ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಿನಿಮಾ ಎಂಬ ಪರ್ಯಾಯ ವಾಸ್ತವ

ಸಿನಿಮಾವೇ ಬೇರೆ, ನೈಜ ಜಗತ್ತೇ ಬೇರೆ ಎನ್ನುವ ಜಾಗೃತಿ ಸರ್ವದಾ ನೋಡುವವರಲ್ಲಿ ಇರಬೇಕು
Last Updated 14 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಮೃತಪಟ್ಟ ತಮ್ಮ ಪುತ್ರನ ಕಟೌಟ್‍ನೊಂದಿಗೆ ಮೈಸೂರಿನ ಕುಟುಂಬವೊಂದು ಸಿನಿಮಾ ವೀಕ್ಷಿಸಿದ ವರದಿ (ಪ್ರ.ವಾ., ಏ. 6) ಒಮ್ಮೆಗೇ ಅಚ್ಚರಿ ಮತ್ತು ವ್ಯಾಕುಲ ಮೂಡಿಸಿತು. ಆರೂವರೆ ದಶಕಗಳ ಹಿಂದಿನ ಮಾತು. ‘ಮಾಯಾ ಬಜಾರ್’ ಚಿತ್ರ ನೋಡುವಾಗ ಅದೆಷ್ಟೋ ಮಕ್ಕಳು ‘ವಿವಾಹ ಭೋಜನವಿದು...’ ಹಾಡಿನ ದೃಶ್ಯ ಬಂದಾಗ, ತಮ್ಮನ್ನು ಕರೆತಂದಿದ್ದ ಪೋಷಕರನ್ನು ಜಿಲೇಬಿ, ಪಾಯಸಕ್ಕಾಗಿ ಪೀಡಿಸುತ್ತಿದ್ದರು. ಕಂದ, ಇದು ಸಿನಿಮಾ, ಬರೀ ನೆರಳು, ನಿಜವಲ್ಲ ಅಂತ ಸಮಾಧಾನಿಸಲು ಅಪ್ಪ, ಅಮ್ಮ ಹರಸಾಹಸ
ಪಡುತ್ತಿದ್ದರು.

ಐನ್‍ಸ್ಟೀನರ ಸಾಪೇಕ್ಷತಾ ಸಿದ್ಧಾಂತದ ಜೊತೆಗೇ ಹುಟ್ಟಿಕೊಂಡ ‘ಅವಳಿ ವಿರೋಧಾಭಾಸ’ (Twin paradox) ಇಲ್ಲಿ ಉದಾಹರಣೀಯ. ಬೆಳಕಿನ ವೇಗಕ್ಕೆ ಹತ್ತಿರದ ವೇಗದಲ್ಲಿ ಅವಳಿ ಸಹೋದರರಲ್ಲಿ ಒಬ್ಬ ರಾಕೆಟ್ಟಿನಲ್ಲಿ ಹೊರಟು ಕೆಲವು ನಕ್ಷತ್ರಗಳಿಗೆ ಭೇಟಿಯಿತ್ತು ಭೂಮಿಗೆ ವಾಪಸ್ಸಾಗುತ್ತಾನೆ. ಅರೆ! ವಿಚಿತ್ರ. ತನಗೆ ಆಯಸ್ಸು ಕುಂದಿರುವುದು ಹತ್ತೇ ವರ್ಷ. ತನ್ನ ಸಹೋದರನೋ ಹಣ್ಣು ಮುದುಕ. ವೇಗವಾಗಿ ಸಾಗಿದಷ್ಟೂ ಅವರವರ ಗಡಿಯಾರಗಳು ಮಂದಗತಿಯಲ್ಲಿರುವುದೇ ಈ ವಿರೋಧಾಭಾಸಕ್ಕೆ ಕಾರಣ. ತೆರೆಯ ಮೇಲಿನ ಕಥೆ, ಸಾಹಸ, ಪಡಿಪಾಟಲು, ಪ್ರಸಂಗಗಳನ್ನು ವಾಸ್ತವವೆಂದುಕೊಂಡರೆ, ಒದಗುವುದೂ ಅದೇ ನಗೆಪಾಡು-ಪ್ರತಿಪಾದಿಸಲೂ ಆಗದ, ನಿರಾಕರಿಸಲೂ ಆಗದ ಸ್ಥಿತಿ!

ಸಿನಿಮಾವೇ ಬೇರೆ, ನೈಜ ಜಗತ್ತೇ ಬೇರೆ ಎನ್ನುವ ಜಾಗೃತಿ ಸರ್ವದಾ ನೋಡುವವರಲ್ಲಿ ಇರಬೇಕು. ತಪ್ಪಿದರೆ ಭ್ರಮೆ ಮೇಲುಗೈಯಾಗಿ ಅನಿರೀಕ್ಷಿತ ಪ್ರಮಾದಕ್ಕೆ ಹಾದಿಯಾಗುತ್ತದೆ. ಮನರಂಜನಾ ಉದ್ಯಮವೇನೋ ಅತಿ ಸೌಮ್ಯ ಸ್ವಭಾವದ ಇಲ್ಲವೇ ಅತಿ ಆಕ್ರಮಣಶೀಲತೆಯ ಚಿತ್ರಣಗಳಿಂದ ಗ್ರಾಹಕರನ್ನು ಸೆಳೆಯಲು ಹಪಹಪಿಸುವುದು ಸಹಜ. ಎಷ್ಟಾದರೂ ಅದೊಂದು ಕೈಗಾರಿಕೆ. ಆದರೆ ಪೋಷಕರು ತಮ್ಮ ಮಕ್ಕಳಿಗೆ ಎಂತಹ ಸಿನಿಮಾಗಳು ನೋಡಲು ಯೋಗ್ಯಎನ್ನುವುದನ್ನು ವಿವೇಚನೆಯಿಂದ ನಿರ್ಣಯಿಸಬೇಕು. ಚಿತ್ರಗಳ ಸಾರ, ಸಂದೇಶಗಳನ್ನು ಅರಿಯುವಂತೆ ಮಕ್ಕಳನ್ನು ಪ್ರಬುದ್ಧಗೊಳಿಸಬೇಕು.

ಸಿನಿಮಾವು ವೀಕ್ಷಕರನ್ನು ರಂಜಿಸುವ ಸೃಜನಶೀಲತೆ. ಸಿನಿಮಾ ತಯಾರಿಕೆ, ನಿರ್ದೇಶನ, ನಟನೆ, ಸಾಹಸ... ಮೂಲತಃ ಎಲ್ಲವೂ ಜಾದು, ಕಣ್ಕಟ್ಟೇ. ತೆರೆ ಮೇಲೆ ಹಾಡುವವರ ಧ್ವನಿಯಿರಲಿ, ಕೆಲವೊಮ್ಮೆ ಸಂಭಾಷಿಸು ವವರ ಧ್ವನಿಯೂ ಅವರದಲ್ಲದೆ ಬೇರೆಯವರದು.

ಇಸವಿ 1883. ಜಗತ್ತಿನೆಲ್ಲೆಡೆ ಬಗೆ ಬಗೆ ಆವಿಷ್ಕಾರಗಳ ಮಹಾಪೂರ. ಸಿನಿಮಾ ಜನಕ ಎಡಿಸನ್‍ನಲ್ಲಿ ವಿಜ್ಞಾನಿ, ಸಂಶೋಧಕನಿಗಿಂತಲೂ ಅಂದಿನ ಜನಮಾನಸ ಕಂಡಿದ್ದು ಒಬ್ಬ ಮಾಂತ್ರಿಕನನ್ನೇ. ನಾವಿಲ್ಲಿ ವೀಕ್ಷಣೆ, ಪ್ರೇಕ್ಷಣೆ ನಡುವಿನ ಭೇದವನ್ನು ಗ್ರಹಿಸಬೇಕಿದೆ. ತೆರೆಯ ಮೇಲೆ ನಡೆಯುತ್ತಿರುವುದು ಸತ್ಯವೆಂದುಕೊಳ್ಳುವುದು ಕೇವಲ ವೀಕ್ಷಣೆ ಯಾಗುತ್ತದೆ. ತೆರೆಯಲ್ಲಿ ಸಾಗುವುದು ನಿಜವಲ್ಲ, ಆದರೆ ತನಗೆ ಇಷ್ಟವಾಗುವ ಯುಕ್ತಿಯೆನ್ನಿಸುವುದು ಅದಕ್ಕೂ ಪ್ರಬುದ್ಧವಾಗಿ ಪ್ರೇಕ್ಷಣೆಯಾಗುವುದು. ಹಾಗಾಗಿ ವೀಕ್ಷಕರಾಗದೆ ಪ್ರೇಕ್ಷಕರಾದಾಗ ಮಾತ್ರ ನಾವು ಉದ್ವೇಗ, ಅತಿಶಯೋಕ್ತಿಯಿಂದ ಪಾರಾದೇವು.

ನಟ ನಟಿಯರ ಉಡುಗೆ ತೊಡುಗೆ, ಕೇಶವಿನ್ಯಾಸ, ಮುಖಚಹರೆ, ಕ್ಯಾಮೆರಾ ಕೋನಗಳು... ಎಲ್ಲವೂ ಕಥೆಯ ಭಾಗಗಳಾಗಿರುತ್ತವೆ. ಸೂಕ್ಷ್ಮವೆಂದರೆ, ನೈಜತೆಗೆ ಹತ್ತಿರವಾದಂತೆ ಪ್ರೇಕ್ಷಕರು ದೂರವಾಗುತ್ತಾರೆ. ಏಕೆಂದರೆ ಅವರು ಅಸಮಂಜಸತೆ, ಧಾರಾಳ ಪುಳಕ, ಭಾವಪರತೆಯನ್ನೇ ಬಯಸುತ್ತಾರೆ.

ರೋಚಕತೆಗಾಗಿ ಸಿನಿಮಾಗಳು ವೈಜ್ಞಾನಿಕ ನಿಯಮಗಳನ್ನೂ ಮೂಲೆಗುಂಪಾಗಿಸುತ್ತವೆ. ಶೂನ್ಯದಿಂದ ಪದಾರ್ಥ ಸೃಷ್ಟಿಸುತ್ತವೆ, ಅತಿವೇಗದ ಹಾರಾಡುವ ಕಾರುಗಳೂ ದಿಢೀರನೆ ಭೂಸ್ಪರ್ಶ ಮಾಡುತ್ತವೆ, ತನ್ನ ನಾಲ್ಕು ಪಟ್ಟು ತೂಕದ ತಿನಿಸುಗಳನ್ನು ಒಬ್ಬ ನಿಮಿಷ ದಲ್ಲಿ ಸೇವಿಸುತ್ತಾನೆ... ಒಂದೇ ಎರಡೇ? ಸಿನಿಮಾಗಳು ನಿಸ್ಸಂಶಯವಾಗಿ ಇತಿಹಾಸದಾದ್ಯಂತ ಸಮಾಜಕ್ಕೆ ಸನ್ಮಾರ್ಗದರ್ಶನ ನೀಡುತ್ತಾ ಬಂದಿವೆ. ಪ್ರೇಕ್ಷಕರ ಸದಭಿರುಚಿ ಬೆಳೆದಂತೆ ಅವೂ ಪ್ರಖರಗೊಳ್ಳುತ್ತವೆ.

ಸಿನಿಮಾ, ನಮ್ಮ ಇತಿಮಿತಿಯನ್ನು ನಾವು ಮೀರಬಲ್ಲೆವೆಂದು ನಮ್ಮನ್ನು ನಂಬಿಸುವ ಒಂದು ಪರ್ಯಾಯ ವಾಸ್ತವ. ಈಜುಕೊಳವನ್ನೇ ನೋಡ ದವನುತೆರೆಯ ಮೇಲೆ ಹೆಸರುವಾಸಿ ಈಜುಪಟು
ಆಗಬಲ್ಲ. ಕರಡಿ ಕಂಡರೆ ಫರ್ಲಾಂಗು ದೂರವಿರು ವಾತ ಕರಡಿಯನ್ನು ಅಟ್ಟಾಡಿಸುತ್ತಾನೆ. ಅಗ್ನಿಪರ್ವತ ತಿಳಿಯದವನ ಬೆನ್ನಿಗೆ ಬೆಂಕಿ ಕಾರುವ ಬೆಟ್ಟಗುಡ್ಡಗಳು! ಕ್ಯಾಮೆರಾ ತಂತ್ರಗಳಿಗೆ ಎಣೆಯೆಲ್ಲಿದೆ?

ಆಟೋಟಗಳಿರಲಿ ಅಥವಾ ಕ್ರೀಡಾ ಪಂದ್ಯಾವಳಿ, ಮನರಂಜನೆ, ಸ್ಪರ್ಧೆಗಳಿರಲಿ ಯಾವುದಕ್ಕೆ ಯಾವ ಆದ್ಯತೆ, ಎಷ್ಟು ಪ್ರಾಮುಖ್ಯ, ಅವುಗಳ ಔಚಿತ್ಯವೇನು ಎಂಬ ಕುರಿತು ಕಿಂಚಿತ್ತಾದರೂ ನಮ್ಮ ಶಿಕ್ಷಣಕ್ರಮ ಆಸ್ಥೆ ವಹಿಸಿದರೆ ಭವಿತವ್ಯದ ಪ್ರಜೆಗಳನ್ನು ಒಂದರ್ಥದಲ್ಲಿ ಮಾಯಾವಾದದಿಂದ ವಿಚಾರವಾದದೆಡೆಗೆ ಕರೆ ತರಬಹುದು.

ನಟ, ನಟಿಯರು ತಾವು ಗಳಿಸಿದ ಖ್ಯಾತಿಯನ್ನು ಮತ ಗಳಿಕೆಗೆ ಬಳಸಿಕೊಳ್ಳುವುದಿದೆ. ರಾಜಕಾರಣಿ
ಗಳಾಗಿ ಯಶಸ್ವಿಯಾದವರಿದ್ದಾರೆ, ವಿಫಲರಾದವರೂ ಉಂಟೆನ್ನಿ. ಇದು ಹೇಗೂ ಇರಲಿ. ಆದರೆ ಮತದಾರರು ತಪ್ಪದೆ ಒಂದು ಅಂಶವನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಮೆಚ್ಚಿನ ನಟರು, ನಟಿಯರು ಆಳಬೇಕೋ ಅಥವಾ ಆಳಿದಂತೆ ನಟಿಸಿದರಾಯಿತೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT