ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಹೋರಾಟಕ್ಕೆ ಬೇಕು ಭಾಷೆಯ ಅಸ್ತ್ರ

ಕಿರಣ್‌ ಎಂ. ಗಾಜನೂರು, ಶ್ರೀನಿವಾಸ ಡಿ. ಮಣಗಳ್ಳಿ-ಕಲಬುರಗಿ
Published 25 ಜನವರಿ 2024, 19:30 IST
Last Updated 25 ಜನವರಿ 2024, 19:30 IST
ಅಕ್ಷರ ಗಾತ್ರ

ದಲಿತ ಸಂಘರ್ಷ ಸಮಿತಿಗೆ 50 ವರ್ಷಗಳು ತುಂಬಿದ ಸಂದರ್ಭವನ್ನು ಉಲ್ಲೇಖಿಸಿ ಗುರುಪ್ರಸಾದ್‌ ಕಂಟಲಗೆರೆ ಅವರು ಬರೆದಿರುವ ಲೇಖನವನ್ನು (ಪ್ರ.ವಾ., ಜ. 24) ಓದಿದಾಗ, ಕರ್ನಾಟಕದ ಸಾಮಾಜಿಕ ಚಳವಳಿಗೆ ಹೊಸ ದಿಕ್ಕನ್ನು ಸೂಚಿಸಿದ ಸಮಿತಿ ಮತ್ತು ಅದು ನಿರ್ವಹಿಸಿಕೊಂಡು ಬಂದ ಹೋರಾಟವು ಕಣ್ಣಮುಂದೆ ಹಾದುಹೋಯಿತು.

ಈ ಅವಧಿಯಲ್ಲಿ ದಲಿತರ ಹಕ್ಕು ಮತ್ತು ಆಶಯವನ್ನು ಎತ್ತಿಹಿಡಿಯಲು ಸಮಿತಿ ನಡೆಸಿದ ಬೀದಿ ಹೋರಾಟಗಳು ಅಸಂಖ್ಯ. ಸಮಿತಿಯ ನೂರಾರು ಹೋರಾಟಗಾರರು ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ದಲಿತ ಸಮುದಾಯಗಳ ಸಬಲೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಹಾಗೆ ನೋಡಿದರೆ, ರಾಜ್ಯದಲ್ಲಿ ಇಂದಿಗೂ ದುಡಿಯುವ ಮತ್ತು ವಂಚಿತ ಸಮುದಾಯಗಳ ಹಕ್ಕುಗಳ ಪರವಾಗಿ ಪ್ರಭುತ್ವವನ್ನು ಎದುರಿಸಿ ನಿಂತು ಬೀದಿ ಹೋರಾಟವನ್ನು ರೂಪಿಸುವ ಶಕ್ತಿ ಮತ್ತು ಸಾಮರ್ಥ್ಯ ಇರುವುದು ಮತ್ತು ಆ ರೀತಿಯ ಹೋರಾಟಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವುದು ಎಡ ಚಳವಳಿ ಮತ್ತು ದಲಿತ ಚಳವಳಿ ಮಾತ್ರ ಎನ್ನುವುದನ್ನು ಯಾವ ಸಂದೇಹವೂ ಇಲ್ಲದೆ ಹೇಳಬಹುದಾಗಿದೆ.

ಇಷ್ಟೊಂದು ಸಾಮರ್ಥ್ಯ ಇರುವ ಸಮಿತಿ ಇಂದು ಏಕೆ ಹಿನ್ನಡೆ ಅನುಭವಿಸುತ್ತಿದೆ? ಇಷ್ಟೆಲ್ಲ ಹೋರಾಟದ ಹೊರತಾಗಿಯೂ ಏಕೆ ಪರಿಣಾಮಕಾರಿ ರಾಜಕೀಯ ಶಕ್ತಿಯಾಗಿ ಬೆಳೆಯಲಿಲ್ಲ ಎಂಬ ಪ್ರಾಮಾಣಿಕ ಆತ್ಮವಿಮರ್ಶೆಯೂ ಸಂಘಟನೆಯ ಒಳಗೆ ಮತ್ತು ಹೊರಗೆ ನಡೆದಿದೆ. ಅದಕ್ಕೆ ಉತ್ತರವಾಗಿ, ವರ್ತಮಾನದಲ್ಲಿ ಸಮಿತಿಯ ಹಿನ್ನಡೆಗೆ ಸಂಘಟನೆಯಲ್ಲಿನ ಒಡಕು, ಸಂಪನ್ಮೂಲಗಳ ಅಲಭ್ಯತೆ, ಆಳುವ ಅಧಿಕಾರವು ಪಟ್ಟಭದ್ರರ ಕೈಯಲ್ಲೇ ಇರುವಂತಹ ಅಂಶಗಳನ್ನು ನಾವು ಬಹಳಷ್ಟು ಕಾಲ ಚರ್ಚಿಸಿದ್ದೇವೆ.

ಈ ವಾದಕ್ಕೆ ಒಂದು ಮಿತಿ ಇದೆ. ಏಕೆಂದರೆ ಎಪ್ಪತ್ತರ ದಶಕದಲ್ಲಿ ಸಂಘಟನೆ ರೂಪುಗೊಂಡಾಗ, ಮೇಲೆ ಹೇಳಿದ ಎಲ್ಲಾ ಮಿತಿಗಳು ಇದ್ದವು. ಅವುಗಳ ಹೊರತಾಗಿಯೂ ಸಂಘಟನೆ ಬೆಳೆಯಿತು. ಇದಕ್ಕೆ ಕಾರಣ ಎಂದರೆ, ಆಗ ಸಮಿತಿ ತನ್ನ ಸಂಘಟನೆ ಮತ್ತು ಅದನ್ನು ಆಧರಿಸಿದ ಸಾಹಿತ್ಯಕ ಚಳವಳಿಯನ್ನು ಕಟ್ಟಿದ ನಿರೂಪಣೆ ಜನರನ್ನು ತಾಕಿದ್ದವು. ಅಂದರೆ, ಸಮಿತಿಯು ಆಗ ಜನರೊಂದಿಗೆ ಸಂವಾದಿಸಲು ಬಳಸುತ್ತಿದ್ದ ನುಡಿಗಟ್ಟು ಜನರ ದಿನನಿತ್ಯದ ಬವಣೆಗಳನ್ನು ಪ್ರತಿನಿಧಿಸುತ್ತಿತ್ತು.

ಇಂದು ಹಾಗೆ ಆಗುತ್ತಿಲ್ಲ. ಇದಕ್ಕಿರುವ ಮುಖ್ಯ ಕಾರಣ, ಸಮಿತಿಯು ಬೀದಿ ಹೋರಾಟಗಳ ಜೊತೆ ಜೊತೆಗೆ ನಿರ್ವಹಿಸಬೇಕಾಗಿದ್ದ ಬೌದ್ಧಿಕ, ಸಾಂಸ್ಕೃತಿಕ ಚಳವಳಿಯನ್ನು ಯಾವ ಪ್ರಮಾಣದಲ್ಲಿ ನಿರ್ವಹಿಸಬೇಕಿತ್ತೋ ಆ ಪ್ರಮಾಣದಲ್ಲಿ ನಿರ್ವಹಿಸದೇ ಹೋದದ್ದು ಅನ್ನಿಸುತ್ತದೆ. ಇಂದು ಉದಾರೀಕರಣ ಮತ್ತು ಖಾಸಗೀಕರಣದಂಥ ನೀತಿಗಳ ಅವೈಜ್ಞಾನಿಕ ಜಾರಿಯ ಕಾರಣಕ್ಕೆ ಸೃಷ್ಟಿಯಾಗಿರುವ ಕಳಪೆ ದರ್ಜೆಯ ಉದ್ಯೋಗಗಳನ್ನು ನಿರ್ವಹಿಸುತ್ತಿರುವ ಬಹುತೇಕರು ದಲಿತ ಸಮುದಾಯಕ್ಕೆ ಸೇರಿದವರು ಎನ್ನುವ ವಾಸ್ತವವೂ ನಮ್ಮ ಮುಂದಿದೆ.

ಕಾಲದೊಂದಿಗೆ ಮನುಷ್ಯ ಶೋಷಣೆಯ ಸ್ವರೂಪ ಬದಲಾಗುತ್ತಿರುವ ಈ ಸಮಯದಲ್ಲಿ, ಈ ಕಾಲಕ್ಕೆ ಅಗತ್ಯವಾದ ಸಾಂಸ್ಕೃತಿಕ ರಾಜಕಾರಣ ಮತ್ತು ಭಾಷೆಯೊಂದನ್ನು ರೂಪಿಸುವಲ್ಲಿ ಹಿಂದಿದ್ದೇವೆ ಅನ್ನಿಸುತ್ತದೆ. ಉದಾಹರಣೆಗೆ, ಇಂದು ಬೀದಿಯಲ್ಲಿ ನಿಂತು ದಲಿತ ಸಮುದಾಯಗಳ ವರ್ತಮಾನದ ಬವಣೆಗಳ ಕುರಿತು ಮಾತನಾಡುತ್ತಿರುವ ಹೋರಾಟ ಗಾರನಿಗೆ ಲಭ್ಯವಿರುವುದು 70– 80ರ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಕಟ್ಟಿಕೊಟ್ಟಿರುವ ಸಂಕಥನ ಮತ್ತು ಭಾಷೆಯೇ ಆಗಿದೆ! ಅದು ಎಷ್ಟೇ ಆಪ್ತವಾಗಿದ್ದರೂ ಎಷ್ಟೇ ಸೃಜನಶೀಲವಾಗಿದ್ದರೂ ಈ ಕಾಲಕ್ಕೆ ಅಗತ್ಯವಾದ ಮಾರ್ಪಾಡಿಗೆ ಒಳಗಾಗಿಲ್ಲ ಎಂಬ ವಾಸ್ತವವನ್ನು ನಾವು ಗ್ರಹಿಸಿಕೊಂಡು ಮುಂದಕ್ಕೆ ಹೋಗಬೇಕಿದೆ.

ಈ ಸಾಂಸ್ಕೃತಿಕ ರಾಜಕಾರಣದ ಕೊರತೆಯ ಕಾರಣಕ್ಕೆ, 21ನೇ ಶತಮಾನದ ಸವಾಲುಗಳಿಗೆ ಎದುರಾಗುತ್ತಿರುವ ದಲಿತ ಸಮುದಾಯದ ಯುವಜನರು ‘ಸಾಂಸ್ಕೃತಿಕ ಅನಾಥಪ್ರಜ್ಞೆ’ಯನ್ನು ಅನುಭವಿಸುತ್ತಿದ್ದಾರೆ. ಇತ್ತ ಆಧುನಿಕವೂ ಅಲ್ಲದ ಅತ್ತ ಸಾಂಪ್ರದಾಯಿಕವೂ ಅಲ್ಲದ ಸಮಾಜವೊಂದ ರಲ್ಲಿ ಗಟ್ಟಿಯಾಗಿ ನಿಂತು ತಮ್ಮ ಸಮಸ್ಯೆಗಳ ಕುರಿತು ಸಂವಾದಿಸಬಹುದಾದ ಭಾಷೆಯ ಅಲಭ್ಯತೆ ಅವರನ್ನು ಹೋರಾಟ ವಿಮುಖರನ್ನಾಗಿ ಸುತ್ತಿದೆ ಅಥವಾ ಹೋರಾಟದ ಕುರಿತು ನಿರ್ಲಿಪ್ತ ಭಾವವೊಂದು ಆವರಿಸುತ್ತಿದೆ. ಇದರ ಪರಿಣಾಮವಾಗಿ, ಮೂಲಭೂತವಾದಿಗಳು ರೂಪಿಸುತ್ತಿರುವ ‘ಸಾಂಸ್ಕೃತಿಕ ನಿರೂಪಣೆ’ಗಳನ್ನು ಅವರು ಅಪ್ಪುತ್ತಿದ್ದಾರೆ. ಈ ಮೂಲಭೂತವಾದಿ ಧೋರಣೆಗಳ ಅಂತಿಮ ಬಲಿಪಶುಗಳು ಅವರೇ ಎಂದು ಅವರಿಗೆ ಅರಿವಾಗುವಷ್ಟರಲ್ಲಿ ಕಾಲ ಮಿಂಚಿಹೋಗಿರಲಿದೆ ಅನ್ನಿಸುತ್ತದೆ.

ಹಾಗಾಗಿ, 21ನೇ ಶತಮಾನದ ಸಮಸ್ಯೆಗಳನ್ನು ಎದುರಿಸಲು ಬೇಕಾದ ತಿಳಿವು ಯಾವುದು, ಅದನ್ನು ಯಾವ ಯಾವ ಚಿಂತನೆಯಿಂದ ಪಡೆಯಬಹುದು, ಸಾಂಸ್ಕೃತಿಕ ಅನಾಥಪ್ರಜ್ಞೆಯನ್ನು ಎದುರಿಸುತ್ತಿರುವ ಯುವಜನರ ಮುಂದೆ ಅವುಗಳನ್ನು ಚರ್ಚಿಸುವ ಭಾಷೆ ಯಾವುದು ಎಂಬ ಸಂಗತಿಗಳ ಆತ್ಮವಿಮರ್ಶೆಯ ಅಗತ್ಯವೊಂದಿದೆ. ಇಲ್ಲವಾದರೆ, ಹೆಚ್ಚುತ್ತಿ ರುವ ಸಂಪ್ರದಾಯವಾದಿ ಮತ್ತು ಮೂಲಭೂತವಾದಿ ನಿಲುವುಗಳು ಶೋಷಿತರ ನಡುವಿನ ಈ ಸಾಂಸ್ಕೃತಿಕ ಅನಾಥಪ್ರಜ್ಞೆಯನ್ನು ಬಳಸಿಕೊಂಡು ಅವರನ್ನೇ ಪರಸ್ಪರ ವಿರುದ್ಧವಾಗಿ ಹೋರಾಡಲು ಹಚ್ಚಿ, ನಮ್ಮ ‘ಸಾಮಾಜಿಕ ವ್ಯವಸ್ಥೆ’ಯನ್ನು ಹಿಂದಕ್ಕೆ ಒಯ್ಯುವ ಮತ್ತು ಅದನ್ನು ಎಲ್ಲರಿಗೂ ಒಪ್ಪಿಸಿ ಜನರನ್ನು ಆಳುವ ಎಲ್ಲಾ ಸಾಧ್ಯತೆಗಳು ಇವೆ.

ಕಿರಣ್‌ ಎಂ. ಗಾಜನೂರು, ಶ್ರೀನಿವಾಸ ಡಿ. ಮಣಗಳ್ಳಿ, ಕಲಬುರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT