ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: 17 ವರ್ಷ ಕಳೆದರೂ ಬದಲಾಗದ ಖಾತೆ

ಭೂ ಒಡೆತನ ಯೋಜನೆ
Last Updated 19 ಡಿಸೆಂಬರ್ 2020, 20:52 IST
ಅಕ್ಷರ ಗಾತ್ರ
ADVERTISEMENT
""

ದಾವಣಗೆರೆ: ‘ಭೂ ಒಡೆತನ ಯೋಜನೆ’ಯಡಿ ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಕೃಷಿ ಭೂಮಿ ಹಂಚಿಕೆಯಾಗಿ 17 ವರ್ಷ ಕಳೆದರೂ ಹರಪನಹಳ್ಳಿ ತಾಲ್ಲೂಕಿನ ಬೆಣ್ಣೆಹಳ್ಳಿಯ ಪರಿಶಿಷ್ಟ ಜಾತಿಯ 12 ಫಲಾನುಭವಿ ರೈತರ ಹೆಸರು ಪಹಣಿಯಲ್ಲಿ ನಮೂದಾಗಿಲ್ಲ.

ನಿಗಮ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಫಲಾನುಭವಿಗಳ ಉದಾಸೀನದಿಂದಾಗಿ ಜಮೀನು ಹಂಚಿಕೆಯಾಗಿ 17 ವರ್ಷಗಳಾದರೂ ಖಾತೆ ಬದಲಾವಣೆಯಾಗಿಲ್ಲ. ಇದರಿಂದಾಗಿ ಫಲಾನುಭವಿ ರೈತರಿಗೆ ಸರ್ಕಾರಿ ಸೌಲಭ್ಯಗಳು ಲಭಿಸುತ್ತಿಲ್ಲ.

ನಿಗಮವು 2003ರಲ್ಲಿ ಬೆಣ್ಣೆಹಳ್ಳಿಯಲ್ಲಿ 24 ಎಕರೆ ಖಾಸಗಿ ಜಮೀನು ಖರೀದಿಸಿ, 12 ಫಲಾನುಭವಿಗಳಿಗೆ ತಲಾ ಎರಡು ಎಕರೆಯನ್ನು ಹಂಚಿಕೆ ಮಾಡಿತ್ತು. ನಿಗಮದಿಂದ ಕ್ರಯಪತ್ರ ಪಡೆದುಕೊಂಡಿದ್ದ ಫಲಾನುಭವಿಗಳಾದ ಎಚ್‌. ಬುಳ್ಳಮ್ಮ, ಸೀತಮ್ಮ, ಶಾಂತಮ್ಮ, ನಾಗಪ್ಪರ ಕೊಟ್ರಮ್ಮ, ಗೌರಮ್ಮ, ಬಾಡದ ಪ್ರೇಮಮ್ಮ, ದ್ಯಾಮಕ್ಕ, ಹಾಳ್ಯಾದರ ಹಾಲಮ್ಮ, ಬುಳ್ಳಮ್ಮ, ಅಪಾಲಿ ಹನುಮಮ್ಮ, ಛಲವಾದಿ ಭರಮಮ್ಮ, ಛಲವಾದಿ ವೀರಮ್ಮ ಅವರು ತಮ್ಮ ಪಾಡಿಗೆ ಕೃಷಿ ಚಟುವಟಿಕೆ ಮಾಡಿಕೊಂಡಿದ್ದರು.

ಪಹಣಿಯಲ್ಲಿ ತಮ್ಮ ಹೆಸರು ನಮೂದಾಗಿಲ್ಲ ಎಂಬುದು 2015ರಲ್ಲಿ ಫಲಾನುಭವಿಗಳ ಗಮನಕ್ಕೆ ಬಂದ ಬಳಿಕ ನಿಗಮಕ್ಕೆ ದೂರು ನೀಡಿದ್ದರು. ನಿಗಮ– ಕಂದಾಯ ಇಲಾಖೆಯ ನಡುವೆ ಪತ್ರ ವ್ಯವಹಾರಗಳು ನಡೆದಿದ್ದರೂ ಐದು ವರ್ಷಗಳಾದರೂ ಸಮಸ್ಯೆಗೆ ಪರಿಹಾರ ಮಾತ್ರ ಲಭಿಸಿಲ್ಲ. ಪಹಣಿಯಲ್ಲಿ ತಮ್ಮ ಹೆಸರು ನಮೂದಿಸುವ ಸಲುವಾಗಿ ಫಲಾನುಭವಿಗಳು ಕಚೇರಿಗೆ ಅಲೆದಾಡುತ್ತಿದ್ದಾರೆ.

‘12 ಫಲಾನುಭವಿಗಳಿಗೆ ಜಮೀನು ಹಂಚಿಕೆ ಮಾಡಿ ಕ್ರಯಪತ್ರ ಮಾಡಿಕೊಟ್ಟಿರುವ ಎಲ್ಲಾ ದಾಖಲೆಗಳೂ ನಿಗಮದ ಬಳಿ ಇದೆ. ಭೂಮಿ ಹಂಚಿಕೆಯಾದ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ರೈತರು ಖಾತೆ ಬದಲಾವಣೆ ಮಾಡಿಸಲು ಆಸಕ್ತಿ ತೋರಿಸದೇ ಇದ್ದುದರಿಂದ ಸಮಸ್ಯೆಯಾಗಿದೆ. ಹರಪನಹಳ್ಳಿ ಈಗ ಬಳ್ಳಾರಿ ಜಿಲ್ಲೆಗೆ ಸೇರಿದೆ. ಹೀಗಾಗಿ ಉಪವಿಭಾಗಾಧಿಕಾರಿ ಜೊತೆ ಚರ್ಚಿಸಿ ನಮ್ಮಲ್ಲಿರುವ ಎಲ್ಲಾ ದಾಖಲೆಗಳನ್ನು ಬಳ್ಳಾರಿ ಕಚೇರಿಗೆ ಹಸ್ತಾಂತರಿಸಲಾಗುವುದು. ಬಳ್ಳಾರಿ ಜಿಲ್ಲಾ ವ್ಯವಸ್ಥಾಪಕರ ಜೊತೆಗೆ ಚರ್ಚಿಸಿ ರೈತರ ಹೆಸರಿಗೆ ಖಾತೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ದಾವಣಗೆರೆ ಜಿಲ್ಲಾ ವ್ಯವಸ್ಥಾಪಕ ಪಿ. ರಮೇಶ್‌ ಪ್ರತಿಕ್ರಿಯಿಸಿದರು.
*

**

ಡಿಸಿ ಮನ್ನಾ ಭೂಮಿ: ಮುಗಿಯದ ಸರ್ವೆ
ಮಂಗಳೂರು:
ಪರಿಶಿಷ್ಟ ಜಾತಿ, ಪಂಗಡದವರಿಗೆ ಹಂಚಿಕೆ ಮಾಡಲು ಬ್ರಿಟಿಷರ ಕಾಲದಿಂದಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಮೀನು ಕಾದಿರಿಸುವ ವ್ಯವಸ್ಥೆ ಜಾರಿಯಲ್ಲಿದೆ. 1932–38 ರ ಅವಧಿಯಲ್ಲಿ ಮದ್ರಾಸ್‌ ಸರ್ಕಾರವಿದ್ದಾಗ ಉಭಯ ಜಿಲ್ಲೆಗಳಲ್ಲಿ ವಿಶೇಷವಾಗಿ ಡಿಸಿ ಮನ್ನಾ ಭೂಮಿ ಕಾಯ್ದಿರಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 7,117.25 ಎಕರೆ ಡಿಸಿ ಮನ್ನಾ ಜಮೀನು ಇದ್ದು, ಆ ಪೈಕಿ 6,435.57 ಎಕರೆ ಜಮೀನು ಈಗಾಗಲೇ ಹಂಚಿಕೆಯಾಗಿದೆ. ಈ ಜಮೀನು ಪರಿಶಿಷ್ಟರಿಗೆ ಅಲ್ಲದೇ ಇತರ ಉದ್ದೇಶಗಳಿಗೂ ಹಂಚಿಕೆಯಾಗಿದೆ. ಇನ್ನು 681.68 ಎಕರೆ ಜಮೀನು ಉಳಿದಿದೆ ಎನ್ನುವ ಮಾಹಿತಿ ಅಧಿಕಾರಿಗಳದ್ದು.

ರಾಜಿಯಲ್ಲೇ ಇತ್ಯರ್ಥ: ‘ಹಲವೆಡೆ ಡಿಸಿ ಮನ್ನಾ ಭೂಮಿ ಅತಿಕ್ರಮಣವಾಗಿದೆ. ದೊಡ್ಡ ಪ್ರಮಾಣದಲ್ಲಿ ಅತಿಕ್ರಮಣವಾಗಿದ್ದು, ವಿಚಾರಣೆಯ ಹಂತಕ್ಕೆ ಹೋಗಿದ್ದು ಕಡಿಮೆಯೇ. ರಾಜಿ ಪಂಚಾಯಿತಿಯಲ್ಲಿಯೇ ಪ್ರಕರಣಗಳು ಮುಗಿದು ಹೋಗುತ್ತಿವೆ. ಕಡಬ ತಾಲ್ಲೂಕಿನಲ್ಲಿ 20 ಎಕರೆ, ಸುಳ್ಯ ತಾಲ್ಲೂಕಿನಲ್ಲಿ ಎರಡು ಎಕರೆ ಅತಿಕ್ರಮಣವನ್ನು ಕೋರ್ಟ್‌ ನಿರ್ದೇಶನದ ಮೇರೆಗೆ ತೆರವುಗೊಳಿಸಿ, ಈಗ ಹಂಚಿಕೆ ಮಾಡಲಾಗುತ್ತಿದೆ’ ಎಂದು ಮುಖಂಡ ಆನಂದ್‌ ಹೇಳುತ್ತಾರೆ.

ಆರ್‌ಟಿಸಿಯಲ್ಲೇ ನಮೂದು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿರುವ ಜಮೀನನ್ನು ಅಕ್ರಮ ಪರಭಾರೆ ಮಾಡುವುದನ್ನು ತಡೆಯಲು ಅಂತಹ ಜಮೀನಿನ ದಾಖಲೆಗಳಲ್ಲಿ ‘ಪರಿಶಿಷ್ಟರ ಭೂಮಿ, ಪರಭಾರೆ ನಿಷೇಧಿಸಿದೆ’ ಎಂದು ದಾಖಲಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ಮುಗಿಯದ ಸರ್ವೆ: ‘ಪ್ರತಿ ಜಿಲ್ಲಾಧಿಕಾರಿ ಅಧಿಕಾರ ವಹಿಸಿಕೊಂಡಾಗಲೂ ಡಿಸಿ ಮನ್ನಾ ಭೂಮಿಯ ಸರ್ವೆ ಮಾಡಿಸಲಾಗುತ್ತಿದೆ. ಎಷ್ಟು ಅತಿಕ್ರಮಣವಾಗಿದೆ. ಎಷ್ಟು ಎಕರೆ ಉಳಿದಿದೆ ಎನ್ನುವ ನಿಖರವಾದ ಮಾಹಿತಿ ಈಗಲೂ ಅಧಿಕಾರಿಗಳ ಬಳಿ ಇಲ್ಲ. ಸರ್ವೆ ನಡೆಯುತ್ತಲೇ ಇದೆ’ ಎನ್ನುತ್ತಾರೆ ಇನ್ನೊಬ್ಬ ಮುಖಂಡ ಸೇಸಪ್ಪ ಬೆದ್ರಕಾಡು.

-ಚಿದಂಬರ‍ಪ್ರಸಾದ

**
264 ಮಂದಿಗಷ್ಟೇ ಸರ್ಕಾರಿ ಜಮೀನು!
ಬೆಳಗಾವಿ:
‘ಭೂ ಒಡೆತನ ಯೋಜನೆ’ಯು ಜಿಲ್ಲೆಯಲ್ಲಿ 2013–14ನೇ ಸಾಲಿನಿಂದ ಅನುಷ್ಠಾನಕ್ಕೆ ಬಂದಿದ್ದು, ಈ 6 ವರ್ಷಗಳಲ್ಲಿ 264 ಮಂದಿಗೆ ಜಮೀನಿನ ಭಾಗ್ಯ ದೊರೆತಿದೆ.

2013–14ನೇ ಸಾಲಿನಿಂದ 2019–20ರವರೆಗೆ 264 ಫಲಾನುಭವಿಗಳಿಗೆ 152 ಎಕರೆ ಖುಷ್ಕಿ ಜಮೀನು ಹಾಗೂ 184 ಎಕರೆ ನೀರಾವರಿ ಜಮೀನು ಸೇರಿ ಒಟ್ಟು 336 ಎಕರೆ ಜಮೀನು ಖರೀದಿಸಿಕೊಡಲಾಗಿದೆ. ಇದಕ್ಕೆ ₹ 13.58 ಕೋಟಿ ವೆಚ್ಚವಾಗಿದೆ.

2020–21ರ ಸಾಲಿನಲ್ಲಿ ಸೆಪ್ಟೆಂಬರ್ ಆಂತ್ಯದವರೆಗೆ 301 ಮಂದಿಯನ್ನು ಗುರುತಿಸಲಾಗಿದೆ. ಇದಕ್ಕೆ 339 ಎಕರೆ ಜಮೀನು ಖರೀದಿಗೆ ₹ 37 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಡಾ.ಬಿ.ಆರ್. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧಿಕಾರಿ ಬಸವರಾಜ ಚನ್ನಯ್ಯನವರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

-ಎಂ. ಮಹೇಶ

**
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಿಲ್ಲ!
ಕಲಬುರ್ಗಿ:
ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ‘ಭೂ ಒಡೆತನ ಯೋಜನೆ’ಯಡಿರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಸಂಗಾಪುರದಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ನೀರಾವರಿ ಜಮೀನು ತೋರಿಸಿದ್ದ ಮಧ್ಯವರ್ತಿಗಳು, ಆನಂತರ ಖರಾಬು ಜಮೀನನ್ನು ನೋಂದಣಿ ಮಾಡಿ ವಂಚಿಸಿದ್ದಾರೆ.

ಪ್ರತಿ ಎಕರೆಗೆ ನಿಗಮದಿಂದ ₹ 6.35 ಲಕ್ಷ ಪಾವತಿಸಲಾಗಿದೆ. ವಾಸ್ತವದಲ್ಲಿ ಆ ಭೂಮಿಯ ಮೌಲ್ಯ ₹ 1 ಲಕ್ಷವೂ ಇಲ್ಲ. ನೀರಾವರಿ ಜಮೀನಿನ ಬದಲು ಗುಡ್ಡಗಾಡು ಜಮೀನು ನೋಂದಣಿ ಆಗಿರುವುದು ಗಮನಕ್ಕೆ ಬರುತ್ತಿದ್ದಂತೆಯೇ ಎಲ್ಲ 10 ಫಲಾನುಭವಿಗಳು ಹೋರಾಟ ಆರಂಭಿಸಿದ್ದಾರೆ. ಈ ಬಗ್ಗೆ ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ತನಿಖೆ ನಡೆಸಿದ್ದರೂ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ.

ಇದೀಗ ವಂಚನೆಗೊಳಗಾದ ಫಲಾನುಭವಿಗಳು ನಿಗಮದ ವ್ಯವಸ್ಥಾಪಕ ಮತ್ತು ಜಮೀನು ಮಾಲೀಕರ ವಿರುದ್ಧ ಐಪಿಸಿ ಸೆಕ್ಷೆನ್‌ 420 ಅಡಿ‌ ಮೊಕದ್ದಮೆ ದಾಖಲಿಸಿದ್ದಾರೆ. ಆರೋಪಿಗಳು ಜಾಮೀನು ಪಡೆದಿದ್ದಾರೆ.

ಭೂ ಒಡೆತನ ಯೋಜನೆಯಡಿ ಎರಡು ವರ್ಷಗಳಿಂದ ಕಲಬುರ್ಗಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಫಲಾನುಭವಿಗಳನ್ನೇ ಆಯ್ಕೆ ಮಾಡಿಲ್ಲ. ಬೀದರ್‌ ಜಿಲ್ಲೆಯಲ್ಲಿ ಅಸ್ಪೃಶ್ಯ ಸಮುದಾಯದ ಮಹಿಳೆಯರಿಗೆ ಆದ್ಯತೆ ನೀಡಿಲ್ಲ.‘ಪರಿಶಿಷ್ಟರ ಯೋಜನೆಗಳು ರಾಜಕಾರಣಿಗಳ ಹಿಂಬಾಲಕರ ಪಾಲಾಗುತ್ತಿವೆ. ಅಷ್ಟೇ ಅಲ್ಲ, ಅಧಿಕಾರಿಗಳು ಸಕಾಲದಲ್ಲಿ ಸಭೆಗಳನ್ನು ನಡೆಸುತ್ತಿಲ್ಲ. ಪರಿಶಿಷ್ಟರಿಗೆ ಯೋಜನೆಯ ಮಾಹಿತಿಯನ್ನೂ ಕೊಡುತ್ತಿಲ್ಲ. ಇದೇ ಕಾರಣಕ್ಕಾಗಿ ಎರಡು ವರ್ಷಗಳಿಂದ ಫಲಾನುಭವಿಗಳ ಆಯ್ಕೆ ಆಗಿಲ್ಲ’ ಎಂದು ಆರ್‌ಪಿಐ ಬೀದರ್‌ ಜಿಲ್ಲಾ ಘಟಕದ ಅಧ್ಯಕ್ಷ ಮಹೇಶ ಗೋರನಾಳಕರ್‌ ಹೇಳುತ್ತಾರೆ.

‘2019–20ರಲ್ಲಿ 135 ಪರಿಶಿಷ್ಟರಿಗೆ ಭೂಮಿ ನೀಡುವ ಗುರಿ ಹೊಂದಲಾಗಿತ್ತು. ಆ ಪೈಕಿ 63 ಜನರಿಗೆ ಭೂಮಿ ನೀಡಲಾಗಿದೆ. 2021ರ ಜನವರಿ ಅಂತ್ಯಕ್ಕೆ ಸಭೆ ನಡೆಸಲು ತೀರ್ಮಾನಿಸಲಾಗಿದೆ’ ಎನ್ನುತ್ತಾರೆಕಲಬುರ್ಗಿ ಜಿಲ್ಲೆಯ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುನಾವರ್ ದೌಲಾ.

ಯಾದಗಿರಿ ಜಿಲ್ಲೆಯಲ್ಲಿ 2013–14ರಿಂದ 2020–21ರವರೆಗೆ 295 ಫಲಾನುಭವಿಗಳಿಗೆ 321 ಎಕರೆ ನೀಡಲಾಗಿದೆ. ₹ 19.64 ಕೋಟಿ ಖರ್ಚು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT