ಶುಕ್ರವಾರ, ಜೂನ್ 5, 2020
27 °C
ಕೊರೊನಾವನ್ನು ಎದುರಿಸುವುದೆಂದರೆ, ನಮ್ಮ ಆರ್ಥಿಕ ಪದ್ಧತಿಯನ್ನು ಮರುಪರಿಶೀಲನೆಗೆ ಒಡ್ಡುವುದು

ಸಂಗತ | ನಮ್ಮೊಂದಿಗೆ ಬದುಕಲೆಂದೇ ಬಂದಿದೆ ಕೊರೊನಾ: ಪರ್ಯಾಯ ಆರ್ಥಿಕತೆಗೆ ದಾರಿಯಾಗಲಿ

ಡಿ.ಎಸ್.ನಾಗಭೂಷಣ Updated:

ಅಕ್ಷರ ಗಾತ್ರ : | |

Prajavani

ಕೋವಿಡ್-19 ಜಗತ್ತಿನಾದ್ಯಂತ ಮಾಡುತ್ತಿರುವ ಹಾವಳಿಯ ಮೂಲಕ್ಕೆ ಹೋದವರೆಲ್ಲರಿಗೆ ಈ ಎರಡು ಅಂಶಗಳು ಮನವರಿಕೆಯಾಗಿರುವಂತೆ ಕಂಡುಬರುತ್ತದೆ:

1. ಈ ರೋಗ ನಮ್ಮ ಜೀವನಪದ್ಧತಿಯ ಸಂಚಿತ ಫಲ.

2. ಈ ರೋಗ ಹೀಗೆ ಒಮ್ಮೆಗೇ ಜಗತ್ತಿನಾದ್ಯಂತ ಹರಡಿ ಅನಾಹುತ ಉಂಟಾಗಿರಲು ಮುಖ್ಯ ಕಾರಣ, ಮನುಷ್ಯನ ವಿಪರೀತ- ವಿಶೇಷವಾಗಿ ಅಂತರರಾಷ್ಟ್ರೀಯ ಮಟ್ಟದ-ಓಡಾಟ.

ಆದರೆ ಆಶ್ಚರ್ಯದ ಸಂಗತಿ ಎಂದರೆ, ಈ ರೋಗದ ಹಾವಳಿಯ ವಿರುದ್ಧ- ನಮ್ಮ ಸರ್ಕಾರದ ಈಗಿನ ಭಾರಿ ಪ್ಯಾಕೇಜೂ ಸೇರಿದಂತೆ- ಜಗತ್ತು ಕೈಗೊಳ್ಳುತ್ತಿರುವ ಕ್ರಮಗಳು ಈ ಎರಡು ಸಂಗತಿಗಳನ್ನು ಗಮನಿಸಿಯೇ ಇಲ್ಲವೆಂಬಂತೆ ರೂಪುಗೊಳ್ಳುತ್ತಿರುವುದು.

ಈ ಕ್ರಮಗಳನ್ನು ಎರಡು ಬಗೆಗಳಾಗಿ ವಿಂಗಡಿಸಬಹುದು. ಒಂದು, ಈ ರೋಗವನ್ನು ನಿವಾರಿಸಿಕೊಳ್ಳುವ ದಿಕ್ಕಿನ ಕ್ರಮ. ಇನ್ನೊಂದು, ಈ ರೋಗದ ಹಾವಳಿಯಿಂದ ದೇಶಗಳ ಆರ್ಥಿಕತೆಗಳಿಗೆ ಆಗಿರುವ ನಷ್ಟವನ್ನು ಸರಿಪಡಿಸಿಕೊಳ್ಳುವ ದಿಕ್ಕಿನ ಕ್ರಮ. ಸದ್ಯಕ್ಕೆ ರೋಗನಿವಾರಣೆಯ ವಿಷಯದಲ್ಲಿ ದಿಕ್ಕೇ ತೋಚದಂತಾಗಿರುವ ಸರ್ಕಾರಗಳು ಭೌತಿಕ ದೂರ, ಮುಖಗವಸು, ಪ್ರತ್ಯೇಕವಾಸ ಮುಂತಾದ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಅದರ ಹರಡುವಿಕೆಯನ್ನಷ್ಟೇ ತಡೆಯುವ ಪ್ರಯತ್ನಗಳನ್ನು ನಡೆಸಿವೆ. ರೋಗ ಉಲ್ಬಣಗೊಳ್ಳದಂತೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಷ್ಟೇ ಸದ್ಯದ ಚಿಕಿತ್ಸಾ ಕ್ರಮವಾಗಿದೆ. ರೋಗವನ್ನು ಗುಣಪಡಿಸಬಲ್ಲ ಲಸಿಕೆಗಳು ಇನ್ನೂ ಪ್ರಯೋಗದ ಹಂತದಲ್ಲಿದ್ದು, ಅವು ದೈನಂದಿನ ಬಳಕೆಗೆ ದೊರೆಯಲು ಇನ್ನೂ ಸಾಕಷ್ಟು ಕಾಲ ಅಗತ್ಯವೆಂದು ಹೇಳಲಾಗುತ್ತಿದೆ. ಆದರೆ ಈ ಲಸಿಕೆಗಳೂ ಈ ರೋಗವನ್ನು ತತ್ಕಾಲೀನವಾಗಿ ವಾಸಿ ಮಾಡಬಲ್ಲವೇ ಹೊರತು ಸದಾ ಕಾಲಕ್ಕೆ ತಡೆಯುವುದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಕೋವಿಡ್ ನಂತರದ ಬದುಕು | ರಿಪೇರಿ ಮಾಡೋದೇಕೆ? ಹೊಸ ಆರ್ಥಿಕತೆ ರೂಪಿಸೋಣ ಬನ್ನಿ

ಅಂದರೆ, ಆಧುನಿಕ ಕಾಲದ ಎಲ್ಲ ಸಾಂಕ್ರಾಮಿಕ ರೋಗಗಳಂತೆ ಈ ರೋಗ ತನ್ನ ರೂಪಾಂತರಗಳಲ್ಲಿ ಮರುಕಳಿಸುವ ಗುಣ ಹೊಂದಿದೆ. ಇದರರ್ಥ ಇಷ್ಟೆ: ಈ ರೋಗಕ್ಕೆ ಕಾರಣವಾಗಿರುವ ಕೊರೊನಾ ವೈರಾಣು ನಮ್ಮೊಂದಿಗೆ ಬದುಕಲೆಂದೇ ಬಂದಿದೆ! ಕೋವಿಡ್-19 ಎಂಬುದು ನಮ್ಮ ಜೀವನಪದ್ಧತಿಯ ಸಂಚಿತ ಫಲ ಎಂದು ಹೇಳಲಾಗುತ್ತಿರುವುದು ಈ ಆರ್ಥದಲ್ಲೇ. ಇದನ್ನು ಇಂದು ಜಗತ್ತಿನ ಪರಿಸರ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು ಮತ್ತು ರಾಜಕೀಯ ಚಿಂತಕರೆಲ್ಲರೂ ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ಆದರೆ ಅವರ ಈ ಮಾತು ಸರ್ಕಾರಗಳನ್ನು ನಡೆಸುತ್ತಿರುವವರ ಕಿವಿಗಳಿಗಿರಲಿ, ಈ ರೋಗದ ಹಾವಳಿಯಿಂದ ಭೀತರಾಗಿರುವ ಸಾಮಾನ್ಯ ಜನರ ಕಿವಿಗಳಿಗೂ ಬೀಳುತ್ತಿಲ್ಲ. ಇದಕ್ಕೆ ಈಗ ನಾವು ಅನುಸರಿಸುತ್ತಿರುವ ಜೀವನಪದ್ಧತಿ ಸಹಜ ಜೀವನಪದ್ಧತಿಯಾಗಿದ್ದು, ಅದಕ್ಕೆ ಪರ್ಯಾಯವಿಲ್ಲ ಎಂಬ ನಂಬಿಕೆಯನ್ನು ಸ್ವತಃ ಈ ಜೀವನಪದ್ಧತಿಯೇ ನಮ್ಮೊಳಕ್ಕೆ ಅಂತರ್ಗತಗೊಳಿಸಿರುವುದೇ ಕಾರಣವಾಗಿದೆ.

ನಮ್ಮದೀಗ ವಿಜ್ಞಾನ-ತಂತ್ರಜ್ಞಾನಗಳು ಬಂಡವಾಳಿಗರ ಲಾಭೋದ್ದೇಶದ ಹೊಸ ಹೊಸ ಹೂಡಿಕೆಗಳಿಂದ ಕಂಡುಹಿಡಿಯುವ ಹೊಸ ಹೊಸ ಸುಖ ಸಾಧನಗಳ ಉತ್ಪಾದನೆ ಮತ್ತು ಮಾರುಕಟ್ಟೆಗಳು ಪೋಷಿಸುವ, ಜೀವನಮಟ್ಟ ಸದಾ ಏರುತ್ತಾ ಹೋಗುವ ರೋಚಕತೆಯ ಜೀವನಪದ್ಧತಿ. ಅಂದರೆ ಒಂದು ವಸ್ತು, ಜೀವನಕ್ಕೆ ನಿಜವಾಗಿ ಬೇಕಿರಲಿ, ಬೇಡದಿರಲಿ ಅದನ್ನು ಕಂಡುಹಿಡಿಯುವ, ಉತ್ಪಾದಿಸುವ, ಮಾರುವ ಆರ್ಥಿಕ ಚಕ್ರ ಸದಾ ತಿರುಗುತ್ತಿರುವಂತೆ ನೋಡಿಕೊಳ್ಳುವುದೇ ಮಾನವ ಜೀವನದ ಸುಖ-ಸಮೃದ್ಧಿ-ಸಾರ್ಥಕತೆ ಎಂಬ ನಂಬಿಕೆಯನ್ನು ಆಧರಿಸಿದ್ದು ಇದು. ಆದರೆ ಈ ನಂಬಿಕೆ ಮತ್ತು ಅದರ ಹಿಂದಿನ ಸಂಕೀರ್ಣ ಭೌತಿಕ ಕಾರ್ಯಾಚರಣೆಗಳು ನಮ್ಮ ಜೀವನದ ಮೂಲ ಆಸರೆಯಾದ ಈ ಭೂಮಿ ಮತ್ತು ಅದರ ವಾತಾವರಣವನ್ನು ಏನು ಮಾಡುತ್ತಿವೆ ಎಂಬುದರ ಮರೆವನ್ನು ಉಂಟು ಮಾಡಿದೆ ಕೂಡ. ಈ ಮರೆವಿನ ಫಲವೇ, ಪ್ರಕೃತಿಯ ಸಹಜ ಭಾಗವಾಗಿದ್ದ ಕೊರೊನಾ ವೈರಾಣು ಇಂದು ಅಸಹಜವಾಗಿ ಹೊರಬಿದ್ದು ನಮ್ಮನ್ನು ಮಾರಕವಾಗಿ ಕಾಡುತ್ತಿರುವುದು.

ಕೊರೊನಾ ಮಹಾಮಾರಿಯನ್ನು ನಿಜವಾಗಿ ಎದುರಿಸುವ ಬಗೆ ಎಂದರೆ, ಸದ್ಯದ ನಮ್ಮ ಜೀವನ ಪದ್ಧತಿಯನ್ನೂ ಇದನ್ನು ಪೋಷಿಸುತ್ತಿರುವ ಆರ್ಥಿಕ ಪದ್ಧತಿಯನ್ನೂ ಮರುಪರಿಶೀಲನೆಗೆ ಒಡ್ಡುವುದೇ ಆಗಿದೆ. ಆದರೆ ಇಂದಿನ ಸರ್ಕಾರಗಳು ಮಾಡುತ್ತಿರುವುದಾದರೂ ಏನನ್ನು? ಅವು ಈಗ ಜಖಂಗೊಂಡಿರುವ ತಂತಮ್ಮ ಆರ್ಥಿಕತೆಗಳನ್ನು ಮತ್ತೆ ಹಾಗೇ ಮರಳಿ ಕಟ್ಟುವ ಆತ್ಮಹತ್ಯೆಯ ದಾರಿ ಹಿಡಿದಂತಿವೆ. ಹಾಗಾಗಿ ಸಮಾಜದ ಪ್ರಜ್ಞಾವಂತರು ಈ ಬಗ್ಗೆ ಸರ್ಕಾರದ ವಲಯಗಳಲ್ಲಿ ಮತ್ತು ಜನಸಾಮಾನ್ಯರ ಮಧ್ಯೆ ಎಚ್ಚರ ಮೂಡಿಸುವ ತುರ್ತು ಅಗತ್ಯವಿದೆ. ಈಗ ಹಾಳಾಗಿರುವ ಆರ್ಥಿಕತೆಯ ನಿಜ ಕೈ ಕಾಲುಗಳಂತಿದ್ದ ಬಹುಪಾಲು ಕಾರ್ಮಿಕರ, ಅದಕ್ಕೆ ಮೂಲ ಚೈತನ್ಯ ಒದಗಿಸುತ್ತಿದ್ದ ಅಂತರರಾಷ್ಟ್ರೀಯ ವ್ಯವಹಾರಸ್ಥರ ಮತ್ತು ಈ ವ್ಯವಹಾರದಲ್ಲಿ ಪಾಲು ಪಡೆಯಲು ಹೋಗಿದ್ದ ವಿವಿಧ ತೆರನ ‘ಗಿರಾಕಿ’ಗಳ ಪಾಡು ಇಂದೇನಾಗಿದೆ ಮತ್ತು ಅವರು ಎಂತಹ ಮಾನವ ಬಿಕ್ಕಟ್ಟನ್ನು ಸೃಷ್ಟಿಸಿದ್ದಾರೆ ಎಂದು ಯೋಚಿಸಿದರೆ ಸಾಕು, ಪರ್ಯಾಯ ಆರ್ಥಿಕತೆಯ ಕೇಂದ್ರವು ಸ್ಥಳೀಯತೆಯಾಗಿರಬೇಕು ಎಂಬ ಸುಳಿವು ಸಿಕ್ಕೀತು. ಆ ಕೇಂದ್ರದಿಂದಲೇ ಅದರ ಇತರೆಲ್ಲ ರೂಪುರೇಷೆಗಳು ಮೂಡಿಯಾವು. ಇದರ ವ್ಯಾವಹಾರಿಕ ನಕ್ಷೆಯೊಂದನ್ನು ತಯಾರಿಸಿ ಜನರ ಬೆಂಬಲ ಸಂಘಟಿಸುವುದು ಇಂದಿನ ತುರ್ತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು