ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ದಂಧೆಗೆ ದಶಕಗಳ ಹಿಂದೆಯೇ ಕಡಿವಾಣ

Last Updated 5 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ಹಾಲಿಗೆ ಹಾನಿಕಾರಕ ರಾಸಾಯನಿಕ ಸೇರಿ ಹಲವು ವಸ್ತುಗಳನ್ನು ಮಿಶ್ರಣ ಮಾಡುವ ದಂಧೆಯ ವಿರುದ್ಧ ಇಲ್ಲಿನ ಶಿವಮೊಗ್ಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ದಶಕಗಳ ಹಿಂದೆಯೇ ಬಿಗಿ ತಪಾಸಣೆ ಆರಂಭಿಸಿದ ಪರಿಣಾಮ ಇಂದು ಮಿಶ್ರಣ ಪ್ರಕರಣಗಳು ಕ್ಷೀಣಿಸಿವೆ.

ಎರಡು ಲೀಟರ್ ಹಾಲು ಮಾರಾಟ ಮಾಡುವ ಉತ್ಪಾದಕರು ಒಂದು ಲೀಟರ್ ನೀರು ಬೆರೆಸಿ, ಹಾಲಿನಂತೆ ಅದನ್ನು ಗಟ್ಟಿಗೊಳಿಸಲು ಅದಕ್ಕೆ ಬೆಳೆಗಳಿಗೆ ಬಳಸುವ ಯೂರಿಯಾ, ಗೃಹೋಪಯೋಗಿ ಸಕ್ಕರೆ, ಗಂಜಿ, ಸೋಡಾ, ಉಪ್ಪು ಒಳಗೊಂಡಂತೆ ಹಲವು ಸಾಮಗ್ರಿಗಳನ್ನು ಮಿಶ್ರಣ ಮಾಡುತ್ತಿದ್ದರು.

ಇಂತಹ ಕಲಬೆರಕೆ ನಿಯಂತ್ರಿಸಲು ಹಾಲಿನ ರಾಸಾಯನಿಕ ಮಿಶ್ರಣ ತಪಾಸಣೆ ಮತ್ತು ಅಧ್ಯಯನಕ್ಕಾಗಿ ತಂಡವನ್ನೇ ರಚಿಸಲಾಗಿತ್ತು. ಈ ತಂಡ ಹಾಲು ಉತ್ಪಾದಕರ ಮನೆಗಳಿಗೇ ತೆರಳಿ ಹಾಲು ಪರೀಕ್ಷೆ ನಡೆಸುತ್ತಿತ್ತು. ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲಿನ ಗುಣಮಟ್ಟ ಪರೀಕ್ಷೆಗೆ ಒತ್ತು ನೀಡಿತ್ತು. ಇಂತಹ ನಿರಂತರ ಪ್ರಯತ್ನಗಳ ಫಲವಾಗಿ ಇಂದು ಕಲಬೆರಕೆ ದಂಧೆಗೆ ಕಡಿವಾಣ ಬಿದ್ದಿದೆ.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿ ಒಳಗೊಂಡ ಶಿಮುಲ್‌ನಲ್ಲಿ ಪ್ರಸ್ತುತ 1,200 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 80 ಸಾವಿರ ಜನರು ಹಾಲು ಉತ್ಪಾದನೆಯಲ್ಲಿ ತೊಡಗಿದ್ದಾರೆ. ಪ್ರತಿ ನಿತ್ಯ ಸರಾಸರಿ 6 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಕಲಬೆರಕೆ ತಡೆಯಲು ಕಠಿಣ ಕ್ರಮಗಳನ್ನು ಕೈಗೊಂಡಿರುವ ಶಿಮುಲ್‌ ಆಡಳಿತ ಮಂಡಳಿ ದಾವಣಗೆರೆಯ ಬಾತಿ, ಶಿವಮೊಗ್ಗದ ಮಾಚೇನಹಳ್ಳಿಯ ಎರಡೂ ಘಟಕಗಳಿಗೂ ₹ 1.70 ಕೋಟಿ ವೆಚ್ಚದಲ್ಲಿ ಎರಡು ಅತ್ಯಾಧುನಿಕ ಮಿಲ್ಕ್‌ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಿದೆ. ಈ ಯಂತ್ರ ಮಿಶ್ರಣವಾದ 14 ಬಗೆಯ ರಾಸಾಯನಿಕಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ.

‘ದಶಕಗಳ ಹಿಂದೆ ಕಲಬೆರಕೆ ಹಾಲಿನ ಹಾವಳಿ ತೀವ್ರವಾಗಿತ್ತು. ಈಗ ಅಂತಹ ಸಮಸ್ಯೆ ತೀರ ಗೌಣವಾಗಿದೆ. ಮಕ್ಕಳು ಕುಡಿಯುವ ಹಾಲಿಗೆ ಮಿಶ್ರಣ ಮಾಡುವುದು ದ್ರೋಹ ಎನ್ನುವ ಮನಃಸ್ಥಿತಿ ಹಲವರಲ್ಲಿ ಬಂದಿದೆ. ಒಕ್ಕೂಟವೂ ಕಠಿಣ ನಿಯಮಗಳನ್ನು ಪಾಲಿಸುತ್ತಿದೆ. 1,200 ಹಾಲು ಉತ್ಪಾದಕ ಸಂಘಗಳಲ್ಲೂ ಪರೀಕ್ಷಕರು, ಪರೀಕ್ಷೋಪಕರಣಗಳನ್ನು ನೀಡಲಾಗಿದೆ. ಕಲಬೆರಕೆ ಕಂಡು ಬಂದರೆ ಹಣ ಪಾವತಿ ತಡೆಹಿಡಿಯುವ ಸೂಚನೆ ನೀಡಲಾಗಿದೆ’ ಎನ್ನುತ್ತಾರೆ ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಬಸವರಾಜು.

ಪ್ರಸ್ತುತ ಪ್ರತಿ ಲೀಟರ್ ಹಾಲಿನ ಖರೀದಿ ದರ ಶೇ 3.5 ಕೊಬ್ಬಿನಾಂಶ ಇರುವ ಹಾಲಿಗೆ ₹ 23.60 ಇದೆ. ಪ್ರತಿ ಕೊಬ್ಬಿನಾಂಶ ಶೇ0.1ಕ್ಕೆ 25 ಪೈಸೆಯಂತೆ ಹೆಚ್ಚುವರಿ ನೀಡಲಾಗುತ್ತಿದೆ. ಹಿಂದೆ ಪ್ರತಿ ವರ್ಷ 50ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದವು. ಈಗ ಆ ಸಂಖ್ಯೆ ತೀರ ಕಡಿಮೆ’ ಎಂದು ವಿವರ ನೀಡುತ್ತಾರೆ ಶಿಮುಲ್‌ ಮಾರುಕಟ್ಟೆ ವ್ಯವಸ್ಥಾಪಕ ಪೀರ‍್ಯಾನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT