ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಗೋಡೆಗಳ ನಡುವೆ...

ದಿಗ್ಬಂಧನದ ಸಮಯದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಹಿಂಸೆಗೆ ಕಾರಣವೇನು?
Last Updated 10 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೊರೊನಾ– 2 ಸೋಂಕಿನಿಂದ ವಿಶ್ವದ ಹಲವೆಡೆ ವಿಧಿಸಿರುವ ಲಾಕ್‍ಡೌನ್‌ನಿಂದಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತುರ್ತು ಗಮನ ನೀಡಬೇಕೆಂದು ಎಲ್ಲ ರಾಷ್ಟ್ರಗಳಿಗೂ ಕರೆ ನೀಡಿದ್ದಾರೆ. ಹಾಗೆಯೇ ಭಾರತದಲ್ಲೂ ಮಹಿಳೆಯರ ಮೇಲೆ ಕೌಟುಂಬಿಕ ಹಿಂಸೆ ಹೆಚ್ಚುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಮತ್ತು ಮಹಿಳಾಪರ ಸ್ವಯಂಸೇವಾ ಸಂಸ್ಥೆಗಳಿಂದ ಕೇಳಿಬರುತ್ತಿದೆ. ಇದೂ ಒಂದು ‘ಸಾರ್ವಜನಿಕ ಅನಾರೋಗ್ಯ ಸಮಸ್ಯೆ’ ಎಂದು ಕೆಲವು ಸಾಮಾಜಿಕ ಚಿಂತಕರು ಅಭಿಪ್ರಾಯಪಟ್ಟಿದ್ದಾರೆ.

ಹಾಗಾದರೆ ಸಂಕಷ್ಟದ ಈ ಸಮಯದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಹಿಂಸೆಗೆ ಕಾರಣಗಳೇನು? ಲಾಕ್‍ಡೌನ್‍ಗೂ ಕೌಟುಂಬಿಕ ಹಿಂಸೆಗೂ ಎಲ್ಲಿಂದೆಲ್ಲಿಯ ಸಂಬಂಧ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೊಂದಿದೆ. ಅದೆಂದರೆ, ಲಾಕ್‍ಡೌನ್‌ಗಿಂತ ಮೊದಲು, ಪೊಲೀಸ್‌ ಠಾಣೆಗಳು ಮತ್ತು ಮಹಿಳಾ ಆಯೋಗಗಳಿಗೆ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬರುತ್ತಿದ್ದವು. ಆದರೆ ಈಗ ಇಂತಹ ದೂರುಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಕಾರಣವೇನು ಎಂಬುದನ್ನು ಅವಲೋಕಿಸಬೇಕಾಗಿದೆ.

ಕಳೆದ ವಾರ ದೆಹಲಿಯಲ್ಲಿ ಒಬ್ಬ ಮಹಿಳೆಗೆ ಕೆಮ್ಮು ಕಾಣಿಸಿಕೊಂಡಾಗ, ಮತ್ತೊಮ್ಮೆ ಕೆಮ್ಮಿದರೆ ಮನೆಯಿಂದ ಹೊರಹಾಕುವುದಾಗಿ ಅವಳ ಅತ್ತೆ– ಮಾವ ಬೆದರಿಕೆ ಒಡ್ಡಿದರು. ಅಸಹಾಯಕಳಾದ ಆಕೆ ಮಹಿಳಾ ಸಹಾಯವಾಣಿಗೆ ದೂರು ನೀಡಿದಳು. ಮತ್ತೊಬ್ಬ ಮಹಿಳೆ ಸುಸ್ತಾಗಿದೆ ಎಂಬ ಕಾರಣಕ್ಕೆ ಬೆಳಿಗ್ಗೆ ಏಳುವುದು ತಡವಾದಾಗ, ಇದು ಕೊರೊನಾ ಲಕ್ಷಣ ಇರಬಹುದು ಎಂದೆಣಿಸಿದ ಪತಿ, ಆಕೆಯನ್ನು ಹೊರಗೆ ಕೂರಿಸಿ, ತನ್ನಿಂದ ದೂರವಿರುವಂತೆ ಹೇಳಿ ಬಾಗಿಲು ಹಾಕಿಕೊಂಡ. ಆಗ ಆ ಮಹಿಳೆ ತನ್ನನ್ನು ರಕ್ಷಿಸುವಂತೆ ಕೋರಿ ಸಹಾಯವಾಣಿಯ ಮೊರೆ ಹೋದಳು.

ಲಾಕ್‍ಡೌನ್‍ನಿಂದ ಕುಟುಂಬದ ಸದಸ್ಯರೆಲ್ಲರೂ ಒಂದೇ ಸೂರಿನಡಿ ಇಡೀ ದಿನ ಕಳೆಯಬೇಕು. ಮನೆಯ ಯಜಮಾನನಿಗೂ ಕೆಲಸವಿಲ್ಲ, ಆದಾಯಕ್ಕೆ ಕತ್ತರಿ. ಅನಿಸಿಕೆಗಳನ್ನು ಹಂಚಿಕೊಳ್ಳಲು ಸ್ನೇಹಿತರಿಲ್ಲ. ಹೀಗಾದಾಗ ಹತಾಶೆ, ಕಿರಿಕಿರಿ ಸಹಜ. ಆಗ ಆತ, ಪತ್ನಿಯ ಮೇಲೋ ಮಕ್ಕಳ ಮೇಲೋ ಹರಿಹಾಯುತ್ತಾನೆ. ಕೆಲವೊಮ್ಮೆ ಚಿಕ್ಕಪುಟ್ಟದ್ದಕ್ಕೂ ಜಗಳಗಳಾಗುತ್ತವೆ.

ಲಾಕ್‍ಡೌನ್ ಅವಧಿಯಲ್ಲಿ ಗೃಹಿಣಿಯರಿಗೆ ಕೆಲಸ ಹೆಚ್ಚಾಗುತ್ತದೆ. ಉಳಿದವರು ಹರಟೆ ಹೊಡೆಯುತ್ತಾ, ‘ನನಗೆ ತಿನ್ನುವುದಕ್ಕೆ ಅದು ಬೇಕು, ಇದು ಬೇಕು’ ಎಂದು ಪ‍ದೇಪದೇ ಕೇಳುವುದು ಹೆಚ್ಚಾಗುತ್ತದೆ. ಇವರೆಲ್ಲರೂ ರಜೆಯ ಮಜಾ ಅನುಭವಿಸುತ್ತಿದ್ದರೆ,ತನಗೆ ಮಾತ್ರ ಸಜೆ ಎಂಬ ಭಾವನೆ ಕೆಲವು ಗೃಹಿಣಿಯರಲ್ಲಿ ಉಂಟಾಗಬಹುದು. ಅದರಿಂದ ಮಹಿಳೆಗೆ ಕೋಪ ಬಂದು, ಕುಟುಂಬದವರೊಂದಿಗೆ ಜಗಳಕ್ಕಿಳಿಯುವ ಸಾಧ್ಯತೆ ಇರುತ್ತದೆ.

ಮದ್ಯವ್ಯಸನಿಗಳು ಮದ್ಯ ಸಿಗದೇ ಹತಾಶರಾಗಿರುತ್ತಾರೆ. ಊಟ ಇಲ್ಲ, ನಿದ್ದೆ ಇಲ್ಲ, ತಾನೇನು ಮಾಡುತ್ತೇನೆಂಬ ಪರಿವೆ ಇರುವುದಿಲ್ಲ. ಇಂಥವರು ಹೆಂಡತಿ, ಮಕ್ಕಳ ಮೇಲೆ ವಿನಾಕಾರಣ ರೇಗುತ್ತಾರೆ. ಇದು ವಿಕೋಪಕ್ಕೆ ಹೋದಾಗ ಕೌಟುಂಬಿಕ ಹಿಂಸೆಗೆ ಕಾರಣವಾಗುತ್ತದೆ.

ಚಿಕ್ಕ ಮಕ್ಕಳು ಮನೆಯಲ್ಲಿದ್ದಾಗ ಕೂಗಾಟ, ಕಿರುಚಾಟ ಹೆಚ್ಚಾಗಿ, ಅವರನ್ನು ಸಂಭಾಳಿಸುವುದು ಪ್ರಯಾಸದ ಕೆಲಸ. ಇದಕ್ಕೆಲ್ಲಾ ತನ್ನ ಪತ್ನಿಯ ಅಸಾಮರ್ಥ್ಯವೇ ಕಾರಣ ಎಂದು ಗಂಡ ಆಕೆಗೆ ಬೈಯ್ಯಬಹುದು. ಅದನ್ನು ಕೇಳಿದ ಮಹಿಳೆಗೆ, ಹಾಗಾದರೆ ಇಷ್ಟು ದಿನ ತಾನು ಮಾಡಿದ್ದೆಲ್ಲವೂ ವ್ಯರ್ಥವೇ ಎಂದೆನಿಸಿ, ಆಕೆ ಖಿನ್ನತೆಯಿಂದ ಬಳಲಿದರೂ ಆಶ್ಚರ್ಯವಿಲ್ಲ.

ಲಾಕ್‍ಡೌನ್‍ನಿಂದಾಗಿ ಮನೆಯ ಹೊರಗೆ ಹೋಗುವಂತಿಲ್ಲ. ಪೊಲೀಸರಿಗೆ ದೂರು ನೀಡೋಣವೆಂದರೆ ಅವರೂ ಲಾಕ್‍ಡೌನ್ ನಿಯಂತ್ರಣದ ಕೆಲಸಗಳಲ್ಲಿ ಬ್ಯುಸಿ. ಇದಕ್ಕೆಲ್ಲ ಪರಿಹಾರ ಏನು?

ಮಹಿಳೆ, ಪುರುಷ ಯಾರೇ ಆಗಿರಲಿ, ‘ಲಾಕ್‍ಡೌನ್‌ನಿಂದ ನನ್ನ ದುಡಿಮೆ ಹೋಯಿತು, ಮುಂದೇನು ಮಾಡಲಿ?’ ಎಂಬ ನಕಾರಾತ್ಮಕ ಯೋಚನೆಯನ್ನು ಹೊಡೆದೋಡಿಸಿ. ಲಾಕ್‍ಡೌನ್ ನಮ್ಮ ಆರೋಗ್ಯ ಮತ್ತು ದೇಶದ ಕ್ಷೇಮಕ್ಕೆ ಎಂದು ಭಾವಿಸಿ. ಯಾವಾಗಲೂ ಕೆಲಸದ ಒತ್ತಡದಿಂದ ಬಳಲುತ್ತಾ, ಧಾವಂತದಲ್ಲಿ ಕಚೇರಿಗೆ ಓಡುತ್ತಿದ್ದ ದಿನಗಳನ್ನು ಜ್ಞಾಪಿಸಿಕೊಳ್ಳಿ. ಈಗ ಮನೆಯ ಊಟ– ತಿಂಡಿ ಸವಿಯುತ್ತಾ, ಮಕ್ಕಳೊಂದಿಗೆ ಸಂತೋಷವಾಗಿ ಕಾಲ ಕಳೆಯಲು ಸಮಯ ಸಿಕ್ಕಿತೆಂದು ಭಾವಿಸಿ. ಹಿಂದೆ, ಒತ್ತಡದ ನೆಪದಿಂದ ಮುಂದಕ್ಕೆ ಹಾಕುತ್ತಿದ್ದ ಕೆಲಸಗಳನ್ನು ಮಾಡಿ ಮುಗಿಸಬಹುದು.

ಕೇರಂ, ಪಗಡೆ, ಚನ್ನೆಮಣೆಯಂತಹ ಆಟಗಳನ್ನು ಆಡಬಹುದು. ಪಜಲ್ ಬಿಡಿಸಬಹುದು, ಒಳ್ಳೆಯ ಪುಸ್ತಕಗಳನ್ನು ಓದಬಹುದು, ಮಕ್ಕಳೊಂದಿಗೆ ಮನೆಯ ಕೆಲಸಗಳಲ್ಲಿ ಮಡದಿಗೆ ನೆರವಾಗಬಹುದು... ಇವು ಮನೆಯ ವಾತಾವರಣವನ್ನು ತಿಳಿಗೊಳಿಸುತ್ತವೆ. ಇದರಿಂದ ಮಕ್ಕಳೂ ಬದುಕುವ ಬಗೆಯನ್ನು ಕಲಿಯುತ್ತಾರೆ. ನಿಮ್ಮ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಳ್ಳಿ. ಜಾಗವಿದ್ದರೆ ಹೂಗಿಡಗಳನ್ನು ಬೆಳೆಸಿ. ಇದರಿಂದ ಎಲ್ಲರ ಮನಸ್ಸು ಶಾಂತವಾಗಿರುತ್ತದೆ. ಕೌಟುಂಬಿಕ ಹಿಂಸೆ ತಾನಾಗಿಯೇ ಮರೆಯಾಗುತ್ತದೆ. ಕುಟುಂಬದ ಸದಸ್ಯರಲ್ಲಿ ಪರಸ್ಪರ ಹೊಂದಾಣಿಕೆಗೆ ನಾಂದಿಯಾಗುತ್ತದೆ.

ಲೇಖಕ: ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT