ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಿ ಹಂತದಲ್ಲಿ ಮಿತಿಗಳ ದರ್ಶನ

Last Updated 7 ಫೆಬ್ರುವರಿ 2019, 4:17 IST
ಅಕ್ಷರ ಗಾತ್ರ

ಪೀಯೂಷ್ ಗೋಯಲ್ ಅವರು ಮಂಡಿಸಿದ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ಧಾರಾಳವಾಗಿ ಹೊಗಳುವವರಾಗಲೀ ಅಥವಾ ನಿರಾಳವಾಗಿ ತೆಗಳುವವರಾಗಲೀ ಬಜೆಟ್ ನೀತಿಯ ಇತಿಮಿತಿಗಳತ್ತ ಚಿತ್ತ ಹರಿಸಿದಂತೆ ಕಾಣುವುದಿಲ್ಲ. ಸಂವಿಧಾನದ 112ನೇ ವಿಧಿ ತಿಳಿಸುವಂತೆ, ಕೇಂದ್ರ ಬಜೆಟ್ ಎಂದರೆ ಕೇಂದ್ರ ಸರ್ಕಾರದ ವಾರ್ಷಿಕ ಆದಾಯ ಮತ್ತು ವೆಚ್ಚಗಳ ವಿವರ. ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರತಿವರ್ಷ ಹಲವಾರು ನಿರೀಕ್ಷೆ, ನಿರಾಶೆಗಳನ್ನು ಸೃಜಿಸುವುದರಿಂದ, ಸೀಮಿತ ಜೀವಿತಾವಧಿ ಇದ್ದರೂ ಈ ವಿವರಕ್ಕೆ ಮಹತ್ವ ಬಂದುಬಿಟ್ಟಿದೆ.

ಬಜೆಟ್ ಪದದ ಮೂಲ ಇರುವುದು ಚರ್ಮದ ಚೀಲವೆಂಬ ಅರ್ಥವುಳ್ಳ ‘ಬೌಗೆಟ್’ ಎನ್ನುವ ಫ್ರೆಂಚ್ ಶಬ್ದದಲ್ಲಿ. ಅದು ತೆರಿಗೆ ಮತ್ತು ತೆರಿಗೆಯೇತರ ಆದಾಯಗಳ ಪ್ರಸ್ತಾಪಗಳನ್ನು, ಸರ್ಕಾರಿ ವೆಚ್ಚದ ಹಲವಾರು ಯೋಜನೆಗಳ ನೀಲನಕ್ಷೆಗಳನ್ನು ತುಂಬಿಕೊಂಡು, ನಮ್ಮ ದೇಶದ ಸಂಸತ್ತಿನಲ್ಲಿರುವ ಜನಪ್ರತಿನಿಧಿಗಳ ಮೇಲೆ ತಾಸುಗಟ್ಟಲೆ ಹಿಡಿತ ಸಾಧಿಸಬಲ್ಲ ದೊಡ್ಡ ಚೀಲ! ಬಜೆಟ್, ಸಂಸತ್ತಿನಿಂದ ಹೊರಬಿದ್ದು ರಾಷ್ಟ್ರಪತಿ ಅಂಕಿತ ಪಡೆದು ಅನುಷ್ಠಾನದ ಹಂತ ತಲುಪಿದಾಗ ಅದರ ಮಿತಿಗಳ ದರ್ಶನವಾಗುತ್ತದೆ. ಗೋಯಲ್ ಮಂಡಿಸಿದ ಬಜೆಟ್‌ನಲ್ಲಿರುವಂತೆ, ಸಣ್ಣ ರೈತರಿಗೆ ನಗದು ರೂಪದಲ್ಲಿ ಆರ್ಥಿಕ ನೆರವು, ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಇತ್ಯಾದಿ ಸಮಾಜಮುಖಿ ಯೋಜನೆಗಳಿಗೆ ಯಾವ ಗತಿ ಬರಬಹುದೆಂಬ ಪ್ರಶ್ನೆ ಇದ್ದೇ ಇದೆ.

ಬಜೆಟ್ ನೀತಿಯ ಸುತ್ತ ಬೇಡವಾದ ರೀತಿಯಲ್ಲಿ ಹೆಣೆದುಕೊಂಡ ರಾಜಕೀಯವನ್ನು ತಿಳಿಯಲು ಪ್ರಣವ್ ಮುಖರ್ಜಿ ಮಂಡಿಸಿದ ಕೆಲವು ಬಜೆಟ್‌ಗಳನ್ನು ನೆನಪಿಸಿಕೊಳ್ಳಬೇಕು. ಯುಪಿಎ ಮೊದಲ ಅವಧಿಯ ಅಂತ್ಯದಲ್ಲಿ ವಿತ್ತ ಸಚಿವರಾಗಿದ್ದ ಅವರು ಲೋಕಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು 2009ರ ಫೆ.16ರಂದು ಸಂಸತ್ತಿನಲ್ಲಿ ಮಧ್ಯಂತರ ಬಜೆಟ್ ಮಂಡಿಸಿದ್ದರು. ದೇಶ 2006-07ರ ಹೊತ್ತಿಗೆ ಆಗಿನ ಮಾನದಂಡದ ಪ್ರಕಾರ ಸರಾಸರಿ ಶೇ 9ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆ ದರ ದಾಖಲಿಸಿದ್ದನ್ನು ಅವರು ಬಜೆಟ್ ಭಾಷಣದಲ್ಲಿ ವೈಭವೀಕರಿಸಿದ್ದರು.

ಈ ಸಾಧನೆಗೆ ರೈತ ಸಮುದಾಯದ ಕಠಿಣ ಪರಿಶ್ರಮವೂ ಕಾರಣವೆಂದರು. ಮತ ಬೇಟೆಗೋಸ್ಕರ ರೈತರನ್ನು ‘ಹೀರೊ’ಗಳೆಂದು ಗುಣಗಾನ ಮಾಡಿದ್ದೇ ಮಾಡಿದ್ದು. ಲೋಕಸಭಾ ಚುನಾವಣೆಯ ಸಮರವೂ ಮುಗಿಯಿತು, ಯುಪಿಎ ಮತ್ತೆ ಅಧಿಕಾರದ ಗದ್ದುಗೆ ಹಿಡಿದೂ ಆಯಿತು. ವಿತ್ತ ಸಚಿವರಾಗಿ ಮುಂದುವರಿದ ಪ್ರಣವ್, 2009ರ ಜುಲೈ 6ರಂದು ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಅದರಲ್ಲಿ ರೈತರು ಹೀರೊಗಳಾಗಿ ಉಳಿದಿರಲಿಲ್ಲ! ವರಸೆ ಬದಲಿಸಿದ ಅವರು, ಅಂದಿನ ಬಜೆಟ್ ಭಾಷಣದ ಪ್ರಾರಂಭದಲ್ಲೇ ಬಜೆಟ್‌ನ ಮಿತಿಗಳನ್ನು ತಿಳಿಸುತ್ತ, ‘ಕೇವಲ ಒಂದು ಬಜೆಟ್ ನಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಸಾಧನವಾಗಲಾರದು’ ಎಂದು ಹೇಳಿದ್ದರು. ಹೀಗೆ ಹೇಳಿ ಇತರ ನೀತಿಗಳ ಮಹತ್ವವನ್ನು ಗುರುತಿಸಿದ್ದರು.

2007ರಿಂದ ಈಚೆಗೆ ಎಲ್ಲಾ ಆಯ–ವ್ಯಯಗಳ ಮೇಲೆ ಪ್ರತ್ಯಕ್ಷವಾಗಿ ಆಗಲೀ, ಪರೋಕ್ಷವಾಗಿ ಆಗಲೀ ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿಯ ಚಿಂತನೆ ಪ್ರಭಾವ ಬೀರುತ್ತಿದೆ. ಆರ್ಥಿಕ ಸುಧಾರಣೆಗಳ ಲಾಭ ಸಮಾಜದ ಕೆಲವೇ ವರ್ಗಗಳಿಗೆ ತಲುಪಿ ಅಸಮಾನತೆ ಹೆಚ್ಚುತ್ತಿರುವುದನ್ನು ಗಮನಿಸಿದ ಯುಪಿಎ ಸರ್ಕಾರ, ಒಳ
ಗೊಳ್ಳುವಿಕೆಯ ಅಭಿವೃದ್ಧಿ ಸಾಧಿಸುವ ಧ್ಯೇಯವುಳ್ಳ 11ನೇ ಪಂಚವಾರ್ಷಿಕ ಯೋಜನೆಯನ್ನು (2007-2012) ರೂಪಿಸಿತು. ‘ಒಳಗೊಳ್ಳುವಿಕೆಯುಳ್ಳ ಅಭಿವೃದ್ಧಿ ಎಂದರೆ ಅದು ಎಲ್ಲರ ಅಭ್ಯುದಯ’ ಎಂದುಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಸಾರಿದರು.

ಮಧ್ಯಂತರ ಬಜೆಟ್ ಮಂಡಿಸುವಾಗ ಪ್ರಣವ್ ತಮ್ಮ ನಾಯಕಿಯ ಹೇಳಿಕೆಯನ್ನು ಯಥಾವತ್ತಾಗಿ ಉದ್ಧರಿಸಿ ಧನ್ಯರಾಗಿದ್ದರು. ಉನ್ನತ ಸ್ಥಾನಗಳಲ್ಲಿದ್ದ ಮನಮೋಹನ್‌ ಸಿಂಗ್, ಚಿದಂಬರಂ ಅವರಿಂದ ಕೂಡ ಆಗಾಗ ಸೋನಿಯಾ ವಿಚಾರಧಾರೆಯ ಪುನರುಚ್ಚಾರ. ಈಗ ಪ್ರಧಾನಿ ನರೇಂದ್ರ ಮೋದಿ ‘ಸರ್ವರ ವಿಕಾಸ’ದ ಘೋಷಣೆ ಮೂಲಕ ಯುಪಿಎ ಚಿಂತನೆಯನ್ನು ಮುಂದುವರಿಸಿದ್ದಾರೆ.

ಎರಡಂಕಿ ಬೆಳವಣಿಗೆ ದರ ಸಾಧಿಸಿ ಹೊಸ ಉದ್ಯೋಗಾವಕಾಶಗಳ ಸೃಷ್ಟಿಯ ಮೂಲಕ ಬಡತನ ನಿರ್ಮೂಲನೆ ಮಾಡಿದರೆ ಮಾತ್ರ ಸರ್ವರ ವಿಕಾಸದ ಪರಿಕಲ್ಪನೆಗೆ ವಾಸ್ತವಿಕತೆ ಬರಲಿದೆ. ಮತ ಗಳಿಸುವ ತಂತ್ರಗಾರಿಕೆಯಾದ ಸರ್ವರ ಅಭ್ಯುದಯದ ಪರಿಕಲ್ಪನೆ ವಾಸ್ತವದಲ್ಲಿ ಸೋಲುತ್ತಿದೆ. ಅದೇ ಅವಾಸ್ತವಿಕ ಪರಿಕಲ್ಪನೆಯನ್ನು ಅಳವಡಿಸಿಕೊಂಡ ಬಜೆಟ್ ನೀತಿಯೂ ಸೋಲುತ್ತಿದೆ.

ಬಿಹಾರ, ಉತ್ತರಪ್ರದೇಶಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ದಿಗ್ಭ್ರಮೆ ಹುಟ್ಟಿಸುವ ರಾಜಕೀಯ ಬೆಳವಣಿಗೆಗಳನ್ನು ಕಾಣುತ್ತಿರುವ ಕರ್ನಾಟಕದಲ್ಲಿ, ಇದೇ ಶುಕ್ರವಾರ ಮೈತ್ರಿ ಸರ್ಕಾರದ ‘ಚರ್ಮದ ಚೀಲ’ ತೆರೆದುಕೊಳ್ಳಲಿದೆ. ಯಾವ ಕೊಡುಗೆಗಳನ್ನು ಈ ಚೀಲ ತನ್ನೊಳಗೆ ಹುದುಗಿಸಿಕೊಂಡಿದೆಯೋ ಕಾದು ನೋಡಬೇಕಿದೆ.

ಲೇಖಕ: ಅರ್ಥಶಾಸ್ತ್ರ ಪ್ರಾಧ್ಯಾಪಕ, ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ ವಿಭಾಗ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು, ಮೂಡುಬಿದಿರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT