ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ನದಿಗಳ ಮಲಿನದ ಜಾಡು ಹಿಡಿದು...: ಹೀಗಿವೆ ಸ್ವಾಮಿ, ತೀರ್ಥಕ್ಷೇತ್ರಗಳು!

Last Updated 29 ಫೆಬ್ರುವರಿ 2020, 20:37 IST
ಅಕ್ಷರ ಗಾತ್ರ
ADVERTISEMENT
""

ತೀರ್ಥಕ್ಷೇತ್ರಗಳಿಗೆ ತೆರಳುವ ಭಕ್ತರು ನದಿಯಲ್ಲಿ ಮುಳುಗಿ ಎದ್ದ ಬಳಿಕ ತೊಟ್ಟ ಬಟ್ಟೆಯನ್ನು ನೀರಿನಲ್ಲಿಯೇ ಬಿಡುವ ಮೌಢ್ಯಕ್ಕೆ ಅಂಟಿಕೊಂಡಿದ್ದಾರೆ. ಇದರಿಂದಾಗಿ ನದಿಗಳ ದಡದಲ್ಲಿ ಬಟ್ಟೆಗಳ ರಾಶಿಯೇ ಕಾಣುತ್ತದೆ. ಪಿತೃಕರ್ಮ ನೆರವೇರಿಸುವವರು ನದಿ ನೀರಿನಲ್ಲಿ ಮಡಿಕೆ, ಬೂದಿ ಮತ್ತಿತರ ವಸ್ತುಗಳನ್ನು ಚೆಲ್ಲುತ್ತಾರೆ. ರಾಸಾಯನಿಕಗಳೇ ತುಂಬಿರುವ ಕುಂಕುಮ, ಊದುಬತ್ತಿ ಮತ್ತು ಪ್ಲಾಸ್ಟಿಕ್‌ ಕೂಡ ನದಿ ನೀರಿಗೇ ಸೇರುತ್ತವೆ. ಇದರಿಂದ ನೀರಿನ ಬಣ್ಣವೇ ಬದಲಾಗುತ್ತಿದೆ. ಇದರಿಂದ ರಾಜ್ಯದ ಪ್ರಮುಖ ತೀರ್ಥಕ್ಷೇತ್ರಗಳ ಸ್ಥಿತಿ ಹೀಗಾಗಿದೆ ನೋಡಿ...

**

ಶ್ರೀರಂಗಪಟ್ಟಣ
ಪಶ್ಚಿಮವಾಹಿನಿಯಲ್ಲಿ ಪಿಂಡ ಪ್ರದಾನ; ಸೋಪಾನಕಟ್ಟೆ, ನಿಮಿಷಾಂಬ, ಸಂಗಮದಲ್ಲಿ ಪವಿತ್ರಸ್ನಾನ ಜೊತೆಗೆ ನದಿ ನೀರಿನೊಂದಿಗೆ ಪಟ್ಟಣದ ಕೊಳಚೆ ನೀರು ವಿಲೀನ! ಇದು ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿ ಮಲಿನಗೊಳ್ಳುತ್ತಿರುವ ಪರಿ. ಈ ನದಿಯ ನೀರು ಬಟ್ಟೆ ಒಗೆಯಲೂ ಯೋಗ್ಯವಾಗಿಲ್ಲ ಎನ್ನುವುದು ಅಧ್ಯಯನಗಳಿಂದ ಸಾಬೀತಾಗಿದೆ. ಶ್ರೀರಂಗಪಟ್ಟಣ ಪುರಸಭೆ ₹ 5 ಕೋಟಿ ವೆಚ್ಚದಲ್ಲಿ ಒಳಚರಂಡಿಯನ್ನು ನಿರ್ಮಿಸಿದೆ. ಆದರೆ, ಆ ನೀರು ಸಂಸ್ಕರಣೆಗೊಳ್ಳದೆ ನೇರವಾಗಿ ನದಿಗೆ ಹರಿಯುತ್ತಿದೆ.

ನಂಜನಗೂಡು
ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಎದುರಿನಲ್ಲೇ ಹರಿಯುವ ಕಪಿಲಾ ನದಿಯಲ್ಲಿ ಭಕ್ತರೇನೋ ಮಿಂದೇಳುತ್ತಾರೆ. ಆದರೆ, ಈ ನೀರು ಸ್ನಾನಕ್ಕೂ ಯೋಗ್ಯವಲ್ಲದ ಸ್ಥಿತಿ ತಲುಪಿದೆ. ನಂಜನಗೂಡು ಕೈಗಾರಿಕಾ ಪ್ರದೇಶದ ನೂರಾರು ಕೈಗಾರಿಕೆಗಳಿಂದ ಹೊರಬೀಳುವ ತ್ಯಾಜ್ಯ ಈ ನದಿಯ ಒಡಲು ಸೇರುತ್ತಿದೆ. ವರ್ಷದಲ್ಲಿ ಎರಡು ಬಾರಿ ಶಬರಿಮಲೆಗೆ ತೆರಳುವ ಭಕ್ತರು ಅಯ್ಯಪ್ಪನ ಮಾಲೆ, ಕಪ್ಪುವಸ್ತ್ರ ಕಳಚಿ ನದಿಗೆ ಎಸೆಯುತ್ತಾರೆ. ತಟದಲ್ಲಿರುವ ಸಾರ್ವಜನಿಕ ಶೌಚಾಲಯಗಳ ಮಲ, ಮೂತ್ರವೂ ನದಿಯನ್ನೇ ಸೇರುತ್ತಿದೆ. ಸ್ನಾನಘಟ್ಟದಲ್ಲಿ ಬಟ್ಟೆ ತೊಳೆಯುವುದು ನಿಂತಿಲ್ಲ.

ಶೃಂಗೇರಿ
ತುಂಗಾ–ಭದ್ರಾ ನದಿಗಳು ಹರಿಯುವ ಪಾತ್ರದುದ್ದಕ್ಕೂ ತ್ಯಾಜ್ಯ ಸೇರ್ಪಡೆಗೊಳ್ಳುತ್ತಲೇ ಇದೆ. ಧಾರ್ಮಿಕ ಕ್ಷೇತ್ರ ಶೃಂಗೇರಿಯಲ್ಲಿ ಕೊಳಚೆ ನೀರು ಸೀದಾ ತುಂಗಾ ನದಿಗೆ ಸೇರುತ್ತಿದೆ. ಈ ಪಟ್ಟಣದಲ್ಲಿ ಒಳಚರಂಡಿ ವ್ಯವಸ್ಥೆ, ಎಸ್‌ಟಿಪಿ ಘಟಕಗಳಿಲ್ಲ. ಚರಂಡಿ ಗಲೀಜು, ವಾಹನ ತೊಳೆದ ನೀರು, ಹೋಟೆಲ್‌, ವಸತಿ ಗೃಹಗಳ ತ್ಯಾಜ್ಯ, ಸುಲಭ್‌ ಶೌಚಾಲಯದ ಕೊಳಚೆ ಎಲ್ಲವೂ ನದಿಗೆ ಸೇರುತ್ತಿವೆ. ಹೊರನಾಡು ಕ್ಷೇತ್ರದ ಕೊಳಕು ಭದ್ರಾ ಒಡಲಿಗೆ ಸೇರುತ್ತಿದೆ. ಕಳಸ ‍ಪಟ್ಟಣದ ಕಸ ಸಂಗ್ರಹಾಗಾರದ ತ್ಯಾಜ್ಯವೂ ನದಿಗೆ ಸೇರುತ್ತದೆ.

ಧರ್ಮಸ್ಥಳ
ಧರ್ಮಸ್ಥಳದಲ್ಲಿ ವಾಕ್ ದೋಷ ಪರಿಹಾರ, ಮುಡಿ ಒಪ್ಪಿಸುವುದು ಇತ್ಯಾದಿ ಸೇವೆಗಳನ್ನು ಮಾಡುವ ಭಕ್ತರು ಮೊದಲು ನೇತ್ರಾವತಿ ಸ್ನಾನಘಟ್ಟದಲ್ಲಿ ಸ್ನಾನ ಮಾಡಿ ಹೋಗುವ ಸಂಪ್ರದಾಯ ಬೆಳೆದು ಬಂದಿದೆ. ಇಲ್ಲಿ ಪ್ರತಿನಿತ್ಯ ಸುಮಾರು 25 ಸಾವಿರ ಮಂದಿ ಪುಣ್ಯಸ್ನಾನ ಮಾಡುತ್ತಾರೆ. ಶಿವರಾತ್ರಿ, ಲಕ್ಷ ದೀಪೋತ್ಸವ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರಿರುತ್ತಾರೆ. ಬಟ್ಟೆ, ದೇವರ ಫೋಟೊ ಹಾಗೂ ಬೇಡದ ವಸ್ತುಗಳನ್ನು ನದಿಗೆ ಹಾಕುವುದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಿದೆ. ಕುಕ್ಕೆಯಲ್ಲಿ ದರ್ಪಣತೀರ್ಥ ಹಾಗೂ ಕುಮಾರಧಾರ ನದಿಗಳಿವೆ. ಅಲ್ಲಿಯೂ ಇದೇ ಸ್ಥಿತಿಯಿದೆ.

ಕೊಲ್ಲೂರು
ಕೊಲ್ಲೂರು ಮೂಕಾಂಬಿಕಾ ದೇಗುಲದ ಸಮೀಪ ಹರಿಯುವ ಸೌಪರ್ಣಿಕಾ ನದಿಯ ಒಡಲೂ ಕಲುಷಿತಗೊಂಡಿದೆ. ನದಿಯ ತಟದಲ್ಲಿ ತಲೆ ಎತ್ತಿರುವ ಕಟ್ಟಡಗಳು ಹಾಗೂ ವಸತಿ ಸಮುಚ್ಚಯಗಳ ತ್ಯಾಜ್ಯ ನದಿಗೆ ಬಂದು ಸೇರುತ್ತಿದೆ. ಚರ್ಮವ್ಯಾಧಿ ಗುಣಪಡಿಸುವ ಶಕ್ತಿ ಈ ನದಿಗೆ ಇದೆ ಎಂದು ಜನ ನಂಬಿದ್ದರು. ಆದರೆ, ಈಗ ಈ ನದಿಯಲ್ಲಿ ಸ್ನಾನ ಮಾಡಿದರೆ ಚರ್ಮವ್ಯಾಧಿ ಬರುತ್ತದೆ ಎಂದು ಪರಿಸರತಜ್ಞರು ಹೇಳುತ್ತಾರೆ.

ಗಾಣಗಾಪುರ
ಅಫಜಲಪುರ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದೇವಲ ಗಾಣಗಾಪುರದ ಪಕ್ಕ ಭೀಮಾ ನದಿಯು ಹಾದು ಹೋಗುತ್ತದೆ. ದೇವಸ್ಥಾನಕ್ಕೆ ಬರುವುದಕ್ಕೂ ಮುನ್ನ ಜನ ಭೀಮಾ ನದಿಯಲ್ಲಿ ಪವಿತ್ರಸ್ನಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಹಳೆಯ ಸೀರೆಗಳು, ಧೋತಿ, ಮತ್ತಿತರ ಬಟ್ಟೆಗಳನ್ನು ನದಿಯಲ್ಲಿಯೇ ಬಿಸಾಕುತ್ತಾರೆ.

‘ಬಟ್ಟೆಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ’ ಎಂಬ ಫಲಕವೇನೋ ಇದೆ. ಅದರ ಸುತ್ತಲೂ ಕಸವನ್ನು ಹಾಕಲಾಗಿದೆ!

ತೆಂಗಿನಕಾಯಿ, ಬಿದಿರಿನ ಬುಟ್ಟಿಗಳನ್ನು ಎಸೆಯಲೂ ಭೀಮಾ ನದಿಯೇ ಭಕ್ತರ ಪಾಲಿಗೆ ಪ್ರಶಸ್ತ ತಾಣವಾಗಿದೆ. ನದಿಯಲ್ಲಿ ನೀರಿಲ್ಲದಾಗ ಅವ್ಯಾಹತವಾಗಿ ಅಕ್ರಮ ಮರಳು ದಂಧೆ ನಡೆಯುತ್ತದೆ. ರಾತ್ರಿ ವೇಳೆಯಲ್ಲಿ ಮರಳು ಎತ್ತುವ ದಂಧೆಕೋರರು ತ್ಯಾಜ್ಯವನ್ನು ಪಕ್ಕಕ್ಕೆ ಸರಿಸಿ ಮರಳನ್ನು ಒಯ್ಯುತ್ತಾರೆ.

ಮಾಲಿನ್ಯ ಮಾಪನ ವಿಧಾನ
ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯು 1990ರಿಂದ ನದಿಗಳ ನೀರಿನ ಗುಣಮಟ್ಟ ಮಾಪನ ಮಾಡುತ್ತಿದೆ. ಒಂದು ಲೀಟರ್‌ ನೀರಿನಲ್ಲಿ ಪತ್ತೆಯಾಗುವ ಬಿಒಡಿ (ಬಯೊಕೆಮಿಕಲ್‌ ಆಕ್ಸಿಜನ್‌ ಡಿಮಾಂಡ್‌) ಪ್ರಮಾಣದ ಆಧಾರದಲ್ಲಿ ಮಾಲಿನ್ಯವನ್ನು ಲೆಕ್ಕ ಹಾಕಲಾ ಗುತ್ತದೆ. ಬಿಒಡಿ ಪ್ರಮಾಣ ಹೆಚ್ಚು ಇದ್ದಷ್ಟು ಮಾಲಿನ್ಯವೂ ಹೆಚ್ಚು ಎಂದರ್ಥ. ನದಿಯ ನೀರಿನಲ್ಲಿ ಬಿಒಡಿಯ ಪ್ರಮಾಣವು 3 ಎಂ.ಜಿ.(ಒಂದು ಲೀಟರ್‌ ನೀರಿನಲ್ಲಿ) ಅಥವಾ ಅದಕ್ಕಿಂತ ಕಡಿಮೆ ಇದ್ದರೆ ಅಂಥ ನದಿಯನ್ನು ಆರೋಗ್ಯವಂತ ನದಿ ಎಂದು ಸಿಪಿಸಿಬಿ ತೀರ್ಮಾನಿಸುತ್ತದೆ. ಇದರ ಪ್ರಮಾಣವು 30 ಎಂ.ಜಿ. ಮೀರಿದರೆ ಅಂಥ ನದಿ ಯನ್ನು ಗರಿಷ್ಠ ಆದ್ಯತಾ ಪಟ್ಟಿಗೆ ಸೇರಿಸಲಾಗುತ್ತದೆ. ಅರ್ಕಾವತಿಯಲ್ಲಿ ಗರಿಷ್ಠ (14) ಬಿಒಡಿ ಪ್ರಮಾಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT