ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಪುಸ್ತಕೋದ್ಯಮ– ಮುಳುವಾಗುತ್ತಿದೆ ‘ಗಿಮಿಕ್‌’

ಗಟ್ಟಿ ಸಾಹಿತ್ಯದ ವಿನಾ ಲೇಖಕರು ಮತ್ತು ಪ್ರಕಾಶಕರು ಮಾಡುವ ಯಾವುದೇ ಗಿಮಿಕ್‌ಗಳು ಒಬ್ಬ ಲೇಖಕನನ್ನು ಜನಪ್ರಿಯ ಸಾಹಿತಿಯನ್ನಾಗಿ ರೂಪಿಸುವುದಾಗಲಿ ಮಾಡಲಾರವು
Published : 5 ಸೆಪ್ಟೆಂಬರ್ 2024, 20:09 IST
Last Updated : 5 ಸೆಪ್ಟೆಂಬರ್ 2024, 20:09 IST
ಫಾಲೋ ಮಾಡಿ
Comments

ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪುಸ್ತಕ ಪ್ರಕಾಶಕ ಸೃಷ್ಟಿ ನಾಗೇಶ್ ತಮ್ಮ ಲೇಖನದ (ಚರ್ಚೆ, ಸೆ. 2) ಮೂಲಕ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಅವರು ಹೇಳಿದಂತೆ, ಕೆಲವು ಪ್ರಭಾವಶಾಲಿ ಪ್ರಕಾಶಕರು ಮಾತ್ರ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಿ ಹಣ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಪ್ರಬಲ ಪ್ರಕಾಶಕರು ತಾವು ಹಣ ಗಳಿಸುವ ಉಮೇದಿನಲ್ಲಿ ಸಣ್ಣಪುಟ್ಟ ಪ್ರಕಾಶನ ಸಂಸ್ಥೆಗಳನ್ನು ಮೂಲೆಗುಂಪಾಗಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪ್ರಕಾಶಕರ ನಡುವೆ ಅನಾರೋಗ್ಯಕರ ಸ್ಪರ್ಧೆ ಏರ್ಪಟ್ಟಿರುವುದು ಸುಳ್ಳಲ್ಲ. ಕೆಲವು ಪ್ರಕಾಶಕರು ಗ್ರಂಥಾಲಯ ಇಲಾಖೆಯನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಪ್ರಭಾವಶಾಲಿಗಳು ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರಿನಲ್ಲಿ ಪುಸ್ತಕಗಳನ್ನು ಪ್ರಕಟಿಸಿ ಗ್ರಂಥಾಲಯ ಇಲಾಖೆಗೆ ಪೂರೈಸುತ್ತಿದ್ದಾರೆ. ಒಬ್ಬ ಪ್ರಕಾಶಕ ಹತ್ತು ಹೆಸರುಗಳಿಂದ ಪುಸ್ತಕಗಳನ್ನು ಇಲಾಖೆಗೆ ಪೂರೈಸಿದರೆ ಆಗ ಒಂಬತ್ತು ಪ್ರಕಾಶಕರ ಅವಕಾಶಗಳನ್ನು ಕಸಿದುಕೊಂಡಂತೆ ಆಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ಒಂದೇ ಪ್ರಕಾಶನ ಸಂಸ್ಥೆಯ ಹೆಸರಿನಿಂದ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ಬದುಕುಳಿಯುವುದಾದರೂ ಹೇಗೆ ಸಾಧ್ಯ?

ಇನ್ನು ಕೆಲವು ಪ್ರಕಾಶಕರು ಪುಸ್ತಕ ಪ್ರಕಾಶನವನ್ನು ಪುಸ್ತಕೋದ್ಯಮವಾಗಿಸಲು ಹಲವಾರು ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಪುಸ್ತಕ ಬಿಡುಗಡೆ, ಮಾರಾಟ, ಚರ್ಚೆ, ಸಂವಾದಗಳು ಇಂದು ಹೊಸ ಪರಿವೇಷದಲ್ಲಿ ಕಾಣಿಸತೊಡಗಿವೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಔತಣಕೂಟಗಳ ಮೆರುಗು ನೀಡಲಾಗುತ್ತಿದೆ. ಇದನ್ನೆಲ್ಲ ಆರ್ಥಿಕವಾಗಿ ಬಲಶಾಲಿಗಳಾದ ಪ್ರಕಾಶಕರು ಮಾತ್ರ ಮಾಡಲು ಸಾಧ್ಯ. ಹೀಗಾಗಿ, ಬಲಶಾಲಿಗಳಲ್ಲದ ಪ್ರಕಾಶಕರು ಒಂದೆರಡು ಪುಸ್ತಕಗಳ ಪ್ರಕಟಣೆಯಲ್ಲೇ ಹೈರಾಣಾಗಿ ಪುಸ್ತಕ ಪ್ರಕಟಣೆಯ ಕೆಲಸವನ್ನೇ ಕೈಬಿಡುತ್ತಿದ್ದಾರೆ.

ಪ್ರತಿ ಪ್ರಕಾಶಕನೂ ಗ್ರಂಥಾಲಯ ಅವಲಂಬಿತನೆ ಎನ್ನುವುದು ಒಪ್ಪುವಂತಹ ಮಾತು. ಈ ವಿಷಯದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ತನ್ನ ಯೋಜನೆ ಮತ್ತು ನಿಯಮಗಳಲ್ಲಿ ಬಹಳಷ್ಟು ಬದಲಾವಣೆ ತರುವ ಅಗತ್ಯವಿದೆ. ಒಂದು ಪ್ರಕಾಶನ ಸಂಸ್ಥೆಯಿಂದ ಒಂದೊಂದು ಪುಸ್ತಕದ ಮುನ್ನೂರು ಪ್ರತಿಗಳನ್ನು ಮಾತ್ರ ಇಲಾಖೆ ಖರೀದಿಸುತ್ತದೆ. ಆಯ್ಕೆ ಸಮಿತಿಯು ಪ್ರಕಾಶನ ಸಂಸ್ಥೆ ಒಂದು ವರ್ಷದಲ್ಲಿ ಪ್ರಕಟಿಸಿದ ಎಲ್ಲ ಪುಸ್ತಕಗಳನ್ನು ಆಯ್ಕೆ ಮಾಡಲಾರದು. ಆಯ್ಕೆಗೆಂದು ಕಳುಹಿಸಿದ ಪುಸ್ತಕಗಳಲ್ಲಿ ಯಾವುದೋ ಮಾನದಂಡವನ್ನಾಧರಿಸಿ ಕೆಲವು ಪುಸ್ತಕಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಒಂದರ್ಥದಲ್ಲಿ ಇದು ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ. ಇಲಾಖೆಯ ಈ ನಡೆಯನ್ನು ಗಮನಿಸಿಯೇ ಕೆಲವು ಪ್ರಕಾಶಕರು ತಾವು ಒಂದು ವರ್ಷದಲ್ಲಿ ಪ್ರಕಟಿಸಿದ ಒಟ್ಟು ಪುಸ್ತಕಗಳನ್ನು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಆಯ್ಕೆಗೆ ಕಳುಹಿಸುತ್ತಾರೆ. ಇದು ಇಲಾಖೆಗೆ ಗೊತ್ತಿಲ್ಲದ ಸತ್ಯವೇನಲ್ಲ.

ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲೂ ಗ್ರಂಥಾಲಯಗಳನ್ನು ಸ್ಥಾಪಿಸಲಾಗಿದೆ ಎನ್ನುವ ಸತ್ಯ ಗ್ರಂಥಾಲಯ ಇಲಾಖೆಗೆ ಮನವರಿಕೆಯಾಗಬೇಕು. ಬಹಳಷ್ಟು ಸಂಖ್ಯೆಯಲ್ಲಿ ಗ್ರಂಥಾಲಯಗಳು ಸ್ಥಾಪನೆಯಾಗಿರುವಾಗ ಪ್ರಕಾಶಕರಿಂದ ಖರೀದಿಸುವ ಪುಸ್ತಕಗಳ ಸಂಖ್ಯೆ ಹೆಚ್ಚಬೇಕು. ಒಂದೆಡೆ ಇದು ಪ್ರಕಾಶಕರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿದಂತೆ ಆಗುತ್ತದೆ. ಇನ್ನೊಂದೆಡೆ, ಓದುಗರಿಗೆ ಓದಲು ಹೆಚ್ಚಿನ ಪುಸ್ತಕಗಳನ್ನು ಒದಗಿಸಿದಂತಾಗುತ್ತದೆ. ವಿಪರ್ಯಾಸದ ಸಂಗತಿ ಎಂದರೆ, ಸರ್ಕಾರವು ಗ್ರಂಥಾಲಯವನ್ನು ಅನುತ್ಪಾದನಾ ಕ್ಷೇತ್ರವೆಂದು ಪರಿಗಣಿಸಿದೆ. ಆರ್ಥಿಕ ಬೆಳವಣಿಗೆಯೊಂದೇ ಬೆಳವಣಿಗೆಯಲ್ಲ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಬೆಳವಣಿಗೆಗಳು ಕೂಡ ನಾಡಿನ ಬೆಳವಣಿಗೆಯ ಭಾಗವೆಂದು ಸರ್ಕಾರ ಅರಿತುಕೊಳ್ಳಬೇಕು.

ಇಂದು ಪ್ರಕಾಶಕರು ಮಾತ್ರ ಸಮಸ್ಯೆಗಳನ್ನು ಎದುರಿಸುತ್ತಿಲ್ಲ. ಹೊಸ ಲೇಖಕರೂ ಸಂಕಷ್ಟದ ಹಾದಿಯಲ್ಲಿ ನಿಂತಿದ್ದಾರೆ. ಪ್ರಕಾಶಕರು ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದೆ ಬರುತ್ತಿಲ್ಲ. ಹೊಸ ಲೇಖಕರು ಗೌರವಧನದ ಯಾವ ನಿರೀಕ್ಷೆಯೂ ಇಲ್ಲದೆ, ಯಾರಾದರೂ ತಮ್ಮ ಪುಸ್ತಕಗಳನ್ನು ಪ್ರಕಟಿಸಿದರೆ ಸಾಕು ಎನ್ನುವ ಮನಃಸ್ಥಿತಿಗೆ ತಲುಪಿದ್ದಾರೆ. ಸ್ಥಾಪಿತ ಹಾಗೂ ಜನಪ್ರಿಯ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗುವ ಪ್ರಕಾಶಕರಿಗೆ ಹೊಸ ಲೇಖಕರ ಪುಸ್ತಕಗಳನ್ನು ಪ್ರಕಟಿಸಲು ಬಂಡವಾಳ ಹೂಡುವ ಧೈರ್ಯ ಇಲ್ಲವಾಗಿದೆ. ಹಾಕಿದ ಬಂಡವಾಳ ವಾಪಸ್‌ ಆಗಲು ಹೆಚ್ಚಿನ ಪ್ರಕಾಶಕರು ನೆಚ್ಚಿಕೊಂಡಿರುವುದು ಗ್ರಂಥಾಲಯ ಇಲಾಖೆಯನ್ನು. ಅಲ್ಲಿಯೂ ನೂರೆಂಟು ರಾಜಕೀಯಗಳಿವೆ. ಪುಸ್ತಕಗಳನ್ನು ಪೂರೈಸಿ ಹಣ ಪಡೆಯುವುದು ಒಂದು ಹರಸಾಹಸದ ಕೆಲಸ.  ಜೊತೆಗೆ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲು ಪ್ರಬಲ ಪ್ರಕಾಶನ ಸಂಸ್ಥೆಗಳೊಂದಿಗೆ ಸ್ಪರ್ಧೆಗೆ ಇಳಿಯಬೇಕಾದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿ ಪ್ರಭಾವಶಾಲಿ ಪ್ರಕಾಶಕ ಮಾತ್ರ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಾನೆ.

ಇನ್ನು ಕೆಲವು ಲೇಖಕರು ಸ್ವತಃ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅಚ್ಚರಿಯ ಸಂಗತಿ ಎಂದರೆ, ಪುಸ್ತಕ ಪ್ರಕಟಿಸಿದ ನಾಲ್ಕೈದು ತಿಂಗಳಲ್ಲಿ ಎರಡನೇ ಮುದ್ರಣವನ್ನು ಹೊರತರುತ್ತಿದ್ದಾರೆ. ಓದುಗರ ನಿರುತ್ಸಾಹ, ಗ್ರಂಥಾಲಯ ಇಲಾಖೆಯ ಅಸಹಕಾರ, ಪುಸ್ತಕ ಮಳಿಗೆಗಳ ಕೊರತೆಯ ನಡುವೆ ಕೆಲವು ಲೇಖಕರು ಕಡಿಮೆ ಅವಧಿಯಲ್ಲಿ ಎರಡನೇ ಮುದ್ರಣವನ್ನು ತರುತ್ತಿದ್ದಾರೆ. ಕೇವಲ ಇನ್ನೂರು, ಮುನ್ನೂರು ಪ್ರತಿಗಳನ್ನು ಪ್ರಕಟಿಸಿ, ಮೊದಲ ಮುದ್ರಣದ ಪ್ರತಿಗಳೆಲ್ಲ ಖಾಲಿಯಾದವು ಎನ್ನುವಂತಹ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದು ನಾಗೇಶ್‌ ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಹೀಗೆ ಮಾಡುವುದರ ಮೂಲಕ ಲೇಖಕರು ಏನು ಸಾಧಿಸಿದಂತಾಗುತ್ತದೆ ಎನ್ನುವ ಪ್ರಶ್ನೆ ಮೂಡುವುದು ಸಹಜ. ಇಂತಹ ಕೃತ್ಯಗಳು ಆ ಲೇಖಕನನ್ನು ಜನಪ್ರಿಯ ಸಾಹಿತಿಯನ್ನಾಗಿ ರೂಪಿಸುವುದಾಗಲಿ ಮತ್ತು ಪುಸ್ತಕೋದ್ಯಮಕ್ಕೆ ನೆರವಾಗುವುದಾಗಲಿ ಮಾಡಲಾರವು. ಕೊನೆಗೂ ಓದುಗರ ವಲಯದಲ್ಲಿ ಹೆಚ್ಚು ದಿನಗಳ ಕಾಲ ನೆನಪಿನಲ್ಲಿ ಉಳಿಯುವುದು ಗಟ್ಟಿ ಸಾಹಿತ್ಯವೇ ವಿನಾ ಇಂತಹ ಗಿಮಿಕ್‍ಗಳಲ್ಲ. ಲೇಖಕರು ಮತ್ತು ಪ್ರಕಾಶಕರ ಇಂತಹ ಗಿಮಿಕ್‍ಗಳು ಪ್ರಕಾಶನ ಸಂಸ್ಥೆಗಳಿಗೆ ಮುಳುವಾಗುತ್ತಿವೆ.

ಪುಸ್ತಕಗಳನ್ನು ಖರೀದಿಸಿ ಓದುತ್ತಿರುವ ಓದುಗರಿಗೂ ಜಾಲತಾಣಗಳಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತಿಲ್ಲ. ಯಾವುದೇ ಪ್ರಕಾಶನ ಸಂಸ್ಥೆ ಅಥವಾ ಪುಸ್ತಕ ಮಳಿಗೆಯ ಜಾಲತಾಣಕ್ಕೆ ಭೇಟಿ ಕೊಟ್ಟರೆ ಅಲ್ಲಿ ಜನಪ್ರಿಯ ಲೇಖಕರು ಮತ್ತು ಪ್ರಕಾಶನ ಸಂಸ್ಥೆಗಳ ಪುಸ್ತಕಗಳ ಮಾಹಿತಿ ಮಾತ್ರ ಲಭ್ಯವಿರುತ್ತದೆ. ಪ್ರತಿವರ್ಷ ಸಾವಿರಾರು ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಆನ್‍ಲೈನ್‍ನಲ್ಲಿ ಸಿಗುತ್ತಿರುವ ಪುಸ್ತಕಗಳ ಸಂಖ್ಯೆ ಅಭಿಮಾನ ಪಡುವಂತಿಲ್ಲ. ಒಂದರ್ಥದಲ್ಲಿ ಅದೆಷ್ಟೋ ಅತ್ಯುತ್ತಮ ಪುಸ್ತಕಗಳು ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದೆ ಓದಿಗೆ ದಕ್ಕದೇ ಹೋಗುವ ಸಂದರ್ಭವೇ ಹೆಚ್ಚು.

ಪುಸ್ತಕಗಳ ಮಾರಾಟದ ವಿಷಯದಲ್ಲಿ ಪ್ರಕಾಶಕರ ನಡುವೆ ಒಂದು ಸೌಹಾರ್ದ ವಾತಾವರಣ ಸೃಷ್ಟಿಯಾಗಬೇಕು. ಆ ಮೂಲಕ ಪ್ರಕಾಶಕ ಮತ್ತು ಲೇಖಕ ಬೆಳೆಯುವಂತಾಗಬೇಕು. ಸದ್ಯದ ಸಂದರ್ಭದಲ್ಲಿ ಇಂತಹದ್ದೊಂದು ವಾತಾವರಣ ಸೃಷ್ಟಿಯಾಗುವ ಯಾವ ಸುಳಿವೂ ಗೋಚರಿಸುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT