ಬುಧವಾರ, ಫೆಬ್ರವರಿ 1, 2023
26 °C
ದೂರದೃಷ್ಟಿಯ ನಮ್ಮ ನಾಯಕರಿವರು; ಆಹಾ... ನಾಯಕ ಪಟ್ಟಕ್ಕೆ ಎಂಥ ಪೈಪೋಟಿ...

ಸಂಗತ: ನರಳಿದವನು ಬಾಳಿಯಾನು!

ಜಿ.ಕೆ.ಗೋವಿಂದ ರಾವ್‌ Updated:

ಅಕ್ಷರ ಗಾತ್ರ : | |

Prajavani

‌ಕರ್ನಾಟಕ ಜನತೆಯ ಪೂರ್ವಸುಕೃತ. ಎಂತಹ ನಾಯಕರು! ಎಂತಹ ದೂರದೃಷ್ಟಿ! ಎಂತಹ ದೂರಾಲೋಚನೆ!

ಚುನಾವಣೆ ಮತ್ತೂ ಎರಡು ವರ್ಷಗಳ ಆಚೆಗಿದೆ. ಹೀಗಿದ್ದೂ ದೇಶಸೇವೆಗೆ ಎಂತಹ ಉತ್ಸಾಹ! ಎಂತಹ ತರಾತುರಿ! ಈ ಮಧ್ಯದ ಎರಡು ವರ್ಷಗಳನ್ನು ಒರೆಸಿಹಾಕಿ ಅದರಾಚೆಗಿನ ನಾಯಕ ಪಟ್ಟಕ್ಕೆ ಎಂತಹ ಪೈಪೋಟಿ!

ಹಾಳು ಕೊರೊನಾ, ಜನರ ಬವಣೆ, ನಗರಗಳಿಂದ ಸಂಸಾರ ಸಮೇತ ತಮ್ಮ ದೂರದ ಹಳ್ಳಿ ಮನೆಗಳಿಗೆ ನಿರಾಶೆ, ಹತಾಶೆಗಳಿಂದ ವಾಪಸು, ಕೊರೊನಾ ಅಲ್ಪಕಾಲದ ಸ್ಥಗಿತ ಸ್ಥಿತಿ, ಮತ್ತೆ ನಗರಗಳತ್ತ ಚಿಕ್ಕಾಸಿನ ಸಂಪಾದನೆಗಾಗಿ ವಾಪಸು, ವ್ಯಾಪಾರ, ವಹಿವಾಟು, ಪಾತಾಳ ಮುಟ್ಟಿರುವ ದಯನೀಯ ಸ್ಥಿತಿ... ಇವೆಲ್ಲವೂ ನಿಜವಿರಬಹುದು. ಆದರೆ ನಮ್ಮ ದೇಶಭಕ್ತರ ದೇಶಸೇವೆಯ ಉತ್ಸಾಹದಲ್ಲಿ ಈ ಎಲ್ಲವೂ ಸ್ವಲ್ಪ ಕಾಲ ಬದಿಗಿರಿಸಬೇಕಾದ ಕಿರಿಕಿರಿಗಳು.

ನಮ್ಮ ಸೇವೆಗಾಗಿ ಟೊಂಕ ಕಟ್ಟಿ ತಯಾರಾಗುತ್ತಿರುವ ನಾಯಕರ ಕುರಿತಾದ ಸಹನೆ, ಸಹಾನುಭೂತಿ ರೂಢಿಸಿಕೊಳ್ಳಬೇಕಾದ ತುರ್ತಿನ ಕಾಲ ಇದು. ನಾಳಿನ ಜನಸೇವೆಗಾಗಿ ಸ್ಪರ್ಧಾತ್ಮಕವಾಗಿ ಸಿದ್ಧರಾಗುತ್ತಿರುವ ನಾಯಕರಿಗೆ ಅವಕಾಶ ಮಾಡಿಕೊಡಬೇಕಾದ ಜವಾಬ್ದಾರಿ ನಮ್ಮದು, ಕೊಂಚ ನತದೃಷ್ಟರೇ ಅನ್ನಿಸಿಬಿಡುವ ಸ್ಥಿತಿ ತಲುಪಿರುವ ಜನರದ್ದು– ಅಲ್ಲವೇ?

ಅಪ್ಪಳಿಸಿದ ರೋಗಕ್ಕೆ ನಲುಗುತ್ತಿದ್ದೇವೆ ನಿಜ. ಆದರೂ ಸಹಿಸಿಕೊಳ್ಳಬೇಕಾದ ಜರೂರಿನ ಕಾಲ ಇದು. ನರಳಿದವನು ಬಾಳಿಯಾನು ಎಂಬುದು ನಮ್ಮ ರಾಜಕಾರಣದ ಹೊಸ ನೀತಿ ಸಾರ.

ನಮ್ಮ ಎರಡು ಪ್ರಮುಖ ರಾಜಕೀಯ ಪಕ್ಷಗಳನ್ನು ನೋಡಿ: ಎರಡೂ ಕಡೆಯಿಂದ ಜಿದ್ದಾಜಿದ್ದಿ ರೀತಿ ತಮ್ಮ ನಾಯಕರನ್ನು ಆರಿಸಿಕೊಳ್ಳುತ್ತಿದ್ದಾರೆ. ಹಾಲಿ ಮುಖ್ಯಮಂತ್ರಿ ‘ಉಳಿದಿರುವ ಎರಡೂ ವರ್ಷಗಳು ಅವಿರೋಧವಾಗಿ ನಾನೇ ನಾಯಕ’ ಎಂದು ಘೋಷಿಸಿ ಕೊಳ್ಳುತ್ತಿದ್ದಾರೆ. ಬೆಂಬಲಿಗರೂ ವಿರೋಧಿಗಳೂ ದಿಲ್ಲಿ ಯಾತ್ರೆ, ವರಿಷ್ಠರಿಂದ ಉಪದೇಶ, ಎಚ್ಚರಿಕೆಗಳನ್ನು ಪಡೆಯುತ್ತ, ಮರಳಿ ನಾಡಿಗೆ ಬಂದು ಸಣ್ಣಪುಟ್ಟ ಪಿರಿಪಿರಿ ಮಾಡುತ್ತಲೇ ಮುಂದುವರಿದಿದ್ದಾರೆ. ಭಾವಿ ಮುಖ್ಯಮಂತ್ರಿಯಾಗಲು ತಮ್ಮ ವರಸೆಗಳನ್ನು ಹುರುಪುಗೊಳಿಸಿಕೊಳ್ಳುತ್ತಿರುವ ವಿರೋಧ ಪಕ್ಷದ ವೈವಿಧ್ಯಮಯ ನಾಯಕರು.

ಈ ಮಧ್ಯದಲ್ಲಿ ‘ಮುಂದಿನ ಚುನಾವಣೆಯ ಫಲಿ ತಾಂಶ ನೋಡುತ್ತಿರಿ’ ಎಂದು ಜನರ ಕುತೂಹಲ ಕೆರಳಿ ಸುತ್ತಿರುವ ಮೂರನೇ ಪಕ್ಷವನ್ನೂ ಮರೆಯಬಾರದು.

ಕೋವಿಡ್‌ನಂತಹ ಮಾರಕ ಪಿಡುಗಿನಿಂದ ನರಳುತ್ತಿರುವ ಜನಸಾಮಾನ್ಯರು ತಣ್ಣಗೆ ಆಲೋಚನೆ ಮಾಡುವುದನ್ನು ಕಲಿಯಬೇಕು. ಈ ರೋಗಗಳೇನು ನಮ್ಮ ನಾಡಿಗಷ್ಟೆಯೇ? ನಮ್ಮ ವೈದ್ಯಕೀಯ ಅಚಾತುರ್ಯಗಳಿಂದ ನಡೆದವೇ? ಜಗತ್ತಿನಾದ್ಯಂತ ಹರಡುತ್ತಿರುವ ಪಿಡುಗು ಇದು, ಅಲ್ಲವೇ? ಹಾಗಾಗಿ ರಾಜಕಾರಣಿಗಳ ಕುರಿತು ಜನ ದಿಢೀರ್‌ ತೀರ್ಪುಗಳನ್ನು ನೀಡಬಾರದು. ರೋಗ ಮತ್ತು ರಾಜಕೀಯ ಎರಡನ್ನೂ ಒಟ್ಟಿಗೇ ಇಟ್ಟು ಮಾತನಾಡಬಾರದು.

ಒಂದು ಕಡೆ, ಲಿಂಗಾಯತರ ಮತ ಕೈತಪ್ಪಿ ಸೋತೆನು ಎಂದು ಕೊರಗುವ ಪಕ್ಷ, ಮತ್ತೊಂದು ಕಡೆ, ಸಾಮ್ರಾಟ್‌ ಮೋದಿಯವರ ಅಭಯ ಹಸ್ತವಿರುವವರೆಗೆ ನಮಗೇನು ಆತಂಕ ಎಂದು ಬೀಗುವ ಆಳುವ ಪಕ್ಷದ ನಾಯಕರು. ಈ ಎಲ್ಲ ಪಕ್ಷಗಳಿಗೂ ಅವುಗಳದೇ ಆದ ಪ್ರತ್ಯೇಕ ಮಠಗಳಿವೆ, ಗುರು ಗಳಿದ್ದಾರೆ. ಪ್ರಜಾತಂತ್ರದ ಬುನಾದಿಯ ಮೇಲೆ ರೂಪಿಸಿದ ಈ ರಾಷ್ಟ್ರವನ್ನು ವ್ಯವಸ್ಥಿತ ಧರ್ಮದಿಂದ ದೂರವಿರಿಸಬೇಕು ಎಂದು ಕನಸು ಕಂಡ ಈ ರಾಷ್ಟ್ರದ ನಾಯಕರನ್ನು ಇಂದು ನೇಪಥ್ಯಕ್ಕೆ ಸರಿಸಿಬಿಟ್ಟಿದ್ದಾರೆ. ಅಂದಿನ ದಿನಗಳ ನೆನಪನ್ನು ಅಲ್ಪಸ್ವಲ್ಪವಾದರೂ ಉಳಿಸಿಕೊಂಡ ತಲೆಮಾರಿನವರಿಗೆ ಒಂದು ಪ್ರಸಂಗ ಖಂಡಿತ ನೆನಪಿರಲೇಬೇಕು.

ನೆಹರೂ ಪ್ರಧಾನಿಯಾಗಿದ್ದ ಅಂದು ಬಾಬು ರಾಜೇಂದ್ರ ಪ್ರಸಾದ್‌ ರಾಷ್ಟ್ರಪತಿಯಾಗಿದ್ದರು. ಒಮ್ಮೆ ರಾಷ್ಟ್ರಪತಿ ಕಾಶಿಗೆ ತೆರಳಿ ಗಂಗಾ ನದಿಯ ತೀರದಲ್ಲಿ ಕಾಷಾಯವಸ್ತ್ರಧಾರೀ ಸನ್ಯಾಸಿಗಳ ಕಾಲು ತೊಳೆದು ಆಶೀರ್ವಾದ ಪಡೆದರು. ಇದನ್ನು ತಿಳಿದ ನೆಹರೂ, ರಾಷ್ಟ್ರಪತಿ ಅವರೊಡನೆ ಕೊಂಚ ಖಾರವಾಗಿಯೇ ತಮ್ಮ ವಿರೋಧ ವ್ಯಕ್ತಪಡಿಸಿದ್ದರು. ಗಾಂಧೀಜಿ ಕೂಡ ಗುಡಿ, ಮಠಗಳಿಗೆ ಭೇಟಿ ಕೊಡುತ್ತಿರಲಿಲ್ಲ. ಅಪಾರ ದೈವಭಕ್ತರಾದರೂ ಗಾಂಧೀಜಿ ಅವರ ಆರಾಧನೆಯೆಲ್ಲ ಸರ್ವಜನರ ಸಮೂಹದಲ್ಲಿ. ಯಾವ ಕಾಷಾಯವಸ್ತ್ರದ ಸನ್ಯಾಸಿಗೂ ಸೊಪ್ಪು ಹಾಕಿದವರಲ್ಲ.

ತಮ್ಮ ಜಾತಿಯವರನ್ನೇ ಮುಖ್ಯಮಂತ್ರಿ ಮಾಡ ಬೇಕು, ತಮ್ಮ ಜಾತಿಯವರಿಗೇ ಸಚಿವ ಸ್ಥಾನ ನೀಡ ಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ದೊಡ್ಡ ಡೆಲಿಗೇಷನ್‌ ತೆಗೆದುಕೊಂಡು ದೆಹಲಿಗೂ ಹೋಗಲು ಸಿದ್ಧರಿರುವ ಮಠಾಧಿಪತಿಗಳು ನಮ್ಮ ಸುತ್ತಲಿದ್ದಾರೆ.

ಸದ್ಯದ ಕೊರೊನಾ ಪಿಡುಗು ಇಂದಲ್ಲ ನಾಳೆ ನಶಿಸ ಬಹುದೆಂಬುದು ಕೇವಲ ನಂಬಿಕೆಯಲ್ಲ, ಖಂಡಿತ ಸತ್ಯ. ಆದರೆ ನಮ್ಮ ರಾಜಕೀಯ ಸ್ಥಿತಿ ಮಾತ್ರ ಇಂದು ನಾಳೆಯಲ್ಲಿ ಸರಿಹೋಗುವುದಿಲ್ಲ. ದುರದೃಷ್ಟವಶಾತ್‌ ಇಂದಿಗಿಂತ ನಾಳೆ ಮತ್ತೂ ಹದಗೆಡಬಹುದೆಂಬ ಕರುಳ ಆಳದ ಆತಂಕ, ಅಂಜಿಕೆ.

ಈ ಮಧ್ಯೆ ನಿಷ್ಪಕ್ಷಪಾತವಾಗಿ, ವಸ್ತುನಿಷ್ಠವಾಗಿ, ಭವಿಷ್ಯಮುಖಿಯಾಗಿ ಒಂದಷ್ಟು ಚಿಂತನೆಯಲ್ಲಿ ತೊಡಗುವ, ಅಲ್ಪಸಂಖ್ಯಾತರೇ ಆಗಿಬಿಡುತ್ತಿರುವ ಪ್ರಜಾಪ್ರಭುತ್ವವಾದೀ ಜನರ ಪಾಡೇನು ಎಂದು ಈ ಯುಗದ ದೇಶಭಕ್ತರನ್ನು ಕೇಳಿದರೆ, ಅವರ ಉತ್ತರವೂ ಸ್ಪಷ್ಟವಾಗಿರುತ್ತದೆ. ‘ಹೀಗೆ ಅನವಶ್ಯಕ ಚಿಂತೆಗಳಲ್ಲಿ ತಲೆಕೆಡಿಸಿಕೊಳ್ಳುವವರಲ್ಲ ನಾವು. ಪ್ರ್ಯಾಕ್ಟಿಕಲ್‌ ಆಗಿ ಯೋಚಿಸುವವರು. ಮಿಕ್ಕಿದ್ದೆಲ್ಲ ಅವರವರ ಪಾಡು ಅನುಭವಿಸುತ್ತಿರಲಿ ಬಿಡಿ’ ಎಂದು ಕೈ ಝಾಡಿಸಿಕೊಂಡು ಬಿಡುವವರು ಅಷ್ಟೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು