕ್ಕೆ ತಕ್ಕಷ್ಟು ಆಹಾರ ಸರಬರಾಜು ಆಗದ ಕಾರಣ ಪೌಷ್ಟಿಕ ಆಹಾರ ವಿತರಣೆಯಲ್ಲಿ ವ್ಯತ್ಯಾಸವಾಯಿತು. ಡಿಸೆಂಬರ್‌ ತಿಂಗಳ ಅಕ್ಕಿ ಒಂದೇ ಬಾರಿ ಫೆಬ್ರುವರಿಯಲ್ಲಿ ಬಂದಿತು. ಒಂದು ಮೊಟ್ಟೆಗೆ ₹ 2 ಹೆಚ್ಚುವರಿ ಹೊರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇದೀಗ ಪೋಷಕರಿಗೆ ನೇರ ನಗದು ವರ್ಗಾವಣೆ (ಡಿಬಿಟಿ) ಜಾರಿ ಮಾಡಲು ಹೊರಟಿದ್ದು, ಇದರಿಂದ ಅಪೌಷ್ಟಿಕತೆ ಸಮಸ್ಯೆ ಹೆಚ್ಚುವ ಅಪಾಯವಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಅಧ್ಯಕ್ಷೆ ಎಸ್‌. ವರಲಕ್ಷ್ಮಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು