ಮಂಗಳವಾರ, ಜೂನ್ 2, 2020
27 °C
ಕ್ಷೇತ್ರಗಳು ಬೇರೆ ಬೇರೆ. ಆದರೆ, ಎಲ್ಲರ ಯಾತನೆ ಮಾತ್ರ ಒಂದೇ

ಸಂಕಷ್ಟವೆಂಬ ದೋಣಿಯ ಸಹಪಯಣಿಗರು

ಸಂಗತ Updated:

ಅಕ್ಷರ ಗಾತ್ರ : | |

Prajavani

ಲಾಕ್‍ಡೌನ್‌ನಿಂದಾಗಿ ಮನುಷ್ಯಸಮೂಹ ಅನಪೇಕ್ಷಿತ ಗೃಹಬಂಧನಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ, ಬೇರೆ ಬೇರೆ ವಲಯಗಳ ಪರಿಸ್ಥಿತಿ ಕುರಿತು ಚರ್ಚೆಗಳಾಗುತ್ತಿವೆ. ಆದರೆ, ಕರ್ನಾಟಕದ ಹೆಮ್ಮೆಯ ಯಕ್ಷಗಾನ ಕ್ಷೇತ್ರದ ಸ್ಥಿತಿಗತಿ ಮುನ್ನೆಲೆಗೆ ಬರಲೇ ಇಲ್ಲ. ಯಕ್ಷಗಾನ ಕಲಾವಿದರು, ಕಾರ್ಮಿಕರು, ಸಂಘಟಕರು ಎಲ್ಲರ ಮಗ್ಗುಲಿನಲ್ಲೂ ನರಳಾಟದ ಛಾಯೆ ಎದ್ದು ಕಾಣುತ್ತಿದೆ. ಯಕ್ಷಗಾನ ಕಲಾವಿದರು ಹಿಂದೆಂದೂ ಕಾಣದ, ಕೇಳದ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈಗ ಮುಖ್ಯವಾಗಿ ಕೊರೊನಾ ಆಘಾತಕ್ಕೆ ಒಳಗಾಗಿರುವುದು ಸಂಚಾರಿ ವೃತ್ತಿ ಮತ್ತು ಹರಕೆ ಬಯಲಾಟ ಮೇಳಗಳು. ಒಂದು ಮೇಳದಲ್ಲಿ ಸುಮಾರು 20 ಕಲಾವಿದರು ಹಾಗೂ ಇತರ ಕೆಲಸಗಾರರು ಸೇರಿ 30-35 ಜನ ಈ ಕಲೆಯನ್ನು ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈಗ ಅವರ ಎಲ್ಲ ಕುಟುಂಬಗಳೂ ಹತಾಶೆಗೆ ಒಳಗಾಗಿವೆ.

ಮೇ ಎರಡನೇ ವಾರ ಅಥವಾ ಮೂರನೇ ವಾರದಲ್ಲಿ ಮಳೆ ಕಾರಣದಿಂದ ಎಲ್ಲ ಮೇಳಗಳು ತಿರುಗಾಟಕ್ಕೆ ಮಂಗಳ ಹಾಡುತ್ತವೆ. ಈ ವರ್ಷ ಮೇಳಗಳ ತಿರುಗಾಟ ಮುಗಿಯಲು ಇನ್ನೂ ಎರಡು ತಿಂಗಳು ಬಾಕಿಯಿತ್ತು. ಆಗಲೇ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಮಾರ್ಚ್ ಮೂರನೇ ವಾರದಿಂದಲೇ ಎಲ್ಲ ಪ್ರದರ್ಶನಗಳೂ ರದ್ದಾಗಿವೆ.

ಮುಜರಾಯಿ ಇಲಾಖೆಗೆ ಒಳಪಟ್ಟ ಕೆಲವು ದೇವಸ್ಥಾನಗಳ ಹೆಸರಿನಲ್ಲಿ ಕೆಲವು ಯಕ್ಷಗಾನ ಮೇಳಗಳು ತಿರುಗಾಟ ಮಾಡುತ್ತವೆ. ಈ ಮೇಳಗಳ ಕಲಾವಿದರಿಗೆ ಸರ್ಕಾರದಿಂದ ಸಂಬಳ ನೀಡುವುದಾಗಿ ಮುಜರಾಯಿ ಸಚಿವರು ಭರವಸೆ ನೀಡಿದ್ದಾರೆ. ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ವತಿಯಿಂದ ಅಶಕ್ತ ಕಲಾವಿದರ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ. ಕಾಲಿನ ಗೆಜ್ಜೆ ಬಿಚ್ಚಿ, ಕೈ ಕಟ್ಟಿ ಮನೆಯೊಳಗೆ ಕುಳಿತಿರುವ ಕಲಾವಿದರ ಸಮೂಹವು ಯಾವಾಗ ಮೇಳ ಆರಂಭವಾಗುತ್ತದೋ ಎಂಬ ನಿರೀಕ್ಷೆಯಲ್ಲಿ ಇದೆ.

ಗಣಪತಿ ಶಿರಳಗಿ, ಸಾಗರ

ಮುಕ್ತ ಮನದಿಂದ ನೋಡಿ

ಸಮಾಜದಿಂದ ಈಗಾಗಲೇ ತಿರಸ್ಕಾರಕ್ಕೊಳಪಟ್ಟು ಮುಖ್ಯವಾಹಿನಿಯಿಂದ ದೂರವಾಗಿರುವ ಲೈಂಗಿಕ ಕಾರ್ಯಕರ್ತರ ಪಾಡು ಈಗ ಮತ್ತಷ್ಟು ಬಿಗಡಾಯಿಸಿದೆ. ಲಾಕ್‍ಡೌನ್‍ನಿಂದ ಯಾವ ಸೌಲಭ್ಯವೂ ಸಿಗದಿರುವ ಸ್ಥಿತಿ. ತಮ್ಮ ಗ್ರಾಹಕರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾದ, ದೈನಂದಿನ ದುಡಿಮೆಯಿಂದಲೇ ಬದುಕಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದವರು, ಈಗ ಅದೂ ಸಾಧ್ಯವಿಲ್ಲದಂತಾಗಿ ಪರದಾಡುವಂತಾಗಿದೆ. ವೇಶ್ಯಾವೃತ್ತಿಯನ್ನೇ ಕೊನೆಗಾಣಿಸಿ ಸ್ವಯಂ ಉದ್ಯೋಗದ ಅವಕಾಶವನ್ನು ಒದಗಿಸಿ ಬದುಕನ್ನು ಬದಲಾಯಿಸಿಕೊಳ್ಳುವಂತೆ ಮಾಡುವ ದಿಸೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು, ಚಿಂತಕರು ನೀಡಿದ ವರದಿಗಳಿಗೆ ಈಗ ಬಲ ಸಿಕ್ಕಿದೆ.

ಇತರ ಬಡವರಿಗೆ ದಾನಿಗಳ ನೆರವು ಸಿಗುತ್ತಿದೆ. ಈ ದೌರ್ಭಾಗ್ಯರ ಕಡೆ ಗಮನಹರಿಸುವವರು ಕಡಿಮೆ. ಅಗತ್ಯ ವಸ್ತುಗಳನ್ನು ತಲುಪಿಸುವವರಿದ್ದರೂ ಏನೋ ಹಿಂಜರಿತ. ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ಈ ವರ್ಗದೆಡೆಗೆ ಸಮಾಜದ ಕೆಂಗಣ್ಣು ಸ್ವಲ್ಪ ಹೆಚ್ಚೇ. ಸಾಮಾಜಿಕ ಮಾಧ್ಯಮಗಳಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುವವರೂ ಇದ್ದಾರೆ.

ಸ್ವಚ್ಛತೆ, ನೈರ್ಮಲ್ಯ, ಆರೋಗ್ಯ ರಕ್ಷಣೆ ಕನಸಿನ ಮಾತಾಗಿರುವ ವೇಶ್ಯಾವಾಟಿಕೆಯ ಅಡ್ಡೆಗಳು ರೋಗಹರಡುವಿಕೆಗೆ ಪೂರಕ ಸ್ಥಾನಗಳು. ಅವರ ಮನೆಗಳೆಂಬ ವಾಸಸ್ಥಾನಗಳಂತೂ ಇಕ್ಕಿರಿದಿರುತ್ತವೆ. ಒಂದುವೇಳೆ ಹೋಂ ಕ್ವಾರಂಟೈನ್ ಮಾಡಬೇಕು ಎಂದಾದರೆ, ಅಂತಹ ಮನೆಗಳಲ್ಲಿ ಬೇರೆ ರೂಮುಗಳು ಎಲ್ಲಿರುತ್ತವೆ? ಪದೇಪದೇ ಕೈತೊಳೆಯಲು ಅವಶ್ಯಜ್ಞಾನ ಲಭ್ಯವಾಗಿದೆಯೇ? ಎಲ್ಲರಿಗೂ ಅಗತ್ಯ ಪ್ರಮಾಣದ ಮಾಸ್ಕ್ ವಿತರಣೆ ಆಗಿದೆಯೇ? ಸರ್ಕಾರದ ಕ್ರಮಗಳು ಮುಟ್ಟಿವೆಯೇ ಎನ್ನುವ ಕಾಳಜಿ ಮಾಡಬೇಕಾಗಿದೆ.

ಕೆಲವು ಕೆಂಪುದೀಪ ಪ್ರದೇಶಗಳಲ್ಲಿ ಈಗಾಗಲೇ ರೋಗಗಳಿಂದ ನರಳುತ್ತಿರುವವರಿಗೆ ವೈದ್ಯಕೀಯ ನೆರವು ಸಿಗುವುದು ಕಷ್ಟವಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ದಾನಿಗಳಿಂದ ಹಣ ಸಂಗ್ರಹಿಸಿ ದಿನಸಿ ಸಾಮಗ್ರಿಗಳನ್ನೂ ಆರೋಗ್ಯಕ್ಕೆ ಸಂಬಂಧಪಟ್ಟ ವಸ್ತುಗಳನ್ನೂ ವಿತರಿಸುತ್ತಿವೆಯೆಂಬ ವರದಿ ಇದೆ. ಸರ್ಕಾರದಿಂದಲೂ ಸಹಾಯ ಸಿಗುತ್ತಿರಬಹುದು. ಅವೆಲ್ಲವೂ ಅಗತ್ಯ ಪ್ರಮಾಣದಲ್ಲಿ ಆಗುತ್ತಿವೆಯೇ ಎನ್ನುವುದನ್ನು ಪರಿಶೀಲಿಸಬೇಕಿದೆ. ಲೈಂಗಿಕ ಅಲ್ಪಸಂಖ್ಯಾತರ ಪರಿಸ್ಥಿತಿಯೂ ವಿಭಿನ್ನವಾಗಿಯೇನೂ ಇಲ್ಲ. ಈ ಸಂಕಷ್ಟ ಕಾಲ ಮುಗಿಯುವವರೆಗೆ ಈ ಅಸಹಾಯಕ, ದುರ್ಬಲ ವರ್ಗಗಳ ಕಡೆ ಸಮಾಜ ಮುಕ್ತ ಮನದಿಂದ ನೋಡಿ ಸ್ಪಂದಿಸಬೇಕಾಗಿದೆ.

ಮಮತಾ ಅರಸೀಕೆರೆ, ಅರಸೀಕೆರೆ

ಮೆಟ್ಟಿ ನಿಲ್ಲಬೇಕಿದೆ

ಪಾದರಕ್ಷೆ ಸಿದ್ಧಪಡಿಸುವ, ರಿಪೇರಿ ಮಾಡುವ ಕೆಲಸವೇ ಮುಖ್ಯ ಕಾಯಕವಾಗಿರುವ ಹಾಗೂ ಉಪಜೀವನಕ್ಕೆ ಇದೇ ಕಾಯಕವನ್ನು ನೆಚ್ಚಿಕೊಂಡಿರುವ ಸಮಗಾರ ಹರಳಯ್ಯ ಸಮಾಜದವರ ಜೀವನ ನಿರ್ವಹಣೆ ಕೂಡ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯದಾದ್ಯಂತ ಇರುವ ಸಮಗಾರರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಈಗ ಕೆಲಸವಿಲ್ಲದೆ ತೊಂದರೆಗೆ ಸಿಲುಕಿರುವ ಸಮಗಾರ ಕುಟುಂಬದವರಿಗೆ ಸರ್ಕಾರ ಹಾಗೂ ದಾನಿಗಳು ದಿನಸಿಯ ಜೊತೆಗೆ ಆರ್ಥಿಕ ಸಹಾಯವನ್ನೂ ಮಾಡಬೇಕು.

ಸದಾಶಿವ ಎಂ. ಮುರಗೋಡ, ರಾಮದುರ್ಗ, ಬೆಳಗಾವಿ ಜಿಲ್ಲೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು