ಭಾನುವಾರ, ಫೆಬ್ರವರಿ 28, 2021
23 °C
ವಿವಿಧ ಸವಾಲುಗಳನ್ನು ಎದುರಿಸಲು ಬೇಕಾದ ಯೋಜನೆಗಳನ್ನುಯಡಿಯೂರಪ್ಪ ನೇತೃತ್ವದ ಸರ್ಕಾರ ರೂಪಿಸಬೇಕಾಗಿದೆ

ಅಭಿವೃದ್ಧಿ ಪರ್ವ: ಅಗತ್ಯ, ಸವಾಲು

ಡಾ. ಜಿ.ವಿ. ಜೋಶಿ Updated:

ಅಕ್ಷರ ಗಾತ್ರ : | |

Prajavani

2004ರಿಂದ ಸರ್ಕಾರಗಳನ್ನು ಉರುಳಿಸುವ, ಮುಖ್ಯಮಂತ್ರಿಗಳನ್ನು ಬದಲಿಸುವ, ವೋಟ್ ಬ್ಯಾಂಕ್ ನಿರ್ಮಾಣ ಮಾಡುವ ರಾಜಕೀಯ ತಂತ್ರಗಾರಿಕೆಗಳಿಗೆ ಸ್ಪಷ್ಟ ಸಾಕ್ಷಿಯಾಗಿ ನಿಂತಿರುವ ವಿಧಾನಸೌಧದಲ್ಲಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ವಿಶ್ವಾಸಮತ ಪಡೆದರು. ನಂತರ ಗೆಲುವಿನ ಸಂಭ್ರಮದಲ್ಲಿದ್ದ ಅವರು, ಇನ್ನು ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಲಿದೆ ಎಂದು ಘೋಷಿಸಿದರು.

ನೇಕಾರರು ಮತ್ತು ಮೀನುಗಾರರ ಸಾಲ ಮನ್ನಾ ಮಾಡುವ ನಿರ್ಧಾರವನ್ನೂ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ, ಕೃಷಿಕರ ಸಾಲ ಮನ್ನಾ ಘೋಷಣೆಯೊಂದಿಗೆ ತಮ್ಮ ಆಡಳಿತ ಪರ್ವ
ಪ್ರಾರಂಭಿಸಿದ್ದರು. ಯಡಿಯೂರಪ್ಪ ಕೂಡ ಸಾಲ ಮನ್ನಾ ಘೋಷಣೆಯನ್ನು ಮೊಳಗಿಸುತ್ತ ತಮ್ಮ ಆಳ್ವಿಕೆ ಪ್ರಾರಂಭಿಸಿದ್ದಾರೆ. ಆದರೆ ಸಾಲ ಮನ್ನಾ ಯೋಜನೆ ರಾಜ್ಯದ ಅಭಿವೃದ್ಧಿ ಪ್ರಕ್ರಿಯೆಗೆ ಪೂರಕವಾಗಲು ಸಾಧ್ಯವೇ ಇಲ್ಲ. ಬದಲಾಗಿ, ಅದು ರಾಜ್ಯದ ವಿತ್ತೀಯ ಕೊರತೆಯ ಗಾತ್ರವನ್ನು ಅಥವಾ ಸಾಲದ ಹೊರೆಯನ್ನು ಹಿಗ್ಗಿಸುತ್ತದೆ. ಇದನ್ನು ರಾಜ್ಯ ಸರ್ಕಾರದ ಆರ್ಥಿಕ ಸಮೀಕ್ಷೆಗಳೇ ಪರ್ಯಾಯವಾಗಿ ಒಪ್ಪಿಕೊಂಡಿವೆ.

ಅಧಿಕ ಕರಭಾರ, ಸಾಲದ ಹೊರೆ ಹೊತ್ತ ಜನಸಮುದಾಯವಿರುವ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರವು ಹಿಂದಿನ ಸರ್ಕಾರಗಳು ಜಾರಿಗೊಳಿಸಿದ ಜನಪ್ರಿಯ ಯೋಜನೆಗಳನ್ನು ಮುಂದುವರಿಸಿದರೂ ಕಷ್ಟ, ಮುಂದುವರಿಸದಿದ್ದರೂ ಕಷ್ಟ. ಹೊಸ ಯೋಜನೆಗಳನ್ನು ಸಾರಿದರೂ ಕಷ್ಟ, ಸಾರದಿದ್ದರೂ ಕಷ್ಟ. ವಾಸ್ತವದಲ್ಲಿ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ನಡೆಸಿದ್ದು ‘ಭಾಗ್ಯ’ಗಳ ಸರ್ಕಾರ. ಈಗ ರಾಜ್ಯದಲ್ಲಿ ಇರುವುದು ಕಷ್ಟದಲ್ಲೇ ಹುಟ್ಟಿಕೊಂಡ ಬಿಜೆಪಿ ನೇತೃತ್ವದ ಸರ್ಕಾರ! ಕಣ್ಣಲ್ಲಿ ಕಣ್ಣಿಟ್ಟು ಗಮನಿಸುವ, ರೊಚ್ಚಿಗೆದ್ದ ವಿರೋಧಿಗಳಿರುವಾಗ, ಹಿಂದೆ ಮುಂದೆ ನೋಡದೆ ಅಭಿವೃದ್ಧಿ ಪರ್ವದ ಘೋಷಣೆ ಮಾಡಿ ಯಡಿಯೂರಪ್ಪ ತಮ್ಮ ಉತ್ತರ
ದಾಯಿತ್ವವನ್ನು ತಾವೇ ಹೆಚ್ಚಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಕೃಷಿಯ ಸ್ಥಿತಿ ವರ್ಷದಿಂದ ವರ್ಷಕ್ಕೆ ಬಿಗಡಾಯಿಸಿದೆ. ದೇಶದ ಒಟ್ಟು ಜಿಡಿಪಿಗೆ ರಾಜ್ಯದ ಕೃಷಿರಂಗದ ಕೊಡುಗೆ ಶೇ 14ರಿಂದ ಶೇ 8ಕ್ಕೆ ಇಳಿಕೆಯಾಗಿದ್ದಕ್ಕೆ 2016-17ನೇ ಸಾಲಿನ ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದರು. ಮೈತ್ರಿ ಸರ್ಕಾರದ ಶಕೆ ಪ್ರಾರಂಭವಾದ ಮೇಲೆ, ರೈತರಿಗೆ ನೆರವಾಗಲು ಸಮಗ್ರ ಕೃಷಿ ನೀತಿ ಸಾರುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ನೂತನ ಕೃಷಿ ನೀತಿಗೆ ಬೇಕಾದ ರೂಪುರೇಷೆಗಳನ್ನು ಸೂಚಿಸಲು ಕೃಷಿ ತಜ್ಞರ ಸಮಿತಿಯನ್ನೂ ರಚಿಸಿದ್ದರು. ಆನಂತರ ಕೃಷಿ ನೀತಿಯ ಬಗ್ಗೆ ಕಿಂಚಿತ್ ಚಿಂತಿಸಲೂ ಅವರಿಗೆ ಪುರುಸೊತ್ತು ಸಿಗಲಿಲ್ಲ!

ರಾಜ್ಯದ ಕೃಷಿ ರಂಗದ ಬೆಳವಣಿಗೆ ದರ ನಿಂತ ನೀರಿನಂತಾಗಿದೆ ಎಂದು 15ನೇ ಹಣಕಾಸು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್, ಜೂನ್‌ನಲ್ಲಿ ಬೆಂಗಳೂರಿಗೆ ಬಂದಿದ್ದಾಗ ಮಾರ್ಮಿಕವಾಗಿ ಹೇಳಿ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದರು. ನೀರಾವರಿ ಸೌಲಭ್ಯದ ಅಭಿವೃದ್ಧಿ ಆಗಲೇಬೇಕಾಗಿದೆ ಎಂದಿದ್ದ ಅವರು, ಅಂತರ್ಜಲ ವೃದ್ಧಿಯ ಅಗತ್ಯವನ್ನು ಒತ್ತಿ ಹೇಳಿದ್ದರು. ರಾಜ್ಯ ಸರ್ಕಾರ ಇದನ್ನೆಲ್ಲ ಗಮನಿಸಿ, ಸಮಗ್ರ ಕೃಷಿ ನೀತಿ ಘೋಷಿಸಬೇಕಾಗಿದೆ. 2008-13ರ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದರಿಂದ ಹಣ ಮತ್ತು ಸಮಯ ವ್ಯರ್ಥವಾಯಿತೇ ಹೊರತು ಯಾವ ಸಾಧನೆಯೂ ಆಗಲಿಲ್ಲ. ಮತ್ತೆ ಪ್ರತ್ಯೇಕ ಕೃಷಿ ಬಜೆಟ್‌ಗಳ ಪರ್ವ
ಪ್ರಾರಂಭವಾಗುವುದು ಸರಿಯಲ್ಲ.

‘ಬೆಂಗಳೂರು ಟೆಕ್ ಸಮ್ಮೇಳನ- 2018’ ಅನ್ನು ಉದ್ಘಾಟಿಸಿದ್ದ ಕುಮಾರಸ್ವಾಮಿ, ಆವಿಷ್ಕಾರ ಪ್ರಾಧಿಕಾರವನ್ನು ಸ್ಥಾಪಿಸುವ ಆಶ್ವಾಸನೆ ನೀಡಿದ್ದರು. ಅದು ಮೈತ್ರಿ ಸರ್ಕಾರದ ಅವಧಿಯಲ್ಲಿ ಈಡೇರಲೇ ಇಲ್ಲ. 2016ರ ಫೆ.3ರಂದು ಬೆಂಗಳೂರಿನಲ್ಲಿ ವಿಶ್ವ ಹೂಡಿಕೆದಾರರ ಸಮ್ಮೇಳನ ಉದ್ಘಾಟಿಸಿದ್ದ ಆಗಿನ ಕೇಂದ್ರ ಅರ್ಥ ಸಚಿವ ಅರುಣ್‌ ಜೇಟ್ಲಿ, ಕರ್ನಾಟಕದಲ್ಲಿರುವ ಅಪಾರ ಅಭಿವೃದ್ಧಿ ಸಾಧ್ಯತೆಯನ್ನು ಕೊಂಡಾಡಿದ್ದರು. ಯಡಿಯೂರಪ್ಪ ತಮ್ಮ ಪಕ್ಷದವರೇ ಆದ ಜೇಟ್ಲಿ ಅವರ ಈ ಮಾತನ್ನು ಸ್ಮರಿಸಿಕೊಂಡು, ರಾಜ್ಯದ ಆರ್ಥಿಕ ಬೆಳವಣಿಗೆ ದರ ಹೆಚ್ಚಳಕ್ಕೆ ನೆರವಾಗಬಲ್ಲ ಪ್ರತ್ಯೇಕ ಆವಿಷ್ಕಾರ ಪ್ರಾಧಿಕಾರದ ರಚನೆಗೆ ಮುಂದಾಗಬೇಕಾಗಿದೆ.

ರಾಜ್ಯದಲ್ಲಿ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ ಕೇಂದ್ರದಿಂದ ಬಂದ ಅನುದಾನ ಬಳಕೆಯಾಗದೆ ಯೋಜನೆ ಬಳಲುವಂತಾಗಿದೆ. ಹೀಗಾಗಿ, ನಗರೀಕರಣದ ಸವಾಲುಗಳನ್ನು ಎದುರಿಸಲು ಬೇಕಾದ ಯೋಜನೆಯನ್ನು ಸರ್ಕಾರ ರೂಪಿಸಬೇಕಾಗಿದೆ. ಮೂಲ ಸೌಕರ್ಯ ವೃದ್ಧಿಯ ಗುರಿಯುಳ್ಳ, ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಚಿತ್ರ ರೀತಿಯಲ್ಲಿ ಅವಗಣನೆಗೆ ಒಳಗಾದ ಉನ್ನತ ಶಿಕ್ಷಣ ರಂಗದ ಪ್ರಗತಿಗೆ ಕಾರಣವಾಗಬಲ್ಲ ಪೂರಕ ಬಜೆಟ್‌ ಅನ್ನು ಸರ್ಕಾರ ಮಂಡಿಸಬೇಕಾಗಿದೆ. ನಂಜುಂಡಪ್ಪ ಸಮಿತಿಯ ಶಿಫಾರಸುಗಳು ಜಾರಿಯಾಗುತ್ತಿರುವಾಗಲೇ ಪ್ರಾದೇಶಿಕ ಅಸಮಾನತೆ ಹೆಚ್ಚುತ್ತಿರುವುದು ಕೂಡ ಕಳವಳ ಹುಟ್ಟಿಸುವ ಸಂಗತಿ. ರಾಜ್ಯದ 2017-18ನೇ ಸಾಲಿನ ಆರ್ಥಿಕ ಸಮೀಕ್ಷೆಯು ತಲಾ ಆದಾಯ, ಕೈಗಾರಿಕೆ, ಮೂಲ ಸೌಕರ್ಯಗಳಲ್ಲಿರುವ ವ್ಯತ್ಯಾಸದ ಬೆಳಕಿನಲ್ಲಿ ಈ ಸತ್ಯವನ್ನು ಬಹಿರಂಗಪಡಿಸಿತ್ತು. ಅದನ್ನು ನಿವಾರಿಸುವ ಜವಾಬ್ದಾರಿ ಈಗ ಯಡಿಯೂರಪ್ಪ ಅವರ ಮೇಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು