ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಿದ್ದು ಬಹಳಷ್ಟು, ಆಗಬೇಕಾದದ್ದು ಇನ್ನಷ್ಟು

Last Updated 23 ಜನವರಿ 2021, 19:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಸ್ವಚ್ಛ ಭಾರತ್ ಮಿಷನ್‌ ಯೋಜನೆಯಡಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಾಕಷ್ಟು ಸುಧಾರಣೆಯಾಗಿದೆ. ಸ್ವಚ್ಛ ನಗರ ಹಾಗೂ ಗ್ರಾಮಗಳ ನಿರ್ಮಾಣಕ್ಕಾಗಿ ಇನ್ನಷ್ಟು ಕೆಲಸಗಳೂ ಆಗಬೇಕಿದೆ.

ಹುಬ್ಬಳ್ಳಿ–ಧಾರವಾಡ ನಗರಗಳಲ್ಲಿ ಮನೆ, ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಕಸದಿಂದ ಕಾಂಪೋಸ್ಟ್ ತಯಾರಿಸಲು ಹುಬ್ಬಳ್ಳಿಯಲ್ಲಿ 350 ಟನ್ ಸಾಮರ್ಥ್ಯ ಮತ್ತು ಧಾರವಾಡದಲ್ಲಿ 150 ಟನ್ ಸಾಮರ್ಥ್ಯದ ವಿಂಡ್ರೊ ಕಾಂಪೋಸ್ಟ್ ಘಟಕ ನಿರ್ಮಿಸಲಾಗಿದೆ. ಧಾರವಾಡದಲ್ಲಿ ಇದುವರೆಗೆ 18 ಟನ್ ಗೊಬ್ಬರ ತಯಾರಿಸಲಾಗಿದೆ. ಹುಬ್ಬಳ್ಳಿ ಘಟಕ ಜನವರಿ ಅಂತ್ಯದಲ್ಲಿ ಕಾರ್ಯ ಆರಂಭಿಸಲಿದೆ.

ವಿಜಯಪುರದಲ್ಲಿ ತ್ಯಾಜ್ಯದಿಂದ ಪೈಪ್‌ ಕಾಂಪೋಸ್ಟ್‌ ತಯಾರಿಕೆಗೆ ಆದ್ಯತೆ ನೀಡಲಾಗಿದೆ. ಸದ್ಯ ನಗರ ‘ಬಿನ್‌ ಫ್ರೀ ಸಿಟಿ’ಯಾಗಿದೆ. ‘ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬಿದ್ದಿರುವ 80 ಸಾವಿರ ಟನ್‌ ಹಳೇ ಕಸ ಸಂಸ್ಕರಿಸಿ ಗೊಬ್ಬರ, ಬಯೋ ಡೀಸೆಲ್‌, ವಿದ್ಯುತ್‌ ಉತ್ಪಾದಿಸುವ ಯೋಜನೆ ಸಿದ್ಧಪಡಿಸಿ ಅನುಮೋದನೆಗೆ ಕಳಿಸಲಾಗಿದೆ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಬೆಳಗಾವಿ ನಗರ ಮತ್ತು ಜಿಲ್ಲೆಯಾದ್ಯಂತ ವೈಜ್ಞಾನಿಕ ವಿಲೇವಾರಿಗೆ ಹಲವು ಸಮಸ್ಯೆಗಳಿವೆ. ಬೆಳಗಾವಿಯ ಕೆಲವೆಡೆ ತ್ಯಾಜ್ಯದಿಂದ ಎರೆಗೊಬ್ಬರ ತಯಾರಿಸಲಾಗುತ್ತಿದೆ. ಖಾನಾಪುರದ ನಂದಗಡದಲ್ಲಿ ‘ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಘಟಕ’ವನ್ನು ಗ್ರಾಮ ಪಂಚಾಯಿತಿ ಆರಂಭಿಸಿದೆ. ಕಸದಿಂದ ಕಾಂಪೋಸ್ಟ್ ತಯಾರಿಸುವ ಜತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್‌ ಕಾರ್ಖಾನೆಗೆ ನೀಡಲಾಗುತ್ತಿದೆ.

ಗದಗ ಜಿಲ್ಲೆಯ ಗಜೇಂದ್ರಗಡ, ಮುಂಡರಗಿ, ಶಿರಹಟ್ಟಿ, ನರಗುಂದ ತಾಲ್ಲೂಕುಗಳ ತ್ಯಾಜ್ಯ ಘಟಕಗಳು ವೈಜ್ಞಾನಿಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಕೇಂದ್ರದಲ್ಲೂ ಎರೆಹುಳು ಗೊಬ್ಬರ ತಯಾರಿಸಲಾಗುತ್ತಿದೆ.

ಬಳ್ಳಾರಿಯಲ್ಲಿ ಪೌರ ಕಾರ್ಮಿಕರು, ಆರೋಗ್ಯ ನಿರೀಕ್ಷಕರ ಕೊರತೆಯಿಂದಾಗಿ ತ್ಯಾಜ್ಯ ನಿರ್ವಹಣೆ ಸಮಸ್ಯೆಯಾಗಿದೆ. ಇದರ ನಡುವೆಯೇ ನಿತ್ಯ ಸುಮಾರು 50 ಕೆ.ಜಿ ಗೊಬ್ಬರ ತಯಾರಿಸಿ ರೈತರಿಗೆ ನೀಡಲಾಗುತ್ತಿದೆ. 560 ಕಿ.ಮೀ ಉದ್ದದ ಒಳಚರಂಡಿ ಜಾಲದಿಂದ ಪ್ರತಿದಿನ 4.50 ಕೋಟಿ ಲೀಟರ್‌ ತ್ಯಾಜ್ಯ ನೀರನ್ನು ಸಂಸ್ಕರಿಸಿ, 30 ಲಕ್ಷ ಲೀಟರ್‌ ನೀರನ್ನು ಜಾನಕಿ ಸ್ಟೀಲ್ಸ್‌ಗೆ ನೀಡಲಾಗುತ್ತಿದೆ. ಇದರಿಂದ ವಾರ್ಷಿಕ ₹36 ಲಕ್ಷ ಆದಾಯ ಬರುತ್ತಿದೆ. ಹಾವೇರಿಯಲ್ಲಿ ಸಂಗ್ರಹವಾಗುವ 33 ಟನ್‌ ತ್ಯಾಜ್ಯದಲ್ಲಿ ಶೇ 50ರಿಂದ ಎರೆಗೊಬ್ಬರ ತಯಾರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT