ಪೂರ್ಣಚಂದ್ರ ತೇಜಸ್ವಿ ಅವರ ‘ತಬರನ ಕಥೆ’ ಕೃತಿ ಓದುವ ಬಹುಪಾಲು ಜನರು ಅದರ ನಾಯಕ ತಬರನಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವುದು ಸುಳ್ಳಲ್ಲ. ಬ್ರಿಟಿಷರ ಕಾಲದಲ್ಲಿ ಜವಾನನಾಗಿ ಸೇರಿಕೊಂಡು ಸ್ವತಂತ್ರ ಭಾರತದಲ್ಲಿ ನಿವೃತ್ತನಾಗುತ್ತಾನೆ ತಬರ. ತನಗೆ ಸಿಗಬೇಕಿದ್ದ ಪಿಂಚಣಿಗಾಗಿ ವರ್ಷಾನುಗಟ್ಟಲೆ ಅಲೆದು ಹೈರಾಣಾಗುವ ಆತ, ಪಿಂಚಣಿ ಮಂಜೂರು ಆಗುವ ಹೊತ್ತಿಗೆ ಅರೆಹುಚ್ಚನಾಗಿರುತ್ತಾನೆ.

ಇದು 1980ರ ದಶಕದ ಕಥೆ. ಇಂದಿಗೂ ವ್ಯವಸ್ಥೆಯೇನೂ ಬದಲಾಗಿಲ್ಲ. ಪಿಂಚಣಿಗಾಗಿ ಅಲ್ಲದಿದ್ದರೂ ಚಿಕ್ಕಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗೆ ಹೋದಾಗ ಬಹುತೇಕರಿಗೆ ‘ತಬರ’ನ ಅನುಭವ ಆಗುತ್ತದೆ. ಇನ್ನು ಕೋರ್ಟ್ನಲ್ಲಿ ದಾಖಲಾಗುತ್ತಿರುವ ಪ್ರಕರಣಗಳತ್ತ ದೃಷ್ಟಿ ಹಾಯಿಸಿದರೂ ಸಾಕು ನಮ್ಮ ವ್ಯವಸ್ಥೆಯ ಲೋಪ ಕಣ್ಣಿಗೆ ರಾಚುತ್ತದೆ.

ಇಂಥದ್ದೇ ಒಂದು ಉದಾಹರಣೆಗೆ ಮೊನ್ನೆ ಮದ್ರಾಸ್ ಹೈಕೋರ್ಟ್ ಸಾಕ್ಷಿಯಾಯಿತು. ಅದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿ.ಗಾಂಧಿ (87) ಅವರ ಪಿಂಚಣಿಯ ಕೇಸು. ಇವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುವುದಕ್ಕೆ ಬಲವಾದ ದಾಖಲೆಗಳು ಇದ್ದವು. ಆದರೆ ಜನ್ಮ ದಿನಾಂಕದಲ್ಲಿ ಎರಡು ಕಡೆ ವ್ಯತ್ಯಾಸವಿದ್ದದ್ದನ್ನೇ ಮುಂದು ಮಾಡಿ 37 ವರ್ಷ ಅಲೆದಾಡಿಸಿಯೂ ಪಿಂಚಣಿ ನೀಡದ ಅಧಿಕಾರಿಗಳ ಜಡತ್ವಕ್ಕೆ ಕೋರ್ಟ್ ಕಿಡಿ ಕಾರಿತು. ಇಂಥ ಹೋರಾಟಗಾರನಿಗೆ ಉಂಟಾದ ನೋವಿಗಾಗಿ ಗಾಂಧಿ ಅವರ ಬಳಿ ನ್ಯಾಯಮೂರ್ತಿಗಳೇ ಕ್ಷಮೆ ಕೋರಿದರು.

ಗಾಂಧಿ ಅವರು ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ಹುಟ್ಟುಹಾಕಿದ್ದ ಭಾರತೀಯ ರಾಷ್ಟ್ರೀಯ ಸೇನೆಯಲ್ಲಿ ಭಾಗವಹಿಸಿ, ಜೈಲು ವಾಸವನ್ನೂ ಅನುಭವಿಸಿ ಬಂದವರು. ಇದರ ಬಗ್ಗೆ ಎಲ್ಲಾ ದಾಖಲೆಗಳೂ ಇದ್ದವು. ಇವರ ಹೋರಾಟದ ಬಗ್ಗೆ ಲಕ್ಷ್ಮಿ ಸೆಹಗಲ್ ಅವರೇ ಪ್ರಮಾಣ ಪತ್ರವನ್ನೂ ನೀಡಿದ್ದರು. ಇವೆಲ್ಲ ಇದ್ದರೂ ಕ್ಷುಲ್ಲಕ ಕಾರಣಕ್ಕೆ ಅವರನ್ನು ಅಲೆದಾಡುವಂತೆ ಮಾಡಲಾಗಿತ್ತು.

ಕೊನೆಯ ಹಂತವಾಗಿ ಗಾಂಧಿ ಕೋರ್ಟ್ ಮೆಟ್ಟಿಲೇರಿದ್ದರು. ಸರ್ಕಾರದ ಕರ್ತವ್ಯಲೋಪಕ್ಕೆ ನ್ಯಾಯಮೂರ್ತಿಗಳೇ ದಂಗಾಗಿ ಹೋದರು. ಗಾಂಧಿ ಅವರಿಗೆ ಸಿಗಬೇಕಿರುವ ಪೂರ್ತಿ ಹಣವನ್ನು ನಾಲ್ಕು ವಾರಗಳ ಒಳಗೆ ನೀಡುವಂತೆ ಆದೇಶಿಸಿದರು. ಕೋರ್ಟ್ ಆದೇಶವನ್ನು ಎಷ್ಟರಮಟ್ಟಿಗೆ ಸರ್ಕಾರ ಪಾಲಿಸುತ್ತದೆ ಎನ್ನುವುದು ಮುಂದಿನ ಪ್ರಶ್ನೆ.

ಇಂಥ ಪ್ರಕರಣಗಳಲ್ಲಿ ಕೋರ್ಟ್ಗಳು ಭ್ರಷ್ಟ ಅಧಿಕಾರಿಗಳಿಗೆ ಛೀಮಾರಿ ಹಾಕಿಯೋ, ಸಂತ್ರಸ್ತರ ಬಳಿ ಕ್ಷಮೆ ಕೋರಿಯೋ (ಕಳೆದ ಆಗಸ್ಟ್ನಲ್ಲಿ ವಿಮೆಯ ಹಣಕ್ಕಾಗಿ 24 ವರ್ಷ ಅಲೆದಾಡಿದ ಬಕ್ಕಿಯಾಮ್ ಎಂಬ ಮಹಿಳೆಗೂ ಇದೇ ಕೋರ್ಟ್ ಕ್ಷಮೆ ಕೇಳಿತ್ತು) ಅರ್ಜಿದಾರರಿಗೆ ನ್ಯಾಯ ಒದಗಿಸುತ್ತವೆ. ಇಂಥವರಿಗೆ ಕೊನೆಗಾದರೂ ನ್ಯಾಯ ಸಿಕ್ಕಿತಲ್ಲ
ಎನ್ನುವುದು ಖುಷಿಯ ವಿಚಾರವೇ. ಆದರೆ ಜಡ್ಡುಹಿಡಿದು ಕೂತಿರುವ ಅಧಿಕಾರಿಗಳಿಗೆ ಬರೀ ಛೀಮಾರಿ ಹಾಕಿದರೆಷ್ಟು... ಬಿಟ್ಟರೆಷ್ಟು?

ನಮ್ಮ ಹೈಕೋರ್ಟನ್ನೇ ತೆಗೆದುಕೊಳ್ಳುವುದಾದರೆ ನಿತ್ಯವೂ ಒಬ್ಬರಲ್ಲ ಒಬ್ಬ ಅಧಿಕಾರಿ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇದ್ದಾರೆ. 2017ರ ಫೆಬ್ರುವರಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದ ಕೋರ್ಟ್, ‘ಸುಮ್ಮನೆ ಕುಳಿತು ಸರ್ಕಾರಿ ಸಂಬಳ ಪಡೆಯುವ ಅಧಿಕಾರಿಗಳ ಅಗತ್ಯವಿಲ್ಲ’ ಎಂದಿತ್ತು. ಇದೇ ಜನವರಿ ತಿಂಗಳಿನಲ್ಲಿ ವರ್ಗಾವಣೆಗೆ ಸಂಬಂಧಿಸಿದ ವಿಚಾರಣೆ ವೇಳೆ ಕೋರ್ಟ್, ‘ಅಧಿಕಾರಿಗಳು ಕೆಲಸ ಮಾಡದೇ ಸಂಬಳ ಪಡೆಯುತ್ತಿದ್ದಾರೆ’ ಎಂದಿತ್ತು. ಆದರೆ ಕೋರ್ಟ್ನಲ್ಲಿ ತಲೆಬಗ್ಗಿಸಿ ನಿಲ್ಲುವ ಇಂಥ ಅಧಿಕಾರಿಗಳು, ಕೋರ್ಟ್ ಆಚೆಗೆ ಬಂದ ತಕ್ಷಣ ಮೈಯನ್ನೊಮ್ಮೆ ಕೊಡವಿ ನಿರಾಳರಾಗುತ್ತಾರೆ. ಛೀಮಾರಿಗೆ ಅವರು ಬಗ್ಗಿದ್ದರೆ ಇಷ್ಟೊತ್ತಿಗೆ ನಮ್ಮ ವ್ಯವಸ್ಥೆ ಸರಿಯಾಗಬೇಕಿತ್ತಲ್ಲವೇ?

ಈ ಸಂದರ್ಭದಲ್ಲಿ ಉಡುಪಿಯ ಅಕ್ಕು ಮತ್ತು ಲೀಲಾ ನೆನಪಾಗುತ್ತಾರೆ. 40 ವರ್ಷಗಳ ಅವರ ಹೋರಾಟ ನಮ್ಮ ಇಡೀ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಇವರಿಬ್ಬರೂ ಉಡುಪಿಯ
ಸರ್ಕಾರಿ ಹೆಣ್ಣುಮಕ್ಕಳ ತರಬೇತಿ ಕೇಂದ್ರದಲ್ಲಿ ತಿಂಗಳಿಗೆ 15 ರೂಪಾಯಿ ಮೂಲ ವೇತನದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೊದಲು ‘ಸೇವೆ ಕಾಯಂ ಮಾಡಿ’ ಎಂದೂ, ನಂತರ ‘ಸಂಬಳದ ಹಣ ಮಂಜೂರು ಮಾಡಿ’ ಎಂದೂ, ನಂತರ ‘ಪಿಂಚಣಿ ಹಣ ನೀಡಿ’ ಎಂದೂ ಹೀಗೆ... ಸುಮಾರು ನಾಲ್ಕು ದಶಕ ಹೋರಾಡುತ್ತಲೇ ಬಂದರು. ಸರ್ಕಾರಿ ಕಚೇರಿ ಸುತ್ತಿ ಸುತ್ತಿ ದಣಿದು ನಂತರ ನ್ಯಾಯ ಕೋರಿ ಕೋರ್ಟ್ಗೆ ಹೋದರು.

ಸುಪ್ರೀಂ ಕೋರ್ಟ್ನಲ್ಲೂ ಅವರ ಪರವಾಗಿಯೇ ತೀರ್ಪು ಬಂತು. ಆದರೆ ಪಿಂಚಣಿ ಹಣ ಬಿಡುಗಡೆ ಆಗಲಿಲ್ಲ. ಇಂಥ ದಟ್ಟ ದರಿದ್ರ ವ್ಯವಸ್ಥೆಯಲ್ಲಿ ನಲುಗಿದ ಈ ಹಿರಿಯ ಜೀವಗಳಿಗೆ ನ್ಯಾಯ ಒದಗಿಸಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಪಟ್ಟ ಪಡಿಪಾಟಲನ್ನು ಅದರ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನಭಾಗ್ ಅವರಿಂದಲೇ ಕೇಳಬೇಕು. ಕೊನೆಗೂ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲುಮಾಡಿದ ನಂತರ ಅವರಿಗೆ ಬಾಕಿ ಹಣ ಸಿಕ್ಕಿತು.

ಇವು ಕೆಲವು ಉದಾಹರಣೆಗಳಷ್ಟೇ. ಇಂಥ ಸಾವಿರ ಸಾವಿರ ನಿದರ್ಶನಗಳು ನಮ್ಮ ಕಣ್ಣಮುಂದಿವೆ. ಇಷ್ಟೆಲ್ಲಾ ಆದರೂ ‘ಅಂತಿಮ ದಿಕ್ಕು’ ಎಂದುಕೊಳ್ಳುವ ಕೋರ್ಟ್ಗಳು
ಅಧಿಕಾರಿಗಳಿಗೆ ಬರೀ ಮಾತಿನಿಂದ ಬಿಸಿ ಮುಟ್ಟಿಸಿ ಸುಮ್ಮನಿದ್ದರೆ ಸಾಲದು. ಸದ್ಯ ನಮ್ಮಲ್ಲಿರುವ ವ್ಯವಸ್ಥೆಯೆಂದರೆ (ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಬಿಟ್ಟರೆ) ಯಾರು ಸಂತ್ರಸ್ತರೋ ಅವರು ಕೋರ್ಟ್ಗೆ ಅರ್ಜಿ ಸಲ್ಲಿಸಬೇಕು; ಬೇರೆ ಕೇಸುಗಳಲ್ಲಿ ಬಂದಿರುವ ತೀರ್ಪಿನ ಪ್ರತಿಯನ್ನು ಹಿಡಿದು ತಮಗೂ ಅದರಂತೆಯೇ ನ್ಯಾಯ ಕೊಡಿಸಿ ಎಂದು ಕೋರ್ಟ್ ಬಾಗಿಲಿಗೆ ಹೋಗಬೇಕು. ದಾಖಲೆಗಳನ್ನು ಹಿಡಿದು, ವಕೀಲರಿಗಾಗಿ ಹುಡುಕಾಡಿ ಅವರು ಕೇಳಿದಷ್ಟು ಶುಲ್ಕ ಕೊಟ್ಟು, ಕೋರ್ಟ್ಗೆ ಇನ್ನೊಂದಿಷ್ಟು ವರ್ಷ ಅಲೆದಾಡುವ ಬದಲು ಕೋರ್ಟ್ ಸಾರ್ವತ್ರಿಕವಾಗಿ ತೀರ್ಪು ನೀಡುವುದು ಇಂದಿನ ಅನಿವಾರ್ಯವಾಗಿದೆ. ಕೋರ್ಟ್ ಒಂದನ್ನು ಬಿಟ್ಟು ಬೇರೆ ಯಾವ ಚಾಟಿಯೂ ಇಂಥ ಮೈಗಳ್ಳರನ್ನು ಸರಿಮಾಡಲು ಸಾಧ್ಯವಿಲ್ಲ.

ಗಾಂಧಿಯಂಥವರೋ, ಬಕ್ಕಿಯಾಮ್ ಅಂಥವರೋ ಇಲ್ಲಾ ಅಕ್ಕು-ಲೀಲಾನಂಥವರೋ ಸಲ್ಲಿಸುವ ಅರ್ಜಿಗಳನ್ನು ಇತ್ಯರ್ಥಗೊಳಿಸುವಾಗ ಕೋರ್ಟ್ಗಳು, ಸರ್ಕಾರಿ ಕಚೇರಿಗಳಲ್ಲಿ ದೂಳು ತಿನ್ನುತ್ತ ಕುಳಿತಿರುವ ದಾಖಲೆಗಳನ್ನು ಕೊಡವಿಎಲ್ಲಾ ಅರ್ಜಿಗಳನ್ನು ಇಂತಿಷ್ಟು ಸಮಯದೊಳಗೆ ಇತ್ಯರ್ಥಗೊಳಿಸಿ ಎಂದು ಆದೇಶಿಸಬೇಕಿದೆ. ಆದೇಶ ಪಾಲನೆ ಮಾಡುವವರೆಗೆ ಸಂಬಂಧಪಟ್ಟ ಅಧಿಕಾರಿಗಳ ವೇತನದಲ್ಲಿ ಇಂತಿಷ್ಟು ಭಾಗವನ್ನು ತಡೆಹಿಡಿದು, ಆದೇಶ ಪಾಲನೆಯಾದ ಮೇಲಷ್ಟೇ ಆ ಹಣವನ್ನು ಬಿಡುಗಡೆ ಮಾಡುವಂತೆಯೂ ಆದೇಶ ಹೊರಡಿಸಬೇಕಿದೆ. ಆಗಮಾತ್ರ ಅಧಿಕಾರಿಗಳಿಗೆ ಸರಿಯಾಗಿ ಬಿಸಿ ಮುಟ್ಟುತ್ತದೆ, ಕೋರ್ಟ್ನಲ್ಲಿ ದಾಖಲಾಗುವ ಕೇಸುಗಳ ಸಂಖ್ಯೆಯೂ ಇಳಿಮುಖವಾಗುತ್ತದೆ, ಮೇಲಾಗಿ ಇನ್ನೂ ನೂರಾರು ಮಂದಿ ‘ತಬರ’ನಂತಾಗುವುದು ತಪ್ಪುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.