ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಹಕಾರಿಗಳಿಗೆ ಸಿಗದ ‘ಸೌಹಾರ್ದ’

ಸರ್ಕಾರದ ಇತ್ತೀಚಿನ ಆದೇಶವು ಸೌಹಾರ್ದ ಸಹಕಾರಿ ಸಂಘಗಳಿಗೆ ಮಾರಕವಾಗಿದೆ
–ಮನೋಹರ ಮಸ್ಕಿ
Published 25 ಮಾರ್ಚ್ 2024, 22:02 IST
Last Updated 25 ಮಾರ್ಚ್ 2024, 22:02 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ವೊಂದು, ಐದು ಸಾವಿರಕ್ಕೂ ಹೆಚ್ಚು ಸೌಹಾರ್ದ ಸಹ ಕಾರಿ ಸಂಘಗಳನ್ನು ದಿಢೀರನೆ ಅಕ್ಷರಶಃ ಗುಲಾಮರನ್ನಾಗಿಸಿ, ಸಹಕಾರ ಇಲಾಖೆ ಅಧಿಕಾರಿಗಳ ಮುಂದೆ ಮಂಡಿಯೂರುವಂತೆ ಮಾಡಿದೆ.

ಈ ಸಂಘಗಳ ಆಡಳಿತ ಮಂಡಳಿಗಳು ಬಡ್ಡಿ ದರವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ಧರಿಸು
ವಂತಿಲ್ಲ. ಒಬ್ಬ ಬೀದಿಬದಿಯ ವ್ಯಾಪಾರಿಗೋ ತರಕಾರಿ ಮಾರುವವರಿಗೋ ಕಿರು ಸಾಲವನ್ನು ಸಹ ನಗದು ರೂಪದಲ್ಲಿ ನೀಡುವಂತಿಲ್ಲ. ಹೆಚ್ಚುವರಿ ಹಣವನ್ನು ಡಿಸಿಸಿ ಮತ್ತು ಅಪೆಕ್ಸ್ ಬ್ಯಾಂಕಿನಲ್ಲಿಯೇ ಇಡಬೇಕು! ಅದಕ್ಕಿಂತ ಹೆಚ್ಚಾಗಿ, ಪ್ರತಿ 3 ತಿಂಗಳಿಗೊಮ್ಮೆ ಇಲಾಖಾ ಅಧಿಕಾರಿಗಳಿಗೆ ವರದಿ ಒಪ್ಪಿಸಬೇಕು! ತಾಲ್ಲೂಕು ಮಟ್ಟದ ಸೌಹಾರ್ದ ಸಹಕಾರ ಸಂಘದ ಕಾರ್ಯವೈಖರಿಯನ್ನು ಪರಿಶೀಲಿಸಲು ತಾಲ್ಲೂಕು, ಜಿಲ್ಲೆ, ವಿಭಾಗ ಮತ್ತು ರಾಜ್ಯ ಮಟ್ಟದ, ಅಂದರೆ ಎಲ್ಲಾ ಹಂತದ ಅಧಿಕಾರಿಗಳಿಗೆ ಈ ಆದೇಶವು ವ್ಯಾಪಕ ಅಧಿಕಾರ ನೀಡುತ್ತದೆ. ಅಂದರೆ ವ್ಯಾಪಕ ಭ್ರಷ್ಟಾಚಾರಕ್ಕೂ ಬಾಗಿಲು ತೆರೆಯುತ್ತದೆ.

ನನ್ನ ಅಜ್ಜಿ ಹೇಳಿದ ಕಥೆಯೊಂದು ಇಲ್ಲಿ ನೆನಪಾಗು ತ್ತದೆ. ಒಂದು ಸಣ್ಣ ರಾಜ್ಯವಿತ್ತು. ಅಲ್ಲಿನ ರಾಜನಿಗೆ ತನ್ನ ಪ್ರಜೆಗಳೆಲ್ಲ ಉತ್ತಮ ಆಹಾರ ಸೇವಿಸಬೇಕು ಎನಿಸುತ್ತದೆ. ಈ ಸಂಬಂಧ ಆತ ಆದೇಶವೊಂದನ್ನು ಹೊರಡಿಸುತ್ತಾನೆ. ಅದರ ಪ್ರಕಾರ, ಪ್ರತಿ ಗ್ರಾಮದ ಜನರು ಆಯಾ ವಾರ ನಿಗದಿತ ಅಡುಗೆಯನ್ನೇ ಮಾಡಬೇಕು ಮತ್ತು ಆ ರೀತಿ ಮಾಡಿರುವುದನ್ನು ಅಧಿಕಾರಿಗಳ ಪರಿಶೀಲನೆಗೆ ಹಾಜರುಪಡಿಸ
ಬೇಕು. ಇಂತಹ ಹುಚ್ಚು ಆದೇಶಗಳು ಇತಿಹಾಸದಲ್ಲಿ ಹೊಸವೇನಲ್ಲ. ಈಗ ಸರ್ಕಾರ ಹೊರಡಿಸಿರುವ ಆದೇಶವೂ ಇಂತಹುದೇ ಸಾಲಿನಲ್ಲಿ ನಿಲ್ಲುತ್ತದೆ.

ಸಹಕಾರಿ ಕ್ಷೇತ್ರ ನಿರೀಕ್ಷಿತ ಪ್ರಮಾಣದ ಪ್ರಗತಿ ಸಾಧಿಸದಿರುವುದಕ್ಕೆ ಸಹಕಾರ ಸಂಘಗಳ ದೈನಂದಿನ ಆಡಳಿತದಲ್ಲಿ ರಾಜ್ಯ ಸರ್ಕಾರಗಳ ಅತಿಯಾದ ಹಸ್ತ ಕ್ಷೇಪವೇ ಕಾರಣ ಎಂದು, ಯೋಜನಾ ಆಯೋಗವು ಕಾಲಕಾಲಕ್ಕೆ ರಚಿಸಿದ್ದ ಅರ್ಧನಾರೀಶ್ವರನ್ ಸಮಿತಿ ಮತ್ತು ಚೌಧರಿ ಬ್ರಹ್ಮ ಪ್ರಕಾಶ ಸಮಿತಿ ಹೇಳಿದ್ದವು. ಈ ಕಾರಣದಿಂದ, ಸಹಕಾರ ಸಂಘಗಳ ಒಂದು ಮಾದರಿ ಕಾಯ್ದೆಯನ್ನು ರೂಪಿಸಲಾಯಿತು. ಅಸ್ತಿತ್ವದಲ್ಲಿದ್ದ ಸಹಕಾರ ಸಂಘಗಳ ಕಾಯ್ದೆಯನ್ನು ರದ್ದುಗೊಳಿಸಿ ಈ ಮಾದರಿ ಕಾಯ್ದೆಯನ್ನು ಅಳವಡಿಸಿಕೊಳ್ಳುವಂತೆ ಆಯೋಗವು ನಿರ್ದೇಶನ ನೀಡಿತ್ತು. ಆದರೆ, ಪ್ರಗತಿ ಆಗದಿದ್ದರೂ ಪರವಾಗಿಲ್ಲ ತನ್ನ ಅಧಿಕಾರವನ್ನು ಮಾತ್ರ ಬಿಟ್ಟುಕೊಡಲು ರಾಜ್ಯ ಸರ್ಕಾರ ಸಿದ್ಧವಿರಲಿಲ್ಲ. ಹೀಗಾಗಿ, ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯದ ಸಹಕಾರ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುವಂತೆ 2001ರಿಂದ ಕರ್ನಾಟಕ ಸೌಹಾರ್ದ ಸಹಕಾರಿ ಸಂಘಗಳ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಹೀಗಾಗಿ, ಇದು ರಾಜ್ಯದಲ್ಲಿರುವ ಎರಡನೇ ಸಹಕಾರಿ ಕಾಯ್ದೆಯಾಗಿದೆ.

ಈ ಕಾಯ್ದೆಯ ಮೊದಲ ಪುಟದಲ್ಲಿ ವಿವರಿಸಿರುವ ಉದ್ದೇಶದಲ್ಲಿಯೇ ‘ಸರ್ಕಾರವು ಈ ಕಾಯ್ದೆಯಡಿ ನೋಂದಣಿ ಮಾಡುವುದು ಮತ್ತು ನೋಂದಣಿ ರದ್ದುಪಡಿಸುವುದನ್ನು ಬಿಟ್ಟು ಬೇರೆ ಯಾವ ಅಧಿಕಾರವನ್ನೂ ಹೊಂದುವುದಿಲ್ಲ ಮತ್ತು ಈ ಸೌಹಾರ್ದ ಸಹಕಾರಿ ಸಂಘಗಳು ತಮ್ಮ ಸದಸ್ಯರಿಂದಲೇ ನಿಯಂತ್ರಿಸಲ್ಪ
ಡುತ್ತವೆ’ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ನಿಯಂತ್ರಣ, ನಿರ್ದೇಶನ ಹಾಗೂ ಶಿಕ್ಷಣ ನೀಡುವುದಕ್ಕಾಗಿ ‘ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ’ವನ್ನು ರೂಪಿಸಲಾಗಿದೆ. ಆದರೆ ಸರ್ಕಾರ ಇದ್ಯಾವುದನ್ನೂ ಲೆಕ್ಕಿಸದೆ ಹತ್ತಾರು ಷರತ್ತುಗಳನ್ನು ವಿಧಿಸಿದೆ.

25 ವರ್ಷಗಳ ಹಿಂದೆ ಬ್ಯಾಂಕಿನ ಬಡ್ಡಿ ದರಗಳನ್ನು ರಿಸರ್ವ್‌ ಬ್ಯಾಂಕ್ ನಿರ್ಧರಿಸುತ್ತಿತ್ತು. ಇದು ಸರಿಯಲ್ಲ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಆಯಾ ಬ್ಯಾಂಕುಗಳು ಬಡ್ಡಿ ದರ ನಿರ್ಧರಿಸುವುದು ಒಳಿತು ಎಂಬ ಕಾರಣಕ್ಕೆ ರಿಸರ್ವ್‌ ಬ್ಯಾಂಕ್ ತನ್ನ ಆದೇಶವನ್ನು ಹಿಂತೆಗೆದುಕೊಂಡಿತು. ಆದರೆ ಬಡ್ಡಿ ದರವನ್ನು ನಿಯಂತ್ರಿಸುವ ಸರ್ಕಾರದ ಈಗಿನ ಆದೇಶವು ಸೌಹಾರ್ದ ಸಹಕಾರಿ ಕ್ಷೇತ್ರವನ್ನು 25 ವರ್ಷ ಹಿಂದಕ್ಕೆ ಕೊಂಡೊಯ್ಯುತ್ತದೆ. ಠೇವಣಿಗಳಿಗೆ ಸಂಬಂಧಿಸಿದ ಬಡ್ಡಿಯನ್ನು ಎಸ್‌ಬಿಐ ಬಡ್ಡಿಯೊಂದಿಗೆ ಸಮೀಕರಿಸುವ ಈ ಆದೇಶ ಸಾಲಕ್ಕೆ ಮಾತ್ರ ಶೇ 12ರ ಬಡ್ಡಿಯ ಮಿತಿ ವಿಧಿಸುತ್ತದೆ. ಆದರೆ ಅದೇ ಎಸ್‌ಬಿಐ ವೈಯಕ್ತಿಕ ಸಾಲಗಳಿಗೆ ಶೇ 14.5ರವರೆಗೆ ಬಡ್ಡಿಯನ್ನು ವಿಧಿಸುತ್ತದೆ. ಇಂಥ ಅನೇಕ ಎಡಬಿಡಂಗಿತನಗಳು ಈ ಆದೇಶದಲ್ಲಿವೆ.

ಸೌಹಾರ್ದ ಸಹಕಾರಿ ಸಂಘಗಳಲ್ಲಿಯೂ ತೊಂದರೆ ಇಲ್ಲವೇ ಎಂದರೆ, ಖಂಡಿತ ಇದೆ. ಸರ್ಕಾರವು ಸದುದ್ದೇಶ ಹೊಂದಿದ್ದರೆ, ಸೌಹಾರ್ದ ಸಂಯುಕ್ತ ಸಹಕಾರಿಗೆ ಸೂಕ್ತ ನಿರ್ದೇಶನಗಳನ್ನು ನೀಡಲು ಆದೇಶಿಸಬೇಕಿತ್ತು. ಆಗ ಯಾವುದು ಕಾರ್ಯಸಾಧ್ಯ, ಯಾವುದು ಸೂಕ್ತ ಎನ್ನುವ ಬಗ್ಗೆ ಚರ್ಚೆಯಾದರೂ ಆಗುತ್ತಿತ್ತು. ಸಹಕಾರ ಸಚಿವ ರಾಜಣ್ಣ ಅವರು ಸಹಕಾರಿ ಕ್ಷೇತ್ರದಿಂದಲೇ ಬಂದವರಾದರೂ ಇಂತಹ ಸಂವಿಧಾನ ವಿರೋಧಿ ಆದೇಶ ಹೇಗೆ ಬಂದಿತು ಎನ್ನುವುದು ಆಶ್ಚರ್ಯಕರ. ಅಜ್ಜಿ ಹೇಳಿದ ಕಥೆಯಲ್ಲಿ ರಾಜನ ಉದ್ದೇಶ ಉತ್ತಮವಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರುವಾಗ ತುಘಲಕ್ ಆದೇಶವಾಗಿತ್ತು.

ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ರಚನೆ ಯಾದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಂವಾದಕ್ಕೆ ಹಿರಿಯ ಸಹಕಾರಿ ನಾಯಕ ಕುರಿಯನ್‌ ಅವರನ್ನು ಆಹ್ವಾನಿಸಲಾಗಿತ್ತು. ಸೌಹಾರ್ದ ಕಾಯ್ದೆಯಡಿ ರಿಜಿಸ್ಟ್ರಾರ್ ಆಗಿ ಅದೇತಾನೇ ನೇಮಕವಾಗಿದ್ದ ಐಎಎಸ್ ಅಧಿಕಾರಿಯನ್ನು ಕಾರ್ಯಕ್ರಮಕ್ಕೆ ಮುನ್ನ ಕುರಿಯನ್‌ ಅವರಿಗೆ ಪರಿಚಯಿಸಲಾಯಿತು. ಆಗ ಅವರು, ‘ಹಳೆಯ ಸಹಕಾರಿ ಕಾಯ್ದೆಯಂತೆ ಈ ಸೌಹಾರ್ದ ಕಾಯ್ದೆಗೂ ಮತ್ತೆ ಯಾಕೆ ಐಎಎಸ್ ಅಧಿಕಾರಿ ರಿಜಿಸ್ಟ್ರಾರ್ ಆಗಬೇಕು? ವೈ ನಾಟ್‌ ಎ ಕೊಆಪರೇಟರ್‌?’ ಎಂದರು. ಈಗ ರಿಜಿಸ್ಟ್ರಾರ್‌ ಮೂಲಕವೇ ಎಲ್ಲಾ ದೈನಂದಿನ ವ್ಯವಹಾರ ಗಳನ್ನೂ ಮಾಡುವ ಗುಲಾಮಗಿರಿಗೆ ಸೌಹಾರ್ದ ಸಹಕಾರಿ ಸಂಘಗಳನ್ನು ಸರ್ಕಾರ ದೂಡಿದೆ.

ಲೇಖಕ: ಸಂಸ್ಥಾಪಕ ಅಧ್ಯಕ್ಷ, ಕರ್ನಾಟಕ ರಾಜ್ಯ
ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT