ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕುಗ್ಗುತ್ತಿದೆ ಎಣ್ಣೆಕಾಳು ಬೆಳೆ ಪ್ರದೇಶ

‘ಛೋಟಾ ಮುಂಬೈ’ನಲ್ಲಿ ಮುಚ್ಚುತ್ತಿವೆ ಎಣ್ಣೆ ಗಿರಣಿ, ಸ್ವಾವಲಂಬನೆಗೆ ಸರ್ಕಾರವೇ ಅಡ್ಡಿ
Last Updated 14 ಮೇ 2022, 22:05 IST
ಅಕ್ಷರ ಗಾತ್ರ

ಬೆಂಗಳೂರು: ಒಂದು ಕಾಲದಲ್ಲಿಆಯಿಲ್‌ ಮಿಲ್‌ಗಳಿಂದ ಚಾರಿತ್ರಿಕ ದಂತಕತೆಯಾಗಿದ್ದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಖ್ಯಾತಿ ಮಂಜಿನಂತೆ ಕರಗಿ ಹೋಗಿದೆ. ಶಾಶ್ವತ ಬರದ ನಾಡು ಎಂಬ ಮಾತು ಅಡುಗೆ ಎಣ್ಣೆ ಉತ್ಪಾದನೆಗೂ ಅಂಟಿಕೊಂಡಂತೆ ಆಗಿದೆ.

ಆಯಿಲ್‌ ಮಿಲ್‌ಗಳಿಂದಾಗಿಯೇ ‘ಛೋಟಾ ಮುಂಬೈ’ ಎಂದೇ ಖ್ಯಾತಿ ಪಡೆದಿದ್ದ ಈ ನಗರದ ಚಿತ್ರಣವೇ ಬದಲಾಗುತ್ತಿದೆ. ಯಥೇಚ್ಛವಾಗಿ ಶೇಂಗಾ ಬೆಳೆಯುತ್ತಿದ್ದ ಈ ಪ್ರದೇಶದಲ್ಲಿ ಒಂದು ಕಾಲದಲ್ಲಿ 80ಕ್ಕೂ ಹೆಚ್ಚು ಎಣ್ಣೆ ಮಿಲ್‌ಗಳು ಇದ್ದವು. ಈಗ ಬೆರಳಣಿಕೆಯಷ್ಟು ಮಾತ್ರ ಉಳಿದಿವೆ. ಶೇಂಗಾ ಬೆಳೆ ಉತ್ಪಾದನೆಯ ಕುಸಿತ, ದಲ್ಲಾಳಿಗಳ ಹಾವಳಿ, ಕಲಬೆರಕೆ, ಹವಾಮಾನ ವೈಪರೀತ್ಯ, ಸರ್ಕಾರದ ನೀತಿ ಹಾಗೂ ಕೃಷಿ ವಲಯದ ಸಮಸ್ಯೆಗಳು ಈ ಮಿಲ್‌ಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದವು.

ಇದೇ ರೀತಿಯ ಎಲ್ಲ ಸಂಕಷ್ಟಗಳಿಗೆ ಪರಿಹಾರ ರೂಪಿಸದ ಸರ್ಕಾರ ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಅವಕಾಶ ಕಳೆದುಕೊಂಡಿತು.

ದಶಕಗಳ ಹಿಂದೆ ಬಯಲುಸೀಮೆ ಪ್ರದೇಶದಲ್ಲಿ ಶೇಂಗಾ, ಕುಸುಬೆಯಂತಹ ಎಣ್ಣೆಕಾಳು ಬೆಳೆಗಳನ್ನು ವಿಪುಲವಾಗಿ ಬೆಳೆಯಲಾಗುತ್ತಿತ್ತು. ಕೃಷಿಕರ ಸಂಕಷ್ಟಗಳಿಗೆ ಸ್ಪಂದಿಸದ ಸರ್ಕಾರ, ಆಮದು ಮಾಡಿಕೊಳ್ಳುವುದೇ ಸುಲಭ ಎನ್ನುವ ಧೋರಣೆ ಅನುಸರಿಸಿತು. ಇದರಿಂದ ಕೃಷಿಕರು ಎಣ್ಣೆಕಾಳುಗಳ ಬದಲು ಮೆಕ್ಕೆಜೋಳದಂತಹ ಪರ್ಯಾಯ ಬೆಳೆಗೆ ಮೊರೆ ಹೋದರು.

ಅಡುಗೆ ಎಣ್ಣೆ ಬೇಡಿಕೆಯನ್ನು ನೀಗಿಸಲು ಆಮದು ಮಾಡಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಿದ್ದೇ ಸರ್ಕಾರ ಎನ್ನುವುದು ತಜ್ಞರ ವಿಶ್ಲೇಷಣೆ. 2020–21ರಲ್ಲಿ ಭಾರತ ₹ 80 ಸಾವಿರ ಕೋಟಿ ಮೊತ್ತದ 133.52 ಲಕ್ಷ ಟನ್‌ ಅಡುಗೆ ಎಣ್ಣೆ ಆಮದು ಮಾಡಿಕೊಂಡಿತ್ತು. ಇದರಲ್ಲಿ ಶೇ 56ರಷ್ಟು ತಾಳೆಎಣ್ಣೆ, ಶೇ 27ರಷ್ಟು ಸೋಯಾ ಎಣ್ಣೆ ಮತ್ತು ಶೇ 16ರಷ್ಟು ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳಲಾಗಿತ್ತು. 2020–21ರಲ್ಲಿ ದೇಶದಲ್ಲಿ 122.89 ಲಕ್ಷ ಟನ್‌ ಅಡುಗೆ ಎಣ್ಣೆ ಉತ್ಪಾದಿಸಲಾಗಿತ್ತು.

ಅಡುಗೆ ಎಣ್ಣೆ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಎಣ್ಣೆಕಾಳುಗಳ ಬೆಳೆ ಹೆಚ್ಚಿಸಲು 1980ರಲ್ಲಿ ಕೇಂದ್ರ ಸರ್ಕಾರ ‘ಎಣ್ಣೆಕಾಳು ಮತ್ತು ಬೇಳೆಕಾಳುಗಳ ತಂತ್ರಜ್ಞಾನ ಮಿಷನ್‌’ಗೆ (ಟಿಎಂಒಪಿ) ಚಾಲನೆ ನೀಡಿತ್ತು. ರಾಜ್ಯವೂ ಈ ಯೋಜನೆಗೆ 1984ರಿಂದ ಚಾಲನೆ ನೀಡಿತ್ತು. ಇಂತಹ ಯೋಜನೆಗಳ ಪರಿಣಾಮ 1980-90ರ ಅವಧಿಯಲ್ಲಿ ಎಣ್ಣೆ ಕ್ರಾಂತಿ ಸಾಧಿಸಿ ದೇಶ ಸ್ವಾವಲಂಬಿಯಾಗಿತ್ತು.

ಸೂರ್ಯಕಾಂತಿ ಮತ್ತು ಸೋಯಾಬೀನ್‌ ಅನ್ನು ಹೆಚ್ಚು ಬೆಳೆಯಲು ಸರ್ಕಾರ ಪ್ರೋತ್ಸಾಹಿಸಿತ್ತು. ಬೇಡಿಕೆಗೆ ತಕ್ಕಂತೆ ಶೇ 30ರಷ್ಟು ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ ಆಮದು ಸುಂಕ ಶೇಕಡ 60ರಷ್ಟಿತ್ತು. ಆಮದು ಮಾಡಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ, ನಂತರದ ಸರ್ಕಾರಗಳು ಆಮದು ಸುಂಕವನ್ನು ಶೇ 16ಕ್ಕೆ ಇಳಿಸಿದವು. ವರ್ತಕರ ಪರ ಇದ್ದ ಧೋರಣೆಗಳು ಸಹ ಇದಕ್ಕೆ ಕಾರಣವಾಗಿದ್ದವು. ಇದರಿಂದ, ತಾಳೆ ಎಣ್ಣೆ ಅಗ್ಗವಾಯಿತು. ಶೇಂಗಾ ಎಣ್ಣೆ ದುಬಾರಿಯಾಯಿತು.

ಇದರಿಂದಾಗಿ ರಾಜ್ಯದಲ್ಲಿ ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಯುವ ಪ್ರದೇಶವೂ ಕ್ರಮೇಣ ಕಡಿಮೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಶೇಂಗಾ ಬೆಳೆಯುವ ಪ್ರದೇಶ ಶೇ 4ರಷ್ಟು ಕಡಿಮೆಯಾಗಿದೆ. ಹತ್ತು ವರ್ಷಗಳ ಹಿಂದೆ 8.18 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿತ್ತು. 2020–21ರಲ್ಲಿ 7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗಿತ್ತು. ಹತ್ತು ವರ್ಷಗಳ ಹಿಂದೆ ಸೂರ್ಯಕಾಂತಿಯನ್ನು 3.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು. ಆದರೆ, ಈಗ 1.22 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಗಳ ಜಾಗವನ್ನು ಮೆಕ್ಕೆಜೋಳ ಆಕ್ರಮಿಸಿಕೊಳ್ಳುತ್ತಿದೆ. 2011–12ರಲ್ಲಿ 13.49 ಲಕ್ಷ ಹೆಕ್ಟೇರ್‌ ಇದ್ದ ಮೆಕ್ಕೆಜೋಳ ಪ್ರದೇಶವು 2020–21ರಲ್ಲಿ 17.13 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ಹೆಚ್ಚಿದೆ ಎಂದು ಕೃಷಿ ಬೆಲೆ ಆಯೋಗದ ವರದಿಯಲ್ಲಿ ವಿವರಿಸಲಾಗಿದೆ.

‘ಶಿರಾ, ಪಾವಗಡ, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಶೇಂಗಾ ಬೆಳೆಯಲಾಗುತ್ತಿತ್ತು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಶೇಂಗಾ ಬೆಳೆಯುವುದು ಕಡಿಮೆಯಾಗಿದೆ. ಜತೆಗೆ, ವೆಚ್ಚ ಹೆಚ್ಚಾಗುತ್ತಿದೆ. ಪರ್ಯಾಯ ಬೆಳೆಗಳಿಗೆ ರೈತರು ಮೊರೆ ಹೋಗುತ್ತಿದ್ದಾರೆ’ ಎಂದು ಕರ್ನಾಟಕ ಸಹಕಾರ ಎಣ್ಣೆ ಬೀಜ ಮಹಾಮಂಡಳದ ನಿರ್ದೇಶಕ ಎಂ.ಸಿ. ಚಂದ್ರಯ್ಯ ವಿವರಿಸುತ್ತಾರೆ.

ಆಮದು ಪರಿಣಾಮಗಳು: ರಷ್ಯಾ–ಉಕ್ರೇನ್‌ ಯುದ್ಧ ಆರಂಭವಾದ ನಂತರ ಸೂರ್ಯಕಾಂತಿ ಎಣ್ಣೆ ಪೂರೈಕೆಗೆ ಪೆಟ್ಟು ಬಿದ್ದಿದೆ. ಇದರಿಂದಾಗಿ ದೇಶಿ ಮಾರುಕಟ್ಟೆಯಲ್ಲಿ ಇತರ ಅಡುಗೆ ಎಣ್ಣೆಗಳ ಬೆಲೆ ಹೆಚ್ಚಳವಾಗಿದೆ. ಈ ನಡುವೆ ತಾಳೆ ಎಣ್ಣೆ ರಫ್ತು ಮಾಡುವುದನ್ನು ಇಂಡೊನೇಷ್ಯಾ ನಿಷೇಧಿಸಿದೆ.

‘ದೇಶಿ ಎಣ್ಣೆ ಉದ್ಯಮ ಕೊಂದು ಹಾಕಿದ ಸರ್ಕಾರ’

‘ಆಮದು ಸುಂಕ ಕಡಿಮೆ ಮಾಡುವ ಸರ್ಕಾರ ದೇಶಿಯ ಎಣ್ಣೆ ಉದ್ಯಮವನ್ನು ಕೊಂದು ಹಾಕಿತು. ಆಮದು ಲಾಬಿ ಬಲಿಷ್ಠವಾಗಿದ್ದರಿಂದ, ಕೃತಕ ಅಭಾವ ಸೃಷ್ಟಿಸಲಾಯಿತು. ಸರ್ಕಾರಗಳ ತಪ್ಪು ಆಮದು ವಾಣಿಜ್ಯ ನೀತಿಗಳೇ ಈಗಿನ ಪರಿಸ್ಥಿತಿಗೆ ಕಾರಣ’ ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷಪ್ರಕಾಶ್ ಕಮ್ಮರಡಿ ವಿಶ್ಲೇಷಿಸುತ್ತಾರೆ.

‘ಎಣ್ಣೆಕಾಳುಗಳಿಗೆ ಈಗ ಕೊಡುವ ಬೆಂಬಲ ಬೆಲೆ ಹೆಚ್ಚಿಸಬೇಕು. ಬೆಲೆ ಕೊರತೆ ಪಾವತಿ ಯೋಜನೆ ಜಾರಿಗೊಳಿಸಬೇಕು. ಎಂ.ಎಸ್.ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನ್ವಯ ಬೆಂಬಲ ಬೆಲೆ ಘೋಷಿಸಬೇಕು. ಉತ್ಪಾದನಾ ವೆಚ್ಚದ ಮೇಲೆ ಶೇ50ರಷ್ಟು ಲಾಭವನ್ನು ನೀಡಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ತಾಳೆ ಬೆಳೆಯಲು ಉತ್ತೇಜನ

ಸದ್ಯ ಕರ್ನಾಟಕದಲ್ಲಿ 9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತಾಳೆ ಬೆಳೆಯಲಾಗುತ್ತಿದೆ.

‘ರಾಷ್ಟ್ರೀಯ ಖಾದ್ಯ ತೈಲಗಳು–ತಾಳೆಎಣ್ಣೆ ಅಭಿಯಾನ’ದಡಿ ಮುಂದಿನ ಐದು ವರ್ಷಗಳಲ್ಲಿ ತಾಳೆ ಬೆಳೆಯುವ ಪ್ರದೇಶದ ವ್ಯಾಪ್ತಿಯನ್ನು 25 ಸಾವಿರ ಹೆಕ್ಟೇರ್‌ಗಳಿಗೆ ಹೆಚ್ಚಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಇದಕ್ಕಾಗಿ ₹ 35 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ನಿಗದಿಪಡಿಸಿದೆ.

ತಾಳೆ ಎಣ್ಣೆಗೆ ಈಗ ಪ್ರತಿ ಟನ್‌ಗೆ ₹ 21 ಸಾವಿರ ಬೆಲೆ ಇದೆ. ಒಂದು ಎಕರೆ ಪ್ರದೇಶದಲ್ಲಿ 10 ಟನ್‌ ತಾಳೆ ಬೆಳೆಯಬಹುದು. ಇದರಿಂದ, ರೈತರು ಹೆಚ್ಚಿನ ಆದಾಯ ನಿರೀಕ್ಷಿಸಬಹುದು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪ್ರತಿಪಾದಿಸುತ್ತಾರೆ.

ಬೇಕರಿ ತಿನಿಸುಗಳಿಗೆ, ಪ್ರಸಾದನ ಸಾಮಗ್ರಿಗಳಿಗೆ ಹಾಗೂ ಹೋಟೆಲ್‌ಗಳಲ್ಲಿ ಹೆಚ್ಚಾಗಿ ತಾಳೆ ಎಣ್ಣೆ ಬಳಸುತ್ತಾರೆ. ಕಂಪನಿಗಳೇ ತಾಳೆ ಫಸಲು ಖರೀದಿಸುತ್ತವೆ. ಹೀಗಾಗಿ ತಾಳೆ ಬೆಳೆಗೂ ಬೇಡಿಕೆ ಹೆಚ್ಚಿದೆ. ಕಬ್ಬು, ಅಡಿಕೆ ಬೆಳೆಯುವ ಪ್ರದೇಶಗಳಲ್ಲೂ ಈಗ ತಾಳೆ ಬೆಳೆಯಲು ಪ್ರೋತ್ಸಾಹಿಸಲಾಗುತ್ತಿದೆ. ನಿರಂತರವಾಗಿ ಕಬ್ಬು ಬೆಳೆದರೆ ಭೂಮಿ ಜವಳು ಹಿಡಿಯುತ್ತದೆ‘ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರೋತ್ಸಾಹದಾಯಕ ಕ್ರಮಗಳು ಅಗತ್ಯ

‘ಶೇ 80ರಷ್ಟು ಎಣ್ಣೆಕಾಳು ಪ್ರದೇಶ ಮಳೆಯಾಧಾರಿತ. ಈ ಬೆಳೆಗಳು ಹೆಚ್ಚು ವೆಚ್ಚದಾಯಕವಾಗುತ್ತಿವೆ. ಸದ್ಯ ಪ್ರತಿ ನಾಗರಿಕನ ವಾರ್ಷಿಕ ಎಣ್ಣೆ ಬೇಡಿಕೆ ಸುಮಾರು 18 ಕಿ.ಗ್ರಾಂ. ಇದೇ ರೀತಿ ಉತ್ಪಾದನೆ ಮುಂದುವರಿದರೆ 2030ರ ವೇಳೆಗೆ 12 ಕಿ.ಗ್ರಾಂ.ಗೆ ಇಳಿಯುವ ಸಾಧ್ಯತೆ ಇದೆ. ಹೀಗಾಗಿ, ಸರ್ಕಾರ ಬೆಂಬಲ ಬೆಲೆ ಮತ್ತು ಸಹಾಯಧನ ನೀಡುವಂತಹ ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ, ಕರ್ನಾಟಕ ಸಹಕಾರ ಎಣ್ಣೆ ಬೀಜ ಮಹಾಮಂಡಳವನ್ನು ಮತ್ತಷ್ಟು ಬಲಪಡಿಸಬೇಕು‘ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶೇಂಗಾ ಬೇಸಾಯ ತಜ್ಞ ಡಾ. ಬಸವರಾಜ ಶಿವಪುತ್ರಪ್ಪ ಏಣಗಿ ಅಭಿಪ್ರಾಯಪಡುತ್ತಾರೆ.

ರಾಜ್ಯದಲ್ಲಿ ಎಣ್ಣೆಕಾಳು ಬೆಳೆಯುವ ಪ್ರದೇಶದ ವಿವರ

ಬೆಳೆಗಳು;ಕ್ಷೇತ್ರ(ಹೆಕ್ಟೇರ್‌ಗಳಲ್ಲಿ);ಉತ್ಪಾದನೆ(ಟನ್‌ಗಳಲ್ಲಿ)

ಸೋಯಾಅವರೆ;3.1 ಲಕ್ಷ;3.76

ಶೇಂಗಾ;7.19 ಲಕ್ಷ;7.19

ಸೂರ್ಯಕಾಂತಿ;1.20 ಲಕ್ಷ;1.08 ಲಕ್ಷ

ಕುಸುಬೆ;28 ಸಾವಿರ;19,271

ಎಳ್ಳು;22 ಸಾವಿರ:20,290

ಅಗಸೆ; 968;239

ಸಾಸಿವೆ;435;91

ಔಡಲ;3804;3408

ಗುರೆಳ್ಳು;1178;529

ಒಟ್ಟು:12.09 ಲಕ್ಷ;12.48 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT