ಸೋಮವಾರ, ಮಾರ್ಚ್ 1, 2021
28 °C
ಕೋವಿಡ್ ಲಾಕ್‌ಡೌನ್‌ ಸಂದರ್ಭ ಪರದಾಡಿದ್ದ ರೋಗಿಗಳು

ಡಯಾಲಿಸಿಸ್: ಅನ್‌ಲಾಕ್‌ ಬಳಿಕ ನಿಟ್ಟುಸಿರು

ಹರ್ಷವರ್ಧನ ಪಿ.ಆರ್‌. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಬಿಪಿಎಲ್‌ ರೋಗಿಗಳ ಡಯಾಲಿಸಿಸ್‌ಗೆ ಅವಕಾಶ ಕಲ್ಪಿಸಿದ ಬಳಿಕ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮೂತ್ರಪಿಂಡ ರೋಗಿಗಳು ತಕ್ಕಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದ ಸಂದರ್ಭದಲ್ಲಿ ಡಯಾಲಿಸಿಸ್ ರೋಗಿಗಳು ತೀವ್ರ ಸಮಸ್ಯೆಗೀಡಾಗಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ಪಾವತಿಸಲಾಗದೇ ಇಕ್ಕಟ್ಟಿಗೆ ಸಿಲುಕಿದ್ದರು. ಆದರೆ, ಜುಲೈ ಬಳಿಕ ವೆನ್ಲಾಕ್‌ನಲ್ಲಿ ಡಯಾಲಿಸಿಸ್‌ ಸೇವೆ ಆರಂಭಗೊಂಡಿದೆ. 

ಜಿಲ್ಲೆಯಲ್ಲಿ ಮಂಗಳೂರಿನ ವೆನ್ಲಾಕ್‌ ಜಿಲ್ಲಾ ಆಸ್ಪತ್ರೆ ಹಾಗೂ ನಾಲ್ಕು ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಘಟಕಗಳು ಇವೆ. ಇದು ಸರ್ಕಾರಿ–ಖಾಸಗಿ ಸಹಭಾಗಿತ್ವವಾಗಿದ್ದು, ವೆನ್ಲಾಕ್‌ ಆಸ್ಪತ್ರೆಯಲ್ಲಿ 12 ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಾದ ಬೆಳ್ತಂಗಡಿ– 7, ಪುತ್ತೂರು– 5, ಸುಳ್ಯ –5 ಮತ್ತು ಬಂಟ್ವಾಳದಲ್ಲಿ 3 ಡಯಾಲಿಸಿಸ್‌ ಯಂತ್ರಗಳಿವೆ. ಪ್ರತಿ ತಿಂಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಡಯಾಲಿಸಿಸ್‌ಗಳು ನಡೆಯುತ್ತಿವೆ.

ಮಂಗಳೂರಿನ ವೆನ್ಲಾಕ್‌ಗೆ ಕಡಬ ಭಾಗದಿಂದಲೇ ಹೆಚ್ಚಿನ ರೋಗಿಗಳಿದ್ದು, ಹೊಸ ತಾಲ್ಲೂಕುಗಳಾದ ಕಡಬ ಮತ್ತು ಮೂಡುಬಿದಿರೆಯಲ್ಲಿ ಡಯಾಲಿಸಿಸ್‌ ಕೇಂದ್ರ ಆರಂಭಿಸಬೇಕು ಎಂದು ಆ ಭಾಗದಲ್ಲಿ ಆಗ್ರಹ ಕೇಳಿಬಂದಿದೆ.

‘ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಉಂಟಾಗಿದ್ದ ಗೊಂದಲವನ್ನು ಬಗೆಹರಿಸಲಾಗಿದೆ. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಮೂತ್ರಪಿಂಡ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.  ಪ್ರತಿ ಬಾರಿ ಸುಮಾರು 50 ರೋಗಿಗಳು ನೋಂದಣಿ ಮಾಡಿಸಿಕೊಂಡು ಸರದಿಯಲ್ಲಿ ಇರುತ್ತಾರೆ. ಜಿಲ್ಲಾ ಕೇಂದ್ರದಲ್ಲಿ 10 ಮಾತ್ರವಲ್ಲದೇ, ಕುಂದಾಪುರದಲ್ಲಿ 5 ಹಾಗೂ ಕಾರ್ಕಳದಲ್ಲಿ 3 ಡಯಾಲಿಸಿಸ್‌ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. 

‘ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ 10 ಡಯಾಲಿಸಿಸ್‌ ಯಂತ್ರಗಳಿದ್ದು, ರೋಗಿಗಳಿಗೆ ಸಮಸ್ಯೆಯಾಗದಂತೆ ಸೇವೆ ನೀಡಲಾಗುತ್ತಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಮಧುಸೂದನ್ ನಾಯಕ್‌ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್‌ ಘಟಕದಲ್ಲಿ ಸಿಬ್ಬಂದಿ, ಸವಲತ್ತುಗಳ ಕೊರತೆಯಿಂದ ರೋಗಿಗಳು ಹೆಣಗಾಡಬೇಕಾದ ಸ್ಥಿತಿ ಇದೆ. ಡಯಾಲಿಸಿಸ್‌ಗೆ ಬೇಕಾದ ಕೆಲ ಸಾಮಗ್ರಿಗಳನ್ನು ರೋಗಿಗಳೇ ತರಬೇಕಾದ ಅನಿವಾರ್ಯವೂ ಇದೆ. ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಸಾಧ್ಯವಾಗದೇ ರೋಗಿಗಳು ವಾಪಸ್‌ ತೆರಳಿದ ಉದಾಹರಣೆಗಳು ಇವೆ.

‘ಜಿಲ್ಲಾ ಆಸ್ಪತ್ರೆಯಲ್ಲಿನ ಘಟಕ ಸಹಿತ ಆರು ಡಯಾಲಿಸಿಸ್‌ ಘಟಕಗಳು ಜಿಲ್ಲೆಯಲ್ಲಿವೆ. 180 ಮಂದಿ ರೋಗಿಗಳು ಇದ್ದಾರೆ. ಏಜೆನ್ಸಿಯವರು ಪೂರೈಸದ ಸಾಮಗ್ರಿಗಳನ್ನು ಆಸ್ಪತ್ರೆ ನಿಧಿಯಿಂದ ತರಿಸುವುದಕ್ಕೆ ಆಸ್ಪತ್ರೆ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್‌.ಎನ್‌.ಉಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು