ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಸಿನಿಮಾ: ಜೀವಂತಿಕೆಯ ಕೊಂಡಿ ಕಳಚಿದ್ದೆಲ್ಲಿ?

ಸಿನಿಮಾಗಳ ಬೌದ್ಧಿಕ ಸಿರಿತನ ಮರುಕಳಿಸಬೇಕಾದರೆ, ಈಗಿನ ನಿರ್ದೇಶಕರು ಹಾಗೂ ನಿರ್ಮಾಪಕರು ಯುಕ್ತ ‘ಹೋಂ ವರ್ಕ್’ ಮಾಡಬೇಕಾದುದು ಅಗತ್ಯ
Last Updated 28 ಜುಲೈ 2020, 21:33 IST
ಅಕ್ಷರ ಗಾತ್ರ

ಆರೋಗ್ಯದ ದೃಷ್ಟಿಯಿಂದ ಮನೆಯಲ್ಲೇ ಇರಬೇಕಾದ ಇಂದಿನ ಪರಿಸ್ಥಿತಿ, ಹಳೆಯ ಸಿನಿಮಾಗಳನ್ನು ನೋಡುವ ವ್ಯವಧಾನವನ್ನು ಒದಗಿಸಿದೆ. ‘ಅಬ್ಬಾ, ಎಂತಹ ಸುಂದರ ವಿನ್ಯಾಸದಲ್ಲಿ ಚೋರ ಗೋಡೆಗೆ ಕನ್ನ ಕೊರೆದಿದ್ದಾನೆ... ಆದರೆ ಆ ಜಾಣನಿಗೆ ನನ್ನ ಮನೆಯಲ್ಲಿ ಏನೂ ಸಿಗದೆಂದು ತೋಚಲಿಲ್ಲವಲ್ಲ!’- ಇದು 1941ರಲ್ಲಿ ತೆರೆಗೆ ಬಂದ ಕನ್ನಡದ ‘ವಸಂತಸೇನಾ’ ಚಿತ್ರದಲ್ಲಿ ಚಾರುದತ್ತ ಆಡುವ ಮಾತು. ಶೂದ್ರಕ ಮಹಾಕವಿಯ ‘ಮೃಚ್ಛಕಟಿಕ’ ನಾಟಕವನ್ನು, ಅದೂ ತಾಂತ್ರಿಕತೆ ಇನ್ನೂ ಚಿಗುರೊಡೆಯುತ್ತಿದ್ದ ಕಾಲದಲ್ಲಿ ತೆರೆಗೆ ತಂದವರ ಶ್ರದ್ಧೆ, ಸಾಹಸ ಅರಿವಾಗಿ ಮನಸ್ಸು ತುಂಬಿತು.

ಕೊರೊನಾ ಸೋಂಕು ಜಾಗತಿಕವಾಗಿ ಸಿನಿಮಾ ಜಗತ್ತನ್ನು ಅಲ್ಲೋಲಕಲ್ಲೋಲವಾಗಿಸಿದೆ. ರೋಗ ತಹಬಂದಿಗೆ ಬಂದು, ಕನಿಷ್ಠ ಸುರಕ್ಷತೆಯೊಂದಿಗಾದರೂ ಸಿನಿಮಾ ಮಂದಿರಗಳು ತೆರೆದುಕೊಳ್ಳಲೆಂದು ಆಶಿಸೋಣ. ಕನ್ನಡದ ಸಂದರ್ಭದಲ್ಲಿ ಈ ನಿಟ್ಟಿನಲ್ಲಿ ಒಂದಷ್ಟು ಆತ್ಮಾವಲೋಕನವೂ ಆಗಬೇಕಿದೆ.

ಸಿನಿಮಾಗೆ ಈಗ ಹಿಂದಿದ್ದ ಜನಪ್ರಿಯತೆ ಇಲ್ಲ. ಜನಸಂಖ್ಯೆ ಏರಿದಂತೆ ಸಿನಿಮಾ ಮಂದಿರಗಳ ಸಂಖ್ಯೆಯೂ ಹೆಚ್ಚಬೇಕಿತ್ತು. ಆದರೆ ಒಂದೊಂದೇ ಕೆಡವಿಕೊಂಡು ಮಾಲ್‍ಗಳಾಗುತ್ತಿವೆ. ‘ಅಯ್ಯೋ... ನಾನು ಸಿನಿಮಾ ನೋಡಿ ದಶಕಗಳೇ ಆದವು’ ಅಂತ ನಲವತ್ತರ ಪ್ರಾಯದವರೂ ಹೇಳುವುದಿದೆ. ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿ, ಮಧ್ಯಂತರದ ನಂತರ ಬಂದದಾರಿ ಹಿಡಿಯುವವವರ ಸಂಖ್ಯೆ ಕಡಿಮೆಯೇನಿಲ್ಲ. ಏಕೆ ಹೀಗಾಗುತ್ತಿದೆ? ಒಂದು ಕಾಲದಲ್ಲಿ ಒಂದೊಂದೂ ಸಿನಿಮಾದ ಹಾಡು, ಹಾಸ್ಯ, ಸಂಭಾಷಣೆಯ ಗುಂಗಿನಿಂದ ಹೊರಬರುವುದೇ ಜನಮಾನಸಕ್ಕೆ ಕಷ್ಟವಾಗಿರುತ್ತಿತ್ತು. ಅಂದಿನ ಸಿನಿಮಾಗಳ ಸಾತ್ವಿಕ ಜೀವಂತಿಕೆ ಎಲ್ಲಿ, ಹೇಗೆ ಕಳಚಿತು? ಈ ನ್ಯೂನತೆಗೆ ಮೊಬೈಲು, ವಾಟ್ಸ್‌ಆ್ಯಪ್, ಯುಟ್ಯೂಬ್, ಲ್ಯಾಪ್‍ಟಾಪ್ ವಗೈರೆ ಕಟಕಟೆಯಲ್ಲಿ ನಿಲ್ಲಬೇಕಿಲ್ಲ! ದಟ್ಟವೂ ನಿಷ್ಠುರವೂ ಆದ ವಾಸ್ತವ ಬೇರೆಯೇ ಇದೆ.

ಕಥೆಗೆ ನಾಯಕ ಎಂಬುದಕ್ಕೆ ಬದಲಾಗಿ ನಾಯಕನಿಗಾಗಿ ಕಥೆ ಹೆಣೆಯುವುದು. ಹೋಗಲಿ ಅಂದರೆ ಆ ಕಥೆಯಲ್ಲೂ ಹೊಸತನ ಎನ್ನುವುದು ಇರುವುದಿಲ್ಲ. ಅವವೇ ನಮೂನೆಯ ಅತಿರೇಕಗಳು. ಇನ್ನು ಹಾಡುಗಳ ಬಗ್ಗೆ ಹೇಳುವಂತೆಯೇ ಇಲ್ಲ. ಶಾಲಾ ಪ್ರಾರ್ಥನೆಯಲ್ಲೂ ಝೇಂಕರಿಸುತ್ತಿದ್ದ ಆ ಕಾಲದ ಸಿನಿಮಾ ಗೀತೆಗಳೆಲ್ಲಿ, ಹೊಡಿ, ಬಡಿ, ಕಡಿ ಎನ್ನುವ ಈ ಕಾಲದ ಹಾಡುಗಳೆಲ್ಲಿ? ಅಂದು ಶಾಸ್ತ್ರೀಯ ರಾಗ ಸಂಯೋಜನೆ, ಇಂದು ಅರ್ಥಶುದ್ಧಿ ಕಡೆಗಣಿಸಿದ ಪ್ರಾಸ ನಿಯೋಜನೆ.

ಅರ್ಧ ಶತಮಾನದ ಹಿಂದಿನ ಮಾತು. ಒಬ್ಬ ಪ್ರಸಿದ್ಧ ನಿರ್ದೇಶಕರಿಗೆ ‘ನಿಮ್ಮ ಚಿತ್ರ ಕಪ್ಪುಬಿಳುಪಾದರೂ
ರಾಷ್ಟ್ರ ಪ್ರಶಸ್ತಿ ಗಳಿಸಿತಲ್ಲ?’ ಎಂದು ಅಭಿಮಾನಿಯೊಬ್ಬರು ಕೇಳಿದರಂತೆ. ಅದಕ್ಕೆ ಆ ನಿರ್ದೇಶಕರ ಪ್ರತಿಕ್ರಿಯೆ ಹೀಗಿತ್ತು, ‘ಪ್ರೇಕ್ಷಕರು ತಮಗೆ ಬೇಕಾದಂತೆ ವರ್ಣರಂಜಿತಗೊಳಿಸಬಹುದೆಂದು ಆಯ್ಕೆ ಸಮಿತಿ ಭಾವಿಸಿರಬೇಕು!’ ಸಿನಿಮಾ ತಯಾರಕರು ಜನಜೀವನದ ಬದುಕಿನ ಶೈಲಿಯನ್ನು ಆಗಿಂದಾಗ್ಗೆ ತಮ್ಮ ಆವಾಹನೆಗೆ ತಂದುಕೊಳ್ಳದಿದ್ದರೆ ಉತ್ತಮ ಚಿತ್ರಗಳನ್ನು ಒದಗಿಸಲಾರರು.

ಎಷ್ಟು ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಯಿತು, ಸೆಟ್ ಎಷ್ಟು ಭರ್ಜರಿಯಾಗಿದೆ, ಯಾವ್ಯಾವ ಸ್ಥಳಗಳಲ್ಲಿ ಚಿತ್ರೀಕರಣವಾಗಿದೆ, ಕ್ಲೈಮ್ಯಾಕ್ಸ್‌ನಲ್ಲಿ ಎಷ್ಟು ಆನೆ, ಸಿಂಹ, ಕಾರು, ಹೆಲಿಕಾಪ್ಟರ್ ಬಳಕೆಯಾಗಿವೆ ಎಂಬುದೆಲ್ಲ ಪ್ರೇಕ್ಷಕರಿಗೆ ಬೇಕಿಲ್ಲ. ಅವರು ನಿರೀಕ್ಷಿಸುವುದು ಸಾಧಾರಣವಾದುದರಲ್ಲೇ ಅಸಾಧಾರಣವಾದುದನ್ನು, ಸರಳತೆಯಲ್ಲಿನ ವೈಭವವನ್ನು, ತನ್ಮೂಲಕ ಸಾಂದ್ರಗೊಳ್ಳುವ ಒಂದು ಸಂದೇಶವನ್ನು. ವಿಪರ್ಯಾಸವೆಂದರೆ, ಒಂದು ಸಿನಿಮಾ ಬಿಡುಗಡೆಗೊಳ್ಳುವ ಮುನ್ನ ಚುನಾವಣೆಯನ್ನೂ ಮೀರಿಸಿದಂತೆ ಅಬ್ಬರದ ಪ್ರಚಾರ ನಡೆಯುತ್ತದೆ. ಒಳ್ಳೆಯ ಕಥಾವಸ್ತು, ಅಭಿನಯ, ನಿರೂಪಣಾ ವಿನ್ಯಾಸವಿದ್ದರೆ ನೋಡುಗರ ಮೆಚ್ಚುಮಾತಿನ ಹೊಳೆಯೇ ಚಿತ್ರಕ್ಕೆ ಪ್ರಚಾರವಾಗುತ್ತದೆ.
ಗತಿಸಿದ ಕಲಾವಿದರ ಪ್ರತಿಭೆ, ನಟನಾ ಚಾತುರ್ಯ ಹಾಗೂ ಜೀವನವನ್ನು ಆದರ್ಶವಾಗಿಸಿಕೊಳ್ಳುವುದು
ಸರಿಯೆ. ಆದರೆ ಅವರ ಸ್ತುತಿಗಿಂತ ಹೆಚ್ಚಾಗಿ, ಅವರಂಥವರು ರೂಪುಗೊಳ್ಳಲೆಂಬ ಆಶಯ ಹಿರಿದು.

ಹಾಸ್ಯ ಎಂಬುದು ನವಿರನ್ನು, ಅದಕ್ಕೂ ಮಿಗಿಲಾಗಿ ಮುಗ್ಧತೆಯನ್ನು ಕಳೆದುಕೊಂಡಿದೆ. ಅಶ್ಲೀಲ, ದ್ವಂದ್ವಾರ್ಥ ತಾಂಡವವಾಡುತ್ತಿವೆ. ಮುಂದಿನ ಪ್ರಸಂಗಗಳನ್ನು ಸುಲಭವಾಗಿ ಯಾರಾದರೂ ಊಹಿಸಬಹು
ದಾದ ಸಿದ್ಧಮಾದರಿ. ‘ತೌಡು ಕುಟ್ಟುವ’ ಕಥಾ ಹಂದರ. ಟಿಕೆಟ್ ಕೊಳ್ಳಲು ಸರದಿಯಲ್ಲಿ ನಿಂತವರು, ಅದಾಗಲೇ ನೋಡಿ ಹೊರಬರುತ್ತಿರುವವರಿಂದ ‘ಫೈಟಿಂಗ್ ಕಡಿಮೆ’ ಎಂಬ ಮಾಹಿತಿ ಪಡೆದು ಚದುರುವ ದಿನಮಾನಗಳಲ್ಲಿ ನಾವಿಲ್ಲ. ಜನ ಮನರಂಜನೆಯಷ್ಟೇಸಮಕಾಲೀನ ಸವಾಲು, ಸಮಸ್ಯೆಗಳೊಂದಿಗೆ ಕಿಂಚಿತ್ತಾದರೂ ಅನುಸಂಧಾನವನ್ನು ತೆರೆಯಿಂದ ಬಯಸುತ್ತಾರೆ.

ತಾವು ನಿರ್ವಹಿಸುವ ಹಾಡಿನ ದೃಶ್ಯಗಳಿಗೆ ಪಾತ್ರಧಾರಿಗಳೇ ಹಾಡುತ್ತಿದ್ದ ಕಾಲವಿತ್ತು. ಇದರಿಂದ ಪಾತ್ರಕ್ಕೆ ಕಳೆ ಅನನ್ಯ. ಆದರೆ ಇಂದು ಹಾಡುವುದಿರಲಿ, ಧ್ವನಿ ಅವರದಾಗಿದ್ದರೆ ಅದೇ ಅತಿಶಯ. ಸಿನಿಮಾಗಳ ಬೌದ್ಧಿಕ ಸಿರಿತನ ಮರುಕಳಿಸಲು ನಿರ್ದೇಶಕರು, ನಿರ್ಮಾಪಕರಿಗೆ ಯುಕ್ತ ‘ಹೋಂ ವರ್ಕ್’ ಅಗತ್ಯ. ಎಂತಹ ಉತ್ತಮ ಸಿನಿಮಾ ನೀಡಬೇಕು ಎನ್ನುವುದರ ಬಗ್ಗೆ ಸಿನಿಮಾ ಕರ್ತೃಗಳ ನಡುವೆ ಆಗಿಂದಾಗ್ಗೆ ಸಂವಾದ, ಚರ್ಚೆಗಳು ಸಾಗಬೇಕು. ಸಮಾಜಶಾಸ್ತ್ರ ವಿಭಾಗದ ಒಂದು ಘಟಕವಾಗಿ ಸಿನಿಮಾ ಕುರಿತ ಅಧ್ಯಯನ ಪೀಠ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಇಲ್ಲದಿರುವುದು ಗಂಭೀರ ಕೊರತೆಯೇ ಹೌದು. ಸಿನಿಮಾಗಳು ಹೆಚ್ಚಿಸಿಕೊಳ್ಳಬೇಕಾದದ್ದು ವೀಕ್ಷಕರನ್ನಲ್ಲ, ಪ್ರೇಕ್ಷಕರನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT