ಶುಕ್ರವಾರ, ಜುಲೈ 1, 2022
27 °C
ಕೇಂದ್ರ ಪುರಸ್ಕೃತ ‘ಮಾತೃ ವಂದನಾ’ ಯೋಜನೆಗೆ ಅನುದಾನದ ಕೊರತೆ

ಒಳನೋಟ | ಪೋಷಣ ಅಭಿಯಾನ ‘ಅಪೌಷ್ಟಿಕ’

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗರ್ಭಿಣಿಯರು, ಬಾಣಂತಿಯರಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ ತಡೆಯಲು ‘ಮಾತೃ ವಂದನಾ’, ಮಕ್ಕಳು, ಮಹಿಳೆಯರಲ್ಲಿ ಅಪೌಷ್ಟಿಕತೆ ಕಡಿಮೆ ಮಾಡಲು ‘ಪೋಷಣ ಅಭಿಯಾನ’ ಯೋಜನೆಗಳು ಜಾರಿಯಲ್ಲಿವೆ. ಈ ಎರಡೂ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳು ‘ಆರ್ಥಿಕ ಅಪೌಷ್ಟಿಕತೆ’ಯಿಂದ ಸೊರಗುತ್ತಿವೆ; ಎದ್ದು ನಿಲ್ಲಲೂ ಸಾಧ್ಯವಾಗದಷ್ಟರ ಮಟ್ಟಿಗೆ ನಿತ್ರಾಣಗೊಂಡಿವೆ!

ಮೂಲಗಳ ಪ್ರಕಾರ, ಎರಡೂ ಯೋಜನೆಗಳಿಗೆ ಕೇಂದ್ರದ ಅನುದಾನ ಕೆಲವು ಕೋಟಿ ರೂಪಾಯಿ ಬರಬೇಕಿದೆ. ಯೋಜನೆಯ ಅನುಷ್ಠಾನ ನಿರ್ವಹಿಸುತ್ತಿರುವ ಮಹಿಳಾ ಮತ್ತು ಕಲ್ಯಾಣ ಇಲಾಖೆ ಇದನ್ನು ಒಪ್ಪಲು ತಯಾರಿಲ್ಲ. ಯೋಜನೆಗಳ ಅನುಷ್ಠಾನಕ್ಕೆ ಅನುದಾನದ ಕೊರತೆ ಎದುರಾಗಿಲ್ಲ ಎಂದು ತಿಳಿಸಿದೆ. ಆದರೆ, ಪೋಷಣ ಅಭಿಯಾನದಡಿ ಫಲಾನುಭವಿಗಳಿಗೆ ಆಹಾರ ಪೂರೈಕೆ ವಿಳಂಬವಾಗುತ್ತಿದೆ; ಮಾತೃ ವಂದನಾ ಪ್ರೋತ್ಸಾಹಧನ ಸೂಕ್ತ ಸಮಯಕ್ಕೆ ಫಲಾನುಭಗಳ ಕೈ ಸೇರುತ್ತಿಲ್ಲ.

‘ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ (ಐಸಿಡಿಎಸ್) ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ₹ 400 ಕೋಟಿಗೂ ಹೆಚ್ಚು ಅನುದಾನ ಬರಬೇಕಾಗಿದೆ. ಆದರೆ, ಇತ್ತೀಚೆಗೆ ಬಿಡಿಗಾಸೂ ನೀಡಿಲ್ಲ. ಮಾಹಿತಿ ಬಹಿರಂಗಪ‍ಡಿಸಿದರೆ ಸಮಸ್ಯೆಗೆ ಸಿಲುಕುತ್ತೇವೆ. ನಮಗ್ಯಾಕೆ ಆ ಉಸಾಬರಿ ಎಂಬ ಕಾರಣಕ್ಕೆ ಸತ್ಯಾಂಶಗಳನ್ನು ಮುಚ್ಚಿಡಲಾಗುತ್ತಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಕೆಳಹಂತದ ಸಿಬ್ಬಂದಿ ತಿಳಿಸಿದರು.

‘ಯೋಜನೆಗಳ ಅನುಷ್ಠಾನದಲ್ಲಿ ಆಧಾರ ಸ್ತಂಭದಂತಿರುವ ಅಂಗನವಾಡಿ ಕಾರ್ಯಕರ್ತೆಯರ ವಿಚಾರದಲ್ಲೂ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಬಡ ಕಾರ್ಯಕರ್ತೆಯರು ಮುಷ್ಕರ, ಪ್ರತಿಭಟನೆಗೆ ಇಳಿಯುತ್ತಿದ್ದಂತೆ ಇಲಾಖೆಯ ಹೊಣೆ ಹೊತ್ತ ಸಚಿವರ ದಾರಿ ತಪ್ಪಿಸಿ ಭರವಸೆಯ ಸೌಧ ಕಟ್ಟುವ ಅಧಿಕಾರಿಗಳು ಬಳಿಕ ಸುಮ್ಮನಾಗುತ್ತಾರೆ. ಪೋಷಣ ಅಭಿಯಾನದಲ್ಲಿ ಗುತ್ತಿಗೆ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕೆಲವು ತಿಂಗಳುಗಳಿಂದ ವೇತನವೇ ಪಾವತಿಯಾಗಿಲ್ಲ. ಕೇಂದ್ರದಿಂದ ಅನುದಾನ ಬಂದ ತಕ್ಷಣ ವೇತನ ನೀಡಲಾಗುವುದು ಎಂದು ಹೇಳಿ ಈ ಸಿಬ್ಬಂದಿಯನ್ನು ದುಡಿಸಿಕೊಳ್ಳಲಾಗುತ್ತಿದೆ’ ಎಂಬ ದೂರುಗಳು ಹೊಸದೇನಲ್ಲ.

ಮಾತೃ ವಂದನಾ ಯೋಜನೆ 2017ರ ನವಂಬರ್‌ನಿಂದ ಜಾರಿಗೆ ಬಂದಿದ್ದು, ಪೋಷಣ ಅಭಿಯಾನ 2018ರ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿದೆ. ‘ಪ್ರಧಾನ ಮಂತ್ರಿ‘ ಹೆಸರಿನೊಂದಿಗೆ ಜೋಡಣೆಗೊಂಡು, ಭರ್ಜರಿ ಪ್ರಚಾರದೊಂದಿಗೆ ಚಾಲನೆ ಪಡೆದ ಈ ಯೋಜನೆಗಳು ಕೇಂದ್ರದ ಅನುದಾನ ವಿಳಂಬದಿಂದ ಹಾದಿ ತಪ್ಪಿವೆ. ಸಕಾಲದಲ್ಲಿ ಅನುದಾನ ಪಡೆಯಲು ಪ್ರಯತ್ನಗಳು ಆಗುತ್ತಿಲ್ಲ. ಪೋಷಣ ಅಭಿಯಾನ ಯೋಜನೆಯ ಅನುಷ್ಠಾನದ ಪ್ರಗತಿ ದಾಖಲಿಸಲು ‘ಪೋಷಣ್‌ ಟ್ರ್ಯಾಕರ್‌’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಅದಕ್ಕೆಂದೇ ಅಂಗನವಾಡಿ ಕಾರ್ಯಕತೆಯರಿಗೆ ಸ್ಮಾರ್ಟ್‌ ಫೋನ್‌ ನೀಡಲಾಗಿದೆ. ಆದರೆ, ಆ ಸ್ಮಾರ್ಟ್‌ ಫೋನ್‌ಗಳು ಕಳಪೆ. ಹೀಗಾಗಿ ಟ್ರ್ಯಾಕಿಂಗ್ ಆಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿದರೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಇದರಿಂದಾಗಿ ಅಪೌಷ್ಟಿಕತೆ ಹೋಗಲಾಡಿಸಲು ರೂಪಿಸಿರುವ ಯತ್ನಕ್ಕೆ ಹಿನ್ನಡೆಯಾಗಿದೆ; ಗುರಿಯ ಪ್ರಗತಿ ಕುಂಠಿತವಾಗಿದೆ.

ಮಕ್ಕಳು– ಮಹಿಳೆಯರಲ್ಲಿ ರಕ್ತಹೀನತೆ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ 2015–16 ಹಾಗೂ 2018–21ರ ಅವಧಿಯ  ವರದಿಗಳನ್ನು ಹೋಲಿಸಿದಾಗ ಕರ್ನಾಟಕದಲ್ಲಿ ಕುಂಠಿತ ಬೆಳವಣಿಗೆ ಕಂಡುಬಂದಿರುವ 5 ವರ್ಷದ ಒಳಗಿನ ಮಕ್ಕಳ ಪ್ರಮಾಣ ಅಲ್ಪ ಕುಸಿದಿದೆ. ಆದರೆ, ಮಕ್ಕಳು, ಮಹಿಳೆಯರಲ್ಲಿ ರಕ್ತಹೀನತೆ ಕಾಡುತ್ತಿದೆ. ಈ ಸಮಸ್ಯೆ ಇರುವ 5 ವರ್ಷದ ಮಕ್ಕಳ ಪ್ರಮಾಣವು ಶೇ 60.9ರಿಂದ 65.5ಕ್ಕೆ ಏರಿಕೆ ಆಗಿದ್ದರೆ, ಮಹಿಳೆಯರ ಪ್ರಮಾಣ ಶೇ 44.8ರಿಂದ 47.8ಕ್ಕೆ ಹೆಚ್ಚಿದೆ. ಎರಡೂ ಯೋಜನೆಗಳ ‘ಫಲ’ ಪಡೆಯಲು ಬಯಸಿ ಹೆಸರು ನೋಂದಾಯಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಪೋಷಣ ಅಭಿಯಾನ: ಗರ್ಭಧಾರಣೆಯಿಂದ ಹಿಡಿದು ಶಿಶು ಮತ್ತು ತಾಯಂದಿರಿಗೆ ಸಾವಿರ ದಿನಗಳ ಕಾಲ ಉತ್ತಮ ಪೌಷ್ಟಿಕ ಆಹಾರ ನೀಡಿ, ಆರೋಗ್ಯವಂತರನ್ನಾಗಿಸುವ ಉದ್ದೇಶದಿಂದ ಈ ಅಭಿಯಾನ ಜಾರಿಗೆ ತರಲಾಗಿದೆ. ರಕ್ತಹೀನತೆ, ಅತಿಸಾರ ತಡೆಗಟ್ಟುವುದು, ಪೌಷ್ಟಿಕ ಆಹಾರ ಪೂರೈಕೆ ಮಾಡುವುದರ ಮೂಲಕ ತಾಯಿ ಮತ್ತು ಶಿಶುವಿನ ಉತ್ತಮ ಆರೋಗ್ಯ ಕಾಪಾಡುವುದು ಈ ಯೋಜನೆಯ ಮುಖ್ಯ ಉದ್ದೇಶ.

‘ಡಿಸೆಂಬರ್‌ ತಿಂಗಳಲ್ಲಿ ಪೂರೈಸಬೇಕಾದ ಪೌಷ್ಟಿಕ ಆಹಾರವನ್ನು ಈಗ (ಮಾರ್ಚ್‌) ತಿಂಗಳಲ್ಲಿ ನೀಡಲಾಗುತ್ತಿದೆ. ಬಾಣಂತಿಯರಿಗೆ ಆರು ತಿಂಗಳು ಮಾತ್ರ ಆಹಾರ ನೀಡಲಾಗುತ್ತಿದೆ. ಎರಡು ತಿಂಗಳ ವಿಳಂಬದಿಂದ ಅವರಿಗೆ ನಾಲ್ಕು ತಿಂಗಳ ಆಹಾರ ಮಾತ್ರ ಸಿಕ್ಕಂತಾಗುತ್ತಿದೆ. ಹೀಗೆ ಮಾಡಿದರೆ ಅಪೌಷ್ಟಿಕತೆ ನಿವಾರಣೆ ಸಾಧ್ಯವಾಗುವುದಾದರೂ ಹೇಗೆ’ ಎಂದು ಅಂಗನವಾಡಿ ಕಾರ್ಯಕತೆಯೊಬ್ಬರು ಪ್ರಶ್ನಿಸುತ್ತಾರೆ.

ಮಾತೃವಂದನಾ ಯೋಜನೆ: 2010ರಲ್ಲಿ ಇಂದಿರಾ ಮಾತೃ ಯೋಜನೆ ಎಂಬ ಹೆಸರಿನಿಂದ ಆರಂಭಗೊಂಡ ಯೋಜನೆ, 2017ರಲ್ಲಿ ಕೆಲವು ಬದಲಾವಣೆಗಳೊಂದಿಗೆ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಾಗಿ ಬದಲಾಯಿತು. ಬಹುತೇಕ ತಾಯಂದಿರು ರಕ್ತಹೀನತೆಯಿಂದ ಬಳಲುತ್ತಿದ್ದು, ಕಡಿಮೆ ತೂಕದ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಗರ್ಭಾಶಯದಲ್ಲಿ ಸರಿಯಾದ ಪೋಷಣೆ ಸಿಗದಿದ್ದಾಗ ಮಗುವಿನ ಮೇಲೆ ಅದು ಅಡ್ಡಪರಿಣಾಮ ಬೀರುತ್ತದೆ. ಈ ಯೋಜನೆಯ ಮೂಲಕ ಅಂಥ ತಾಯಂದಿರಿಗೆ ಸಹಾಯಹಸ್ತ ನೀಡಲಾಗುತ್ತಿದೆ.

‘ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ಪಡೆಯುವುದಕ್ಕಾಗಿ ₹ 5,000 ಮೊತ್ತವನ್ನು ಮೂರು ಕಂತುಗಳಲ್ಲಿ ಫಲಾನುಭವಿಗಳ ಆಧಾರ್ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿ (150 ದಿನಗಳ ಒಳಗಾಗಿ) ಮಾಡಿದ ನಂತರ ಮೊದಲ ಕಂತು ₹ 1,000, ಗರ್ಭಿಣಿಯಾಗಿ ಆರು ತಿಂಗಳ ನಂತರ (ಕನಿಷ್ಠ ಒಂದು ಆರೋಗ್ಯ ತಪಾಸಣೆ ಆಗಿರಬೇಕು) ಎರಡನೇ ಕಂತು ₹ 2000, ಹುಟ್ಟಿದ ಮಗುವಿನ ಜನನ ನೋಂದಣಿಯ ಬಳಿಕ (ಮಗು ಮೊದಲ ಹಂತದ ಚುಚ್ಚುಮದ್ದು ಪಡೆದಿರಬೇಕು) ಮೂರನೇ ಕಂತು ₹ 2,000– ಹೀಗೆ ಮೂರು ಹಂತಗಳಲ್ಲಿ ಹೀಗೆ ಹಣ ಒದಗಿಸಲಾಗುತ್ತದೆ. ಆದರೆ, ಗರ್ಭಿಣಿಯರ ಆರೈಕೆಗೆ ಸಿಗಬೇಕಾದ ಮೊದಲ ಕಂತಿನ ಹಣ, ಹೆರಿಗೆಯಾಗಿ ಮಗುವಿಗೆ ಒಂದು ವರ್ಷ ತುಂಬಿದ ಬಳಿಕವೂ ಫಲಾನುಭವಿಗಳ ಕೈ ಸೇರುವುದಿಲ್ಲ. ಹೀಗಾದರೆ, ಯೋಜನೆಯಿಂದ ಏನು ಪ್ರಯೋಜನ’ ಎಂದೂ ಅವರು ಪ್ರಶ್ನಿಸುತ್ತಾರೆ.

‘ಮಾತೃ ವಂದನಾ ಯೋಜನೆ ಪಡೆಯಲು ಪತಿಯ ಲಿಖಿತ ಒಪ್ಪಿಗೆ ಮತ್ತು ಆತನ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ, ಯೋಜನೆಯ ಆರಂಭದಲ್ಲಿ ಸಿದ್ಧಪಡಿಸಿರುವ ಮಾರ್ಗಸೂಚಿ ಅನ್ವಯ ಫಲಾನುಭವಿಗಳನ್ನು ಗುರುತಿಸಲಾಗುತ್ತಿದೆ. ಇಲಾಖೆ ಅಧಿಕಾರಿಗಳು ಪತಿಯ ಆಧಾರ್‌ ನೀಡದೇ ಇದ್ದರೆ ಅರ್ಜಿಗಳನ್ನು ತೆಗೆದುಕೊಳ್ಳುವುದಿಲ್ಲ’ ಎನ್ನುತ್ತಾರೆ.

ಇಲಾಖೆಯಲ್ಲೇ ಉಳಿದ ‘ಸೀರೆ’!

‘ಪೋಷಣ ಅಭಿಯಾನ’ದ ಪ್ರಚಾರಕ್ಕೆ ‘ಪೋಷಣ ಅಭಿಯಾನ’ ಎಂದು ಮುದ್ರಿಸಿದ ತಲಾ ₹ 600 ಬೆಲೆಯ ಸೀರೆಯನ್ನು ಸಮವಸ್ತ್ರವಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪೂರೈಸಿರುವ ಇಲಾಖೆ, ಅದನ್ನು ಉಟ್ಟು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿತ್ತು. ಆದರೆ, ‘ಹೆಣ್ಣಿನ ದೇಹವನ್ನು ಪ್ರಚಾರದ ಸರಕಾಗಿಸಲು ಹೊರಟಿರುವುದು ನೀಚತನದ ಪರಮಾವಧಿ’ ಎಂದು ಆಕ್ರೋಶಗೊಂಡ ಕಾರ್ಯಕರ್ತೆಯರು, ಆ ಸೀರೆ ಉಡಲು ನಿರಾಕರಿಸಿದ್ದಾರೆ. ಹೀಗಾಗಿ, ಲಕ್ಷಾಂತರ ಮೊತ್ತದ ಸೀರೆಗಳು ಇಲಾಖೆಯಲ್ಲಿ ರಾಶಿ ಬಿದ್ದಿವೆ. ‘ಉಟ್ಟುಕೊಳ್ಳದಿದ್ದರೂ ಪರವಾಗಿಲ್ಲ. ತೆಗೆದುಕೊಂಡು ಹೋಗಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ರಾಜ್ಯದಾದ್ಯಂತ ಯಾರೂ ಸೀರೆ ಪಡೆದುಕೊಂಡಿಲ್ಲ.

ರಾಜ್ಯದಲ್ಲಿ ಮಕ್ಕಳಲ್ಲಿ ಪೌಷ್ಟಿಕತೆ ಸ್ಥಿತಿಗತಿ (ಜನವರಿ –2022)

ಒಟ್ಟು ಮಕ್ಕಳು; 42,67,861

ಸಾಮಾನ್ಯ; 39,68,395; 92.98%

ಅಪೌಷ್ಟಿಕ ಮಕ್ಕಳ; 2,93,335; 6.87%

ತೀವ್ರ ಅಪೌಷ್ಟಿಕ ಮಕ್ಕಳು; 6,131; 0.14%

ಮಾತೃ ವಂದನಾ ಯೋಜನೆಗೆ ವೆಚ್ಚ ಅನುದಾನ(₹ ಕೋಟಿಗಳಲ್ಲಿ)

ವರ್ಷ;  ಕೇಂದ್ರ; ರಾಜ್ಯ

2017–2022; 424.33; 246.88

ಪೋಷಣ ಅಭಿಯಾನ ಯೋಜನೆಗೆ ಅನುದಾನ (₹ ಕೋಟಿಗಳಲ್ಲಿ)

ವರ್ಷ; ಕೇಂದ್ರ ; ರಾಜ್ಯ

2018–19; 52.55; 35.03

2019–20; 79.67; 50.05

2021–22; 52.55; 35.03

ಮಾತೃವಂದನಾ ಯೋಜನೆ ಫಲಾನುಭವಿಗಳು

ವರ್ಷ; ನೋಂದಣಿ; ಪಾವತಿಯಾದ ಮೊತ್ತ (₹ ಕೋಟಿಗಳಲ್ಲಿ)

2017–18; 3,52,765; 20.69

2018–19;3,39,616; 132.29

2019–20;4,99,066; 183.06

2021–22; 3,66,317; 156.75

* ಮಾಹಿತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು