ಗುರುವಾರ , ಅಕ್ಟೋಬರ್ 29, 2020
26 °C
ಅನುಚಿತ, ಉತ್ಪ್ರೇಕ್ಷಿತ ಜಾಹೀರಾತುಗಳಿಗೆ ತಟ್ಟಲಿದೆ ನಿಯಮದ ಬಿಸಿ

ಸಂಗತ: ಜಾಹೀರಾತಿಗೂ ಇದೆ ಲಗಾಮು

ವೈ.ಜಿ.ಮುರಳೀಧರನ್ Updated:

ಅಕ್ಷರ ಗಾತ್ರ : | |

Prajavani

ತಾವು ಜಾಹೀರಾತುಗಳಿಂದ ಪ್ರೇರಿತರಾಗಿ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಕೆಲವು ಬಳಕೆದಾರರು ಮಾತಿನ ಭರಾಟೆಯಲ್ಲಿ ಹೇಳುವುದುಂಟು. ಆದರೆ, ಜಾಹೀರಾತಿನ ಪ್ರಭಾವ ನಮ್ಮಲ್ಲಿ ಸುಪ್ತವಾಗಿ ಕೆಲಸ ಮಾಡುತ್ತದೆ. ಇಲ್ಲವಾದಲ್ಲಿ ಜಾಹೀರಾತು ಕ್ಷೇತ್ರವು ಬಹುಕೋಟಿ ರೂಪಾಯಿಯ ಉದ್ಯಮವಾಗುತ್ತಿರಲಿಲ್ಲ.

ಜಾಹೀರಾತುಗಳ ಮೂಲಕ ಬಳಕೆದಾರರನ್ನು ಸರಕು ಅಥವಾ ಸೇವೆಗಳತ್ತ ಆಕರ್ಷಿಸುವುದರಲ್ಲಿ ತಪ್ಪಿಲ್ಲ. ಆದರೆ, ಜಾಹೀರಾತು ಅನುಚಿತವಾಗಿದ್ದಾಗ, ಉತ್ಪ್ರೇಕ್ಷಿತವಾಗಿದ್ದಾಗ ಬಳಕೆದಾರರ ಹಿತದೃಷ್ಟಿಯಿಂದ ಅದಕ್ಕೆ ಕಡಿವಾಣ ಹಾಕಬೇಕಾಗುತ್ತದೆ. ಇಂತಹ ಜಾಹೀರಾತುಗಳನ್ನು ನಿಯಂತ್ರಿಸಲು ಈಗಿರುವ ಕಾನೂನುಗಳು ವಿಫಲವಾಗಿರುವುದರಿಂದ, ಇತ್ತೀಚೆಗೆ ಸ್ಥಾಪನೆಗೊಂಡಿರುವ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಜಾಹೀರಾತು ನಿಯಂತ್ರಣಕ್ಕೆ ಮುಂದಾಗಿದ್ದು, ಕರಡು ನಿಯಮ ಪ್ರಕಟಿಸಿದೆ. ಈ ನಿಯಮ ಸಾಕಷ್ಟು ವಿಸ್ತಾರವಾಗಿದ್ದು, ಮಕ್ಕಳನ್ನು ಉದ್ದೇಶಿಸಿ ನೀಡುವ ಜಾಹೀರಾತಿನ ಸ್ವರೂಪ, ಸರಕುಗಳನ್ನು ಅನುಮೋದಿಸುವ ಸೆಲೆಬ್ರಿಟಿಗಳ ಜವಾಬ್ದಾರಿ, ಉಚಿತ ಕೊಡುಗೆ, ತುಲನಾತ್ಮಕ ಜಾಹೀರಾತಿನಂತಹ ಅಂಶಗಳು ಅದರಲ್ಲಿವೆ. ಉತ್ಪಾದಕರಲ್ಲದೆ ಜಾಹೀರಾತು ಏಜೆನ್ಸಿಗಳ ಕರ್ತವ್ಯ ಮತ್ತು ಜವಾಬ್ದಾರಿಯನ್ನೂ ನಿಯಮದಲ್ಲಿ ಸೇರಿಸಿರುವುದು ವಿಶೇಷ.

ಪ್ರಸ್ತುತ ಮಾರುಕಟ್ಟೆ ವಿಸ್ತಾರವಾಗಿದ್ದು, ಒಂದೇ ಉದ್ದೇಶಕ್ಕಾಗಿ ಬಳಸುವ ಪದಾರ್ಥಗಳು ಹತ್ತಾರು ಬ್ರ್ಯಾಂಡ್‍ಗಳಲ್ಲಿ ದೊರೆಯುವುದರಿಂದ ಯಾವುದನ್ನು ಖರೀದಿಸಬೇಕೆಂಬ ಗೊಂದಲ ಉಂಟಾಗುವುದು ಸಹಜ. ವಾಹನ ಅಥವಾ ಆರೋಗ್ಯ ವಿಮೆ ಪಾಲಿಸಿಯ ಸಂದರ್ಭದಲ್ಲಿ ವಿವಿಧ ಕಂಪನಿಗಳು ನೀಡುವ ವಿಮೆ ಪಾಲಿಸಿಯಲ್ಲಿರುವವ್ಯತ್ಯಾಸಗಳನ್ನು ಗಮನಿಸಬೇಕಾಗುತ್ತದೆ. ವಿಮೆ ಕಂಪನಿಗಳು ತಾವು ನೀಡುವ ಪಾಲಿಸಿಯನ್ನು ಮತ್ತೊಂದು ವಿಮೆ ಕಂಪನಿಯ ಪಾಲಿಸಿಯೊಂದಿಗೆ ಹೋಲಿಸಿ, ಅದನ್ನು ಜಾಹೀರಾತಿನಲ್ಲಿ ಪ್ರಕಟಿಸುವುದನ್ನು ನಾವು ಗಮನಿಸಬಹುದು. ಈ ರೀತಿಯ ತುಲನಾತ್ಮಕ ಜಾಹೀರಾತನ್ನು ನಿಯಂತ್ರಿಸುವ ಅಂಶಗಳು ನಿಯಮದಲ್ಲಿ ಅಡಕವಾಗಿವೆ.

ಮದ್ಯಪಾನ, ಸಿಗರೇಟ್, ಮಾದಕ ದ್ರವ್ಯಗಳ ಜಾಹೀರಾತುಗಳನ್ನು ನಿಷೇಧಿಸಲಾಗಿದ್ದರೂ ಅವನ್ನು ಪರೋಕ್ಷವಾಗಿ ಇತರ ವಸ್ತುಗಳ ಜಾಹೀರಾತಿನಲ್ಲಿ ಸೇರಿಸುವುದು ಕಂಡುಬಂದಿದೆ. ಇದು ಗ್ರಾಹಕ ಸಂರಕ್ಷಣಾ ಅಧಿನಿಯಮದ ಉಲ್ಲಂಘನೆಯಾಗುತ್ತದೆ.

ಜಾಹೀರಾತುಗಳಲ್ಲಿ ‘ಒಂದು ಕೊಂಡರೆ ಮತ್ತೊಂದು ಉಚಿತ’ ಎಂಬಂಥ ಘೋಷಣೆಗಳನ್ನು ನೋಡಿರುತ್ತೇವೆ. ಆದರೆ ಯಾವ ಉದ್ಯಮಿಯೂ ಅನಗತ್ಯವಾಗಿ ‘ಉಚಿತ’ವಾಗಿ ನೀಡಿ ಹಣ ಕಳೆದುಕೊಳ್ಳುವುದಿಲ್ಲ. ಪ್ರಸ್ತುತ ನಿಯಮದ ಅನುಸಾರ, ವಸ್ತುವಿನ ಮೂಲ ಬೆಲೆ ಹಾಗೂ ಇತರ ಸಾಮಾನ್ಯ ವೆಚ್ಚ (ಪ್ಯಾಕಿಂಗ್, ಪ್ಯಾಕೇಜಿಂಗ್ ಇತ್ಯಾದಿ) ಹೊರತುಪಡಿಸಿ, ಬಳಕೆದಾರರಿಂದ ಇನ್ಯಾವುದೇ ರೂಪದಲ್ಲಿ ಹಣ ಪಡೆಯುವಂತಿದ್ದರೆ, ಜಾಹೀರಾತುಗಳಲ್ಲಿ ಈ ರೀತಿ ಆಕರ್ಷಕ ಪದಗಳನ್ನು ಉಪಯೋಗಿಸುವಂತಿಲ್ಲ.

ಮಕ್ಕಳನ್ನು ಉದ್ದೇಶಿಸಿ ತಯಾರಾಗುವ ಜಾಹೀರಾತುಗಳಲ್ಲಿನ ಧೈರ್ಯ ಮತ್ತು ಸಾಹಸದ ದೃಶ್ಯಗಳನ್ನು ನೋಡಿ ಮಕ್ಕಳು ತಾವೂ ಅದರಂತೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ನಿದರ್ಶನಗಳಿವೆ. ಮಕ್ಕಳಲ್ಲಿ ಅವಾಸ್ತವಿಕ ಅಪೇಕ್ಷೆಗಳನ್ನು ಹುಟ್ಟುಹಾಕುವ ಇಂತಹ ಜಾಹೀರಾತುಗಳನ್ನು ನೀಡುವಂತಿಲ್ಲ.

ನಿರ್ದಿಷ್ಟ ವಸ್ತುವನ್ನು ಹೊಂದಿಲ್ಲದಿದ್ದರೆ ಆ ಮಕ್ಕಳು ನಿಷ್ಪ್ರಯೋಜಕ, ಇತರರಿಗಿಂತ ಕೀಳು ಎಂಬಂಥ ಸಂದೇಶ ಸಾರುವ ಜಾಹೀರಾತುಗಳನ್ನು ನೀಡುವುದು ಅಪರಾಧ ಎಂದು ನಿಯಮ ಹೇಳುತ್ತದೆ. ಹೊಗೆಸೊಪ್ಪು ಮತ್ತು ಮದ್ಯಪಾನ ಆಧಾರಿತ ವಸ್ತುಗಳ ಜಾಹೀರಾತಿನಲ್ಲಿ ಮಕ್ಕಳನ್ನು ಬಳಸಿಕೊಳ್ಳಬಾರದು.

ಉತ್ಪಾದಕರು ಮತ್ತು ಮಾರಾಟಗಾರರು ನೀಡುವ ಜಾಹೀರಾತುಗಳು ಅನುಚಿತವೆನಿಸಿದರೆ ಕೆಲವೊಮ್ಮೆ ಬಳಕೆದಾರರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದಿರುವುದಕ್ಕೆ ಕಾರಣ, ಜಾಹೀರಾತಿನಲ್ಲಿ ಬಳಸುವ ನಿರಾಕರಣೆಗಳು (ಡಿಸ್‍ಕ್ಲೈಮರ್). ಜಾಹೀರಾತಿನಲ್ಲಿ ‘0% ಬಡ್ಡಿಗೆ ಸಾಲ ನೀಡುತ್ತೇವೆ’, ‘ಒಂದು ವಾರದಲ್ಲಿ ಐದು ಕೆ.ಜಿ. ತೂಕ ಕಡಿಮೆ ಮಾಡುತ್ತದೆ’, ‘ಈ ಟಾನಿಕ್ ಸೇವಿಸಿದರೆ ಬುದ್ಧಿಶಕ್ತಿ ಚುರುಕಾಗುತ್ತದೆ’, ‘ನಾಲ್ಕು ದಿನದಲ್ಲಿ ಬೋಳು ತಲೆ ತುಂಬ ಕೂದಲು ಬೆಳೆಯುತ್ತದೆ’ ಇತ್ಯಾದಿ ಜಾಹೀರಾತಿನ ಅಡಿಯಲ್ಲಿ ಚುಕ್ಕೆ, ಸ್ಟಾರ್ ಅಥವಾ ಇನ್ಯಾವುದೋ ಗುರುತು ಹಾಕಿ ‘ಷರತ್ತುಗಳಿಗೆ ಒಳಪಟ್ಟಿದೆ’ ಎಂಬ ವಾಕ್ಯ ಇರುವುದನ್ನು ಬಳಕೆದಾರರು ಗಮನಿಸಿರುವುದಿಲ್ಲ. ಹೀಗಾಗಿ, ಆ ವಸ್ತುವಿನಿಂದ ಉಪಯೋಗ ಆಗದಿದ್ದರೂ ಪರಿಹಾರ ದೊರೆಯುವುದಿಲ್ಲ. ಜಾಹೀರಾತುಗಳಲ್ಲಿ ಈ ರೀತಿಯ ನಿರಾಕರಣೆಯನ್ನು ಬಳಸಿದರೂ ಅದಕ್ಕೆ ಸೂಕ್ತ ವಿವರಣೆ ನೀಡಬೇಕೆಂದು ನಿಯಮ ಹೇಳುತ್ತದೆ.

ಸೆಲೆಬ್ರಿಟಿಗಳು ತಾವು ಜಾಹೀರಾತು ನೀಡುವ ವಸ್ತುವಿನ ಬಗ್ಗೆ ಯಾವುದೇ ಆಧಾರರಹಿತ, ಅನುಚಿತ ಅಥವಾ ಹಾದಿ ತಪ್ಪಿಸುವ ಮಾಹಿತಿ ಇಲ್ಲದಂತೆ ನಿಗಾ ವಹಿಸಬೇಕು. ಅವರು ಜಾಹೀರಾತು ಏಜೆನ್ಸಿ, ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆ ಅಥವಾ ತಜ್ಞರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡಿದ್ದಲ್ಲಿ ಅದನ್ನು ವ್ಯಾಜ್ಯ ಪರಿಹಾರದ ವೇಳೆ ಪರಿಗಣಿಸಲಾಗುತ್ತದೆ. ಸೆಲೆಬ್ರಿಟಿಗಳಲ್ಲದೆ ವಿಷಯ ತಜ್ಞರು ಸಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದೂ ಇದೆ. ತಪ್ಪು ಮಾಹಿತಿ ನೀಡಿದಲ್ಲಿ ಇವರೂ ಶಿಕ್ಷೆ ಅನುಭವಿಸಬೇಕಾಗುತ್ತದೆ. ಇಂತಹ ಸ್ವಾಗತಾರ್ಹ ಅಂಶಗಳನ್ನು ಹೊಂದಿರುವ ನಿಯಮವು ಗ್ರಾಹಕರ ಹಿತರಕ್ಷಣೆಗೆ ಪೂರಕವಾಗಿ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು