ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಇಲ್ಲದ ನಿರ್ವಹಣೆ; ತಪ್ಪದ ಬವಣೆ

ಹೇಳಿಕೊಳ್ಳಲಾಗದ, ಅನುಭವಿಸಲಾಗದ ಯಾತನೆ | ಉತ್ತರದ ಬಹುತೇಕ ಶಾಲೆಗಳಲ್ಲಿ ಸಮರ್ಪಕ ಶೌಚಾಲಯಗಳಿಲ್ಲ
Last Updated 20 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಳಗಾವಿ: ಸಮರ್ಪಕ ಶೌಚಾಲಯಗಳಿಲ್ಲ. ಇದ್ದರೂ ನೀರಿನ ವ್ಯವಸ್ಥೆ ಇರುವುದಿಲ್ಲ. ಇದ್ದಲ್ಲಿ ನಿರ್ವಹಣೆಯ ಕೊರತೆ. ಇದೆಲ್ಲದರ ಪರಿಣಾಮ ವಿದ್ಯಾರ್ಥಿಗಳು, ಅದರಲ್ಲೂ ವಿದ್ಯಾರ್ಥಿನಿಯರು ‘ಶೋಚ’ನೀಯ ಸ್ಥಿತಿ ಎದುರಿಸುತ್ತಿದ್ದಾರೆ. ಅವರು ಮುಜುಗರಕ್ಕೆ ಒಳಗಾಗುವುದು, ಮಾನಸಿಕ ತುಮುಲದಿಂದ ನರಳುವುದು ತಪ್ಪಿಲ್ಲ.

–ಮುಂಬೈ ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿನ ಹಲವು ಸರ್ಕಾರಿ ಶಾಲೆಗಳಲ್ಲಿನ ದುಃಸ್ಥಿತಿ ಇದು.

ವಿದ್ಯಾರ್ಥಿನಿಯರು ಮರ–ಗಿಡಗಳ ‘ಮರೆ’ಗಾಗಿ ಹುಡುಕಾಡಬೇಕು. ತಡೆದುಕೊಂಡು ಯಾತನೆ ಅನುಭವಿಸಬೇಕು ಅಥವಾ ಅಸಹ್ಯಕರ ಶೌಚಾಲಯದಲ್ಲೇ ಮುಗಿಸಬೇಕಾದ ದುಃಸ್ಥಿತಿ. ಇದರಿಂದಾಗಿ ಸೋಂಕಿಗೆ ತುತ್ತಾಗುವುದು ಸಾಮಾನ್ಯವಾಗಿದೆ. ಹೇಳಿಕೊಳ್ಳಲಾಗದ, ಅನುಭವಿಸಲಾಗದ ಯಾತನೆ ಅವರದು. ಇದು, ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶೌಚಕ್ಕೆ ಹೋಗುವ ಪ್ರಸಂಗವೇ ಬರದಿರಲೆಂದು, ಶಾಲೆಯಲ್ಲಿ ನೀರನ್ನೇ ಕುಡಿಯದ ವಿದ್ಯಾರ್ಥಿನಿಯರೂ ಇದ್ದಾರೆ ಎನ್ನುವುದು ‘ಪ್ರಜಾವಾಣಿ’ ಹಲವು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರೊಂದಿಗೆ ಮಾತನಾಡಿದಾಗ ತಿಳಿದುಬಂತು.

ವಿಜಯಪುರ ಜಿಲ್ಲೆಯಲ್ಲಿ ಎಲ್ಲ ಶಾಲೆಗಳಲ್ಲೂ ಶೌಚಾಲಯಗಳಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ 3 ವರ್ಷದ ಹಿಂದೆಯೇ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಆದರೆ, ವಾಸ್ತವ ಸ್ಥಿತಿ ಹಾಗಿಲ್ಲ. ನಿರ್ವಹಣೆ ಸರಿಯಿಲ್ಲ. ನೀರಿಲ್ಲದಿರುವುದು ನಿರ್ವಹಣೆಗೆ ತೊಡಕಾಗಿದೆ. ಮೈದಾನ, ರಸ್ತೆ ಬದಿಯಲ್ಲಿ ಶೌಚಕ್ಕೆ ತೆರಳುವುದು ತಪ್ಪಿಲ್ಲ. ಮೂರು ವರ್ಷಗಳಿಂದ ಸರ್ಕಾರ ಅಥವಾ ಶಿಕ್ಷಣ ಇಲಾಖೆಯಿಂದ ನಯಾ ಪೈಸೆ ಅನುದಾನ ಬಂದಿಲ್ಲ.

ವಿಜಯನಗರ ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಶೌಚಾಲಯ ವ್ಯವಸ್ಥೆ ಇದ್ದರೂ, 650 ಶಾಲೆಗಳಲ್ಲಿ ನೀರಿಗೆ ತೊಂದರೆ ಇದೆ.

ಹಾವೇರಿ ಜಿಲ್ಲೆಯಲ್ಲಿ 511 ಶೌಚಾಲಯ ದುಃಸ್ಥಿತಿಯಲ್ಲಿವೆ. ನೀರು ಪೂರೈಕೆ ಸಮಸ್ಯೆ, ಒಡೆದ ಪೈಪ್‌ಲೈನ್‌, ಮುರಿದ ಬಾಗಿಲು, ಹಾಳಾದ ಚಾವಣಿ ಸೇರಿದಂತೆ ಹಲವು ಕಾರಣಗಳಿಂದ ಬಳಕಗೆ ಬಾರದಂತಾಗಿವೆ. ರಟ್ಟೀಹಳ್ಳಿಯ ಉರ್ದು ಗಂಡು ಮಕ್ಕಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 151 ವಿದ್ಯಾರ್ಥಿಗಳಿದ್ದಾರೆ. ಮೂತ್ರಾಲಯವಿಲ್ಲದೆ ಬಯಲಿಗೆ ಹೋಗಬೇಕಿದೆ.

ಧಾರವಾಡ ಜಿಲ್ಲೆಯ ಕೆಲವೆಡೆ ನೀರು ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಮೂಗು ಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿಯಿದೆ. 36 ಶೌಚಾಲಯ ದುರಸ್ತಿ ಆಗಬೇಕಿದೆ. ಇನ್ನೂ 118 ಶೌಚಾಲಯ ನಿರ್ಮಾಣವಾಗಬೇಕಿದೆ.

ಪ್ರಾದೇಶಿಕ ಕೇಂದ್ರವಾದ ಕಲಬುರ್ಗಿಯ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಶೌಚಾಲಯಗಳು ಸುಸ್ಥಿತಿಯಲ್ಲಿಲ್ಲ. ಇರುವೆಡೆ ಬಳಸುವ ಸ್ಥಿತಿ ಇಲ್ಲ. ಸೂಕ್ತ ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಸ್ವಚ್ಛತಾ ಕೆಲಸಗಾರರನ್ನು ನೇಮಿಸಿಕೊಳ್ಳಲು ಅನುದಾನವಿಲ್ಲ. ‘ಬಹುತೇಕ ಶಾಲೆಗಳಲ್ಲಿ ಇಂದಿಗೂ ಕುಡಿಯುವ ನೀರಿನ ವ್ಯವಸ್ಥೆಯೇ ಇಲ್ಲ; ಇನ್ನೂ ಶೌಚಾಲಯಕ್ಕೆ ನೀರು ಎಲ್ಲಿಂದ ಬರಬೇಕು?’ ಎಂದು ಶಿಕ್ಷಕಿಯೊಬ್ಬರು ಕೇಳಿದರು. ರಾಯಚೂರು, ಯಾದಗಿರಿಯ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಋತುಮತಿಯಾದ ತಕ್ಷಣ ಶಾಲೆಗೆ ಬರುವುದು ಬಿಡುತ್ತಾರೆ. ಶೌಚಾಲಯ ಇಲ್ಲದಿರುವುದೇ ಇದಕ್ಕೆ ಕಾರಣ. ಈ ಸಮಸ್ಯೆ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿದೆ.

‘ಎಲ್ಲ ಶಾಲೆಗಳಲ್ಲೂ ವೆಂಡಿಂಗ್‌ ಮೆಷಿನ್‌ ಇಲ್ಲ. ಇನ್ನೂ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ದೂರದ ಮಾತು. ಋತುಸ್ರಾವದ ದಿನಗಳಲ್ಲಿ ಹಾಜರಾತಿ ಕಡಿಮೆ ಇರುತ್ತದೆ. ಹೀಗಾಗಿ, ಅವರು ಪಾಠ ಕೇಳುವುದನ್ನು ತ‍ಪ್ಪಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ವಿವಿಧ ಜಿಲ್ಲೆಗಳ ಶಿಕ್ಷಕಿಯರು.

ಗದಗದ ಬಹುತೇಕ ಶಾಲೆಗಳಲ್ಲಿ ಹೆಸರಿಗಷ್ಟೇ ಶೌಚಾಲಯಗಳಿವೆ. ಕೆಲವೆಡೆ ಮಾತ್ರ ಸುಸ್ಥಿತಿಯಲ್ಲಿವೆ. 543ರಲ್ಲಿ 285ಕ್ಕೆ ನೀರಿನ ವ್ಯವಸ್ಥೆ ಇಲ್ಲ. 273 ಶೌಚಾಲಯ ದುರಸ್ತಿಗೆ ಕಾದಿವೆ.

ಮುಜುಗರ, ತೊಂದರೆ:

‘ಶಾಲೆಗಳಲ್ಲಿ ಶೌಚಾಲಯ ಇಲ್ಲದಿರುವುದು ಅಥವಾ ಅಸಮರ್ಪಕವಾಗಿರುವುದರಿಂದ ವಿದ್ಯಾರ್ಥಿನಿಯರು ತೊಂದರೆ ಅನುಭವಿಸುತ್ತಾರೆ. ಬಾಲಕರ ಶೌಚಾಲಯದ ಪಕ್ಕದಲ್ಲೇ ಇರುತ್ತವೆ. ನೀರಿನ ಕೊರತೆ ಇರುತ್ತದೆ. ಗಲೀಜಿನ ವಾತಾವರಣದಿಂದಾಗಿ ಸೋಂಕಿಗೆ ಒಳಗಾಗುತ್ತಾರೆ’ ಎಂದು ವಿಷಾದದಿಂದ ಹೇಳಿದವರು ಅಥಣಿಯ ಸಂತರಾಮ ಪಿಯು ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಬಿಜಾಪುರ.

‘ನಮ್ಮ ಭಾಗದ ಹಲವು ಹಳ್ಳಿಗಳಲ್ಲಿ ವಿದ್ಯಾರ್ಥಿನಿಯರು, ನಗರಕ್ಕೆ ಬರಲು ಬಸ್ ಹಿಡಿಯಲು 4–5 ಕಿ.ಮೀ. ದೂರ ನಡೆಯಬೇಕು. ಇದಕ್ಕಾಗಿ ಮುಂಜಾನೆಯೇ ಮನೆ ಬಿಡುತ್ತಾರೆ. ಅವಸರವಾದರೂ ತಡೆದುಕೊಂಡು ಸಣ್ಣ ವಯಸ್ಸಿನ‌ಲ್ಲೇ ಅವರಿಗೆ ಹಲವು ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅದರಲ್ಲೂ ಪೀರಿಯಡ್ಸ್ (ಮಾಸಿಕ ಋತುಚಕ್ರ) ಇದ್ದಾಗಂತೂ ಅವರ ಕಷ್ಟ ಹೇಳತೀರದು. ಶೌಚಾಲಯವಿಲ್ಲ ಎನ್ನುವ ಕಾರಣ ಶಾಲೆ–ಕಾಲೇಜು ಬಿಡುವವರೂ ಇದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಸೋಂಕು, ಕಿಡ್ನಿಗಳಿಗೆ ತೊಂದರೆ

‘ಅವಸರವಾದಾಗ ಮೂತ್ರ ವಿಸರ್ಜಿಸದಿದ್ದರೆ ಸೋಂಕಿಗೆ ಒಳಗಾಗಬೇಕಾಗುತ್ತದೆ. ಕಿಡ್ನಿಗಳಿಗೂ ತೊಂದರೆ ಆಗುತ್ತದೆ. ಮಾನಸಿಕವಾಗಿಯೂ ಇದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ’ ಎನ್ನುತ್ತಾರೆ ಕಲಬುರ್ಗಿಯ ವೈದ್ಯೆ ಡಾ.ವಿಜಯಶ್ರೀ ಮಠದ.

‘ಈ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆಗಾಗಿ ಬಹಳ ಮಂದಿ ಬರುತ್ತಾರೆ. ಇದರಲ್ಲಿ ಶಾಲಾ–ಕಾಲೇಜುಗಳ ವಿದ್ಯಾರ್ಥಿನಿಯರೂ ಹೆಚ್ಚಿರುತ್ತಾರೆ. ಅನೈರ್ಮಲ್ಯದ ಸ್ಥಳಗಳಲ್ಲಿ ಮೂತ್ರ ವಿಸರ್ಜನೆಯೂ ಸೋಂಕಿಗೆ ಕಾರಣವಾಗುತ್ತದೆ. ಹಲವರು, ಆಸ್ಪತ್ರೆಗೆ ಬರುವುದಕ್ಕೆ ಹಿಂಜರಿಯುತ್ತಾರೆ. ಸಮಸ್ಯೆ ಇದ್ದಾಗ ಆರಂಭದಲ್ಲೇ ಚಿಕಿತ್ಸೆ ಪಡೆಯಬೇಕು’ ಎಂಬ ಸಲಹೆ ನೀಡುತ್ತಾರೆ ವಿಜಯಶ್ರೀ.

‘ಶೌಚಾಲಯಗಳ ವ್ಯವಸ್ಥೆಯನ್ನು ಶಾಲಾ–ಕಾಲೇಜುಗಳ ಜೊತೆಗೆ, ಸಾರ್ವಜನಿಕ ಸ್ಥಳಗಳಲ್ಲೂ ಮಾಡುವುದು ಅತ್ಯಗತ್ಯ’ ಎಂಬ ಕೋರಿಕೆ ಅವರದ್ದು.

* ಸರ್ಕಾರಿ–ಖಾಸಗಿ ಶಾಲಾ, ಕಾಲೇಜುಗಳಲ್ಲಿ ಸ್ವಚ್ಛ ಶೌಚಾಲಯ ನಿರ್ಮಿಸಬೇಕು. ಹೆಣ್ಮಕ್ಕಳ ಆರೋಗ್ಯ ರಕ್ಷಣೆಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು.

– ಡಾ.ಭಾರತಿ ಬಿಜಾಪುರ, ಪ್ರಾಂಶುಪಾಲರು, ಅಥಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT