ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಿಕರು ‘ಯೋಧ’ರಾಗುವುದೆಂದರೆ...

ದೇಶದೊಳಗಿನ ಶತ್ರುಗಳ ಮರುವ್ಯಾಖ್ಯಾನ ನಡೆಯಬೇಕಿದೆ
Last Updated 27 ಮಾರ್ಚ್ 2019, 19:41 IST
ಅಕ್ಷರ ಗಾತ್ರ

ಪುಲ್ವಾಮಾ ದಾಳಿಯ ನಂತರದ ದಿನಗಳಲ್ಲಿ ಯುದ್ಧ, ಯೋಧ ಮುಂತಾದ ಪದಗಳು ಸೈನ್ಯಕ್ಕೆ, ದೇಶಭಕ್ತಿಗೆ ಮಾತ್ರ ಸೀಮಿತವಾಗಿ ಬಳಕೆಯಾಗುತ್ತಿವೆ. ಈ ಹೊತ್ತಲ್ಲಿ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಈ ಯುದ್ಧ ಹಾಗೂ ಯೋಧತ್ವವನ್ನು ದೇಶದ ಆಂತರಿಕ ಭದ್ರತೆ ಮತ್ತು ಅಭಿವೃದ್ಧಿಯ ನೆಲೆಯಲ್ಲಿಯೂ ವಿಸ್ತರಿಸಿಕೊಳ್ಳಬೇಕಿದೆ. ಸೈನಿಕರ ಬಲಿದಾನದ ಸಂದರ್ಭಗಳು ಬಂದಾಗಲೆಲ್ಲಾ ‘ನಾವೂ ಸೈನ್ಯ ಸೇರಬೇಕಿತ್ತು’ ಎನ್ನುವ ದೇಶವಾಸಿಗಳಿಗೆ, ದೇಶದೊಳಗೆ ಯೋಧರಾಗುವ ನೂರಾರು ಅವಕಾಶಗಳಿವೆ ಎನ್ನುವುದನ್ನೂ ನೆನಪಿಸ
ಬೇಕಿದೆ. ಇದೀಗ ದೇಶ ಆಳುವ ಸರ್ಕಾರವನ್ನು ಆಯ್ಕೆ ಮಾಡುವ ಲೋಕಸಭಾ ಚುನಾವಣೆ ಬಂದಿದೆ. ಈ ವೇಳೆ ಮತದಾರರು ಯೋಧರಾಗುವುದೆಂದರೆ ಹೇಗೆ ಎನ್ನುವ ಬಗ್ಗೆ ಆಲೋಚಿಸಬೇಕಿದೆ. ಇಲ್ಲಿ ಯೋಧರೆಂದರೆ ಗಂಡಸರು ಮಾತ್ರವಲ್ಲ ಮಹಿಳೆಯರೂ ಕೂಡ.

ಗಡಿಯಲ್ಲಿ ನಿಂತು ಹೊರಗಿನ ಶಕ್ತಿಗಳ ಆಕ್ರಮಣವನ್ನು ತಡೆದು ದೇಶವನ್ನು ಸುಭದ್ರಗೊಳಿಸುವ ಸೈನಿಕರು ದೇಶಕ್ಕೆ ಬಹಳ ಮುಖ್ಯ. ಅಂತೆಯೇ ನಿತ್ಯವೂ ದೇಶವನ್ನು ಅಭದ್ರಗೊಳಿಸುವ ಆಂತರಿಕ ಶತ್ರುಗಳು ಬೃಹತ್ತಾಗಿ ಬೆಳೆಯುತ್ತಿದ್ದಾರೆ. ಈ ಶತ್ರುವಿನ ಪೋಷಕರಲ್ಲಿ ಅನೇಕರು ದೇಶವಾಸಿಗಳು. ಹೀಗಾಗಿ ಇಂದು ದೇಶವನ್ನು ಆಂತರಿಕವಾಗಿ ಜರ್ಜರಿತಗೊಳಿಸುವ ದೇಶವಿರೋಧಿ ಚಟುವಟಿಕೆ ಮತ್ತು ದೇಶದೊಳಗಿನ ಶತ್ರುಗಳ ಮರುವ್ಯಾಖ್ಯಾನ ನಡೆಯಬೇಕಿದೆ.

ದೇಶವನ್ನು ಆಂತರಿಕವಾಗಿ ಅಭದ್ರಗೊಳಿಸುವ ಬಹುದೊಡ್ಡ ಶತ್ರು ಭ್ರಷ್ಟಾಚಾರ. ಇದರಲ್ಲಿ ಪಾಲ್ಗೊಳ್ಳದ ರಾಜಕಾರಣಿ, ಅಧಿಕಾರಿ, ನೌಕರವರ್ಗ ಅಲ್ಪಸಂಖ್ಯಾತರಾಗಿದ್ದಾರೆ. ಹೀಗೆ ಭ್ರಷ್ಟಾಚಾರದಲ್ಲಿ ತೊಡಗಿದವರು ಈ ದೇಶವನ್ನು ಆಂತರಿಕವಾಗಿ ಅಭದ್ರಗೊಳಿಸುವಲ್ಲಿ ಪಾಲುದಾರರಾಗಿದ್ದಾರೆ. ಭ್ರಷ್ಟಾಚಾರಕ್ಕೆ ಈಡಾಗದ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುವವರು ದೇಶದ ಆಂತರಿಕ ಯೋಧರಾಗುತ್ತಾರೆ. ಚುನಾವಣೆಯಲ್ಲಿ ಮತದಾರರನ್ನು ಭ್ರಷ್ಟಗೊಳಿಸುವ ಮೂಲಕ ಭ್ರಷ್ಟತೆಯ ಭೂಮಿಕೆ ಸಿದ್ಧವಾಗುತ್ತದೆ. ಇದರ ವಿರುದ್ಧ ದನಿ ಎತ್ತುವ ಮತದಾರ ಯೋಧರು ಚುನಾವಣೆ ಸಂದರ್ಭಕ್ಕೆ ಸಿದ್ಧಗೊಳ್ಳಬೇಕಿದೆ.

ಈ ದೇಶವನ್ನು ದುರ್ಬಲಗೊಳಿಸುತ್ತಿರುವ ಮತ್ತೊಂದು ಶತ್ರು ಹಸಿವು-ಬಡತನ. ಈ ಬಡತನ ಹೆಚ್ಚಾಗಲು ಕಾರಣವಾದ ಸಂಪತ್ತಿನ ಅಸಮಾನ ಹಂಚಿಕೆಯಲ್ಲಿ ಹೆಚ್ಚಿನ ಪಾಲು ಪಡೆದವರೆಲ್ಲಾ ಬಡತನವೆಂಬ ಶತ್ರುವಿನ ಪೋಷಕರಾಗಿದ್ದಾರೆ. ಅವರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು... ಹೀಗೆ ಬೇರೆ ಬೇರೆ ವರ್ಗದ ಜನರಿದ್ದಾರೆ. ಹಾಗಾದರೆ ಕುವೆಂಪು ಬಹಳ ಹಿಂದೆಯೇ ‘ಬಡತನವನ್ನು ಬುಡಮಟ್ಟ ಕೀಳಬನ್ನಿ’ ಎಂದು ಕರೆ ಕೊಟ್ಟದ್ದು ಯಾರಿಗೆ ಎನ್ನುವುದನ್ನು ಯೋಚಿಸಬೇಕಿದೆ. ಇಂತಹ ಸಂಪತ್ತಿನ ಅಸಮಾನತೆಯ ವಿರುದ್ಧ ಹೋರಾಡುವವರೇ ಈ ದೇಶದ ನಿಜವಾದ ಆಂತರಿಕ ಯೋಧರಾಗುತ್ತಾರೆ.

ಈ ದೇಶದ ಆಂತರಿಕ ಶತ್ರುಗಳಲ್ಲಿ ಅನಕ್ಷರತೆ ಮತ್ತು ನಿರುದ್ಯೋಗವೂ ಒಂದು. ಈ ಅನಕ್ಷರತೆ ಕಡಿಮೆ ಮಾಡಿ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ದೇಶದ ಆಂತರಿಕ ಭದ್ರತೆ ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕಾಗಿದೆ. ಹಾಗಾಗಿ ಆಳುವ ಯಾವುದೇ ಪ್ರಭುತ್ವವು ಶಿಕ್ಷಣಕ್ಕಾಗಿ ಹೆಚ್ಚು ಹಣ ಮತ್ತು ಮಾನವ ಸಂಪನ್ಮೂಲ ಬಳಸಬೇಕಿದೆ. ಯಾವ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಹಣವನ್ನು ವ್ಯಯ ಮಾಡುವುದಿಲ್ಲವೋ ಅಂತಹ ಸರ್ಕಾರದ ನೀತಿ–ನಡೆ ಬಗ್ಗೆ ಜನರಿಗೆ ತಿಳಿಹೇಳುವ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ವಿಚಾರಗಳು ಚುನಾವಣೆ ವೇಳೆ ಪ್ರಚಾರದ ಮುನ್ನೆಲೆಗೆ ಬರುವಂತೆ ಮಾಡುವಂತಹ ಕೆಚ್ಚೆದೆ ಬೇಕಾಗಿದೆ.

ಜಾತೀಯತೆ, ಧಾರ್ಮಿಕ ಮೂಲಭೂತವಾದವು ಅಭಿವೃದ್ಧಿಗೆ ಮಗ್ಗುಲು ಮುಳ್ಳು ಇದ್ದಂತೆ. ಜೊತೆಗೆ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸರ್ವತೋಮುಖ ಏಳಿಗೆಯನ್ನು ಕಡೆಗಣಿಸುವ ಪುರುಷ ಯಾಜಮಾನ್ಯ ಧೋರಣೆಯು ಸಮಾಜಕ್ಕೆ ಕಂಟಕ. ಇದರ ವಿರುದ್ಧವೂ ನಿರಂತರವಾಗಿ ಜಾಗೃತಿ ಮೂಡಿಸುವ ಪ್ರಯತ್ನಗಳು ಆಗಬೇಕು. ಈ ಎಲ್ಲವನ್ನೂ ಒಳಗೊಂಡಂತೆ ಭಾರತದ ಸಂವಿಧಾನದ ಆಶಯಗಳನ್ನು ಈಡೇರಿಸಲು ಬದ್ಧರಾಗುವ ಪ್ರತಿಯೊಬ್ಬರನ್ನೂ ದೇಶದ ಆಂತರಿಕ ಯೋಧರೆಂದು ಪರಿಗಣಿಸಬೇಕಾಗುತ್ತದೆ.

ಹಾಗಾದರೆ, ಈಗ ನಮ್ಮ ಹೋರಾಟ ಯಾರ ವಿರುದ್ಧ? ಈ ಬಗೆಯ ಸಂಕುಚಿತ ದೃಷ್ಟಿಕೋನಗಳಿಗೆ ನೀರು ಎರೆಯುತ್ತಿರುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು, ಜಾತಿವಾದಿಗಳು, ಮಹಿಳೆಯರ ಸಬಲೀಕರಣಕ್ಕೆ ತೊಡರುಗಾಲಾಗಿ ಪರಿಣಮಿಸಿರುವ ಶಕ್ತಿಗಳ ವಿರುದ್ಧ ಟೊಂಕಕಟ್ಟಬೇಕಿದೆ. ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ಇಂತಹ ಯಾರಾದರೂ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅಂತಹವರನ್ನು ಸೋಲಿಸಲು ಪ್ರಯತ್ನಿಸುವ ಮೂಲಕ ಮತದಾರ ಯೋಧರು ತಮ್ಮ ಯೋಧತ್ವವನ್ನು ಸಮಾಜದಲ್ಲಿ ಪ್ರಕಟಿಸಬೇಕು.

ದೇಶವನ್ನು ಬಾಹ್ಯ ಶತ್ರುಗಳಿಂದ ಕಾಪಾಡುವ ಸೈನಿಕರು ನಿಜಕ್ಕೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಅಭದ್ರಗೊಳಿಸುವ ಆಂತರಿಕ ಶತ್ರುಗಳ ಬಲ ಹೆಚ್ಚುತ್ತಿರುವುದನ್ನು ನೋಡಿದರೆ, ದೇಶದೊಳಗೆ ಕ್ರಿಯಾಶೀಲವಾಗಬೇಕಿದ್ದ ನಾಗರಿಕ ಯೋಧರು ನಿದ್ದೆಗೆ ಜಾರಿದ್ದಾರೆ ಎಂದು ಅನಿಸುತ್ತದೆ. ಈ ಎಲ್ಲವನ್ನೂ ಮೌನವಾಗಿ ನೋಡುತ್ತಿರುವ ಸಜ್ಜನರೆಲ್ಲಾ ಎಚ್ಚೆತ್ತು ಸಮಾಜದ ಶ್ರೇಯೋಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT