ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ‘ಎ’ ಗ್ರೇಡ್ ಮನ್ನಣೆ; ಅನುದಾನಕ್ಕೆ ಕಡೆಗಣನೆ

ಎಷ್ಟು ದಿನ ಆಗುತ್ತದೆಯೋ ಅಷ್ಟು ದಿನ ನಡೆಸುತ್ತೇವೆ: ಕಡಿದಾಳ್‌ ಪ್ರಕಾಶ್
Last Updated 14 ಆಗಸ್ಟ್ 2022, 6:12 IST
ಅಕ್ಷರ ಗಾತ್ರ

ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವತೆ ಆಶಯಗಳನ್ನು ಪೋಷಿಸಿ ಬೆಳೆಸಲು ಕುಪ್ಪಳಿಯ ಕುವೆಂಪು ಪ್ರತಿಷ್ಠಾನ ರಚನೆಯಾಗಿದೆ. ಪ್ರತಿಷ್ಠಾನವು ಕುಪ್ಪಳಿಯ ಕವಿಮನೆ (ಮ್ಯೂಸಿಯಂ), ಶತಮಾನೋತ್ಸವ ಭವನ, ಕುವೆಂಪು ಸಮಾಧಿ ಸ್ಥಳ ಕವಿಶೈಲ, ಹಿರೇಕೂಡಿಗೆಯಲ್ಲಿರುವ ಕುವೆಂಪು ತಾಯಿ ಮನೆ (ಹುಟ್ಟಿದ ಮನೆ) ಹಾಗೂ ತೇಜಸ್ವಿ ಸ್ಮಾರಕಗಳ ನಿರ್ವಹಣೆ ಮಾಡುತ್ತಿದೆ.

ಸರ್ಕಾರದ ವಾರ್ಷಿಕ ನೆರವಿನ ಜೊತೆಗೆ ಪ್ರವೇಶ ಶುಲ್ಕ (ತಲಾ ₹ 10), ಕುವೆಂಪು ಪುಸ್ತಕಗಳ ಮಾರಾಟ, ದಾನಿಗಳ ನೆರವು ಪಡೆದು ದೈನಂದಿನ ಕಾರ್ಯಚಟುವಟಿಕೆ ನಿಭಾಯಿಸುತ್ತಿದೆ.

‘ಸರ್ಕಾರದ ಅನುದಾನದಲ್ಲಿ ಟ್ರಸ್ಟ್ ನಡೆಸಲು ಆಗದು. ಕಳೆದ ವರ್ಷ ನಮಗೆ ‘ಎ’ ಗ್ರೇಡ್ ನೀಡಿ ವಾರ್ಷಿಕ ₹ 15 ಲಕ್ಷ ಅನುದಾನ ಘೋಷಿಸಿದ್ದರು. ಮೊದಲ ಕಂತು ₹ 7.5 ಲಕ್ಷ ನೀಡಿದರು. ಎರಡನೇ ಕಂತನ್ನು ಕೊಡಲೇ ಇಲ್ಲ‘ ಎಂದು ಪ್ರತಿಷ್ಠಾನದ ಅಧ್ಯಕ್ಷ ಕಡಿದಾಳ್ ಪ್ರಕಾಶ್ ಹೇಳುತ್ತಾರೆ.

‘ಇಲ್ಲಿರುವ 12 ಜನ ಸಿಬ್ಬಂದಿಯ ವೇತನಕ್ಕೆ ವಾರ್ಷಿಕ ₹ 16 ಲಕ್ಷ ಬೇಕಿದೆ. ಮೊದಲು ಮಾಡಿಕೊಂಡಿದ್ದ ಉಳಿತಾಯ ಈಗ ಖಾಲಿಯಾಗುತ್ತಾ ಬರುತ್ತಿದೆ. ಸರ್ಕಾರ ಕೊಡುವ ಹಣದಲ್ಲಿ ಮೂರು ತಿಂಗಳ ಅವಧಿಯ ನಿರ್ವಹಣೆಯೂ ಅಸಾಧ್ಯ. ಈ ವರ್ಷ (2022–23) ಏನೂ ಕೊಟ್ಟಿಲ್ಲ. ಎಷ್ಟು ದಿನ ಆಗುತ್ತದೋ ಅಷ್ಟು ದಿನ ನಡೆಸಿ ನಿಲ್ಲಿಸಬೇಕಾಗುತ್ತದೆ‘ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ಎಸ್.ನಿಜಲಿಂಗಪ್ಪ ಟ್ರಸ್ಟ್, ಚಿತ್ರದುರ್ಗ: ‘ಮೊದಲು ₹ 15 ಲಕ್ಷ, ನಂತರ ₹ 12 ಲಕ್ಷ, ಬಳಿಕ ₹ 10 ಲಕ್ಷ... ಹೀಗೆ ಒಂದೊಂದು ಪಕ್ಷದ ನೇತೃತ್ವದ ಸರ್ಕಾರ ಒಂದೊಂದು ರೀತಿ ಅನುದಾನ ಬಿಡುಗಡೆ ಮಾಡುತ್ತಿದೆ. ಈ ವರ್ಷ ಅದೂ ಇಲ್ಲ‘ ಎಂದು ಚಿತ್ರದುರ್ಗದ ಎಸ್‌.ನಿಜಲಿಂಗಪ್ಪ ಟ್ರಸ್ಟ್‌ನ ಕಾರ್ಯದರ್ಶಿ ಷಣ್ಮುಖಪ್ಪ ಹೇಳುತ್ತಾರೆ.

‘ಈಗ ಟ್ರಸ್ಟ್‌ನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಐದು ಜನ ಸಿಬ್ಬಂದಿಗೆ ವೇತನ, ವಿದ್ಯುತ್ ಬಿಲ್ ಸೇರಿ ತಿಂಗಳಿಗೆ ಕನಿಷ್ಠ ₹ 50,000 ಬೇಕು. ರಾಜ್ಯದಲ್ಲಿ ಅತ್ಯಂತ ಚೆನ್ನಾಗಿ ನಡೆಯುತ್ತಿರುವ ಟ್ರಸ್ಟ್ ಎಂದು ಸರ್ಕಾರ ನಮಗೆ ಶಹಬ್ಬಾಸ್‌ಗಿರಿ ನೀಡಿದೆ. ಆದರೆ ನಾವು ಕೈಯಿಂದ ಖರ್ಚು ಮಾಡುತ್ತಿದ್ದೇವೆ’ ಎಂದು ಅವರು ತಿಳಿಸುತ್ತಾರೆ.

ಡಿವಿಜಿ ಪ್ರತಿಷ್ಠಾನ: ಕೋಲಾರದಲ್ಲಿರುವ ಡಿವಿಜಿ ಪ್ರತಿಷ್ಠಾನಕ್ಕೆ 2017–18ನೇ ಸಾಲಿನಲ್ಲಿ ಅನುದಾನ ಬಿಡುಗಡೆಯಾಗಿದ್ದೇ ಕೊನೆ. ಬಳಿಕ ಅನುದಾನ ಸಿಕ್ಕಿಲ್ಲ. ಪ್ರಸಕ್ತ ಸಾಲಿನಲ್ಲಿ ₹ 3 ಲಕ್ಷ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರೂ ಇದುವರೆಗೆ ಕೈಸೇರಿಲ್ಲ. 2013ರಲ್ಲಿ ಈ ಪ್ರತಿಷ್ಠಾನ ಆರಂಭಿಸಲಾಗಿದ್ದು, ಡಿ.ವಿ.ಗುಂಡಪ್ಪ ಅವರ ಸಾಹಿತ್ಯ ಪ್ರಚಾರ ಪಡಿಸುವುದು ಇದರ ಉದ್ದೇಶ.

ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌: ಕೋಲಾರದಲ್ಲಿ ಡಾ.ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌ ಸಕ್ರಿಯವಾಗಿದೆ. ಜೂನ್‌ 6ರಂದು ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿಯಲ್ಲಿ ಜಿಲ್ಲಾಡಳಿತದಿಂದ ಅದ್ದೂರಿಯಾಗಿ ಮಾಸ್ತಿ ಅವರ ಜನ್ಮದಿನ ಆಚರಿಸಲಾಯಿತು. 1997ರಲ್ಲಿ ಆರಂಭವಾದ ಟ್ರಸ್ಟ್‌ಗೆ ಈ ಬಾರಿ ₹ 4 ಲಕ್ಷ ಅನುದಾನ ಬಿಡುಗಡೆಯಾಗಿದೆ. ಯುವ ಕವಿ, ಮುದ್ರಕರು, ಪ್ರಕಾಶಕರನ್ನು ಪ್ರೋತ್ಸಾಹಿಸಲು ಪ್ರತಿ ವರ್ಷ ‘ಮಾಸ್ತಿ ಪ್ರಶಸ್ತಿ’ ಕೊಡಮಾಡಲಾಗುತ್ತಿದೆ.

(ಪೂರಕ ಮಾಹಿತಿ: ಜಿ.ಬಿ.ನಾಗರಾಜ್, ಓಂಕಾರಮೂರ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT