ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕೆಲವರಿಂದಷ್ಟೇ ಕೆಲಸ; ಉಳಿದವರು ಮೌನ

ಕೋವಿಡ್‌ ಕಾಲದಲ್ಲಿ ಜನರಿಂದ ದೂರವಾಗಿರುವ ಶಾಸಕರು–ಸಂಸದರು
Last Updated 1 ಮೇ 2021, 22:03 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ಶಾಸಕ ಎಚ್‌.ಪಿ.ಮಂಜುನಾಥ್‌ ಅವರು ಕೋವಿಡ್‌ ವಿಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕ್ಷೇತ್ರದ ಜನರ ಕಷ್ಟ–ಸುಖಗಳಿಗೆ ಸ್ಪಂದಿಸುತ್ತಿದ್ದಾರೆ.

ಹುಣಸೂರಿನ ವತ್ಸಲಾ ಎಂಬುವರು ಕೋವಿಡ್‌ನಿಂದಾಗಿ ಮೃತರಾದಾಗ ಅಂತ್ಯಸಂಸ್ಕಾರ ನಡೆಸಲು ಯಾರೂ ಬರಲಿಲ್ಲ. ಆಗ ಸಹಾಯಕ್ಕೆ ಮುಂದೆ ಬಂದ ಮುಸ್ಲಿಂ ಯುವಕರ ತಂಡ ಕಟ್ಟಿಕೊಂಡು ಮಹಿಳೆಯ ಅಂತ್ಯಸಂಸ್ಕಾರಕ್ಕೆ ನೆರವಾದರು. ಅಲ್ಲದೇ, ಹಾಡಿಗಳಿಗೆ ತೆರಳಿ ಲಸಿಕೆ ಪಡೆಯುವಂತೆ ಆದಿವಾಸಿಗಳ ಮನವೊಲಿಸುತ್ತಿದ್ದಾರೆ.

ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌, ತಮ್ಮ ಕ್ಷೇತ್ರದಲ್ಲಿ ಕೋವಿಡ್‌ಗೆಂದು ಪ್ರತ್ಯೇಕ ಆಸ್ಪತ್ರೆ ಸ್ಥಾಪಿಸುವಲ್ಲಿ ನೆರವಾಗಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ಎಲ್‌.ನಾಗೇಂದ್ರ ಅವರು ವಾರದ ಹಿಂದೆ ಕೋವಿಡ್‌ ಸಂಬಂಧ ಫೋನ್‌ ಇನ್‌ ಕಾರ್ಯಕ್ರಮ ಮಾಡಿ ಜನರ ಸಮಸ್ಯೆ ಆಲಿಸಿದ್ದಾರೆ. ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ. ರಾಮದಾಸ್‌ ಅವರಿಗೆ 15 ದಿನಗಳ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು.

ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ತಮ್ಮದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಹಾಡಿಗೆ ಭೇಟಿ ನೀಡಿ, ಕೋವಿಡ್‌ ಲಸಿಕೆ ತೆಗೆದುಕೊಳ್ಳುವಂತೆ ಆದಿವಾಸಿಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಆರ್‌.ಧರ್ಮಸೇನ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.

ಇನ್ನು ಎಂ.ಅಶ್ವಿನ್ ಕುಮಾರ್‌ (ತಿ.ನರಸೀಪುರ), ಸಿ.ಅನಿಲ್ ಕುಮಾರ್‌ (ಎಚ್‌.ಡಿ.ಕೋಟೆ), ಕೆ.ಮಹದೇವ್‌ (ಪಿರಿಯಾಪಟ್ಟಣ), ಡಾ.ಯತೀಂದ್ರ (ವರುಣಾ), ನಂಜನಗೂಡು ಶಾಸಕ ಬಿ.ಹರ್ಷವರ್ಧನ್‌, ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ, ಕೆ.ಆರ್‌.ನಗರ ಶಾಸಕ ಸಾ.ರಾ.ಮಹೇಶ್‌ ತಮ್ಮ ಕ್ಷೇತ್ರಗಳಲ್ಲಿ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡುತ್ತಾ, ಜನರಿಗೆ ಸೌಲಭ್ಯ ಒದಗಿಸುವ ಭರವಸೆ ನೀಡಲಷ್ಟೇ ಸೀಮಿತವಾಗಿದ್ದಾರೆ. ಸಾ.ರಾ. ಮಹೇಶ್‌ ಅವರು ಇತ್ತೀಚೆಗೆ, ತಮ್ಮ ಕ್ಷೇತ್ರದ ಮಹಿಳೆಯೊಬ್ಬರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ದರು.

ಹಾಸನ ಜಿಲ್ಲೆಯ ಬಹುತೇಕ ಎಲ್ಲಾ ಶಾಸಕರು ಜನರ ಸಮಸ್ಯೆ ಆಲಿಸುತ್ತಿದ್ದಾರೆ. ಹಾಸನ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ ಅವರಿಗೆ ಕೋವಿಡ್‌ ದೃಢಪಟ್ಟಿದ್ದು, ಜನ ಸಂಪರ್ಕದಿಂದ ದೂರವುಳಿದಿದ್ದಾರೆ.

ಶಾಸಕ–ಸಂಸದರನ್ನು ಹುಡುಕಿ ಕೊಡಿ: ಚಾಮರಾಜನಗರ ಜಿಲ್ಲೆಯಲ್ಲಿ ಕೆಲವು ವಾಟ್ಸ್ ಆ್ಯಪ್ ಗ್ರೂಪ್‌ಗಳಲ್ಲಿ ‘ಸಂಸದರು, ಶಾಸಕರು ಕಾಣೆಯಾಗಿದ್ದಾರೆ. ಹುಡುಕಿ ಕೊಡಿ’ ಎಂಬಂತಹ ಪೋಸ್ಟ್‌ಗಳು ಹರಿದಾಡುತ್ತಿವೆ. ಶಾಸಕರ ಪೈಕಿ ಪುಟ್ಟರಂಗ ಶೆಟ್ಟಿ ಅವರು ಈಗಷ್ಟೇ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ಮನೆಗೆ ಬಂದು ಹಲವು ದಿನಗಳಾದರೂ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ.

52 ದಿನಗಳಿಂದ ಕಾಲಿಡದಸಂಸದೆ ಸುಮಲತಾ
ಮಂಡ್ಯ: ಜಿಲ್ಲೆಯಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹಾಗೂ 6 ಶಾಸಕರು, ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದೇ ಹೇಳುತ್ತಿದ್ದಾರೆ. ಜಿಲ್ಲೆಗೆ ಹೆಚ್ಚುವರಿಯಾಗಿ 50 ವೆಂಟಿಲೇಟರ್‌ ತರಿಸುವಲ್ಲಿ ಯಶಸ್ವಿಯಾಗಿದ್ದಾಗಿ ಹೇಳಿಕೊಳ್ಳುತ್ತಾರೆ ಸಚಿವ ನಾರಾಯಣಗೌಡ.

ಸಂಸದೆ ಎ.ಸುಮಲತಾ ಜಿಲ್ಲೆಯ ಕಡೆ ತಲೆ ಹಾಕಿ ಬರೋಬ್ಬರಿ 52 ದಿನಗಳಾಗಿವೆ. ಮಾರ್ಚ್‌ 8ರಂದು ಮಹಿಳಾ ದಿನಾಚರಣೆ ನಂತರ ಸಂಸದೆ ಮಂಡ್ಯ ಜಿಲ್ಲೆಯ ಕಡೆ ಕಾಲಿಟ್ಟಿಲ್ಲ. ಮೈಸೂರು–ಕೊಡಗು ಸಂಸದ ಪ್ರತಾಪಸಿಂಹ, ಕೋವಿಡ್‌ ಸಭೆ ನಡೆಸಲು ಜಿಲ್ಲೆಗೆ ಬರುವ ಸಚಿವರ ಜೊತೆ ಓಡಾಡುತ್ತಿದ್ದಾರೆ. ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.ಚಾಮರಾಜನಗರ ಕ್ಷೇತ್ರದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಜಿಲ್ಲೆಗೆ ಬಂದೇ ಇಲ್ಲ.

ಕೊಡಗು ಶಾಸಕರ ಕಾರ್ಯಕ್ಕೆ ಮೆಚ್ಚುಗೆ
ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಜನರಿಗೆ ನೆರವಾಗುತ್ತಿದ್ದಾರೆ. ಇಬ್ಬರೂ, ಹಸಿದವರಿಗೆ ವೈಯಕ್ತಿಕವಾಗಿ ನೆರವು ನೀಡುತ್ತಿದ್ದು, ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ರಂಜನ್‌ ಅವರು ಪಿಪಿಇ ಕಿಟ್ ಧರಿಸಿ, ಕೋವಿಡ್ ಆಸ್ಪತ್ರೆಯ ಸ್ಥಿತಿ ಅವಲೋಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT