ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೇಕಿದೆ ಮದ್ದಿನ ವ್ಯಾಧಿಗೊಂದು ಮದ್ದು!

ಕೋವಿಡ್‌ ಸಾಂಕ್ರಾಮಿಕದ ಇಂದಿನ ತುರ್ತು ಪರಿಸ್ಥಿತಿಯಲ್ಲಿ ಜಗತ್ತಿಗೆ ಬೇಕಿರುವುದು ಶುದ್ಧವಾದ ಗಾಳಿಯ ಮದ್ದೇ ಹೊರತು ಸಿಡಿಮದ್ದಲ್ಲ
Last Updated 15 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ಮಿಂಟೊ ಕಣ್ಣಿನ ಆಸ್ಪತ್ರೆಯು ದೀಪಾವಳಿಯಂದು ದಿನದ ಇಪ್ಪತ್ನಾಲ್ಕು ಗಂಟೆಯೂ ಸೇವೆಗೆ ಲಭ್ಯ’ ಎಂಬ ವರದಿಯನ್ನು ಪತ್ರಿಕೆಯಲ್ಲಿ ಓದಿ, ಆಸ್ಪತ್ರೆಯ ಸೇವಾತತ್ಪರತೆಗೆ ಹೆಮ್ಮೆಪಡಬೇಕೋ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಸುಡುವ ಪಟಾಕಿ ಈಡುಮಾಡುವ ಸಂಕಷ್ಟಕ್ಕೆ ಶಪಿಸಬೇಕೋ ಎಂದು ಒಂದು ಕ್ಷಣ ಗೊಂದಲವಾಯಿತು. ಕಣ್ಣು ಕಳೆದು ಕೊಂಡು, ಕೈ–ಕಾಲು ಸುಟ್ಟುಕೊಂಡು ಅಂಗವೈಕಲ್ಯಕ್ಕೆ ತುತ್ತಾಗುವಂತೆ ಮಾಡಬಹುದಾದ ‍ಪಟಾಕಿಯನ್ನು ನಾವು ಯಾಕಾದರೂ ಸುಡಬೇಕು? ಪ್ರತಿವರ್ಷ ದೀಪಾವಳಿಯ ಮರುದಿನದ ಪತ್ರಿಕೆ ಓದಲು ಭಯವಾಗುತ್ತದೆ. ಕಣ್ಣಿಗೆ, ಕೈ–ಕಾಲು, ತಲೆಗೆ ಬ್ಯಾಂಡೇಜು ಸುತ್ತಿಸಿಕೊಂಡ ಮಕ್ಕಳ ಫೋಟೊಗಳನ್ನು ನೋಡಿ ಎಂತಹವರ ಮನಸ್ಸೂ ವಿಹ್ವಲಗೊಳ್ಳುತ್ತದೆ. ಆದರೆ ಇದರಿಂದ ಪಾಠ ಕಲಿಯುವುದು ಯಾವಾಗ?

ಈ ಸಲ ಕೋವಿಡ್‌ನಿಂದಾಗಿ ಶ್ವಾಸಸಂಬಂಧಿ ಕಾಯಿಲೆ ಉಲ್ಬಣದ ಭಯವಿದ್ದಾಗಲೂ ಜನ ಹಿಂದಿನ ವರ್ಷಗಳಂತೆಯೇ ಪಟಾಕಿ ಹೊಡೆದದ್ದಕ್ಕೆ, ಇಡೀ ಬೆಂಗಳೂರು ಸಾಕ್ಷಿಯಾಯಿತು.

ಉತ್ತರಭಾರತದ ಅನೇಕ ಕಡೆ ಕೆಲವು ಸಮುದಾಯಗಳಲ್ಲಿ ಮದುವೆ ದಿಬ್ಬಣದಂತಹ ಸಂದರ್ಭದಲ್ಲಿ ಈಗಲೂ ಕುಶಾಲಿಗೆಂದು, ಪರ್ಮಿಟ್ ಹೊಂದಿರುವ ಬಂದೂಕುಗಳಿಂದ ಆ ಜನಜಂಗುಳಿ
ಯಲ್ಲೇ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆಗ ಆಕಸ್ಮಿಕವಾಗಿ ಗುಂಡು ತಗುಲಿ ಅನೇಕ ಸಾವು– ನೋವುಗಳು ಸಂಭವಿಸಿವೆ. ಇದನ್ನು ಮನಗಂಡ ಸರ್ಕಾರ ಈ ಪದ್ಧತಿಯನ್ನು ನಿಷೇಧಿಸಿದೆ. ಆದರೂ ಪೊಲೀಸರ ಕಣ್ತಪ್ಪಿಸಿ ಗುಂಡು ಹಾರಿಸಿ ಅನಾಹುತಕ್ಕೆ ಕಾರಣವಾಗುವುದು ನಡೆದೇ ಇದೆ.

ವಿದೇಶಿ ಅತಿಥಿಗಳು ಇಲ್ಲಿಗೆ ಬಂದಾಗ ಕೂಡ ಸರ್ಕಾರಿ ಪ್ರಾಯೋಜಿತ ಕುಶಾಲುತೋಪು ಹಾರಿಸು
ವುದನ್ನು ನೋಡುತ್ತೇವೆ. ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ, ಸೈನಿಕರು ತೀರಿಕೊಂಡಾಗಲೂ ಗೌರವಾರ್ಥ
ವಾಗಿ ಕೆಲ ಸುತ್ತು ಗುಂಡು ಹಾರಿಸುವುದು ಸಂಪ್ರದಾಯ ವೆಂಬಂತೆ ಆಗಿದೆ. ಸಂಭ್ರಮಗಳಲ್ಲೂ ಸೂತಕದಲ್ಲೂ ನಮಗೆ ‘ಮದ್ದು’ ಎಂಬುದು ಅತಿ ಮುದ್ದಿನ ವಸ್ತುವಾಗಿದೆ.

ಬಂದೂಕಿನ ಗುಂಡು ಮತ್ತು ನಾಡಬಾಂಬ್‌ನ ಕಿರಿಯ ತಮ್ಮನಂತಿರುವ ಪಟಾಕಿಗೂ ಅವುಗಳಿಗೆ ಬಳಸುವಂತಹ ಮದ್ದನ್ನೇ ತುಂಬಲಾಗುತ್ತದೆ. ಆದರೆ ಪಟಾಕಿಯಲ್ಲಿ ಮದ್ದಿನ ತೀವ್ರತೆ ಕಡಿಮೆ ಇರುತ್ತದೆ ಅಷ್ಟೆ. ಗಣೇಶ ಹಬ್ಬ, ದಸರಾ, ದೀಪಾವಳಿ, ಮೊಹರಂ, ಕ್ರಿಸ್‌ಮಸ್‌ ಸಂದರ್ಭಗಳಲ್ಲಷ್ಟೇ ಅಲ್ಲದೆ, ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ ಗೆದ್ದಾಗ, ನೆಚ್ಚಿನ ಸಿನಿಮಾ ನಾಯಕರ ಚಿತ್ರಗಳು ಬಿಡುಗಡೆಯಾದಾಗ, ಅಷ್ಟೇ ಏಕೆ ಕೆಲವರು ಸತ್ತಾಗ ಕೂಡ ಸುಡುವುದು ಈ ಮರಿ ಸಿಡಿಮದ್ದನ್ನೇ.

ಕಾಯಿಲೆಯನ್ನು ಗುಣಪಡಿಸುವ ಔಷಧಿಗೂ ಮದ್ದು ಎನ್ನುತ್ತೇವೆ. ಆದರೆ ಗಂಧಕದ ಸಿಡಿಮದ್ದಿಗೆ ಕೇವಲ ಸುಡುವ ಗುಣವಿದೆ. ರಕ್ತಸಿಕ್ತ ಇತಿಹಾಸದ ಪುಟಗಳಲ್ಲಿ ಇನ್ನೂ ಗಂಧಕದ ವಾಸನೆ ಇದೆ ಹಾಗೂ ಭೂಗೋಳದ ವರ್ತಮಾನದ ಮೇಲೆ ಗಂಧಕದ ಕರಾಳ ಮೋಡಗಳ ನೆರಳಿನಲ್ಲಿ ಅನೇಕ ದೇಶಗಳು ನಲುಗುತ್ತಿವೆ, ನರಳುತ್ತಿವೆ. ಹವಾಮಾನ ಬದಲಾವಣೆಯಂತಹ ಗಂಭೀರ ವಿಷಯಗಳ ಅಧ್ಯಯನಕಾರರಿಗೆ ಅತಿ ಅಪಾಯಕಾರಿಯಾಗಿ ಕಂಡುಬಂದ ಅಂಶವೆಂದರೆ, ಈ ಸಿಡಿಮದ್ದು ಮತ್ತು ಇಂಗಾಲದ ಮಾನಾಕ್ಸೈಡ್. ಗಂಭೀರ ಅಪಾಯ– ಪರಿಣಾಮಗಳ ಅರಿವಿದ್ದಾಗಲೂ ಮನುಷ್ಯ ಮದ್ದುಗುಂಡು, ಅಣ್ವಸ್ತ್ರಗಳ ಮೋಹದಿಂದ ಅಥವಾ ತನ್ನ ಅಖಂಡ ಬಲ ಪ್ರದರ್ಶನದ ಉಮೇದಿನಿಂದ ಹೊರತಾಗಿಲ್ಲ. ಕೋವಿಡ್‌ ಸಾಂಕ್ರಾಮಿಕದ ಇಂದಿನ ತುರ್ತು ಪರಿಸ್ಥಿತಿಯಲ್ಲಿ ಜಗತ್ತಿಗೆ ಬೇಕಿರುವುದು ಶುದ್ಧವಾದ ಗಾಳಿಯ ಮದ್ದೇ ವಿನಾ ಸಿಡಿಮದ್ದಲ್ಲ.

ದೆಹಲಿಯಂತಹ ಮಹಾನಗರ ಈ ಮೊದಲು ಡಿಸೆಂಬರ್ ಬಂತೆಂದರೆ ಚಳಿಗೆ ಗಡಗಡ ನಡಗುತ್ತಿತ್ತು. ಆದರೆ ಹವಾಮಾನ ಬದಲಾವಣೆಯಿಂದ, ಮನುಷ್ಯನ ವಿಕಾರಗಳಿಂದ ಸೃಷ್ಟಿಯಾದ ಹೊಂಜಿನ ಪರಿಣಾಮದಿಂದ ಇದೇ ದೆಹಲಿ ಮುದುಡುತ್ತದೆ. ಅಂತರರಾಷ್ಟ್ರೀಯ ವಿಮಾನಗಳ ಹಾರಾಟವನ್ನು ವಾರಾನುಗಟ್ಟಲೆ ನಿಷೇಧಿಸುತ್ತದೆ. ಕಾರುಗಳ ಓಡಾಟವನ್ನು ನಿಯಂತ್ರಿಸುತ್ತದೆ.

ಕಲುಷಿತ ವಾತಾವರಣ, ತೂತು ಬಿದ್ದ ಓಝೋನ್‌ ಪದರ, ಅತಿವೃಷ್ಟಿ– ಅನಾವೃಷ್ಟಿ, ಹದಗೆಡುತ್ತಿರುವ ಮಾನವನ ಆರೋಗ್ಯ, ಭೀತಿ ಮೂಡಿಸುತ್ತಿರುವ ಸಾಂಕ್ರಾಮಿಕ ರೋಗಗಳು... ಮನುಷ್ಯ ಬುದ್ಧಿ ಕಲಿಯಲು ಇಷ್ಟು ಸಾಕಾಗಿತ್ತು.

ಹಸಿರು ಪಟಾಕಿ ಎಂದರೆ ಏನು ಎಂದು ಖುದ್ದು ಸರ್ಕಾರಕ್ಕೇ ಗೊತ್ತಿರಲಿಲ್ಲ. ಅದಕ್ಕೆ ನಿಖರವಾದ ಮಾರ್ಗಸೂಚಿಗಳೂ ಇರಲಿಲ್ಲ. ಆದರೂ ಅದನ್ನು ಜಾರಿಗೊಳಿಸಿ ಏನೂ ಪ್ರಯೋಜನವಿಲ್ಲದಂತಾಗಿದೆ.

ಪ್ರತಿಯೊಂದನ್ನೂ ಕಾನೂನಿನ ಮೂಲಕವೇ ನಿಯಂತ್ರಣ ಮಾಡಬೇಕು ಎನ್ನುವುದಾದರೆ ಜನಸಾಮಾನ್ಯರ ಪರಿಸರ ಪ್ರಜ್ಞೆಗೆ ತುಕ್ಕು ಹಿಡಿಯಿತೇ? ಕುಶಾಲಿಗೆ ತೋಪು ಹಾರಿಸುವುದು, ಮದುವೆ ಮನೆಯಲ್ಲಿ ಗುಂಡು ಹಾರಿಸುವುದು ಪರಿಸರಕ್ಕೆ ಮಾರಕವಾದ ಗಂಧಕದ ಪಟಾಕಿ ಹೊಡೆಯುವುದು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪರಿಸರಕ್ಕೆ ಅಪಾಯಕಾರಿಯೇ.

ಕೋವಿಡ್‌ನ ಕರಾಳ ನೆರಳಿನಲ್ಲಿ ಭೀತವಾಗಿರುವ ಲೋಕಕ್ಕೆ ಬೇಕಿರುವುದು ಜೀವದಾಯಿನಿಯಂತಹ ಶುದ್ಧ ಆಮ್ಲಜನಕ. ಸುಡುವ ಮದ್ದುಗಳ ಬದಲಾಗಿ, ಸಮಾಜದ ಮಾನಸಿಕ ಸ್ವಾಸ್ಥ್ಯ ಗುಣಪಡಿಸುವಂತಹ ಮದ್ದುಗಳು ಪ್ರಯೋಗಾಲಯಗಳಿಂದ ಜನಸಾಮಾನ್ಯನಿಗೆ ತಲುಪಲಿ. ಕೊರೊನಾ ಬಾಧೆ ಉಲ್ಬಣಕ್ಕೆ ಕಾರಣವಾಗುವ ಸಿಡಿಮದ್ದುಗಳು ಮೊದಲು ತೊಲಗಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT