ಭಾನುವಾರ, ಜನವರಿ 24, 2021
16 °C
ನೀರಿಗಾಗಿ ಬಯಲು ಸೀಮೆಯಲ್ಲಿ ಮೂರು ದಶಕದಿಂದಲೂ ಹೋರಾಟ

ಒಳನೋಟ: ನದಿ ನೀರಿಗಾಗಿ ಕಾದಿವೆ ಕೆರೆಗಳು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಮೂರು ದಶಕಗಳಿಂದ ಹೋರಾಟ ನಡೆದಿದೆ. ಅರಸೀಕೆರೆಯು ಕೃಷ್ಣಾ ಕೊಳ್ಳದಲ್ಲಿ ಬರುತ್ತದೆ. ಕಾವೇರಿ ಕೊಳ್ಳದಿಂದ ನೀರು ಕೊಡಲು ಸಾಧ್ಯವಿಲ್ಲ ಎಂದು ಇದುವರೆಗೂ ನೀರು ಹರಿಸಿಲ್ಲ. 

ಕುಡಿಯುವ ನೀರಿಗಾಗಿ ಹೊನ್ನವಳ್ಳಿ ಏತ ನೀರಾವರಿ ಯೋಜನೆ ಅನುಷ್ಠಾನ ಗೊಂಡಿದ್ದರೂ, ಸಕಾಲಕ್ಕೆ ಕೆರೆಗಳಿಗೆ ನೀರು ತುಂಬಿಸಲಿಲ್ಲ. ತೊಂಬತ್ತರ ದಶಕ ದಲ್ಲೇ ನೀರಿಗಾಗಿ ಈಗಿನ ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಾರಥ್ಯದಲ್ಲೇ ಹೋರಾಟ ನಡೆದಿತ್ತು. ಆದರೆ ಇದೀಗ ತಮ್ಮ ಆಡಳಿತದಲ್ಲೇ ಭದ್ರಾ ಮೇಲ್ದಂಡೆ ಯೋಜನೆಯಡಿ ಅರಸೀಕೆರೆ ತಾಲ್ಲೂಕಿನ 28 ಕೆರೆಗಳನ್ನು ಕೈಬಿಟ್ಟಿದ್ದಾರೆ.

ತುಂಬುತ್ತಿಲ್ಲ ಕೆರೆ: ಮೈಸೂರು ಜಿಲ್ಲೆಯಲ್ಲಿ 55 ಕೆರೆಗಳನ್ನು ತುಂಬಿಸಿದ್ದರೆ, 251 ಕೆರೆ ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ.

ಹುಣಸೂರು ತಾಲ್ಲೂಕಿನಲ್ಲಿ 9 ಏತ ನೀರಾವರಿ ಯೋಜನೆಗಳಿದ್ದರೂ, ಅನುಕೂಲವಿಲ್ಲ. ಮರದೂರು ಏತ ನೀರಾವರಿ ಯೋಜನೆ ಜಾರಿಗೊಂಡರೂ, 2ಕಿ.ಮೀ. ದೂರದಲ್ಲಿರುವ ಎರಡು ಕೆರೆ ಗಳಿಗೆ ತಾಂತ್ರಿಕ ಲೋಪ, ಕಳಪೆ ಗುಣಮಟ್ಟದ ಪೈಪ್‌ಲೈನ್‌ನಿಂದ ನೀರು ತುಂಬಿಸಲಾಗಿಲ್ಲ. ಕಪಿಲೆಯಿಂದ ತಾರಕ ಜಲಾಶಯಕ್ಕೆ 2.07 ಟಿಎಂಸಿ ಅಡಿ ನೀರಿಗಿಂತ ಹೆಚ್ಚಿನ ನೀರನ್ನು ತುಂಬಿಸಲು ಅವಕಾಶ ಇಲ್ಲದಿರುವುದರಿಂದ, ಎಚ್‌.ಡಿ. ಕೋಟೆ ತಾಲ್ಲೂಕಿನ ಬಹುತೇಕ ಕೆರೆಗಳಿಗೆ ನೀರು ತುಂಬಿಸಲಾಗುತ್ತಿಲ್ಲ.  ಪಿರಿಯಾಪಟ್ಟಣ ತಾಲ್ಲೂಕಿನ 150 ಕೆರೆಗಳು ನೀರಿಗಾಗಿ ಕಾಯುತ್ತಿವೆ.

ಕಾವೇರಿಯಿಂದ ಮಂಡ್ಯ ತಾಲ್ಲೂಕಿನ ದುದ್ದ ಹೋಬಳಿಯ 54 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ತೆವಳುತ್ತಿದೆ. ಕೆ.ಆರ್. ಪೇಟೆ ತಾಲ್ಲೂಕಿನ 89 ಕೆರೆ ತುಂಬುವ ಕಾಮಗಾರಿಗೆ ಅನುಮೋದನೆ ಸಿಗಬೇಕಿದೆ. ಕಪಿಲೆಯಿಂದ 24 ಕೆರೆ ಹಾಗೂ ಗುಂಡಾಲ್‌ ಜಲಾಶಯ ತುಂಬುವ ಯೋಜನೆ ಆಮೆಗತಿಯಲ್ಲಿದೆ.

ಕೃಷಿಕರಲ್ಲಿ ಖುಷಿ...

ಮೈಸೂರು: ಚಾಮರಾಜನಗರ ಜಿಲ್ಲೆಯ ಕೆರೆಗಳನ್ನು ತುಂಬುವ ಕೆಲವು ಯೋಜನೆ ಪೂರ್ಣಗೊಂಡಿದ್ದರಿಂದ, 20 ಕೆರೆಗಳಿಗೆ ನೀರನ್ನು ತುಂಬಲಾಗಿದೆ.

ಮೈಸೂರು ಜಿಲ್ಲೆಯಲ್ಲಿನ ವರುಣಾ ನಾಲೆಯ ಕೊನೆ ಭಾಗದ ರೈತರಿಗೆ ನಂದಿಗುಂದ ಏತ ಹನಿ ನೀರಾವರಿ ಯೋಜನೆ ವರದಾನವಾಗಿದೆ. ಇಸ್ರೇಲ್ ಮಾದರಿ ಪದ್ಧತಿಯಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹಿರೀಸಾವೆ, ಶ್ರವಣಬೆಳಗೊಳ ಏತ ನೀರಾವರಿ ಯೋಜನೆಯಡಿ ಅಕ್ಟೋಬರ್‌ನಲ್ಲಷ್ಟೇ 8 ಕೆರೆ ತುಂಬಿಸಲಾಗಿದೆ. ಇನ್ನೂ 10 ಕೆರೆ ತುಂಬಲಿವೆ. ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಈ ಭಾಗದ 11 ಕೆರೆಗಳಿಗೆ ನೀರು ತುಂಬಿಸಲಾಗಿದೆ.

* ಹುಣಸೂರು ತಾಲ್ಲೂಕಿನ ಚಿಲ್ಕುಂದ ಏತ ನೀರಾವರಿ ಯೋಜನೆಯಿಂದ ಅಸಂಖ್ಯಾತ ರೈತರ ಬದುಕು ಹಸನಾಗುವ ನಿರೀಕ್ಷೆಯಿತ್ತು. ಆದರೆ ಒಂದು ದಿನವೂ ನೀರು ಹರಿಲಿಲ್ಲ.

-ಪ್ರಭಾಕರ್‌, ನಿಲುವಾಗಿಲು ಗ್ರಾಮದ ರೈತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.