ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಅರಣ್ಯದ ‘ಅರಣ್ಯರೋದನ’

ಕಾಡುನಾಶದ ವೇಗಕ್ಕೆ ಉತ್ತೇಜನ ನೀಡಿದ ಸರ್ಕಾರದ ಎಡವಟ್ಟು ನಿರ್ಧಾರಗಳು
Last Updated 19 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಶಿವಮೊಗ್ಗ: ಪಶ್ಚಿಮಘಟ್ಟದ ಮಲೆ ನಾಡಿನ ಯಾವುದೇ ಜಿಲ್ಲೆಗೆ ಹೋದರೂ ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿದ ಬೃಹತ್‌ ಮರಗಳು, ಸಸ್ಯ ಸಂಪತ್ತು ನೋಡಿ ಪ್ರವಾಸಿಗರು ಬೆರಗಾಗದೇ ಇರಲು ಸಾಧ್ಯವಿಲ್ಲ. ರಸ್ತೆಯಿಂದ ತುಸು ದೂರ ಸಾಗಿದರೆ ಸಾಕು, ಅರಣ್ಯ ಪ್ರದೇಶದ ನಿಜವಾದ ಬಂಡವಾಳ ಬಯಲಾಗುತ್ತದೆ. ಅಷ್ಟೊಂದು ಕಾಡು ನಾಶವಾಗಿರುವುದು ಅಘಾತ ತರುತ್ತದೆ.

ಭಾರತೀಯ ಅರಣ್ಯ ಸರ್ವೇಕ್ಷಣಾ ಸಂಸ್ಥೆ ಬಿಡುಗಡೆ ಮಾಡಿದ ರಾಜ್ಯದ ಅರಣ್ಯ ಸ್ಥಿತಿಗತಿಯ ವರದಿ ಪ್ರಕಾರ ರಾಜ್ಯದ 1.91 ಲಕ್ಷ ಚದರ ಕಿಲೋಮೀಟರ್‌ ಭೂ ಪ್ರದೇಶದಲ್ಲಿ ಶೇ 20.11 ಅರಣ್ಯ ಪ್ರದೇಶವಿದೆ. ಕಳೆದ ಒಂದು ದಶಕದಲ್ಲಿ ಆಗಿರುವ ಅರಣ್ಯ ನಾಶ, ಒತ್ತುವರಿಯನ್ನು ಸರ್ವೆ ಮೂಲಕ ಅಳತೆ ಮಾಡಿದರೆ ಶೇ 8ಕ್ಕಿಂತ ಹೆಚ್ಚು ಕಾಡು ನಾಶವಾಗಿರಬಹುದು ಎನ್ನುವುದು ಅರಣ್ಯ, ಪರಿಸರ ವಿಜ್ಞಾನಿಗಳ ಅಭಿಮತ.

ಕಂದಾಯ ಭೂಮಿ ಬರಿದಾಗಿಸಿದ ಬಗರ್‌ಹುಕುಂ: ರಾಜ್ಯದಲ್ಲಿರುವ 191 ಲಕ್ಷ ಹೆಕ್ಟೇರ್ ಭೂಪ್ರದೇಶದಲ್ಲಿ ಶೇ 65ರಷ್ಟು ಕೃಷಿ ಜಮೀನು, ಶೇ 20ರಷ್ಟು ಅರಣ್ಯ, ಶೇ 7ರಷ್ಟು ಜನವಸತಿ ಇದೆ. ಉಳಿದ ಶೇ 8ರಷ್ಟು ಸಾಮೂಹಿಕ ಭೂಮಿ. ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ 62.72 ಲಕ್ಷ ಹೆಕ್ಟೇರ್‌ ಸರ್ಕಾರಿ ಜಮೀನಿದೆ.

1990–92ರಲ್ಲಿ ಮೊದಲ ಬಾರಿ ಕಂದಾಯ ಜಮೀನುಗಳನ್ನು ಅನಧಿಕೃತವಾಗಿ ಸಾಗುವಳಿ ಮಾಡಿದ ರೈತರಿಗೆ ಭೂ ಮಂಜೂರಾತಿ ನೀಡಲು ಫಾರಂ 50 ಅಡಿ ಅವಕಾಶ ಕಲ್ಪಿಸಲಾಯಿತು. ಸ್ವಲ್ಪ ವರ್ಷಗಳಲ್ಲೇ ಮತ್ತೆ ಫಾರಂ 53 ಅಡಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಯಿತು. 50ರಲ್ಲಿ 10 ಲಕ್ಷಕ್ಕೂ ಹೆಚ್ಚು, 53ರಲ್ಲಿ 10 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಮೊದಲ ಅರ್ಜಿಗಳಲ್ಲಿ ಶೇ 30ರಷ್ಟು ಇತ್ಯರ್ಥವಾದರೆ, ಎರಡನೇ ಅವಕಾಶದಲ್ಲಿ ಶೇ 10ರಷ್ಟೂ ಇತ್ಯರ್ಥವಾಗಿಲ್ಲ. ಇತ್ಯರ್ಥವಾಗದ ಒತ್ತುವರಿ ಭೂಮಿ 9.97 ಲಕ್ಷ ಎಕರೆ ಇದೆ. 2005 ಜನವರಿ 1ಕ್ಕೂ ಮೊದಲು ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರ ಜಮೀನುಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 94 ಎ(4) ಅಡಿ ನಮೂನೆ 57ರ ಅಡಿ ಅರ್ಜಿ ಸಲ್ಲಿಸಲು 2018ರಲ್ಲಿ ಸರ್ಕಾರ ಮತ್ತೆ ಅವಕಾಶ ನೀಡಿತ್ತು. 2018ರ ಮಾರ್ಚ್‌ 17ರಿಂದ 2019ರ ಮಾರ್ಚ್‌ 16ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಅವಧಿಯನ್ನು ಮತ್ತೆ ಮತ್ತೆ ವಿಸ್ತರಿಸಲಾಗಿದೆ. ಇದುವರೆಗೂ 8,57,640 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಕೆಯ ಅವಧಿಯನ್ನು ನಾಲ್ಕು ವರ್ಷಗಳಷ್ಟು ದೀರ್ಘಕಾಲ ವಿಸ್ತರಿಸಿದ್ದು, ಅಕ್ರಮ ಸಾಗುವಳಿದಾರರಿಗೆ ಉತ್ತೇಜನ ನೀಡಿದಂತಾಗಿದೆ.

ಸರ್ಕಾರದ ನೀಡಿರುವ ಹೇಳಿಕೆಯಂತೆ 14.27 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ. ಬಗರ್‌ಹುಕುಂ ಅಡಿ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಇತ್ಯರ್ಥಗೊಳಿಸಿದರೆ ಸರ್ಕಾರಿ ಭೂಮಿ ಸಂಪೂರ್ಣ ಖಾಲಿಯಾಗಲಿದೆ. ಬಹುಶಃ ಸರ್ಕಾರಿ ಯೋಜನೆಗಳಿಗೂ ಭೂಮಿ ದೊರಕದಂತಾಗಲಿದೆ.

ಪಟ್ಟಭದ್ರರ ಪಾಲಾದ ಅರಣ್ಯ ಹಕ್ಕು ಕಾಯ್ದೆ: ವನವಾಸಿಗಳು, ಪಾರಂಪರಿಕ ಅರಣ್ಯವಾಸಿಗಳಾದ ಗೌಳಿ, ಕುಣಬಿ, ಗೊಂಡ, ಹಾಲಕ್ಕಿಯಂಥ ಸಮುದಾಯದವರು ಶತಮಾನಗಳಿಂದ ಕಾಡಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸೂಕ್ತ ದಾಖಲೆಗಳಿಲ್ಲದೇ ಅರಣ್ಯ ಭೂಮಿಯ ಹಕ್ಕು ದೊರಕದ ಇಂತಹ ಕುಟುಂಬಗಳಿಗೆ ಅವಕಾಶ ಕಲ್ಪಿಸಲು 2006ರಲ್ಲಿ ಅರಣ್ಯಹಕ್ಕು ಕಾಯ್ದೆ ಜಾರಿಗೆ ತರಲಾಯಿತು.

ಈ ಕಾಯ್ದೆ ಅಡಿ 2,95,018 ಅರ್ಜಿಗಳು ಸಲ್ಲಿಕೆಯಾಗಿದ್ದವು. ಶೇಕಡ 62.49ರಷ್ಟು ಅರ್ಜಿಗಳು ತಿರಸ್ಕೃತಗೊಂಡಿವೆ. ಬುಡಕಟ್ಟು ಜನಾಂಗಕ್ಕೆ 12,481 ಎಕರೆ, ಪಾರಂಪರಿಕ ಅರಣ್ಯ ವಾಸಿಗಳಿಗೆ 1,976 ಎಕರೆ ಭೂಮಿಯನ್ನು ನೀಡಲಾಗಿದೆ. ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡ ಮಲೆನಾಡಿನ ಶ್ರೀಮಂತ ರೈತರು ನೂರಾರು ಎಕರೆ ಪ್ರದೇಶದ ಕಾಡು ಕಡಿದುಹಾಕಿ ಅಡಿಕೆ, ಶುಂಠಿ ಬೆಳೆಯುತ್ತಿದ್ದಾರೆ. ಕೇರಳದಿಂದ ಬಂದ ಕುಟುಂಬಗಳು ಅರಣ್ಯದಲ್ಲೇ ನೆಲೆ ನಿಂತು ದೊಡ್ಡ ಪ್ರಮಾಣದ ಕಾಡು ನಾಶ ಮಾಡುತ್ತಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ ಅರ್ಜಿ ಸಲ್ಲಿಕೆಯ ನಾಲ್ಕುಪಟ್ಟು ಭೂಮಿ ಅನಧಿಕೃತ ಸಾಗುವಳಿಯಾಗಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಸುಮಾರು ಒಂದು ಲಕ್ಷ ಅಧಿಕೃತ ಅಡಿಕೆ ತೋಟಗಳಿದ್ದರೆ, ಅನಧಿಕೃತವಾಗಿ ಅದರ ಎರಡರಷ್ಟಿದೆ. ಇಂತಹ ಪಟ್ಟಭದ್ರರು ಅಕ್ರಮ ಸಕ್ರಮ, ಅರಣ್ಯ ಹಕ್ಕು ಕಾಯ್ದೆ ಅಡಿ ಎರಡೂ ಕಡೆ ಬೇರೆಬೇರೆ ಹೆಸರುಗಳಲ್ಲಿ ಅರ್ಜಿ ಸಲ್ಲಿಸಿ, ಭೂಮಿ ಮಂಜೂರಾಗದಿದ್ದರೂ, ಅರ್ಜಿ ಇತ್ಯರ್ಥವಾಗದಂತೆ ರಾಜಕೀಯ ಪ್ರಭಾವ ಬೀರುತ್ತಾರೆ. ಅಲ್ಲಿಯವರೆಗೂ ಫಸಲಿನ ಲಾಭ ಪಡೆಯುತ್ತಲೇ ಹೋಗುತ್ತಾರೆ.

ಇಂತಹ ವಿದ್ಯಮಾನವನ್ನು ಉಪಗ್ರಹ ಚಿತ್ರಗಳು ದೃಢೀಕರಿಸಿವೆ. ಕೊಡಗು, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾಡು ಬರಿದಾಗುತ್ತಿರುವ ವೇಗಕ್ಕೆ ಕೇಂದ್ರ ಅರಣ್ಯ ಸಚಿವಾಲಯದ ‘ಭಾರತ ಅರಣ್ಯ ಪರಿಸ್ಥಿತಿ ವರದಿ’ಯಲ್ಲೂ ಕಳವಳ ವ್ಯಕ್ತವಾಗಿದೆ.

ಗೋಮಾಳಕ್ಕೂ ಸರ್ಕಾರಿ ಸಂಚಕಾರ!

ಗ್ರಾಮೀಣ ಪ್ರದೇಶದ ಕೃಷಿ, ಜಾನುವಾರುಗಳ ಜೀವನಾಡಿಯಾದ ಗೋಮಾಳ, ಹುಲ್ಲುಬನಿ, ಗಾಯರಾಣ, ಸೊಪ್ಪಿನಬೆಟ್ಟ, ಮುಪ್ಫತ್ತು, ಜಾಡಿ, ಕುಮ್ಕಿ ಸೇರಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ–ಸಂಸ್ಥೆಗಳಿಗೆ ವಹಿಸಲು, ಮಂಜೂರು ಮಾಡುವ ಕುರಿತು (ಫೆ.9, 2022ರ ತಿದ್ದುಪಡಿ ಆದೇಶ) ನೀತಿಯೊಂದನ್ನು ರೂಪಿಸಲು ಸರ್ಕಾರ ಮುಂದಾಗಿದೆ.

ಕಂದಾಯ ಸಚಿವ ಆರ್. ಅಶೋಕ್ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ಸಚಿವ ಸಂಪುಟ ಉಪ ಸಮಿತಿ ರಚನೆಯಾಗಿದೆ. ಕಾನೂನು ಸಚಿವ ಜೆ.ಸಿ.ಮಾದುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ಕೃಷಿ ಸಚಿವ ಬಿ.ಸಿ. ಪಾಟೀಲ ಮತ್ತು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಸಮಿತಿಯಲ್ಲಿದ್ದಾರೆ.

ಹಳ್ಳಿಗರಿಗೆಲ್ಲ ಸಮಾನ ಹಕ್ಕಿರುವ ಇಂತಹ ಸಮುದಾಯ ಭೂಮಿಯಲ್ಲೇ ಕೆರೆ-ಹಳ್ಳಗಳಂಥ ಜಲಮೂಲಗಳು, ಗೋಮಾಳ, ಕುರುಚಲು ಕಾಡು ಎಲ್ಲವೂ ವ್ಯಾಪಿಸಿದೆ. ಮೇವಿನ ಹುಲ್ಲು, ಬೇಸಾಯಕ್ಕಾಗಿ ಸೊಪ್ಪು-ತರಗೆಲೆ, ಉರುವಲು, ಜೇನು, ಹಣ್ಣು-ಹಂಪಲುಗಳೆಲ್ಲ ದೊರಕುವುದೂ ಇಲ್ಲಿಯೇ. ಕಾಡಿನ ಮೇಲಿನ ಹಳ್ಳಿಗರ ಒತ್ತಡವನ್ನು ಕಡಿಮೆ ಮಾಡುವ ಹಾಗೂ ಕಾಡುಪ್ರಾಣಿಗಳು ಊರಿಗೆ ಬರದಂತೆ ನಿಯಂತ್ರಿಸುವ ಹಸಿರು ಬೇಲಿ ಇದು. ನೆರೆ-ಬರಗಳು ಬಂದಾಗ ಆಗುವ ಆಘಾತದ ತೀವ್ರತೆ ತಗ್ಗಿಸಬಲ್ಲ ರಕ್ಷಣಾಪೊರೆಯೂ ಹೌದು. ಇದೊಂದು ಅಮೂಲ್ಯವಾದ ಸಮುದಾಯ ಸಂಪತ್ತು ಎಂದು ಪರಿಸರ-ಅರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ.

ದಾಖಲೆಗಳ ಪ್ರಕಾರ ರಾಜ್ಯದಲ್ಲಿ 19.39 ಲಕ್ಷ ಎಕರೆ ಗೋಮಾಳ ಜಮೀನು ಲಭ್ಯವಿದೆ. ಇಂತಹ ಅಮೂಲ್ಯ ಭೂಮಿಯನ್ನು ಸಂಘ–ಸಂಸ್ಥೆಗಳಿಗೆ ಇದೇ ಜಾಗಗಳನ್ನು ಮಂಜೂರು ಮಾಡಲು ಹೊಸ ನೀತಿ ರೂಪಿಸಲು ಹೊರಟಿರುವುದಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿದೆ.

ಸಮುದಾಯಕ್ಕೆ ಮೀಸಲಾಗಿದ್ದ ಇಂತಹ 22,500 ಹೆಕ್ಟೇರ್ ಭೂಮಿಯನ್ನು ಹಿಂದೆ ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ನೀಡಿದ್ದು , ಅಲ್ಲಿ ಬೆಳೆಸಿದ ನೆಡುತೋಪುಗಳಿಂದ ಪ್ರಾಣಿ, ಪಕ್ಷಿ ಸಂಕುಲ ಜೀವ ವೈವಿಧ್ಯ ಹೇಗೆ ನಾಶವಾಯಿತು, ಈಗ ಆ ಭೂಮಿಯೂ ಹೇಗೆ ಒತ್ತುವರಿಯಾಗಿಗುತ್ತಿದೆ ಎಂಬ ಉದಾಹರಣೆ ಕಣ್ಣ ಮುಂದೆಯೇ ಇದೆ.

ಈಗಾಗಲೇ ಬಹುತೇಕ ಸಾಮೂಹಿಕ ಭೂಮಿ ಕೃಷಿ ಭೂಮಿಯಾಗಿ ಪರಿವರ್ತನೆಯಾಗಿವೆ. 25 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸಾಗುವಳಿ ಮಾಡುತ್ತಿವೆ. ಮನೆ ಮತ್ತು ಗುಡಿಸಲು ನಿರ್ಮಿಸಿರುವವರು ನಮೂನೆ 94 ಸಿ(ಗ್ರಾಮೀಣ) ಮತ್ತು 94 ಸಿಸಿ (ನಗರ) ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಒಂದೆಡೆ ‘ಅರಣ್ಯ ಹಕ್ಕು ಕಾಯ್ದೆ’ ಅಡಿ ಅರಣ್ಯಭೂಮಿಯಲ್ಲಿ ಭೂಹಕ್ಕು ಪಡೆಯಲು ಅರ್ಜಿ ಹಾಕಿದವರೇ, ಹಲವೆಡೆ ಇತ್ತ, ಕಂದಾಯ ಭೂಮಿ ಪಡೆಯಲು ’ಅಕ್ರಮ-ಸಕ್ರಮ’ದಲ್ಲೂ ಅರ್ಜಿ ಸಲ್ಲಿಸಿದ್ದಾರೆ. ಅರಣ್ಯ ಹಕ್ಕು ಸಮಿತಿ ನಿರ್ಧಾರ ಪರಿಗಣಿಸಿಯೇ ಮುಂದಿನ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಬಗರ್‌-ಹುಕುಂ ಸಮಿತಿಗಳನ್ನು ಬಳಸಿಕೊಂಡು, ಚುನಾವಣಾ ಲಾಭಕ್ಕಾಗಿ ಸರ್ಕಾರವು ಭೂಮಿ ಹಂಚಲು ಹೊರಟಿದೆ.

ಜಲಾಶಯಗಳಲ್ಲಿ ಮುಳುಗಿದ ಅರಣ್ಯ ಸಂಪತ್ತು

ಶಿವಮೊಗ್ಗ: 1958–64ರ ಅವಧಿಯಲ್ಲಿ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಇವರೆಲ್ಲ ಹೊಸನಗರ, ತೀರ್ಥಹಳ್ಳಿ, ಸಾಗರ, ಸೊರಬ, ಶಿವಮೊಗ್ಗ, ಶಿಕಾರಿಪುರ ತಾಲ್ಲೂಕಿನ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಪುನರ್‌ನೆಲೆ ಕಂಡುಕೊಂಡಿದ್ದರು. ಅವರ ಪುನರ್ವಸತಿಗಾಗಿಯೇ ಅಂದಿನ ಕೇಂದ್ರ ಸರ್ಕಾರ 8 ಸಾವಿರ ಎಕರೆಗೂ ಹೆಚ್ಚು ಅರಣ್ಯಭೂಮಿ ಮೀಸಲಿಟ್ಟಿತ್ತು. ಆದರೆ, ಆರು ದಶಕಗಳು ಕಳೆದರೂ ನಿಜವಾದ ಸಂತ್ರಸ್ತ ಕುಟುಂಬಗಳಿಗೆ ಭೂ ಹಕ್ಕು ನೀಡದ ಕಾರಣ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ.

ಅರಣ್ಯದಲ್ಲಿ ಅಂದು ನೆಲೆ ನಿಂತಿದ್ದ 12 ಸಾವಿರ ಕುಟುಂಬಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಅವರ ಕುಟುಂಬಗಳಿಗೆ ಮೀಸಲಿಟ್ಟ ಭೂಮಿ ಸಾಲದಾಗಿದೆ. ತಮ್ಮ ಸುತ್ತಲ ಕಾಡು ಕಡಿದು ಅಂತಹ ಕುಟುಂಬಗಳು ಸಾಗುವಳಿ ಮಾಡಿವೆ. 7 ವರ್ಷಗಳ ಹಿಂದೆ 6,459 ಎಕರೆ ಬಿಡುಗಡೆ ಮಾಡಲಾಗಿತ್ತು. 2 ಸಾವಿರಕ್ಕೂ ಹೆಚ್ಚು ಕುಟುಂಬಗಳ ಹೆಸರಿಗೆ ಹಂಚಿಕೆ ಮಾಡಲಾಗಿತ್ತು. ಈ ಮಧ್ಯೆ ಸಂತ್ರಸ್ತರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಸರ್ಕಾರಕ್ಕೆ ಸಲ್ಲಿಸುವ ಎಲ್ಲ ಪ್ರಸ್ತಾವನೆಗಳಿಗೂ ಸುಪ್ರೀಂ ಕೋರ್ಟ್‌ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ.

ಶರಾವತಿಗೆ ಸ್ವಾತಂತ್ರ್ಯಪೂರ್ವದಲ್ಲೇ ಮಡೆನೂರು–ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಲಾಗಿತ್ತು. 1958–64ರ ಅವಧಿಯಲ್ಲಿ ಲಿಂಗನಮಕ್ಕಿ, ನಂತರ ಚಕ್ರ–ಸಾವೇಹಕ್ಲು, ಮಾಣಿ ನಿರ್ಮಾಣವಾದವು. ಮತ್ತೊಂದು ತುದಿಯಲ್ಲಿ ನೀರಾವರಿ ಉದ್ದೇಶಕ್ಕೆ 1960ರ ದಶಕದಲ್ಲಿ ಭದ್ರಾ ನದಿಗೆ ಲಕ್ಕವಳ್ಳಿ ಬಳಿ, ತುಂಗಾನದಿಗೆ ಗಾಜನೂರು ಬಳಿ ಅಣೆಕಟ್ಟೆ ನಿರ್ಮಿಸಲಾಯಿತು. ಜಲಾಶಯಗಳಿಂದಾಗಿಯೇ ಭಾರಿ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.


***

ಸುಗಮ ಜೀವನ ನಿರ್ವಹಣೆಗೆ ಒಂದು ಕುಟುಂಬಕ್ಕೆ ಕನಿಷ್ಠ ಎರಡು ಎಕರೆ ಜಮೀನು ಅಗತ್ಯ. ಉಳುವ ರೈತನಿಗೆ ಭೂಹಕ್ಕು ಸಿಗಬೇಕು. ಹಿಂದೆ ಪಕ್ಷಾತೀತವಾಗಿ ನೀಡಿದ್ದ ಸಾಗುವಳಿ ಪತ್ರಗಳನ್ನು ಈಗಿನ ಸರ್ಕಾರ ರದ್ದು ಮಾಡುತ್ತಿರುವುದು ಸರಿಯಲ್ಲ

-ಕಾಗೋಡು ತಿಮ್ಮಪ್ಪ, ಮಾಜಿ ಕಂದಾಯ ಸಚಿವ

****
ಅರ್ಹರಲ್ಲದ ಖಾಸಗಿ ವ್ಯಕ್ತಿಗಳು, ಸಂಘಟನೆಗಳಿಗೆ ಗೋಮಾಳ ಭೂಮಿ ಹಂಚುವ ಕುರಿತು ನಿಯಮಾವಳಿ ರಚಿಸಲು ಹೊರಟಿರುವುದು ಸಾರ್ವಜನಿಕ ಒಳಿತಿಗೆ ವಿರುದ್ಧದ ನಡೆ

-ಕೇಶವ ಎಚ್‌.ಕೊರ್ಸೆ, ಪರಿಸರ ವಿಜ್ಞಾನಿ

****

ನಿಯಮ ದುರ್ಬಳಕೆ ಮಾಡಿಕೊಂಡ ಜನರು ಬೇಕಾಬಿಟ್ಟಿ ಅರಣ್ಯ ನಾಶ ಮಾಡಿದ್ದಾರೆ. 3 ಎಕರೆ ಒಳಗಿದ್ದರೆ ಕ್ರಮಕೈಗೊಳ್ಳದಂತೆ ಸರ್ಕಾರವೇ ಹೇಳಿದೆ. ಬೆಳೆಗಾಗಿಯೇ ಶೇ 80ರಷ್ಟು ಅರಣ್ಯ ನಾಶವಾಗಿದೆ

-ಅಖಿಲೇಶ್‌ ಚಿಪ್ಪಳಿ, ಪರಿಸರವಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT