ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕಾಫಿನಾಡಿನಲ್ಲಿ ಕಂಪನ ಶುರು

ಅತಿವೃಷ್ಟಿ, ರೋಗಬಾಧೆ, ಬೆಲೆ ಕುಸಿತ: ಕಾಫಿ, ಕಾಳುಮೆಣಸು ಕೃಷಿಕರು ಕಂಗಾಲು
Last Updated 17 ಡಿಸೆಂಬರ್ 2022, 19:59 IST
ಅಕ್ಷರ ಗಾತ್ರ

ಬಹಳಷ್ಟು ತೋಟಗಳಲ್ಲಿ ಅರೆಬಿಕಾ ಕಾಫಿ ಹಣ್ಣಾಗಿದ್ದು ಕೊಯ್ಲು ಆರಂಭವಾಗಿದೆ. ಅಕಾಲಿಕವಾಗಿ ಬರುತ್ತಿರುವ ಮಳೆಯಿಂದಾಗಿ ಬಹುತೇಕ ತೋಟಗಳಲ್ಲಿ ಕಾಫಿ ಹಣ್ಣುಗಳು ಬಿರಿದು, ಉದುರಿ, ಮಣ್ಣು ಪಾಲಾಗುತ್ತಿವೆ. ಇನ್ನು ಕೊಯ್ಲು ಮಾಡಿರುವ ಕಾಫಿಯನ್ನೂ ಸಂಸ್ಕರಿಸಿ, ಒಣಗಿಸಲು ಮಳೆ, ಮೋಡ ಕವಿದ ವಾತಾವರಣ ಅಡ್ಡಿಪಡಿಸುತ್ತಿದೆ.

ಒಳನೋಟ: ಕಾಫಿನಾಡಿನಲ್ಲಿ ಕಂಪನ ಶುರು

ಬೆಂಗಳೂರು: ಜಗತ್ತಿನಾದ್ಯಂತ ಕೋಟ್ಯಂತರ ಜನರಿಗೆ ಒಂದು ಕಪ್‌ ಕಾಫಿ ಸೇವಿಸದೇ ದಿನಚರಿ ಆರಂಭವಾಗುವುದೇ ಇಲ್ಲ. ಹಬೆಯಾಡುವ ಬಿಸಿ ಬಿಸಿ ಕಾಫಿ ಹೀರುತ್ತಾಆಹ್ಹಾ.. ಎಂದು ಆಸ್ವಾದಿಸುವ ಆನಂದ ಕಾಫಿ ಬೆಳೆಗಾರರಿಗೆ ಮಾತ್ರ ಇಲ್ಲ!

ಬೆಲೆ ಕುಸಿತ, ಪ್ರತಿಕೂಲ ಹವಾಮಾನ, ಕಾಂಡ ಕೊರಕ, ಕೀಟ ಬಾಧೆಯಿಂದ ತೋಟಗಳಲ್ಲಿ ಕಾಫಿ ಗಿಡಗಳು ಮತ್ತು ಶೀಘ್ರ ಹರಡುವ ಸೊರಗು ರೋಗದಿಂದ ಕಾಳುಮೆಣಸು ಬಳ್ಳಿಗಳ ನಾಶ ಬೆಳೆಗಾರರನ್ನು ಕಂಗಾಲಾಗಿಸಿದೆ.

ದಶಕಗಳ ನಂತರ, ಕಳೆದ ಋತುವಿನಲ್ಲಿ ಕಾಫಿಯ ಬಂಪರ್‌ ಬೆಳೆ ಬೆಳೆಗಾರರ ಕನಸುಗಳು ಗರಿಗೆದರುವಂತೆ ಮಾಡಿತ್ತು. ಆದರೆ, ಬೆಲೆ ಏರಿಕೆ ಸ್ಥಿರವಾಗಿ ಉಳಿಯಲಿಲ್ಲ. ಈ ಬಾರಿ ಮತ್ತೆ ಬೆಲೆ ಕುಸಿತ, ಬೆಳೆಹಾನಿ ಬೆಳೆಗಾರರ ಕನಸುಗ ಳನ್ನು ಕಮರುವಂತೆ ಮಾಡಿದೆ. ಕಾಳು ಮೆಣಸು ಬೆಳೆಗಾರರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಲಾಭದಾಯಕ ವೆನಿಸಿದ್ದ ಈ ವಾಣಿಜ್ಯ ಬೆಳೆಗಳನ್ನು ನೆಚ್ಚಿ ಕೊಂಡು, ಸಾಲದ ಸುಳಿಯಿಂದ ಹೊರ ಬರುವ ತವಕದಲ್ಲಿದ್ದವರ ಬದುಕು ಮತ್ತೆ ತಲ್ಲಣಗೊಂಡಿದೆ.‘ಕಾಫಿ ಬಟ್ಟಲಿನಲ್ಲಿ ಕಂಪನ’ ದಿನೇ ದಿನೇ ಹೆಚ್ಚುತ್ತಿದೆ.

ಕಳೆದ ಋತುವಿನಲ್ಲಿ 50 ಕೆ.ಜಿ ಅರೆಬಿಕಾ ಕಾಫಿ ಪಾರ್ಚ್‌ಮೆಂಟ್‌ಗೆ (ಎಪಿ) ಸುಮಾರು ₹16,800ರಿಂದ ₹17,000, ಅರೆಬಿಕಾ ಚೆರಿ (ಎಸಿ) 50 ಕೆ.ಜಿ.ಗೆ ₹9 ಸಾವಿರ ಬೆಲೆ ಇತ್ತು. ಈ ಬಾರಿ ಎಪಿ ₹12,800ರಿಂದ ₹13 ಸಾವಿರ, ಎಸಿ ₹6,000 ಇದೆ. ರೊಬಸ್ಟಾ ಪಾರ್ಚ್‌ಮೆಂಟ್‌ (ಆರ್‌ಪಿ) 50 ಕೆ.ಜಿ.ಗೆ ₹11 ಸಾವಿರದಿಂದ ₹ 8,500ಕ್ಕೆ, ರೊಬಸ್ಟಾ ಚೆರಿ (ಆರ್‌ಸಿ) ₹5,500–₹6,000ದಿಂದ 4 ಸಾವಿರಕ್ಕೆ ಇಳಿದಿದೆ. ಕಳೆದ ಸಾಲಿನಲ್ಲಿ ಕಾಫಿ ಬೆಲೆ ₹20 ಸಾವಿರ ತಲುಪುವ ಊಹಾಪೋಹ ನಂಬಿ ಕೆಲ ಬೆಳೆಗಾರರು, ವ್ಯಾಪಾರಿಗಳಿಗೆ ಕಾಫಿ ಕೊಟ್ಟರೂ ಬಿಲ್‌ ಮಾಡಿಸದೇ, ಲಾಭದ ನಿರೀಕ್ಷೆಯಲ್ಲಿದ್ದವರು ಕೈಸುಟ್ಟುಕೊಳ್ಳುವಂತಾಗಿದೆ.

ಈಗ ಕಾಫಿ ಹಣ್ಣಿನ ಸುಗ್ಗಿಕಾಲ. ಬಹಳಷ್ಟು ತೋಟಗಳಲ್ಲಿ ಅರೆಬಿಕಾ ಕಾಫಿ ಹಣ್ಣಾಗಿದೆ. ಕೆಲವೆಡೆ ರೊಬಸ್ಟಾ ಕೂಡ ಅಕಾಲಿಕವಾಗಿ ಹಣ್ಣಾಗಿದೆ. ಮಳೆಯ ಹೊಡೆತಕ್ಕೆ ಬಹಳಷ್ಟು ತೋಟಗಳಲ್ಲಿ ಕಾಫಿ ಹಣ್ಣುಗಳು ಬಿರಿದು, ನೆಲಕಚ್ಚಿವೆ. ಹಣ್ಣು ಕೊಯ್ಲಿಗೆ ಸಾಕಷ್ಟು ಕಾರ್ಮಿಕರು ಲಭಿಸುತ್ತಿಲ್ಲ. ಇನ್ನು ಕೊಯ್ಲು ಮಾಡಿದ ಕಾಫಿ ಸಂಸ್ಕರಿಸಿ, ಒಣಗಿಸಲು ಮಳೆ, ಮೋಡ ಕವಿದ ವಾತಾವರಣ ಅಡ್ಡಿಪಡಿಸುತ್ತಿದೆ.

ಒಳನೋಟ: ಕಾಫಿನಾಡಿನಲ್ಲಿ ಕಂಪನ ಶುರು

ಧಾರಣೆ, ರಫ್ತು ಕುಗ್ಗಿಸಿದ ಆರ್ಥಿಕ ಹಿಂಜರಿತ

ನೆರಳಿನಡಿ ಅದರಲ್ಲೂಪಶ್ಚಿಮ ಘಟ್ಟಗಳ ಜೀವವೈವಿಧ್ಯ ಪ್ರದೇಶದಲ್ಲಿ ಬೆಳೆಯುವಂತಹ ಭಾರತದ ಕಾಫಿಗೆ ಮತ್ತು ಕಾಳು ಮೆಣಸಿಗೆ ಯುರೋಪಿನ ರಾಷ್ಟ್ರಗಳಲ್ಲಿ ಬೇಡಿಕೆ ಹೆಚ್ಚಿದೆ. ಜರ್ಮನಿ, ರಷ್ಯಾ, ಉಕ್ರೇನ್‌, ಬೆಲ್ಜಿಯಂ, ಅಮೆರಿಕ, ಬ್ರಿಟನ್‌, ಟರ್ಕಿ, ಇಟಲಿ ಇನ್ನಿತರ ದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಭಾರತದ ಕಾಫಿ, ಕಾಳು ಮೆಣಸನ್ನು ಆಮದು ಮಾಡಿಕೊಳ್ಳುತ್ತವೆ. ಕೋವಿಡ್‌ ಪಿಡುಗು, ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಆರ್ಥಿಕ ಹಿಂಜರಿತದ ಬಿಸಿ ಭಾರತದ ಕಾಫಿ, ಕಾಳುಮೆಣಸು ರಫ್ತಿಗೆ ತಟ್ಟಲಾರಂಭಿಸಿದೆ.

ಬ್ರೆಜಿಲ್‌, ವಿಯಟ್ನಾಂ, ಕೊಲಂಬಿಯಾದಲ್ಲಿ ಈ ಬಾರಿ ಫಸಲು ಉತ್ತಮವಾಗಿದ್ದು, ಉತ್ಪಾದನೆ ಹೆಚ್ಚುವ ನಿರೀಕ್ಷೆ ಇದೆ. ಬ್ರೆಜಿಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಉತ್ಪಾದನೆಯಾದರೆ ಭಾರತದಲ್ಲಿ ಕಾಫಿ ಬೆಲೆ ₹10 ಸಾವಿರಕ್ಕಿಂತಲೂ ಕೆಳಗಿಳಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಕಾಫಿ ವ್ಯಾಪಾರಿ ಎ.ಎನ್. ದೇವರಾಜ್‌.

‘ದೇಶದಲ್ಲಿ ಶೇ 30ರಷ್ಟು ಕಾಫಿ ಮಾತ್ರವೇ ಆಂತರಿಕ ಬಳಕೆಯಾಗುತ್ತಿದೆ. ಉಳಿದ ಶೇ 70ರಷ್ಟು ರಫ್ತು ಅವಲಂಬಿಸಿದೆ. ಕಾಫಿಯ ಆಂತರಿಕ ಬಳಕೆಯೂ ಹೆಚ್ಚಬೇಕಿದೆ’ ಎನ್ನುವುದು ಬೆಳೆಗಾರರ ಸಂಘಟನೆಗಳ ಅನಿಸಿಕೆ.

ಅಪಾರಬೆಳೆ ಹಾನಿ: ರಾಜ್ಯದಲ್ಲಿ ಕಾಫಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಚಿಕ್ಕಮಗಳೂರು,ಕೊಡಗು ಹಾಗೂ ಹಾಸನದ ಮಲೆನಾಡು ಭಾಗದಲ್ಲಿಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ಸುರಿದಭಾರಿ ಮಳೆ, ಪ್ರವಾಹ, ಭೂಕುಸಿತದಿಂದ ಕಾಫಿ ತೋಟಗಳು ತತ್ತರಿಸಿವೆ.ಈ ಸಲ ಕಾಫಿ – ಕಾಳುಮೆಣಸು ಫಸಲು ಅರ್ಧದಷ್ಟು ಕೈತಪ್ಪುವ ಆತಂಕ ಬೆಳೆಗಾರರದು.

ಹಲವು ಕಡೆ ತೋಟಗಳಲ್ಲಿ ಈಗಲೂಜಿನುಗುತ್ತಿರುವ ಒರತೆ, ಹೆಚ್ಚಿದ ಶೀತ ಕಾಫಿ ಗಿಡಗಳ ಎಲೆ ಉದುರಿಸಿದೆ. ರೆಕ್ಕೆಗಳಲ್ಲಿ ತುಂಬಿದ್ದ ಕಾಯಿಗಳಲ್ಲಿ ಒಂದಷ್ಟು ನೆಲ ಕಂಡಿದ್ದರೆ, ಮತ್ತಷ್ಟು ಕ‍ಪ್ಪಾಗಿ ಜೊಳ್ಳಾಗಿವೆ.ಶೀತ ಮತ್ತು ಶೀಘ್ರ ಹರಡುವ ಸೊರಗು ರೋಗಕ್ಕೆ ತುತ್ತಾದ ತೋಟಗಳಲ್ಲಿ ಕಾಳು ಮೆಣಸಿನ ಬೀಳುಗಳೂ ಸತ್ತು ಹೋಗಿವೆ. ‘ಕಪ್ಪು ಬಂಗಾರ’ವೆನಿಸಿದ್ದ ಉಪಬೆಳೆ ಕಾಳುಮೆಣಸುಒಂದರ್ಥದಲ್ಲಿ ತೋಟಗಳ ನಿರ್ವಹಣೆಯಲ್ಲಿ ಬೆಳೆಗಾರರಿಗೆ ವರದಾನವೆನಿಸಿತ್ತು.

‘ಕಳೆದ ವರ್ಷವೂ ಕಾಫಿ ಫಸಲು ಕಾಲುಭಾಗದಷ್ಟು ಮಣ್ಣು ಪಾಲಾಗಿತ್ತು. ಕೈಗೆ ಸಿಕ್ಕಷ್ಟು ಬೆಳೆಯಿಂದಲೇ ಬೆಳೆಗಾರರು, ಬಂಪರ್‌ ಬೆಲೆಗೆ ತೃಪ್ತರಾಗಿದ್ದರು. ಕಾಳುಮೆಣಸು ಅಷ್ಟೇನೂ ನಷ್ಟವಾಗಿರಲಿಲ್ಲ. ಇಳುವರಿಯೂ ಚೆನ್ನಾಗಿತ್ತು. ಆದರೆ, ಈ ಬಾರಿ ಕಾಫಿ ಕಾಯಿಕಟ್ಟುವಾಗ, ಕಾಳು ಮೆಣಸು ಗರಿ ಬಿಡುವಾಗ ಸುರಿದ ನಿರಂತರ ಮಳೆ ಬಂಪರ್‌ ಬೆಳೆಯ ಕನಸುಗಳನ್ನು ಭಗ್ನಗೊಳಿಸಿದೆ’ ಎನ್ನುತ್ತಾರೆ ಕಾಫಿ ಮಂಡಳಿ ಮಾಜಿ ಸದಸ್ಯ, ಬೆಳೆಗಾರ ಕೈಮರ ಮನುಕುಮಾರ್‌.

ಸಾಂಪ್ರದಾಯಿಕವಾಗಿ ಕಾಫಿ ಮತ್ತು ಕಾಳುಮೆಣಸು ಬೆಳೆಯುವ ಪ್ರಮುಖ ಮೂರು ಜಿಲ್ಲೆಗಳಲ್ಲಿ ಸುಮಾರು 90 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ಹಾನಿಯನ್ನು ಕಾಫಿ ಮಂಡಳಿ ಅಂದಾಜು ಮಾಡಿದೆ. ಬೆಳೆ ಹಾನಿಯಾಗದಿದ್ದರೆ ಈ ಬಾರಿ ಅಂದಾಜು ಮೀರಿ ದಾಖಲೆಯ ಪ್ರಮಾಣದಲ್ಲಿ ಕಾಫಿ ಉತ್ಪಾದನೆಯಾಗುವ ನಿರೀಕ್ಷೆ ಇತ್ತು.

ಇನ್ನು 11 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕಾಳುಮೆಣಸು ಹಾನಿಯಾಗಿರುವುದಾಗಿ ತೋಟಗಾರಿಕೆ ಇಲಾಖೆ ಅಂದಾಜಿಸಿದೆ.ಕಳೆದ ವರ್ಷ 1.31 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ 46,541 ಟನ್‌ ಕಾಳುಮೆಣಸು ಉತ್ಪಾದನೆಯಾಗಿತ್ತು. ಈ ಬಾರಿ ಉತ್ಪಾದನೆ ತಗ್ಗಬಹುದು. ಬೆಳೆ ನಷ್ಟದ ಸಮೀಕ್ಷೆಯ ಅಂತಿಮ ವರದಿ ಇನ್ನಷ್ಟೇ ಬರಬೇಕಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಸಾಂಬಾರ ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧಿಕಾರಿಗಳು.

ಕಪ್ಪು ಬಂಗಾರಕ್ಕೆ ಆಮದು ಕಂಟಕ: ವಿದೇಶಗಳಿಂದ ಕಡಿಮೆ ಬೆಲೆಗೆ ಆಮದು ಮಾಡಿಕೊಳ್ಳುತ್ತಿರುವ ಕಾಳು ಮೆಣಸು ದೇಶೀಯ ಕಾಳುಮೆಣಸಿಗೆ ಕಂಟಕವಾಗಿದೆ.

‘ಕಾಳುಮೆಣಸು ಆಮದು ಆಗುವುದಕ್ಕಿಂತ ಮೊದಲು ದೇಶದ ಕಾಳುಮೆಣಸು ಕೆ.ಜಿಗೆ ₹ 700 ಇತ್ತು. ವಿಯೆಟ್ನಾಂ, ಬ್ರೆಜಿಲ್‌, ಮಲೇಷ್ಯಾದಿಂದ ಕಾಳುಮೆಣಸನ್ನು ಪ್ರತಿ ಕೆ.ಜಿ.ಗೆ ₹ 180 ರಿಂದ ₹200 ಅಗ್ಗದ ದರದಲ್ಲಿ ಆಮದು ಮಾಡಿಕೊಂಡು, ಸ್ಥಳೀಯ ಕಾಳು ಮೆಣಸಿನೊಂದಿಗೆ ಕಲಬೆರಕೆ ಮಾಡುವ ಜಾಲ ದೇಸಿ ಬಂಗಾರದ ಗುಣಮಟ್ಟ ಹಾಳುಮಾಡುತ್ತಿದೆ’ ಎನ್ನುತ್ತಾರೆ ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ ಕ್ಯಾನಹಳ್ಳಿ ಸುಬ್ರಹ್ಮಣ್ಯ.

ಮಾರ್ಚ್‌ನಲ್ಲಿ ಕಾಳು ಮೆಣಸು ಕೆ.ಜಿ.ಗೆ ₹550–₹600ರವರೆಗೆ ಬೆಲೆ ಇತ್ತು. ಈಗ ₹480–₹500ಕ್ಕೆ ಇಳಿದಿದೆ. ಬೆಲೆ ಕುಸಿತಕ್ಕಿಂತಲೂ ತೋಟಗಳಲ್ಲಿ ಬಳ್ಳಿಗಳೇ ಸತ್ತುಹೋಗಿರುವುದು ದೊಡ್ಡ ನಷ್ಟ. ಮತ್ತೆ ಹೊಸದಾಗಿ ಮೆಣಸು ಬುಟ್ಟಿ ನೆಟ್ಟು ಪೋಷಿಸಿದರೆ ಫಲ ಸಿಗುವುದು ಮೂರು ವರ್ಷಗಳ ನಂತರವೇ.

ಕಾಫಿಗೆ ಮಾರಕವಾದ ಮುಕ್ತ ಮಾರುಕಟ್ಟೆ: ‘ಮುಕ್ತ ಮಾರುಕಟ್ಟೆ ಶುರುವಾದ ಮೇಲೆ ಕಾಫಿ ಬೆಲೆ ಸ್ಥಿರತೆ ಕಳೆದುಕೊಂಡಿದೆ. ದೇಶಿ ಮಾರುಕಟ್ಟೆಯಲ್ಲಿನ ದರ ನಿಗದಿ ಅಂತರರಾಷ್ಟ್ರೀಯ ಮಾರುಕಟ್ಟೆ ಅವಲಂಬಿಸಿದೆ. ಅಂತರರಾಷ್ಟ್ರೀಯವಾಗಿ ಬೆಲೆ ಹೆಚ್ಚಿದ್ದಾಗಲೂ ಮಧ್ಯವರ್ತಿಗಳು, ಬೆಳೆಗಾರರಿಂದ ಕಡಿಮೆ ಬೆಲೆಗೆ ಕಾಫಿ ಖರೀದಿಸಿ ಬಹುರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ವ್ಯಾಪಾರಿಗಳಿಂದ ಶೋಷಣೆ ನಿಂತಿಲ್ಲ’ ಎನ್ನುವುದು ಹಲವು ಬೆಳೆಗಾರರ ಅಳಲು.

‘ಕಾಫಿ ಮುಕ್ತ ಮಾರುಕಟ್ಟೆಗೆ ಮೊದಲು ಎಸಿ 50 ಕೆ.ಜಿ.ಗೆ ₹ 3 ಸಾವಿರ ಇತ್ತು. ಇದು 2000ರ ಹೊತ್ತಿಗೆ ₹ 450ಕ್ಕೆ ಕುಸಿದಿತ್ತು. ಬ್ರೆಜಿಲ್‌ನಲ್ಲಿ ಕಾಫಿ ಬೆಳೆ ವಿಫಲವಾದಾಗ, ಬೆಲೆ ಚೇತರಿಕೆಯಾಗುತ್ತಿತ್ತು’ ಎನ್ನುತ್ತಾರೆ ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಹರೀಶ್‌ ಮಾದಪ್ಪ.

‘ಜಾಗತಿಕ ಮಾರುಕಟ್ಟೆಯಲ್ಲಿ ಕೆ.ಜಿ ಕಾಫಿಗೆ 245 ಸೆಂಟ್ಸ್ ಇದ್ದ ದರವು ಈಗ 156 ಸೆಂಟ್ಸ್‌ಗೆ ಇಳಿದಿದೆ. ಡಾಲರ್ ಮೌಲ್ಯ ವೃದ್ಧಿಸದಿದ್ದರೆ 50 ಕೆ.ಜಿ ಕಾಫಿ ಧಾರಣೆಯು ₹9,500ರ ಆಸುಪಾಸಿಗೆ ಬರುತ್ತಿತ್ತು’ ಎನ್ನುತ್ತಾರೆ ಚಿಕ್ಕಮಗಳೂರಿನ ಸಾರಥಿ ಕಾಫಿ ಕ್ಯೂರಿಂಗ್‌ ವರ್ಕ್ಸ್‌ ಮಾಲೀಕ ಎ.ಎನ್.ದೇವರಾಜ್‌.

‘ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಯುತ್ತಿದ್ದರೂ,ಅಂತರರಾಷ್ಟ್ರೀಯ ಕರಿಮೆಣಸು ವಿನಿಮಯ ಕೇಂದ್ರವು ಕೊಚ್ಚಿಯಲ್ಲಿರುವ ಕಾರಣಕ್ಕೆ ಕೇಂದ್ರ ಸರ್ಕಾರ ಕೇರಳಕ್ಕೆ ಹೆಚ್ಚು ಉತ್ತೇಜನ ನೀಡುತ್ತಿದೆ’ ಎಂಬುದು ಇಲ್ಲಿನ ಬೆಳೆಗಾರರ ಗಂಭೀರ ಆಪಾದನೆ.

ಹವಾಮಾನ ಬದಲಾವಣೆ– ಅಕಾಲಿಕ ಮಳೆ ನಿರಂತರ:ಜಾಗತಿಕ ಹವಾಮಾನ ಬದಲಾವಣೆ ಕಾಫಿ ಕೃಷಿ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿದೆ. ತಾಪಮಾನದ ಹೆಚ್ಚಳ ಮಳೆಗಾಲ, ಚಳಿಗಾಲ, ಬೇಸಿಗೆ ಕಾಲದ ವ್ಯತ್ಯಾಸಗಳ ಗೆರೆಯನ್ನೇ ತೆಳುವಾಗಿಸುತ್ತಿದೆ. ಪರಿಣಾಮ ಕಾಫಿ ಅಕಾಲಿಕವಾಗಿ ಹೂವಾಗುವುದು, ಅಕಾಲಿಕವಾಗಿ ಹಣ್ಣಾಗುವುದು ಸಾಮಾನ್ಯವಾಗಿದೆ.

ಇಂಗಾಲ ಹೊರಸೂಸುವಿಕೆ ಪ್ರಮಾಣ ತಗ್ಗಿಸುವ ಗುರಿಯನ್ನು ಮೂರು ದಶಕಗಳೊಳಗೆ ಸಾಧಿಸದಿದ್ದರೆ, 2050ರ ವೇಳೆಗೆ ಜಗತ್ತಿನಲ್ಲಿ ಕಾಫಿ ಬೆಳೆಯುವ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಅರ್ಧದಷ್ಟು ಕಾಫಿ ಕೃಷಿಗೆ ಯೋಗ್ಯವಾಗಿ ಉಳಿಯುವುದಿಲ್ಲ. ಬ್ರೆಜಿಲ್‌ ಒಂದೇ ಶೇ 79ರಷ್ಟು ಕಾಫಿ ಕೃಷಿಭೂಮಿ ಕಳೆದುಕೊಳ್ಳಲಿದೆ. ಇಂತಹ ಪರಿಸ್ಥಿತಿ ಈಗಾಗಲೇ ಪೆರುವಿನಲ್ಲಿ ಕಾಣಲಾರಂಭಿಸಿದೆ ಎನ್ನುತ್ತವೆ ವೈಜ್ಞಾನಿಕ ವರದಿಗಳು.

ಲಂಡನ್‌ನ ಕೀವ್‌ ಗಾರ್ಡನ್ಸ್‌ ಕೀವ್‌ ಕಾಫಿ ಸಂಶೋಧನಾ ಕೇಂದ್ರದ ಮುಖ್ಯಸ್ಥಡಾ. ಆರನ್ ಡೇವಿಸ್ ಮತ್ತುಐಯುಸಿಎನ್‌ ರೆಡ್‌ ಲಿಸ್ಟ್‌ ಮುಖ್ಯಸ್ಥರಾದ ಕ್ರೇಗ್‌ ಹಿಲ್ಟನ್‌ಟೇಲರ್ ಅವರುತಮ್ಮ ಅಧ್ಯಯನ ವರದಿಗಳಲ್ಲಿ ಕಾಫಿಯೂಅಳಿವಿನಂಚಿಗೆ ಬಂದಿದೆ. ಭವಿಷ್ಯದಲ್ಲಿ ಕಾಫಿ ಉಳಿಸಿಕೊಳ್ಳಬೇಕಾದರೆರೋಗ ನಿರೋಧಕ ಶಕ್ತಿಯ ಮತ್ತು ಪ್ರತಿಕೂಲ ಹವಾಮಾನಕ್ಕೂ ಒಗ್ಗುವಂತಹ ಹೊಸ ತಳಿಗಳಕಾಫಿ ಸಂಶೋಧನೆಯ ಅಗತ್ಯವಿದೆ ಎಂದು ಒತ್ತಿ ಹೇಳಿದ್ದಾರೆ.

ಹವಾಮಾನ ಬದಲಾವಣೆಯು ಕೆಲವು ದೇಶಗಳಿಗೆ ಮೊದಲ ಬಾರಿಗೆ ಕಾಫಿ ಉತ್ಪಾದಿಸಲು ಸಾಧ್ಯವಾಗಬಹುದು. ಕಾಫಿ ಬೆಳೆಯಲು ಸುಸ್ಥಿರವೆನಿಸಲಿರುವ ದೇಶಗಳ ಸಾಲಿನಲ್ಲಿ ಚೀನಾ ಮತ್ತು ಅಮೆರಿಕ ಸೇರಿವೆ. ‘ಮಾನ್ಸೂನ್‌ ಜತೆಗಿನ ಜೂಜಾಟ’ ಎಂದೇ ಪರಿಗಣಿಸಿರುವ ಭಾರತದ ಕೃಷಿಯಲ್ಲಿ, ಪ್ರತಿಕೂಲ ಹವಾಮಾನ, ಕೀಟ ಬಾಧೆ ನಡುವೆಯೂ ಉಳಿಯಬಲ್ಲ ಕಾಫಿ ತಳಿಗಳನ್ನು ಅಭಿವೃದ್ಧಿಪಡಿಸಬೇಕಾದ ಸವಾಲು ಸಂಶೋಧಕರ ಮುಂದಿದೆ.

ಏರುತ್ತಿರುವ ಕೃಷಿ ವೆಚ್ಚ

ತೋಟಗಳಲ್ಲಿ ಬರುವ ವಾರ್ಷಿಕ ಆದಾಯಕ್ಕಿಂತ ಖರ್ಚಿನ ಬಾಬತ್ತೇ ಹೆಚ್ಚಾಗುತ್ತಿದೆ. ದಶಕದಿಂದ ಕಾಫಿ ಕೃಷಿ ವೆಚ್ಚ ಅಂದಾಜು ಮೀರಿ ಏರುತ್ತಿದೆ.ಕಾಫಿ ಹಣ್ಣುಕೊಯ್ಲಿಗಾಗಿ ಕೂಲಿ ದರ ಏರಿಕೆಯ ಪೈಪೋಟಿ. ಬ್ಯಾಂಕುಗಳಲ್ಲಿ ಏರುತ್ತಿರುವ ಸಾಲದ ಬಡ್ಡಿ ಬೆಳೆಗಾರರ ಆದಾಯ ಖೋತಾ ಮಾಡುತ್ತಿದೆ.

1995–2000 ಅವಧಿಯಲ್ಲಿ ಒಂದು ಎಕರೆ ಅರೆಬಿಕಾ ತೋಟದಲ್ಲಿ ಸರಾಸರಿ 600ರಿಂದ 700 ಕೆ.ಜಿ ಫಸಲು ಬರುತ್ತಿತ್ತು. ಈಗ ಎಕರೆಗೆ 200 ರಿಂದ 300 ಕೆ.ಜಿಗೆ ಕುಸಿದಿದೆ. ಹಾಗೆಯೇ ಈ ಅವಧಿಯಲ್ಲಿ ಪ್ರತಿ ಎಕರೆ ಅರೆಬಿಕಾ ತೋಟ ನಿರ್ವಹಣೆಗೆ ವಾರ್ಷಿಕ ₹35 ಸಾವಿರದಿಂದ ₹45 ಸಾವಿರ ಸಾಕಾಗುತ್ತಿತ್ತು. ಆದರೆ, ಈಗ ₹80 ಸಾವಿರದಿಂದ ₹90 ಸಾವಿರಕ್ಕೆ ಏರಿದೆ. ನಿರ್ವಹಣೆ ಸುಲಭ ಎನಿಸಿದ್ದ ರೊಬಸ್ಟಾ ತೋಟದ ನಿರ್ವಹಣೆಯೂ ಎಕರೆಗೆ ₹55 ಸಾವಿರ ದಾಟಿ, ಅದೂ ದುಬಾರಿಯಾಗಿ ಪರಿಣಮಿಸಿದೆ.

2007ರಲ್ಲಿ ಎಂಓಪಿ (ಪೊಟ್ಯಾಷ್) ರಸಗೊಬ್ಬರ 50 ಕೆ.ಜಿಗೆ ₹ 275 ಇತ್ತು. ಈಗ ಇದರ ಬೆಲೆ ₹1,700ಕ್ಕೆ ಏರಿದೆ. ಡಿಎಪಿ ರಸಗೊಬ್ಬರ ₹490ರಿಂದ ₹1,350ಕ್ಕೆ ಜಿಗಿದಿದೆ. ಇನ್ನು ಬೆಳೆಗಾರರು ಹೆಚ್ಚು ಅವಲಂಬಿಸಿದ್ದ 19:19:19 ರಸಗೊಬ್ಬರ (ಎನ್‌ಪಿಕೆ–ಸಂಪೂರ್ಣ) ಸಿಗುತ್ತಲೇ ಇಲ್ಲ. ನಕಲಿ ರಸಗೊಬ್ಬರದ ಹಾವಳಿಯಿಂದಲೂ ಬೆಳೆ ಹಾಳಾಗುತ್ತಿದೆ ಎಂದು ಬೆಳೆಗಾರರ ಸಮಸ್ಯೆ ತೆರೆದಿಡುತ್ತಾರೆ.

ಒಳನೋಟ: ಕಾಫಿನಾಡಿನಲ್ಲಿ ಕಂಪನ ಶುರು

ಚಳಿಗಾಲದಲ್ಲೂ ಮಳೆ. ಮೋಡ ಕವಿದ ವಾತಾವರಣದಿಂದಾಗಿ ಕಾಫಿ ಒಣಗಿಸುವುದು ಹರಸಾಹಸ. ಕಾಫಿ ಒಣಗಿಸುವ ಯಂತ್ರ (ಡ್ರೈಯರ್‌) ಖರೀದಿಗೆ ಸಬ್ಸಿಡಿ ಒದಗಿಸಬೇಕು.

- ಡಾ.ಎಚ್‌.ಟಿ.ಮೋಹನಕುಮಾರ್‌, ಅಧ್ಯಕ್ಷ, ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್‌), ಚಿಕ್ಕಮಗಳೂರು

ಕಾಫಿ, ಕಾಳುಮೆಣಸು ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಬೇಕು.ಬೆಲೆ ಕುಸಿತದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಫಿಗೂ ಬೆಂಬಲ ಬೆಲೆ ಘೋಷಿಸಬೇಕು.

- ಕ್ಯಾನಹಳ್ಳಿ ಸುಬ್ರಹ್ಮಣ್ಯ, ಹಾಸನ ಜಿಲ್ಲಾ ಪ್ಲಾಂಟರ್ಸ್‌ ಸಂಘದ ಅಧ್ಯಕ್ಷ

ಹೆಚ್ಚು ಮಳೆಯಿಂದ ಕಾಫಿ ಹಣ್ಣುಗಳು ನೀರ್ಚಿಯಾಗಿ ನೆಲಕಚ್ಚುತ್ತಿವೆ. ಕೊಯ್ಲು ಸಾಗುತ್ತಿಲ್ಲ. ಕಾಫಿ ಗಿಡ, ಮೆಣಸಿನ ಬಳ್ಳಿ ಉಳಿಸಿಕೊಳ್ಳುವುದೇ ಸವಾಲಾಗಿದೆ. ಅರ್ಧದಷ್ಟು ಫಸಲು ನಷ್ಟವಾಗಿದೆ.

- ಡಾ.ಕೃಷ್ಣಾನಂದ, ಬೆಳಗಾರ, ಕಾಫಿ ಮಂಡಳಿ ಸದಸ್ಯ, ಹೇರೂರು, ಕೊಪ್ಪ ತಾಲ್ಲೂಕು

(ಪೂರಕ ಮಾಹಿತಿ: ವಿಶ್ವನಾಥ ಎಸ್‌., ಬಿ.ಜೆ. ಧನ್ಯಪ್ರಸಾದ್‌, ಗಿರೀಶ್‌ ಕೆ.ಎಸ್‌., ಚಿದಂಬರ ಪ್ರಸಾದ್‌)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT