ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಕಾಡಂಚಿನ ಜನರ ಕಷ್ಟಕ್ಕಿಲ್ಲ ಎಣೆ

ವನ್ಯಜೀವಿ ಸಂಘರ್ಷ ನಿರಂತರ: ಗ್ರಾಮಗಳಲ್ಲಿ ಮೂಲಸೌಕರ್ಯಗಳ ಕೊರತೆ
Last Updated 7 ಜನವರಿ 2023, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ಐದು ಹುಲಿಯೋಜನೆಗಳ ಕಾಡಂಚಿನ ಗ್ರಾಮಗಳ ನಿವಾಸಿಗಳು ವನ್ಯಪ್ರಾಣಿಗಳ ಹಾವಳಿ, ಮೂಲಸೌಕರ್ಯಗಳ ಕೊರತೆ ಹಾಗೂ ಸರ್ಕಾರಿ ಸವಲತ್ತುಗಳು ಸೂಕ್ತವಾಗಿ ಸಿಗದೆ ಸಂಕಷ್ಟಮಯ ಬದುಕು ಸಾಗಿಸುತ್ತಿದ್ದಾರೆ. ಕಾಡಂಚಿನ ಗ್ರಾಮಗಳ ಅಭಿವೃದ್ಧಿಯ ಹೊಣೆ ಹೊತ್ತಿರುವ ಹಲವು ಇಲಾಖೆಗಳು ಈ ಗ್ರಾಮಗಳ ಬಗ್ಗೆ ನಿರ್ಲಕ್ಷ್ಯವಹಿಸಿವೆ. ನಗರ, ಪಟ್ಟಣ, ಹೋಬಳಿ ಕೇಂದ್ರಗಳಿಗೆ ಹತ್ತಿರವಿರುವ ಗ್ರಾಮಗಳಿಗೆ ಹೋಲಿಸಿದರೆ ಅರಣ್ಯಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಮೂಲ ಸೌಕರ್ಯ ಸೇರಿದಂತೆ ಸರ್ಕಾರಿ ಸವಲತ್ತುಗಳು ತಲುಪುವುದು ನಿಧಾನ. ಹೀಗಾಗಿ ಇವು ಪ್ರಗತಿಯ ನಡಿಗೆಯಲ್ಲಿ ಹಿಂದೆ ಬಿದ್ದಿವೆ.

ರಾಜ್ಯದಲ್ಲಿ ಬಂಡೀಪುರ, ನಾಗರ ಹೊಳೆ, ಬಿಳಿಗಿರಿರಂಗನಾಥ ಸ್ವಾಮಿ ದೇವಾಲಯ (ಬಿಆರ್‌ಟಿ), ಕಾಳಿ (ಕೆಟಿಆರ್‌) ಮತ್ತು ಭದ್ರಾ ಸೇರಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿವೆ. ಬಂಡೀಪುರ, ಬಿಆರ್‌ಟಿ ಹಿಂದುಳಿದ ಚಾಮರಾಜನಗರ ಜಿಲ್ಲೆಯಲ್ಲಿದ್ದರೆ, ನಾಗರಹೊಳೆ ಮೈಸೂರು– ಕೊಡಗು, ಕಾಳಿ ಹುಲಿ ಯೋಜನೆ ಉತ್ತರ ಕನ್ನಡ ಹಾಗೂ ಭದ್ರಾ ಹುಲಿ ಯೋಜನೆ ಚಿಕ್ಕಮಗಳೂರು ಜಿಲ್ಲೆಯಲ್ಲಿವೆ.

ಐದು ಹುಲಿ ಸಂರಕ್ಷಿತ ಪ್ರದೇಶಗಳ ಅಂಚಿನಲ್ಲಿರುವ ಗ್ರಾಮಗಳ ಜನರ ಬವಣೆಗಳು ಹೆಚ್ಚುಕಮ್ಮಿ ಒಂದೇ ತೆರನಾಗಿವೆ. ‘ಮಾದರಿ ಕಾಡಂಚಿನ ಗ್ರಾಮ’ ಎಂದು ಗುರುತಿಸಬಹುದಾದ ಊರು ಎಲ್ಲೂ ಸಿಗುವುದಿಲ್ಲ! ಒಂದಿಲ್ಲೊಂದು ಸಮಸ್ಯೆ, ಬಿಕ್ಕಟ್ಟು ಜನರನ್ನು ಕಾಡುತ್ತಿರುತ್ತದೆ. ಕಷ್ಟಗಳ ನಡುವೆಯೇ, ಅಲ್ಲಿನ ನಿವಾಸಿಗಳು ತಾತ್ಕಾಲಿಕ ಪರಿಹಾರ ಕ್ರಮಗಳಿಗೆ ಅನಿವಾರ್ಯವಾಗಿ ಒಗ್ಗಿಕೊಂಡು ದಿನ ದೂಡುತ್ತಿದ್ದಾರೆ.

ಮುಗಿಯದ ಸಂಘರ್ಷ: ಹುಲಿಯೋಜನೆಗಳ ಎಲ್ಲ ಕಾಡಂಚಿನ ಗ್ರಾಮಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಮುಗಿಯದ ಕಥೆ. ಸಮಸ್ಯೆಗಳ ಬಗ್ಗೆ ಇಲ್ಲಿನ ಗ್ರಾಮಸ್ಥರನ್ನು ಕೇಳಿದರೆ, ಕಾಡು ಪ್ರಾಣಿಗಳ ಹಾವಳಿ ಬಗ್ಗೆಯೇ ಮೊದಲು ದೂರುತ್ತಾರೆ. ಹುಲಿ, ಆನೆ, ಚಿರತೆ, ಜಿಂಕೆ, ನವಿಲು ಮುಂತಾದ ಪ್ರಾಣಿಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಜನ ಜಾನುವಾರುಗಳ ಮೇಲೆ ದಾಳಿ ಮಾಡುವುದು, ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುವ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಹುಲಿಗಳ ಸಂಖ್ಯೆ ಹೆಚ್ಚಿರುವ ನಾಗರಹೊಳೆ, ಬಂಡೀಪುರಗಳಲ್ಲಿ ನೆಲೆ ಕಳೆದುಕೊಳ್ಳುವ ‌ವಯಸ್ಸಾದ ವ್ಯಾಘ್ರಗಳು ಆಹಾರ ಹುಡುಕಿಕೊಂಡು ಅರಣ್ಯದ ಅಂಚಿಗೆ ಬಂದು ರೈತರನ್ನು ಬಲಿ ಪಡೆದ ಉದಾಹರಣೆಗಳೂ ಸಾಕಷ್ಟಿವೆ. ಜಾನುವಾರುಗಳು ದಿನಂಪ್ರತಿ ಬಲಿಯಾಗುತ್ತಿರುತ್ತವೆ.

2019ರಲ್ಲಿ ಬಂಡೀಪುರದ ಅಂಚಿನ ಚೌಡಹಳ್ಳಿಯಲ್ಲಿ ಇಬ್ಬರು ರೈತರು ಹುಲಿಗೆ ಬಲಿಯಾಗಿದ್ದರು. ಕೊನೆಗೆ ಅರಣ್ಯ ಇಲಾಖೆ ಆ ವ್ಯಾಘ್ರನನ್ನು ಸೆರೆ ಹಿಡಿಯಬೇಕಾಯಿತು. ಕಳೆದ ವರ್ಷದ ಜುಲೈನಲ್ಲಿ ಹುಲಿಯೊಂದು ರೈತನ ಮೇಲೆ ದಾಳಿ ನಡೆಸಿತ್ತು. ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದರು. ಆಗಸ್ಟ್‌ 1ರಂದು ನಂಜನಗೂಡು ತಾಲ್ಲೂಕಿನ ಕಾಡಂಚಿನ ಗ್ರಾಮ ಒಡೆಯರ ಪುರದಲ್ಲಿ ಹುಲಿ ದನಗಾಹಿ ಹಾಗೂ ಹಸುವನ್ನು ಕೊಂದಿತ್ತು. ಕಳೆದ ತಿಂಗಳ 24ರಂದು ಬಿಆರ್‌ಟಿಯ ಪುಣಜನೂರು ವಲಯದ ಕಾಡಂಚಿನಲ್ಲಿ ಕರಡಿಯೊಂದು ದನಗಾಹಿಯ ಮೇಲೆ ದಾಳಿ ಮಾಡಿ ಕೊಂದಿದೆ.

ಬೇಸಿಗೆಯಲ್ಲಿ ಕಾಳ್ಗಿಚ್ಚು ಕಂಡುಬರುವುದು, ಪ್ರಾಣಿಗಳಿಗೆ ವಿಷ ಪ್ರಾಶನ ಮಾಡುವುದು, ಉರುಳಿಗೆ ಸಿಲುಕಿ ಪ್ರಾಣಿಗಳು ಸಾವಿಗೀಡಾಗುತ್ತಿರುವುದು ಮಾನವ ವನ್ಯಜೀವಿ ಸಂಘರ್ಷದ ಭಾಗವೇ ಆಗಿವೆ.

ಸಂಘರ್ಷ ತಡೆಯಲು ಅರಣ್ಯ ಇಲಾಖೆ ಸೌರ ಬೇಲಿ, ಆನೆ ಕಂದಕ, ರೈಲ್ವೆ ಕಂಬಿ ಬೇಲಿ, ಕಾಂಕ್ರೀಟ್‌ ಬೇಲಿ ನಿರ್ಮಿಸಿದೆ. ಇವೆಲ್ಲವೂ ತಾತ್ಕಾಲಿಕ ಶಮನ ನೀಡಿವೆಯಷ್ಟೇ ವಿನಾ, ಶಾಶ್ವತ ಪರಿಹಾರ ಒದಗಿಸಿಲ್ಲ. ಬಂಡೀಪುರದ ಓಂಕಾರ ವಲಯದಲ್ಲಿ, ನಾಗರಹೊಳೆ ವ್ಯಾಪ್ತಿಯಲ್ಲಿ ಆನೆಗಳು ರೈಲ್ವೆ ಕಂಬಿ ಬೇಲಿಯನ್ನೇ ದಾಟಿದ, ಹಲವು ಕಡೆ ಸೌರ ಬೇಲಿ ಮುರಿದ ಉದಾಹರಣೆಯಿದೆ. ವನ್ಯಮೃಗಗಳ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಹಾಗೂ ಶಾಶ್ವತ ಅಂಗವಿಕಲರಾದವರಿಗೆ ಹೆಚ್ಚು ಪರಿಹಾರ ನೀಡಬೇಕು ಎಂಬ ಜನರ ಆಕ್ರೋಶಕ್ಕೆ ಮಣಿದಿರುವ ಸರ್ಕಾರ, ಈಚೆಗೆ ಪರಿಹಾರ ಮೊತ್ತವನ್ನು ದುಪ್ಪಟ್ಟು ಮಾಡಿದೆ.

ವನ್ಯಪ್ರಾಣಿಗಳು ಕಾಡಂಚಿನಲ್ಲಿರುವ ಕೃಷಿ ಜಮೀನುಗಳಲ್ಲಿ ಜನ ಜಾನುವಾರುಗಳ ಮೇಲೆ ದಾಳಿ ಮಾಡಿ ಜೀವ ಹಾನಿ ಸಂಭವಿಸಿದರೆ ಮಾತ್ರ ಇಲಾಖೆ ಪರಿಹಾರ ನೀಡುತ್ತದೆ. ಕಾಡಿನ ಒಳಗೆ ದಾಳಿ ಮಾಡಿದರೆ ಪರಿಹಾರ ಸಿಗುವುದಿಲ್ಲ. ಜೀವ ಹಾನಿಯಾದ ಸಂದರ್ಭದಲ್ಲಿ ಅರಣ್ಯ ಇಲಾಖೆ ಪರಿಹಾರವನ್ನು ಬೇಗ ನೀಡುತ್ತಿದೆ. ಗರಿಷ್ಠ 10 ದಿನಗಳ ಒಳಗಾಗಿ ಸಂತ್ರಸ್ತರ ಕುಟುಂಬದವರ ಖಾತೆಗೆ ಪರಿಹಾರ ಮೊತ್ತವನ್ನು ನೇರವಾಗಿ ಜಮಾವಣೆ ಮಾಡುತ್ತದೆ. ಆದರೆ, ಬೆಳೆ ಹಾನಿ ಸಂದ‌ರ್ಭದಲ್ಲಿ ಪರಿಹಾರ ನೀಡಲು ವಿಳಂಬವಾಗುತ್ತಿದೆ ಎಂಬುದು ಕೃಷಿಕರ ದೂರು.

ಅಭಿವೃದ್ಧಿಯಲ್ಲಿ ಹಿಂದೆ: ಮಾನವ– ವನ್ಯಜೀವಿ ಸಂಘರ್ಷ ಎಂದಿಗೂ ಬಗೆಹರಿಯದ ಸಮಸ್ಯೆಯಾಗಿದ್ದರೆ, ಕಾಡಂಚಿನ ಗ್ರಾಮಗಳಲ್ಲಿರುವ ಇತರ ಸಮಸ್ಯೆಗಳು ಅಲ್ಲಿನ ಜನರ ಬದುಕನ್ನು ದುಸ್ತರ ಮಾಡುತ್ತಿವೆ. ಈ ಹಳ್ಳಿಗಳು ಅಭಿವೃದ್ಧಿ ವಿಚಾರದಲ್ಲಿ ಹಿಂದುಳಿದಿವೆ. ಗ್ರಾಮಸ್ಥರು ಕೂಡ ಹೆಚ್ಚು ಸ್ಥಿತಿವಂತರಲ್ಲ. ಬಹುತೇಕರು ಬಡವರು. ಸಣ್ಣ ಹಿಡುವಳಿದಾರರು.

ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳು ಪರಿಸರ ಸೂಕ್ಷ್ಮ ವಲಯದ (ಇಎಸ್‌ಝಡ್‌) ವ್ಯಾಪ್ತಿಗೆ ಒಳಪಡುತ್ತವೆ. ಇಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಹೊಸದಾಗಿ ಅಭಿವೃದ್ಧಿ ಕೆಲಸಗಳಿಗೂ ಅರಣ್ಯ ಇಲಾಖೆ ನಿಯಮಗಳು ಆಸ್ಪದ ನೀಡುವುದಿಲ್ಲ. ನಗರ, ಪಟ್ಟಣ ಹೋಬಳಿ ಕೇಂದ್ರಗಳಿಗೆ ಹತ್ತಿರವಿರುವ ಗ್ರಾಮಗಳಿಗೆ ಹೋಲಿಸಿದರೆ ಇಲ್ಲಿ ಜನಸಂಖ್ಯೆಯೂ ಕಡಿಮೆ. ಈ ಕಾರಣದಿಂದ ನಾಗರಿಕ ಸೌಲಭ್ಯಗಳು ಉಳಿದೆಡೆಗೆ ತಲುಪುವ ವೇಗದಲ್ಲಿ ಬರುವುದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡುವುದು ವಿರಳ. ಸೌಲಭ್ಯ ಪಡೆಯಲು ಜನರು ಸಾಹಸಪಡಬೇಕು.

ಮೂಲಸೌಕರ್ಯಗಳ ಕೊರತೆ: ರಸ್ತೆ, ಕುಡಿಯುವ ನೀರು, ವಿದ್ಯುತ್‌ ಸಂಪರ್ಕ, ಶಿಕ್ಷಣ, ಆರೋಗ್ಯ ಸೌಲಭ್ಯಗಳು ಸಮಪರ್ಕವಾಗಿ ಇಲ್ಲ. ಬಹುತೇಕ ಗ್ರಾಮಗಳಲ್ಲಿ ಮೊಬೈಲ್‌ ನೆಟ್‌ವರ್ಕ್‌, ಇಂಟರ್‌ನೆಟ್‌ ಸಂಪರ್ಕ ಸಮಸ್ಯೆಯೂ ಇದೆ.

ಮಳೆಗಾಲದಲ್ಲಿ ವಿದ್ಯುತ್‌ ಇಲ್ಲದ ದಿನಗಳೇ ಹೆಚ್ಚಿರುತ್ತವೆ. ಗಾಳಿ ಮಳೆಗೆ ವಿದ್ಯುತ್‌ ಕಂಬ ಮುರಿದರೆ, ತಂತಿ ತುಂಡಾಗಿ ಬಿದ್ದರೆ ದುರಸ್ತಿಗೆ ದಿನಗಳೇ ಹಿಡಿಯುತ್ತವೆ. ಬೇಸಿಗೆಯಲ್ಲೂ ಲೋಡ್‌ ಶೆಡ್ಡಿಂಗ್‌, ತ್ರಿಫೇಸ್‌ ವಿದ್ಯುತ್‌ ಸಮಸ್ಯೆಯಿಂದ ಕೃಷಿಕರು ತೊಂದರೆ ಅನುಭವಿಸುತ್ತಾರೆ. ಕೆಲವು ಕಡೆಗಳಲ್ಲಿ ರಾತ್ರಿ ಹೊತ್ತು ತ್ರಿಫೇಸ್‌ ವಿದ್ಯುತ್‌ ಪೂರೈಕೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಜಮೀನುಗಳಿಗೆ ನೀರು ಹಾಕುವುದಕ್ಕಾಗಿ ರೈತರು ಜೀವ ಭಯದಲ್ಲೇ ತೋಟಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ.

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್‌ ತಂತಿಗಳು ತುಂಡಾಗಿ, ಇಲ್ಲವೇ ಕಂಬಗಳು ಮುರಿದು ವಿದ್ಯುತ್‌ ಸಂಪರ್ಕ ಪದೇ ಪದೇ ಕಡಿತವಾಗಿರುತ್ತಿರುತ್ತದೆ. ಊರು ತೀರಾ ಒಳಪ್ರದೇಶವಾಗಿರುವುದರಿಂದ ದುರಸ್ತಿ ಕಾರ್ಯ ವಿಳಂಬವಾಗುತ್ತಿರುತ್ತದೆ.

ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ರಾತ್ರಿ ತ್ರಿಫೇಸ್‌ ವಿದ್ಯುತ್‌ ನೀಡುತ್ತಿರುವುದನ್ನು ಖಂಡಿಸಿ, ಹಗಲು ಹೊತ್ತಿನಲ್ಲೇ ತ್ರಿಫೇಸ್‌ ವಿದ್ಯುತ್‌ ನೀಡಬೇಕು ಎಂದು ಆಗ್ರಹಿಸಿ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಉದಾಹರಣೆಗಳೂ ಇವೆ.

‘ಲೋಡ್‌ ಶೆಡ್ಡಿಂಗ್‌ ಹೆಸರಿನಲ್ಲಿ ಗ್ರಾಮದಲ್ಲಿರುವ ತೋಟದ ಮನೆಗಳಿಗೆ ರಾತ್ರಿ ಹೊತ್ತು ಸಿಂಗಲ್ ಫೇಸ್‌ ವಿದ್ಯುತ್‌ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ನಮ್ಮ ಗ್ರಾಮದಲ್ಲಿ ಚಿರತೆ, ಕಾಡುಹಂದಿ ಸೇರಿದಂತೆ ಪ್ರಾಣಿಗಳ ಹಾವಳಿ ಇದೆ. ತೋಟದ ಮನೆಗಳಲ್ಲಿ ರಾತ್ರಿ ತಂಗಲು ಕಷ್ಟವಾಗುತ್ತಿದೆ’ ಎಂದು ಚಾಮರಾಜನಗರ ತಾಲ್ಲೂಕಿನ ಮೇಲೂರು ಗ್ರಾಮದ ಮೂರ್ತಿ ಹೇಳಿದರು.

ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕೆಲಸಗಳು ತ್ವರಿತವಾಗಿ ನಡೆಯುವುದಿಲ್ಲ. ಆರೋಗ್ಯ ಸೇವೆಗಳು ಸರಿಯಾಗಿ ಲಭ್ಯವಿಲ್ಲ. ಕೆಲವು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೆ, ಹಲವು ಗ್ರಾಮಗಳಲ್ಲಿ ಅದೂ ಇಲ್ಲ. ಚಿಕಿತ್ಸೆಗಾಗಿ ಹೋಬಳಿ ಕೇಂದ್ರ ಇಲ್ಲವೇ ತಾಲ್ಲೂಕು ಕೇಂದ್ರಗಳಿಗೇ ಬರಬೇಕು.

ಆರೋಗ್ಯ ಕ್ಷೇತ್ರದಲ್ಲಿ ದುಡಿಯುವ ಸ್ವಯಂ ಸೇವಾ ಸಂಸ್ಥೆಗಳು ಹಾಡಿಗಳಲ್ಲಿ ಆರೋಗ್ಯ ತಪಾಸಣಾ ಶಿಬಿರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಆದಿವಾಸಿಗಳ ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತವೆ. ಈ ಸೌಲಭ್ಯವೂ ಕಾಡಂಚಿನ ಗ್ರಾಮಸ್ಥರಿಗೆ ಇಲ್ಲ. ಅಲ್ಲಿ ಆರೋಗ್ಯ ಶಿಬಿರಗಳನ್ನು ಮಾಡುವ ಪ್ರಯತ್ನ ಯಾರೂ ಮಾಡುವುದಿಲ್ಲ. ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳು ಆಯೋಜಿಸುವ ಇಂತಹ ಶಿಬಿರಗಳು ನಗರ, ಪಟ್ಟಣ ಹಾಗೂ ಹೋಬಳಿಗಳಿಗಷ್ಟೇ ಸೀಮಿತವಾಗಿವೆ.

ಶಿಕ್ಷಣವೂ ಅಷ್ಟೇ. ಕಿರಿಯ ಇಲ್ಲವೇ ಹಿರಿಯ ಪ್ರಾಥಮಿಕ ಶಾಲಾ ಹಂತದವರೆಗೆ ಮಾತ್ರ ಲಭ್ಯವಿದೆ. ಪ್ರೌಢಶಾಲೆ, ಪಿಯುಸಿ ಶಿಕ್ಷಣಕ್ಕೆ ದೂರದ ಊರುಗಳಿಗೆ ಹೋಗುವುದು ಅನಿವಾರ್ಯ. ಸೌಲಭ್ಯಗಳ ಕೊರತೆ ನಡುವೆಯೂ ಪದವಿ, ಸ್ನಾತಕೋತ್ತರ ಹಾಗೂ ಇತರ ವೃತ್ತಿಪರ ಶಿಕ್ಷಣ ಮಾಡಿದವರು ಸಿಗುತ್ತಾರಾದರೂ ಈ ಸಂಖ್ಯೆ ಬೆರಳೆಣಿಕೆಯಷ್ಟೇ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವಲಯದಲ್ಲಿ 136 ಹಳ್ಳಿಗಳು ಬರುತ್ತವೆ. ಗಿರಿಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಗುಂಡ್ಲುಪೇಟೆ ತಾಲ್ಲೂಕಿನ ಹಗ್ಗದಹಳ್ಳ, ಹಾನಂಜಿಹುಂಡಿ, ಕಾರೆಮಾಳ ಚೆನ್ನು, ಆಡಿನ ಕಣಿವೆ, ಬೂರದರಹುಂಡಿ, ಚೆಲುವರಾಯನಪುರ ಗುಡ್ಡೇಕೆರೆ, ಚಿಕ್ಕೆಲಚೆಟ್ಟಿ ಗಿರಿಜನ ಕಾಲೊನಿಗಳಿಗೆ ರಸ್ತೆ ಸೌಲಭ್ಯ ಇಲ್ಲ. ಇಲ್ಲಿನ ಮಕ್ಕಳ ಶಾಲೆಗೆ ಹೋಗಬೇಕಾದರೆ ಕಿಲೋಮೀಟರ್‌ ಗಟ್ಟಲೆ ನಡೆಯಲೇಬೇಕು. ಪ್ರಾಣಿಗಳ ಭಯ ಅದಕ್ಕೂ ಅವಕಾಶ ಕೊಡುವುದಿಲ್ಲ. ಈ ಕಾರಣಕ್ಕೆ ಕೆಲವು ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿದ್ದಾರೆ.

ಕಾಡಂಚಿನ ಊರುಗಳಿಗೆ ಸಾರಿಗೆ ವ್ಯವಸ್ಥೆಯೂ ಅಷ್ಟಕ್ಕಷ್ಟೇ. ದಿನಕ್ಕೆ ಒಂದೋ ಎರಡು ಬಸ್‌ ಬರುತ್ತದೆ. ಓಡಾಡುವುದಕ್ಕೆ ಸ್ವಂತ ಇಲ್ಲವೇ ಬಾಡಿಗೆ ವಾಹನಗಳನ್ನೇ ಆಶ್ರಯಿಸಬೇಕಾಗಿದೆ.

ನಾಗರಹೊಳೆ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ಬಿಲ್ಲೇನಹಳ್ಳಿ ಗ್ರಾಮದಿಂದ ಪ್ರಾಥಮಿಕ ಶಾಲೆಗೆ ಮಕ್ಕಳು ನಡೆದು ಬರಬೇಕು. ‘ಬಸ್ ವ್ಯವಸ್ಥೆ ಇಲ್ಲ. ದಾರಿಯಲ್ಲಿ ಹುಲಿ, ಚಿರತೆ ಹಾವಳಿ. ಜೀವದ ಹಂಗುತೊರೆದು ಮಕ್ಕಳು ಬರಬೇಕಿದೆ’ ಎನ್ನುತ್ತಾರೆ ಸ್ಥಳೀಯರು.

ಬಿಆರ್‌ಟಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಕಾಡಂಚಿನಲ್ಲಿ ಬರುವ 53 ಜನವಸತಿಗಳ ಪೈಕಿ ಚಾಮರಾಜನಗರ ತಾಲ್ಲೂಕಿನ ವ್ಯಾಪ್ತಿಗೆ ಕುಂಭೇಶ್ವರ ಕಾಲೊನಿ, ಕಾಳಿಕಾಂಬ ಕಾಲೊನಿಗಳಿಗೆ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲ.

‘ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಟ್ರಿಪ್‌ ಬಸ್‌ ಬರುತ್ತದೆ. ಭಾನುವಾರ ಅದೂ ಬರುವುದಿಲ್ಲ. ಬಸ್‌ ಬಂದರೆ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ. ಇಲ್ಲದಿದ್ದರೆ ಆ ದಿನ ಶಾಲೆಗೆ ರಜೆ. ಸಾರ್ವಜನಿಕರು ಕೂಡ ಇದೇ ಬಸ್‌ ಅವಲಂಬಿಸಬೇಕು. ಇಲ್ಲದಿದ್ದರೆ ಖಾಸಗಿ, ಬಾಡಿಗೆ ವಾಹನಗಳಲ್ಲಿ ಓಡಾಡಬೇಕಾಗಿದೆ’ ಎಂದು ಕಾಳಿಕಾಂಬ ಕಾಲೊನಿಯ ಪದವೀಧರ ಕಾರ್ತಿಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಳಿ ಹುಲಿ ಸಂರಕ್ಷಿತಾರಣ್ಯದ (ಕೆಟಿಆರ್‌) ಅಂಚಿನಲ್ಲಿ 87 ಗ್ರಾಮಗಳಿವೆ. ಅಣಶಿ, ಶಿರ್ವೆ, ಕೊಡಸಳ್ಳಿ, ಕುಳಗಿ, ಫಣಸೋಲಿ, ಗುಂದ, ಕುಂಬಾರವಾಡ, ಕ್ಯಾಸಲ್‌ರಾಕ್ ಸೇರಿದಂತೆ ಹತ್ತಾರು ಹಳ್ಳಿಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೆಟಿಆರ್ ಸ್ಥಾಪನೆಗೂ ಮೊದಲೇ ಇದ್ದ ರಸ್ತೆಗಳ ಅಭಿವೃದ್ಧಿ, ಹೊಸ ವಿದ್ಯುತ್ ಮಾರ್ಗಗಳ ನಿರ್ಮಾಣ, ಕೆಲವೆಡೆ ಮನೆಗಳ ದುರಸ್ತಿಗೂ ಅರಣ್ಯ ಇಲಾಖೆ ನಿಯಮಗಳು ಅಡ್ಡಿಯಾಗಿವೆ.

ನಾಗರಹೊಳೆ ಹುಲಿ ಯೋಜನೆಯ ಅಂಚಿನಲ್ಲಿ 96 ಗ್ರಾಮಗಳು ಬರುತ್ತವೆ. ಹುಲಿ ಸೇರಿದಂತೆ ವನ್ಯಮೃಗಗಳ ಹಾವಳಿ ಇಲ್ಲಿನ ಜನರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ರಸ್ತೆ ಸೇರಿದಂತೆ ಇತರೆ ಮೂಲಸೌಕರ್ಯಗಳ ಕೊರತೆ ಇದ್ದೇ ಇದೆ.

ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ 57 ಕಂದಾಯ ಗ್ರಾಮಗಳಿವೆ. ಅರಣ್ಯದಂಚಿನ ಪ್ರದೇಶದಲ್ಲಿ ಹುಲಿಗಳ ಓಡಾಟ ಹೆಚ್ಚಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ರಸ್ತೆ, ವಿದ್ಯುತ್‌, ನೀರಿನ ಸಮಸ್ಯೆ ಇದೆ.

ಅಭಿವೃದ್ಧಿಯಲ್ಲಿ ಇಲಾಖೆ ಪಾತ್ರ: ಮಾನವ ವನ್ಯಜೀವಿ ಸಂಘರ್ಷ ತಡೆಯುವುದನ್ನು ಬಿಟ್ಟು, ಗ್ರಾಮಗಳ ಅಭಿವೃದ್ಧಿಯಲ್ಲಿ ಅರಣ್ಯ ಇಲಾಖೆಯ ಪಾತ್ರ ಹೆಚ್ಚಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ. ‘ಆದರೆ, ಪರಿಸರ ಅಭಿವೃದ್ಧಿ ಸಮಿತಿ (ಇಡಿಸಿ), ಪರಿಸರ ಪ್ರವಾಸೋದ್ಯಮದ ಮೂಲಕ ಸ್ಥಳೀಯರಿಗೆ ಉದ್ಯೋಗ ನೀಡುವುದು, ವಿವಿಧ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಅವಕಾಶ ಇದೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಅವಕಾಶಗಳು ಹೆಚ್ಚು. ಹುಲಿ ಯೋಜನೆಗೆ ಕೇಂದ್ರ ಸರ್ಕಾರದಿಂದ ವಾರ್ಷಿಕವಾಗಿ ₹10 ಕೋಟಿಯಷ್ಟು ಅನುದಾನ ಬರುತ್ತದೆ. ಇದನ್ನು ಬಳಸಿಕೊಂಡು ಸ್ಥಳೀಯ ಜನರನ್ನು ಆರ್ಥಿಕವಾಗಿ ಸದೃಢ ಮಾಡುವಂತಹ ಯೋಜನೆಗಳನ್ನು ರೂಪಿಸುವುದಕ್ಕೆ ಅವಕಾಶ ಇದೆ’ ಎಂದು ಹೇಳುತ್ತಾರೆ ಅಧಿಕಾರಿಗಳು.

ಬಿಆರ್‌ಟಿಯಲ್ಲಿ ಗಿರಿಜನರ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್‌), ಕೆ.ಗುಡಿಯಲ್ಲಿರುವ ಪರಿಸರ ಅಭಿವೃದ್ಧಿ ಸಮಿತಿ ಉತ್ತಮವಾಗಿ ನಡೆಯುತ್ತಿದೆ. ಬಂಡೀಪುರದಲ್ಲಿ ಜಿಲ್ಲಾ ಪಂಚಾಯ್ತಿ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿರಿಜನರಿಗೆ ಲಂಟಾನದಿಂದ ಗೃಹೋಪಯೋಗಿ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ತರಬೇತಿಯನ್ನೂ ನೀಡಲಾಗುತ್ತಿದೆ. ಇಂತಹ ಬೆರಳೆಣಿಕೆಯಷ್ಟು ಉದಾಹರಣೆಗಳನ್ನು ಬಿಟ್ಟು, ಕಾಡಂಚಿನ ಗ್ರಾಮಗಳನ್ನು ಪ್ರಗತಿಯ ದಾರಿಯಲ್ಲಿ ಕೊಂಡೊಯ್ಯುವ ಪ್ರಯತ್ನಗಳು ನಡೆಯುತ್ತಿಲ್ಲ.

ಚರ್ಚೆ ಮುನ್ನೆಲೆಗೆ: ಚಾಮರಾಜನರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮವನ್ನು ಹುಲಿ ಯೋಜನೆಯಾಗಿ ಘೋಷಿಸುವ ಪ್ರಸ್ತಾವಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಹುಲಿ ಯೋಜನೆಯ ಸಾಧಕ ಬಾಧಕಗಳ ಚರ್ಚೆ ಮುನ್ನಲೆಗೆ ಬಂದಿದೆ. ವನ್ಯಧಾಮದ ಒಳಗೆ 10 ಕುಗ್ರಾಮಗಳಿವೆ. ಹುಲಿಯೋಜನೆ ಘೋಷಣೆಯಾದರೆ ಈ ಗ್ರಾಮಗಳ ಪರಿಸ್ಥಿತಿ ಇನ್ನಷ್ಟು ಹದಗೆಡಲಿವೆ. ಅರಣ್ಯ ಇಲಾಖೆ ಗ್ರಾಮಸ್ಥರನ್ನು, ಗಿರಿಜನರನ್ನು ಒಕ್ಕಲೆಬ್ಬಿಸಿ ಅತಂತ್ರರನ್ನಾಗಿ ಮಾಡಲಿದೆ ಎಂಬ ಕಾರಣಕ್ಕೆ ಸ್ಥಳೀಯರು ಯೋಜನೆ ವಿರೋಧಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರೇ ಬಹಿರಂಗವಾಗಿ ವಿರೋಧಿಸುತ್ತಿರುವುದರಿಂದ ಘೋಷಣೆ ನನೆಗುದಿಗೆ ಬಿದ್ದಿದೆ.

(ಪೂರಕ ಮಾಹಿತಿ: ಬಿ.ಜೆ.ಧನ್ಯಪ್ರಸಾದ್‌, ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ, ಬಿ.ಬಸವರಾಜು, ಸಚ್ಚಿತ್‌, ಸತೀಶ್‌ ಆರಾಧ್ಯ)

ಕಾಡಿನ ಗ್ರಾಮಗಳ ಸ್ಥಿತಿಯೂ ಚಿಂತಾಜನಕ

ಹುಲಿ ಯೋಜನೆ ವ್ಯಾಪ್ತಿಯ ಒಳಗಿರುವ ಗ್ರಾಮಗಳ ಸ್ಥಿತಿಯೂ ಭಿನ್ನವಾಗಿಲ್ಲ.
ಒಕ್ಕಲೆಬ್ಬಿಸುವ ಆತಂಕದಲ್ಲೇ ಮತ್ತು ಸೌಲಭ್ಯಗಳಿಲ್ಲದೆ ಬದುಕು ದೂಡುತ್ತಿದ್ದಾರೆ.

ಬಿಆರ್‌ಟಿ ವ್ಯಾಪ್ತಿಯಲ್ಲಿ 10 ಜನವಸತಿ ಪ್ರದೇಶದಲ್ಲಿವೆ. ಸಂರಕ್ಷಿತ ಪ್ರದೇಶದಲ್ಲಿ ಕಾಲೊನಿಗಳು ಇರುವುದರಿಂದ ಮನೆ, ರಸ್ತೆ ನಿರ್ಮಾಣಕ್ಕೂ ಹರಸಾಹಸ ಪಡಬೇಕಾಗಿದೆ.

ಬಿಳಿಗಿರಿರಂಗಬೆಟ್ಟದ ಪುರಾಣಿ ಪೋಡಿನ ಸೋಲಿಗರು ಕನಿಷ್ಠ ಸೌಲಭ್ಯಗಳಿಲ್ಲದೆ ಜೀವನ ಸಾಗಿಸುತ್ತಿದ್ದಾರೆ. ಬಿಳಿಗಿರಿರಂಗನಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರಾಣಿಪೋಡಿನಲ್ಲಿ 115 ಕುಟುಂಬಗಳಿವೆ. 540 ಜನಸಂಖ್ಯೆ ಇದೆ. ರಸ್ತೆ, ವಿದ್ಯುತ್ ಸಮಸ್ಯೆಗಳಿಂದ ಇಲ್ಲಿನ ಸೋಲಿಗರು ಇನ್ನೂ ಮುಕ್ತಿ ಪಡೆದಿಲ್ಲ.

ವಿದ್ಯುತ್‌ಗೆ ಸೋಲಾರ್‌ ಘಟಕ ಇದೆ. ಆದರೆ ಪದೇ ಪದೇ ಹಾಳಾಗುವುದರಿಂದ ಸೌಲಭ್ಯ ಇದ್ದರೂ ಪ್ರಯೋಜನಕ್ಕೆ ಸಿಗುವುದಿಲ್ಲ. ವಿದ್ಯುತ್‌ ಇಲ್ಲದಿದ್ದರೆ, ಕುಡಿಯುವ ನೀರಿಗೆ ಗ್ರಾಮಸ್ಥರು ಕಿ.ಮೀ ಗಟ್ಟಲೆ ನಡೆಯಬೇಕು. ಈ ಬಾರಿ ನಿರಂತರವಾಗಿ ಸುರಿದ ಮಳೆಗೆ 50ಕ್ಕೂ ಹೆಚ್ಚು ಮನೆಗಳು ಶಿಥಿಲವಾಗಿದ್ದು, ಮನೆಗಳು ಕುಸಿಯುವ ಸ್ಥಿತಿಯಲ್ಲಿವೆ. ‘ಗ್ರಾಮದಲ್ಲಿ ಮನೆಗಳ ಚಾವಣಿ ಶಿಥಿಲವಾಗಿದೆ. ಮುಂಭಾಗದ ಬಾಗಿಲು ಕಿತ್ತು ಹೋಗಿದೆ. ಕದ ಇಲ್ಲದ ಮನೆಗಳಿಗೆ ಚಳಿ, ಗಾಳಿ ನುಗ್ಗುತ್ತಿದೆ. ಕೆಲವು ಕುಟುಂಬಗಳಲ್ಲಿ ಗೋಡೆಗಳು ಇಲ್ಲ. ಸೋಗೆ, ಪ್ಲಾಸ್ಟಿಕ್ ಬಳಸಿ ಬದುಕು ಸಾಗಿಸುತ್ತಿದ್ದೇವೆ. ಪುಟ್ಟ ಮಕ್ಕಳನ್ನು ಕೊರೆಯುವ ಚಳಿಯಲ್ಲಿ ರಕ್ಷಿಸುವುದೇ ಪೋಷಕರಿಗೆ ಸವಾಲಾಗಿದೆ. ಮಣ್ಣಿನ ಮನೆಗಳು ಗಾಳಿ, ಮಳೆಗೆ ಬೀಳುವ ಸ್ಥಿತಿಯಲ್ಲಿ ಇವೆ. ಪ್ರಾಣ ಭಯ ಪ್ರತಿದಿನ ದಿನ ಕಾಡಿದೆ' ಎಂದು ಲಕ್ಷ್ಮಿ ಹೇಳಿದರು.

ನಾಗರಹೊಳೆ, ಬಂಡೀ‍ಪುರ ವ್ಯಾಪ್ತಿಯಲ್ಲಿ ಅರಣ್ಯದಿಂದ ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಗೊಂಡಿರುವ ಗಿರಿಜನರ ‌ಜೀವನಸ್ಥಿತಿ ಇನ್ನೂ ಸುಧಾರಿಸಿಲ್ಲ.

‘ಹುಣಸೂರಿನ ತಾಲ್ಲೂಕಿನ ಶೆಟ್ಟಹಳ್ಳಿ, ಹೆಬ್ಬಳ್ಳ ಪುನರ್ವಸತಿ ಕೇಂದ್ರಗಳಿಗೆ ಬಂದವರಿಗೆ, ನಾಗಾಪುರ ಕೇಂದ್ರದ ಫಲಾನುಭವಿಗಳಿಗಿಂತಲೂ ಹೆಚ್ಚು ಪ್ರಯೋಜನವಾಗಿದೆ. ಇಲಾಖೆಯು ಅವರಿಗೆ ₹15 ಲಕ್ಷದ ಪ್ಯಾಕೇಜ್ ಘೋಷಿಸಿ, ಮನೆ, 3 ಎಕರೆ ಕೃಷಿ ಭೂಮಿ ಮತ್ತು ₹3.50 ಲಕ್ಷವನ್ನು ಪ್ರತಿ ಕುಟುಂಬದ ಹೆಸರಿನಲ್ಲಿ ಠೇವಣಿ ಇಟ್ಟಿದೆ. ಅದನ್ನು ಗಿರಿಜನರ ಕಲ್ಯಾಣಕ್ಕೆ ಬಳಸುವುದಾಗಿ ಇಲಾಖೆ ತಿಳಿಸಿದೆ. ಆದರೆ ಕೃಷಿ ಭೂಮಿ ಅಭಿವೃದ್ಧಿಗೆ ಅದನ್ನೇ ಕೊಡಿ ಎಂದರೆ ಸಮ್ಮತಿ ನೀಡದಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ’ ಎಂದು ಶೆಟ್ಟಹಳ್ಳಿ ಕೇಂದ್ರದ ನಿವಾಸಿ ಜೆ.ಕೆ.ರಾಜಪ್ಪ ಹೇಳಿದರು.

ಹಾಡಿಗಳಿಗೆ ಆಹಾರ ಪೂರೈಕೆ: ಸರ್ಕಾರದ ಇತರೆ ಸವಲತ್ತುಗಳು ಪೂರ್ಣ ಪ್ರಮಾಣದಲ್ಲಿ ಆದಿವಾಸಿಗಳು ವಾಸಿಸುವ ಹಾಡಿಗಳು, ಕಾಲೊನಿಗಳಿಗೆ ತಲುಪದಿದ್ದರೂ, ಪೌಷ್ಟಿಕ ಆಹಾರ ಪೂರೈಕೆ ಸಮರ್ಪಕವಾಗಿ ಆಗುತ್ತಿದೆ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ವರ್ಷದ ಆರು ತಿಂಗಳ ಕಾಲ ಗಿರಿಜನರಿಗೆ ಆಹಾರವನ್ನು ಒದಗಿಸುತ್ತದೆ.

‘ಕೂಲಿ ಇಲ್ಲದ ಸಂದರ್ಭದಲ್ಲಿ ಈ ಆಹಾರವೇ ನಮ್ಮ ಹೊಟ್ಟೆ ತುಂಬಿಸುತ್ತದೆ’ ಎಂದು ಕಾರೆಮಾಳ ಕಾಲೊನಿಯ ಪುಟ್ಟಮ್ಮ ತಿಳಿಸಿದರು.

ಭದ್ರಾ: ಪರದೇಶಪ್ಪನ ಮಠದ ಕುಟಂಬಗಳಿಗೆ ಪುನರ್ವಸತಿ ಬಾಕಿ

ಭದ್ರಾ ಹುಲಿ ಸಂರಕ್ಷಿತ ಯೋಜನೆ ವ್ಯಾಪ್ತಿಯಲ್ಲಿ ಪುನರ್ವಸತಿ ಯೋಜನೆಯು ಅಂದಿನ ಡಿಸಿಎಫ್‌ ಡಿ.ಯತೀಶ್‌ ಕುಮಾರ್‌ ನಿರಂತರ ಪ್ರಯತ್ನದಿಂದ ಯಶಸ್ಸು ಕಂಡಿದೆ. ಈ ಪುನರ್ವಸತಿಗೆ ವರ್ಲ್ಡ್‌ ವೈಡ್‌ ಫಂಡ್‌ ನೇಚರ್‌ ಇಂಡಿಯಾ ಮತ್ತು ಪೆಸಿಫಿಕ್‌ ಏಷ್ಯಾ ಟ್ರಾವೆಲ್‌ ಅಸೋಸಿಯೇಷನ್‌ನ ಸಾಂಸ್ಥಿಕ ಪುರಸ್ಕಾರ 2001ರಲ್ಲಿ ಸಂದಿದೆ.

ಯೋಜನೆ ವ್ಯಾಪ್ತಿಯಲ್ಲಿದ್ದ ಮುತ್ತೋಡಿ, ಕೆಸವೆ, ಮಾಡ್ಲಾ, ತಬ್ಬಗಾರ್‌, ವಡ್ಡಿಹಟ್ಟಿ, ಕಂಚಿಗಾರ್‌ಕಾಲೊನಿ, ಹೆಬ್ಬೆ, ಕರವಾನಿ, ಹಿಪ್ಲಾ, ಹೆಗ್ಗಾರು, ಮತ್ವಾನಿ, ಹಿರೇಬಳ್ಳದ ಕುಟುಂಬಗಳಿಗೆ ಕೆಳಗೂರು, ಬಾಳೆಹಳ್ಳಿ, ಎಂ.ಸಿ.ಹಳ್ಳಿ ಭಾಗದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಪರದೇಶಪ್ಪನ ಮಠದ ಕುಟುಂಬಗಳು ಸ್ಥಳಾಂತರಗೊಂಡಿಲ್ಲ, ಪುನರ್ವಸತಿ ಕಲ್ಪಿಸುವ ಕಾರ್ಯ ಆಗಿಲ್ಲ. ಈ ಕುಟುಂಬಗಳು ಪುನರ್ವಸತಿಗಾಗಿ ಹಲವು ಬಾರಿ ಪ್ರತಿಭಟನೆ ನಡೆಸಿವೆ. ಈವರೆಗೆ ಸಮಸ್ಯೆ ಪರಿಹರಿಸಿಲ್ಲ.

ಪುನರ್ವಸತಿ ಕಲ್ಪಿಸಿರುವ ಜಾಗದಲ್ಲಿ ರಸ್ತೆ ಹದಗೆಟ್ಟಿರುವುದು, ವನ್ಯಜೀವಿಗಳ ಹಾವಳಿ ಸಮಸ್ಯೆಗಳಿವೆ.

ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ!

ಹನೂರು (ಚಾಮರಾಜನಗರ): ತಾಲ್ಲೂಕಿನ ಮಲೆಮಹದೇಶ್ವರ ವನ್ಯಧಾಮದ ವ್ಯಾಪ್ತಿಯ ಚಂಗಡಿಯ ಗ್ರಾಮಸ್ಥರ ಸ್ಥಿತಿ ಈ ಗಾದೆ ಮಾತನ್ನು ಹೋಲುತ್ತದೆ.

ಗ್ರಾಮಗಳಲ್ಲಿ ಸೌಲಭ್ಯಗಳಿಲ್ಲ ಎಂಬ ಕಾರಣಕ್ಕೆ ಸ್ವಯಂಪ್ರೇರಿತರಾಗಿ ಇಡೀ ಗ್ರಾಮದ ಸ್ಥಳಾಂತರಕ್ಕೆ ಗ್ರಾಮಸ್ಥರು ಒಪ್ಪಿದರೂ ಇನ್ನೂ ಅನುದಾನ ನೀಡಲು ಹಿಂದೆಮುಂದೆ ನೋಡುತ್ತಿದೆ. ಗ್ರಾಮ ಸ್ಥಳಾಂತರಕ್ಕಾಗಿ ಜಾಗ ಗುರುತಿಸಿ, ಆ ಸ್ಥಳದ ಅಭಿವೃದ್ಧಿಯ ನೀಲ ನಕ್ಷೆಯನ್ನು ಅರಣ್ಯ ಇಲಾಖೆ ತಯಾರಿಸಿದೆ. ಗ್ರಾಮಸ್ಥರಿಗೆ ನೀಡಬೇಕಾದ ಪರಿಹಾರ ಪ್ಯಾಕೇಜನ್ನೂ ಸಿದ್ಧಪಡಿಸಲಾಗಿದೆ. ಯೋಜನೆಗೆ ₹34.50 ಕೋಟಿ ವೆಚ್ಚವಾಗುತ್ತದೆ. ಸರ್ಕಾರ ಈ ಬಗ್ಗೆ ನಿರ್ಧರಿಸಿಲ್ಲ.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿಯಲ್ಲಿ ಕಲ್ಪಿಸಿರುವ ಪುನರ್ವಸತಿ ಮಾದರಿಯಲ್ಲಿಯೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಅರಣ್ಯ ಇಲಾಖೆಯ ಯೋಜನೆ. ಪುನರ್ವಸತಿಗೆ ಒಪ್ಪಿಕೊಂಡವರಿಗಾಗಿ ಮೂರು ರೀತಿಯ ಪ್ಯಾಕೇಜ್ ಮಾಡಲಾಗಿದೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ₹15 ಲಕ್ಷ ನಗದು ನೀಡುವುದು, ಎರಡನೇ ಪ್ಯಾಕೇಜ್‌ನಲ್ಲಿ ಪ್ರತಿ ಕುಟುಂಬಕ್ಕೆ ₹75 ಸಾವಿರ ನಗದು, ಮೂರು ಎಕರೆ ಜಮೀನು ಹಾಗೂ ಮನೆ ನಿರ್ಮಿಸಿಕೊಡುವುದು, ₹5 ಲಕ್ಷ ನಗದು ಹಾಗೂ ಪ್ರತಿ ಕುಟುಂಬಕ್ಕೂ ಒಂದು ಮನೆ ನಿರ್ಮಿಸಿ ಕೊಡುವುದು ಮೂರನೇ ಪ್ಯಾಕೇಜ್‌. ಮೊದಲನೇ ಪ್ಯಾಕೇಜ್‌ಗೆ 90 ಕುಟುಂಬಗಳು ಒಪ್ಪಿದ್ದರೆ ಇನ್ನೆರಡು ಪ್ಯಾಕೇಜ್‌ಗಳಿಗೆ ಕ್ರಮವಾಗಿ 116 ಮತ್ತು 24 ಕುಟುಂಬಗಳು ಒಪ್ಪಿಕೊಂಡಿವೆ. ಸಮಗ್ರ ಯೋಜನಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಎರಡು ವರ್ಷ ಕಳೆಯುತ್ತಿದ್ದರೂ ಈ ಸಂಬಂಧ ಯಾವ ನಿರ್ಧಾರವೂ ಹೊರ ಬಿದ್ದಿಲ್ಲ.

ಹುಲಿ ಯೋಜನೆಗೆ ವಿರೋಧವಿಲ್ಲ. ಅರಣ್ಯದ ಒಳಗೆ, ಅಂಚಿನ ಗ್ರಾಮಗಳಿಗೆ ಮೂಲಸೌಕರ್ಯ ಕಲ್ಪಿಸಲಿ. ಅರಣ್ಯ ಸಂರಕ್ಷಣೆ ಕಾಯ್ದೆಯಲ್ಲಿ ಅದಕ್ಕೆ ಅವಕಾಶ ಮಾಡಿಕೊಡಲಿ.

- ಹೊನ್ನೂರು ಪ್ರಕಾಶ್‌, ರೈತ ಸಂಘದ ಜಿಲ್ಲಾಧ್ಯಕ್ಷ, ಚಾಮರಾಜನಗರ

ಹುಲಿ ಯೋಜನೆಯಾದರೆ ಅರಣ್ಯ ಇಲಾಖೆ ಗಿರಿಜನರನ್ನು ಒಕ್ಕಲೆಬ್ಬಿಸುತ್ತದೆ. ರಸ್ತೆ, ಮನೆ ನಿರ್ಮಾಣಕ್ಕೂ ಅವಕಾಶ ಕೊಡುವುದಿಲ್ಲ. ನಮ್ಮ ಹಬ್ಬ ಆಚರಣೆ, ಸಂಸ್ಕೃತಿ ಪಾಲನೆಗೂ ತೊಂದರೆಯಾಗುತ್ತದೆ.

-ಡಾ.ಸಿ.ಮಾದೇಗೌಡ, ಜಿಲ್ಲಾ ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ, ಚಾಮರಾಜನಗರ

ಕಾಡಿಗೂ ನಮಗೂ ಅವಿನಾಭಾವ ಸಂಬಂಧ. ನಮಗೆ ಕಾಡಿನಿಂದ ಹೊರಗಡೆ ಪುನರ್ವಸತಿ ಕಲ್ಪಿಸಿದ್ದಾರೆ. ಈಗ ಅರಣ್ಯಕ್ಕೆ ಹೋಗುವುದಕ್ಕೂ ಅವಕಾಶ ಕೊಡುವುದಿಲ್ಲ. ಕೂಲಿ ಮಾಡಿ ಜೀವನ ಸಾಗಿಸಬೇಕಾಗಿದೆ.

-ಪುಟ್ಟಮ್ಮ, ಕಾರೇಮಾಳ ಕಾಲೊನಿ, ಬಂಡೀಪುರ

ಭದ್ರಾ ಹುಲಿ ಯೋಜನೆ ವ್ಯಾಪ್ತಿಯಲ್ಲಿ 13 ಹಳ್ಳಿಗಳನ್ನು ಸ್ಥಳಾಂತರಿಸಿ ಅಚ್ಚುಕಟ್ಟಾಗಿ ಪುನರ್ವಸತಿ ಕಲ್ಪಿಸಿದ್ದಾರೆ. ವಸತಿ, ನೀರಾವರಿ ಜಮೀನು ಒದಗಿಸಿದ್ದಾರೆ. ಇದೊಂದು ಯಶಸ್ವಿ ಯೋಜನೆ.

-ಡಿ.ವಿ.ಗಿರೀಶ್‌, ಟ್ರಸ್ಟಿ, ಭದ್ರಾ ವೈಲ್ಡ್‌ಲೈಫ್‌ ಕನ್ಸರ್ವೆಷನ್‌ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT