ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸ ಕಸಿಯುವ ನೇಮಕಾತಿ

ನೇಮಕಾತಿ ಪ್ರಕ್ರಿಯೆ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಾತರಿಪಡಿಸಬೇಕು
Last Updated 1 ಜುಲೈ 2019, 20:00 IST
ಅಕ್ಷರ ಗಾತ್ರ

ಸೃಷ್ಟಿಯಾಗುತ್ತಿರುವ ಅತ್ಯಲ್ಪ ಉದ್ಯೋಗಾವಕಾಶಗಳನ್ನು ಬಳಸಿಕೊಳ್ಳಲು ಯುವಜನರು ಒಂದೆಡೆ ಮುಗಿಬೀಳುತ್ತಿ ದ್ದಾರೆ. ಮತ್ತೊಂದೆಡೆ, ‘ಹಣ’ ಹಾಗೂ ‘ರೆಫರೆನ್ಸ್’ ಬಲ ಹೊಂದಿರದವರು ನೇಮಕಾತಿ ಪ್ರಕ್ರಿಯೆಗಳ ಸುತ್ತ ಎದ್ದು ನಿಲ್ಲುತ್ತಿರುವ ವಂಚನೆಯ ಜಾಲದೊಳಗೆ ನುಸುಳಲು ಸಾಧ್ಯವಾಗದೆ ಹತಾಶರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರ್ಹತೆ ಇದ್ದೂ ತಮ್ಮ ಸಾಮಾಜಿಕ ಹಿನ್ನೆಲೆಯ ಕಾರಣಕ್ಕೆ ದೊರಕದ ‘ರೆಫರೆನ್ಸ್’ ಕಾರಣದಿಂದ, ಖಾಸಗಿ ವಲಯದಲ್ಲಿ ತಮ್ಮ ಅರ್ಹತೆಗೆ ತಕ್ಕ ಉದ್ಯೋಗಗಳನ್ನು ದಕ್ಕಿಸಿಕೊಳ್ಳಲೂ ವಿಫಲರಾಗು
ವವರ ನೋವಿನ ಕತೆಗಳಿಗೆ ಸಮಾಜ ಜಾಣಕಿವುಡು ಪ್ರದರ್ಶಿಸುತ್ತಲೇ ಇದೆ.

ಕೆಪಿಎಸ್‍ಸಿಯನ್ನೂ ಒಳಗೊಂಡಂತೆ ವಿವಿಧ ಸಂಸ್ಥೆಗಳು ನಡೆಸುವ ನೇಮಕಾತಿ ಪ್ರಕ್ರಿಯೆಗಳನ್ನು ಆವರಿಸಿಕೊಳ್ಳುತ್ತಿರುವ ‘ಅಪಾರದರ್ಶಕತೆ’ ಅಸಂಖ್ಯ ಉದ್ಯೋಗಾಕಾಂಕ್ಷಿಗಳಲ್ಲಿ ಬೇರೂರಿರುವ, ಕೇವಲ ಪರಿಶ್ರಮ ಮತ್ತು ಪ್ರತಿಭೆಯಿಂದಷ್ಟೇ ಸರ್ಕಾರಿ ಉದ್ಯೋಗ ದಕ್ಕಿಸಿಕೊಳ್ಳಲು ಸಾಧ್ಯವೆಂಬ ಭರವಸೆಯ ಕುಡಿಯನ್ನು ಚಿವುಟಿ ಹಾಕುತ್ತಿದೆ. ಬೇಕಾದವರಿಗೆ ಅನುಕೂಲ ಮಾಡಿಕೊಡುವ ಹಾಗೂ ಹಣ ವಸೂಲಿ ಮಾಡುವ ಕಾರಣಕ್ಕಾಗಿ ಕೆಲ ಇಲಾಖೆಗಳಿಗೆ ‘ನೇರ ನೇಮಕಾತಿ’ ನಡೆಸಲು ಕೆಲ ಸಚಿವರು ಇನ್ನಿಲ್ಲದ ಮುತುವರ್ಜಿ ತೋರುತ್ತಿರುವುದನ್ನೂ ಗಮನಿಸಬಹುದಾಗಿದೆ. ಅಭ್ಯರ್ಥಿಗಳಿಂದ ಹಣ ಕೀಳುವ ಸಲುವಾಗಿಯೇ, ಅಗತ್ಯವಿರದಿದ್ದರೂ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನವನ್ನು ಸೇರಿಸುವುದೂ ನಡೆಯುತ್ತಿದೆ.

ಇತ್ತೀಚೆಗೆ ನಡೆದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ವೊಂದರ ನೇಮಕಾತಿ ಪರೀಕ್ಷೆಯ ಪ್ರಕ್ರಿಯೆಯನ್ನು ಹತ್ತಿರದಿಂದ ಗಮನಿಸಿದಾಗ, ನೇಮಕಾತಿ ಪರೀಕ್ಷೆಗಳನ್ನು ನೆಪಮಾತ್ರಕ್ಕೆ ಹೇಗೆಲ್ಲ ನಡೆಸಬಹುದು ಎನ್ನುವುದರ ಅರಿವಾಯಿತು. 22 ಅಟೆಂಡರ್ ಹುದ್ದೆಗಳಿಗೆ ನಡೆಸಿದ ಪರೀಕ್ಷೆಯನ್ನು ರಾಜ್ಯದ ವಿವಿಧೆಡೆಯಿಂದ ಆ ಜಿಲ್ಲಾ ಕೇಂದ್ರಕ್ಕೆ ಬಂದು ಎರಡು ಸಾವಿರಕ್ಕೂ ಹೆಚ್ಚು ಮಂದಿ ಬರೆದರು. ಸಾಮಾನ್ಯವಾಗಿ ಬಹು ಆಯ್ಕೆಯ ಪ್ರಶ್ನೆಗಳಿರುವ ಲಿಖಿತ ಪರೀಕ್ಷೆಗಳಲ್ಲಿ ಬಳಸುವ ಒಎಂಆರ್ ಹಾಳೆಗಳನ್ನು ಈ ಪರೀಕ್ಷೆಯಲ್ಲಿ ಬಳಸಲೇ ಇಲ್ಲ. ನೂರು ಪ್ರಶ್ನೆಗಳಿದ್ದ (ಕಣ್ತಪ್ಪಿನಿಂದ 99 ಪ್ರಶ್ನೆಗಳಷ್ಟೇ ಮುದ್ರಿತವಾಗಿದ್ದವು!) ಬಹು ಆಯ್ಕೆ ಮಾದರಿಯ ಪ್ರಶ್ನೆಪತ್ರಿಕೆಯಲ್ಲಿ ಕನಿಷ್ಠಪಕ್ಷ ಕ್ರಮ ಸಂಖ್ಯೆಯನ್ನೂ ಮುದ್ರಿಸಿರಲಿಲ್ಲ. ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯಲ್ಲೇ ಟಿಕ್ ಮಾಡುವ ಮೂಲಕ ಉತ್ತರಿಸಬೇಕಿತ್ತು. ಹಾಗಾಗಿ ಪ್ರಶ್ನೆ ಪತ್ರಿಕೆಯನ್ನು ಯಾವೊಬ್ಬ ಅಭ್ಯರ್ಥಿಯೂ ಪರೀಕ್ಷೆಯ ನಂತರ ಕೊಂಡೊಯ್ಯಲು ಅವಕಾಶವೇ ಇರಲಿಲ್ಲ.

ತಮಗೆ ಬೇಕಾದವರನ್ನಷ್ಟೇ ನೇಮಿಸಿಕೊಳ್ಳಲು ನೆಪಮಾತ್ರಕ್ಕೆ ಬೇಕಾಬಿಟ್ಟಿಯಾಗಿ ಪರೀಕ್ಷೆ ನಡೆಸುವ ಪ್ರಕರಣಗಳ ಪೈಕಿ ಇದೂ ಒಂದು ಅಷ್ಟೆ. ಆದರೆ ಇಂತಹ ಅಪಾರದರ್ಶಕ ನೇಮಕಾತಿಗಳಿಂದಾಗಿ ಅವಕಾಶವಂಚಿತರಾಗಿ ಅಂಚಿಗೆ ತಳ್ಳಲ್ಪಡುವವರು ಯಾರು ಎಂಬುದರ ಕುರಿತು ಸಮಾಜ ಗಮನಹರಿಸಬೇಕಿದೆ. ‘ಆರ್ಥಿಕ’ ಮತ್ತು ‘ಸಾಮಾಜಿಕ ಬಂಡವಾಳ’ದಿಂದ ವಂಚಿತರಾಗಿ ಬದುಕುವವರ ಜೀವನಮಟ್ಟ ಸುಧಾರಣೆಗೆ ಇಂಬು ನೀಡಬಹುದಾದ ಸರ್ಕಾರಿ ಉದ್ಯೋಗಾವಕಾಶಗಳೂ ರಾಜಕೀಯ ಪ್ರಭಾವ ಮತ್ತು ಹಣಬಲ ಹೊಂದಿರುವವರಿಗಷ್ಟೇ ಮೀಸಲಾಗುತ್ತಾ ಹೋದರೆ, ಓದು ಮತ್ತು ಪರಿಶ್ರಮದಿಂದಲೇ ಉದ್ಯೋಗ ಪಡೆದು ಬದುಕಿನಲ್ಲಿ ಏಳಿಗೆ ಹೊಂದಬಹುದೆಂಬ ಆಶಾಭಾವ ಉಳ್ಳವರ ಪಾಡೇನು?

ಈ ನಡುವೆ, ಖಾಸಗಿ ವಲಯದಲ್ಲೂ ನೇಮಕಾತಿ ವೇಳೆ ‘ಅರ್ಹತೆ’ಯೊಂದೇ ಮಾನದಂಡ ಆಗಿರುವುದಿಲ್ಲ ಎಂಬುದನ್ನು ನಿರೂಪಿಸು
ವುದಕ್ಕೆ ನಿದರ್ಶನಗಳಿಗಾಗಿ ತಿಣುಕಾಡಬೇಕಾದ ಅಗತ್ಯವೇನಿಲ್ಲ. ‘ರೆಫರೆನ್ಸ್’ ಇಲ್ಲದೆ ಉದ್ಯೋಗ ಪಡೆಯುವುದು ಎಷ್ಟು ಕಷ್ಟ ಎಂಬುದು ಬಹುತೇಕರ ಅನುಭವಕ್ಕೆ ಬಂದಿರುತ್ತದೆ. ಬಹುರಾಷ್ಟ್ರೀಯ ಕಂಪನಿಗಳನ್ನೂ ಒಳಗೊಂಡಂತೆ ಖಾಸಗಿ ವಲಯದ ಉದ್ದಿಮೆ ಸಂಸ್ಥೆಗಳಲ್ಲಿ ಉದ್ಯೋಗ ದಕ್ಕಿಸಿಕೊಳ್ಳುವ ವೇಳೆ ಜಾತಿ, ಧರ್ಮ, ಭಾಷೆ ಸೇರಿದಂತೆ ಸಾಮಾಜಿಕ ಹಿನ್ನೆಲೆಯ ಪ್ರಭಾವ ಢಾಳಾಗಿಯೇ ಗೋಚರಿಸುತ್ತದೆ.

ಮತ್ತಷ್ಟು ಆಳಕ್ಕೆ ಬೇರುಗಳನ್ನು ಚಾಚಿಕೊಂಡು ವಿಸ್ತರಿಸುತ್ತಿರುವ ಜಾತಿ ಪ್ರಜ್ಞೆಯನ್ನು ಗಮನದಲ್ಲಿಟ್ಟು, ಜಾತಿ ಆಧಾರಿತ ಮೀಸಲಾತಿಯನ್ನು ಖಾಸಗಿ ವಲಯಕ್ಕೂ ವಿಸ್ತರಿಸದೇ ಹೋದಲ್ಲಿ, ಉದ್ಯಮಶೀಲತೆ ಮೈಗೂಡಿಸಿಕೊಳ್ಳುವಲ್ಲಿ ಹಿಂದೆ ಬಿದ್ದಿರುವ ಸಮುದಾಯಗಳು ಹಿಮ್ಮುಖ ಚಲನೆಯತ್ತ ಮುಖ ಮಾಡಲಿವೆ. ‘ಮೀಸಲಾತಿಯಿಂದ ಪ್ರತಿಭೆಗೆ ಮನ್ನಣೆ ದೊರೆಯದು’ ಎನ್ನುವ ವಾದ ಮುಂದಿಡುವವರಿಗೆ ‘ಸಾಮಾಜಿಕ ಬಂಡವಾಳ’ ಎಂದರೆ ಏನೆಂದು ತಿಳಿ ಹೇಳಬೇಕಿದೆ. ಮೇಲ್ವರ್ಗಗಳಲ್ಲಿ ಬೇರೂರಿರುವ ಆತ್ಮವಂಚಕ ಪ್ರವೃತ್ತಿ ಇಂತಹ ತಿಳಿವಳಿಕೆಯನ್ನು ಹತ್ತಿರ ಬಿಟ್ಟುಕೊಳ್ಳಲಾರದು ಎಂಬುದೂ ವಾಸ್ತವವೇ.

ನೇಮಕಾತಿ ಪ್ರಕ್ರಿಯೆಗಳು ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಾತರಿಪಡಿಸದೇ ಹೋದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದಂತೆಲ್ಲ ಅವಕಾಶ ವಂಚಿತರು ಮತ್ತಷ್ಟು ಸಂಕಷ್ಟಕ್ಕೆ ಈಡಾಗಲಿದ್ದಾರೆ. ಮೊದಲಿಗೆ ಸರ್ಕಾರಿ ನೇಮಕಾತಿಗಳಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಆನಂತರ ಖಾಸಗಿ ವಲಯದ ನೇಮಕಾತಿಯಲ್ಲೂ ಸಾಮಾಜಿಕ ಒಳಗೊಳ್ಳುವಿಕೆಯನ್ನು ಖಾತರಿಪಡಿಸುವ ಹೊಣೆಗಾರಿಕೆಯನ್ನು ಆಳುವ ಸರ್ಕಾರಗಳು ಈಗಲಾದರೂ ಹೊತ್ತುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT