ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಸಮತೋಲಿತ ಕೃಷಿ: ಉತ್ತಮ ಮಾರ್ಗ

ಕೃಷಿಯಲ್ಲಿ ಸಾವಯವ ಮತ್ತು ರಾಸಾಯನಿಕ ಗೊಬ್ಬರ ಎರಡನ್ನೂ ಸಮರ್ಪಕವಾಗಿ ಬಳಸುವುದು ಉತ್ತಮ ಮಾದರಿ
Last Updated 1 ನವೆಂಬರ್ 2021, 22:15 IST
ಅಕ್ಷರ ಗಾತ್ರ

ಸಾವಯವ ಕೃಷಿ ಬಗ್ಗೆ ಭಾರತ ಬಹಳ ಉತ್ಸಾಹ ತೋರತೊಡಗಿದೆ. ಶೂನ್ಯ ಬಂಡವಾಳ ಸಾವಯವ ಕೃಷಿಯ ಬಗ್ಗೆ ಅನೇಕರು ಪಾಠ ಹೇಳುತ್ತಿದ್ದಾರೆ. ರಾಜ್ಯ ಸರ್ಕಾರಗಳು ಸಾವಯವ ಕೃಷಿಯ ಉತ್ತೇಜನಕ್ಕೆ ಪ್ರತ್ಯೇಕ ವಿಭಾಗಗಳನ್ನು ಆರಂಭಿಸಿವೆ. ಆದರೆ, ಶ್ರೀಲಂಕಾ ಸಂಪೂರ್ಣ ಸಾವಯವ ಕೃಷಿ ನೀತಿ ಜಾರಿಗೆ ತಂದು, ಒಂದೇ ವರ್ಷದಲ್ಲಿ ವಿಪರೀತ ಆಹಾರ ಕೊರತೆ ಹಾಗೂ ಕೃಷಿ ಇಳುವರಿ ಹಾನಿಯಿಂದ ತೊಂದರೆ ಅನುಭವಿಸುತ್ತಿರುವುದು ಒಂದು ಎಚ್ಚರಿಕೆಯ ಗಂಟೆಯಂತೆ ಕೇಳಿಸುತ್ತಿದೆ.

ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಅವರು ಅತ್ಯಂತ ಅವಸರದಿಂದ ರಾಸಾಯನಿಕ ಗೊಬ್ಬರಗಳ ಆಮದನ್ನು ಪೂರ್ಣ ನಿಷೇಧಿಸಿದರು. ಸಂಪೂರ್ಣ ಸಾವಯವ ಕೃಷಿಯ ದೇಶ ಎಂಬ ಗೌರವಕ್ಕೆ ಪಾತ್ರವಾಗಬೇಕು ಎಂಬುದು ಅಧ್ಯಕ್ಷರ ಮಹತ್ವಾಕಾಂಕ್ಷೆಯಾಗಿತ್ತು.

ಬಹಳ ವಿಷಾದದ ಸಂಗತಿಯೆಂದರೆ, ಶ್ರೀಲಂಕಾದ ಕೃಷಿ ಆದಾಯ ಒಮ್ಮೆಲೇ ಶೇ 50ರಷ್ಟು ಕುಸಿದಿದೆ. ಹಣ ತರುವ ಚಹಾ ಮತ್ತು ರಬ್ಬರ್ ಉತ್ಪಾದನೆಯಲ್ಲಿ ಶೇ 60ರಷ್ಟು ಇಳಿಕೆಯಾಗಿದೆ. ಶ್ರೀಲಂಕಾದ ಚಹಾ ಬೆಳೆಯ ಹಿರಿಯ ಉದ್ಯಮಿ ಹೆರಮನ್ ಗುಣರತ್ನೆ ಅವರು ರಾಷ್ಟ್ರಪತಿಗೆ ಪತ್ರ ಬರೆದು, ಸಂಪೂರ್ಣ ಸಾವಯವ ಬೇಸಾಯ ವಿಧಾನದಿಂದ ಚಹಾ ಉದ್ದಿಮೆ ಸ್ಥಗಿತ
ಗೊಳ್ಳುವ ಭೀತಿ ವ್ಯಕ್ತಪಡಿಸಿದ್ದಾರೆ.

ಸಾವಯವ ಕೃಷಿ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಉತ್ತಮ ಎಂಬ ಬಗ್ಗೆ ಎರಡು ಮಾತಿಲ್ಲ. ಆದರೆ ಸಾವಯವ ಕೃಷಿಯಿಂದ ಎಲ್ಲರ ಹೊಟ್ಟೆ ತುಂಬಿಸುವುದು ಸಾಧ್ಯವಾಗದ ಮಾತು ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಸಮತೋಲಿತ ಕೃಷಿ ವಿಧಾನ ಅನುಸರಿಸುವುದೇ ಉತ್ತಮ ಪರಿಹಾರವಾಗ ಬಲ್ಲದು ಎಂಬುದನ್ನು ವೈಜ್ಞಾನಿಕ ಚಿಂತನೆಗಳಿಂದ ಗ್ರಹಿಸಬೇಕು.

ಭೂಮಿ ಅಸಂಖ್ಯಾತ ಸಜೀವ ಬ್ಯಾಕ್ಟೀರಿಯಾ ಹಾಗೂ ಫಂಗಸ್‍ನಿಂದ ಕೂಡಿದ ಅಮೂಲ್ಯ ಸಂಪತ್ತು. ಭೂಮಿಯಲ್ಲಿ ಬ್ಯಾಕ್ಟೀರಿಯಾ ಬೆಳೆಯಲು, ಭೂಮಿಯ ತೇವಾಂಶ ಚೆನ್ನಾಗಿ ಹಿಡಿದಿಟ್ಟುಕೊಳ್ಳಲು ಸಾವಯವ ಗೊಬ್ಬರ ತೀರಾ ಅವಶ್ಯ. ಭೂಮಿ ಹದಗೊಳ್ಳಲು ಸಾವಯವ ಗೊಬ್ಬರ ಸಹಕಾರಿ. ಆದರೆ ಬೆಳೆಗಳಿಗೆ ಬೇಕಾಗುವಷ್ಟು ಸಾರಜನಕ, ರಂಜಕ, ಪೊಟ್ಯಾಷ್ ಹಾಗೂ ಇತರ ಲವಣಗಳನ್ನು ಸಾವಯವ ಗೊಬ್ಬರದಿಂದ ಪಡೆಯುವುದು ಸಾಧ್ಯವಿಲ್ಲ.

ಸೆಗಣಿ, ಬೂದಿ, ಕಸಕಡ್ಡಿ, ಕಳಿತ ವಸ್ತುಗಳಿಂದ ತಯಾರಾದ ಸಾವಯವ ಗೊಬ್ಬರದಿಂದ ಬೆಳೆಗಳಿಗೆ ಶೇ 2ರಿಂದ 5ರಷ್ಟು ಮಾತ್ರ ನೈಟ್ರೋಜನ್ ಲಭಿಸುವುದು. ಬೆಳೆಗಳು ಚೆನ್ನಾಗಿ ಬೆಳೆಯುವುದಕ್ಕೆ ಶೇ 36ರಿಂದ 46ರಷ್ಟು ನೈಟ್ರೋಜನ್‍ ಬೇಕು. ರಾಸಾಯನಿಕ ಗೊಬ್ಬರಗಳಿಂದ ಮಾತ್ರ ಸಾಕಷ್ಟು ಪ್ರಮಾಣದಲ್ಲಿ ನೈಟ್ರೋಜನ್ ಹಾಗೂ ಇತರ ಲವಣಗಳನ್ನು ಪಡೆಯುವುದು ಸಾಧ್ಯ.

ಕೇವಲ ಸಾವಯವ ಗೊಬ್ಬರ ಬಳಸುವುದರಿಂದ ಕೃಷಿ ಉತ್ಪಾದನೆಗಳ ಪ್ರಮಾಣ ಬಹಳ ಕುಸಿಯುತ್ತದೆ. ಸಾವಯವ ಕೃಷಿ ವೆಚ್ಚವೂ ಬಹಳ ಹೆಚ್ಚಾಗುವುದು. ಸಾಮಾನ್ಯ ಬೆಲ್ಲ ಕಿಲೊಗೆ ₹ 30 ಆದರೆ ಸಾವಯವ ಕೃಷಿಯಿಂದ ಬೆಳೆದ ಕಬ್ಬಿನಿಂದ ತಯಾರಿಸಿದ ಬೆಲ್ಲಕ್ಕೆ ₹ 70 ಪಾವತಿಸಬೇಕಾಗುತ್ತದೆ. ಆಹಾರ ಧಾನ್ಯಗಳಿಗೂ ಇದು ಅನ್ವಯಿಸುತ್ತದೆ. ಭೂಮಿ ಮತ್ತು ಬೆಳೆಯ ಅವಶ್ಯಕತೆ ಅನುಸರಿಸಿ ಮೊದಲ ಹಂತದಲ್ಲಿ ಸಾವಯವ ಗೊಬ್ಬರ ಹಾಗೂ ಎರಡನೆಯ ಹಂತದಲ್ಲಿ ರಾಸಾಯನಿಕ ಗೊಬ್ಬರ ಬಳಸಬೇಕು. ಇದರಿಂದ ಉತ್ತಮ ಇಳುವರಿ ಮತ್ತು ಗುಣಮಟ್ಟದ ಬೆಳೆ ಬೆಳೆಯಬಹುದು. ಹೀಗೆ ಬೆಳೆದ ಬೆಳೆಯಲ್ಲಿ ರಾಸಾಯನಿಕದ ಪ್ರಮಾಣ ನಿರ್ಲಕ್ಷಿಸ ಬಹುದಾದಷ್ಟು ಕಡಿಮೆಯಾಗಿರುತ್ತದೆ.

ಸಾವಯವ ಗೊಬ್ಬರದ ಹೆಸರಿನಲ್ಲಿ ಬಹಳ ವಂಚನೆಗಳು ನಡೆಯುತ್ತವೆ. ರೈತರೇ ಮನೆಯಲ್ಲಿ ಸುಲಭ ಗೊಬ್ಬರ ತಯಾರಿಸಿ ಬಳಸುವುದು ಒಳ್ಳೆಯದು.

ಜಾಗತಿಕ ಹಸಿವು ಸೂಚ್ಯಂಕದ 2021ನೇ ಸಾಲಿನ ಪಟ್ಟಿ ಬಿಡುಗಡೆಯಾಗಿದೆ. ಇದರಲ್ಲಿ ಬ್ರೆಜಿಲ್, ಕುವೈತ್ ರಾಷ್ಟ್ರಗಳು ಮೊದಲ ಸ್ಥಾನ ಹಂಚಿಕೊಂಡರೆ, ಭಾರತ 101ನೇ ರ‍್ಯಾಂಕಿಗೆ ಕುಸಿದಿರುವುದು ಕಳವಳಕಾರಿ. ಆಹಾರ ಉತ್ಪಾದನೆಯಲ್ಲಿ ಎಚ್ಚರಿಕೆಯ ಹೆಜ್ಜೆ ಇಡುವುದು ಅವಶ್ಯ.

ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಕರ ಆದಾಯ ದ್ವಿಗುಣಗೊಳಿಸುವ ವಿಚಾರ ಹೇಳುತ್ತಿದ್ದಾರೆ. ಕೃಷಿ ಉತ್ಪಾದನೆಗೆ ಸಂತುಲಿತ ಕೃಷಿ ವಿಧಾನ ಮಾತ್ರ ಸಹಾಯಕವಾಗಬಲ್ಲದು. ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಎಕರೆ ಭೂಮಿಯಲ್ಲಿ 100 ಟನ್ ಕಬ್ಬು ಬೆಳೆಯುವ ರೈತರ ತಂಡಗಳಿವೆ. ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಇವರು ಸಮರ್ಪಕವಾಗಿ ಬಳಸುತ್ತಾರೆ. ಇದೊಂದು ಉತ್ತಮ ಮಾದರಿಯಾಗಿದೆ. ಆದರೆ ಶೇ 95ರಷ್ಟು ರೈತರು ಒಂದು ಎಕರೆ ಭೂಮಿಯಲ್ಲಿ 25ರಿಂದ 35 ಟನ್ ಕಬ್ಬು ಬೆಳೆಯುತ್ತಾರೆ. ಕಡಿಮೆ ಕಬ್ಬು ಬೆಳೆಯುವ ರೈತರು ತಮ್ಮ ಕೃಷಿಯ ವಿಧಾನ ಮತ್ತು ಚಿಂತನೆ ಬದಲಿಸಿಕೊಂಡರೆ, ಅವರೂ ಸುಲಭವಾಗಿ ಹೆಚ್ಚು ಕಬ್ಬು ಬೆಳೆಯಬಹುದು ಎಂದು ಕೃಷಿ ವಿಜ್ಞಾನಿಗಳಾದ ಡಾ. ವಿಜಯಕುಮಾರ ಗಿಡ್ಡನವರ, ಡಾ. ಆರ್.ಬಿ.ಖಂಡಗಾವಿ ಮತ್ತು ಎ.ಎಂ.ಸಾವಳಗಿ ಗಟ್ಟಿಯಾಗಿ ಹೇಳುತ್ತಾರೆ.

ಬಹಳಷ್ಟು ಕೃಷಿ ಸಂಶೋಧನೆಗಳು ನಡೆದಿವೆ. ಆದರೆ ಇವು ರೈತರ ಭೂಮಿಗೆ ತಲುಪಿಲ್ಲ. ಅಂಗಾಂಶ ಕೃಷಿ, ಹನಿ ನೀರಾವರಿ ಮತ್ತು ಸುಧಾರಿಸಿದ ಬೇಸಾಯ ಪದ್ಧತಿ ಅನುಸರಿಸುವುದರಿಂದ ಕೃಷಿ ಕ್ಷೇತ್ರ ಅಲ್ಪಾವಧಿಯಲ್ಲಿ ಖಂಡಿತ ಉನ್ನತಿ ಸಾಧಿಸುವುದು.

ಲೇಖಕ: ಸದಸ್ಯ, ದಕ್ಷಿಣ ಭಾರತ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ತಂತ್ರಜ್ಞರ ಮಹಾಮಂಡಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT