ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈರಾಣು: ಆತಂಕ, ಅತಿರೇಕ ಬೇಡ

ಉದಾಸೀನ ಮಾಡಿದರೆ ಹೊಸಕಿಹಾಕಲು ಕೊರೊನಾ ಕಾದು ಕುಳಿತಿದೆ. ಅದನ್ನು ಹಿಮ್ಮೆಟ್ಟಿಸಲು ಹಿರಿಕಿರಿಯರೆನ್ನದೆ ಎಲ್ಲರೂ ಜಾಗೃತರಾಗಿ ಇರಬೇಕಾಗಿದೆ
Last Updated 26 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ತಂದೊಡ್ಡುತ್ತಿರುವ ಕಷ್ಟಗಳು ಕರ ಮುಗಿದರೂ ಕರಗುವ ಲಕ್ಷಣ ಕಾಣುತ್ತಿಲ್ಲ. ಶಿಸ್ತು- ಸ್ವಚ್ಛತೆಗೆ ಪ್ರಾಮುಖ್ಯ ನೀಡುವ ದೇಶಗಳೇ ಕೊರೊನಾ ಸಂಕಷ್ಟಕ್ಕೆ ಸೋತುಹೋಗಿವೆ. ಇನ್ನು ಸಂಪ್ರದಾಯ- ಪರಂಪರೆ, ಆಚಾರ- ವಿಚಾರಗಳಿಗೆ ಹೆಚ್ಚು ಆದ್ಯತೆ ನೀಡುವ ಭಾರತದ ಕತೆ ಏನು?

ದೇಶದೆಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಒಂದು ವರ್ಷ ಬೇವು- ಮಾವು ಇಲ್ಲದಿದ್ದರೆ ಯುಗಾದಿ ಹಬ್ಬವೇನೂ ನಿಂತು ಹೋಗುತ್ತಿರಲಿಲ್ಲ. ಸೋಂಕಿನ ಭೀಕರತೆಯನ್ನು ಮನಗಂಡು ಪ್ರಧಾನಿ ವಿನಂತಿಸಿದರೂ, ಮೊನ್ನೆ ನಮ್ಮ ಜನ ಬೀದಿಗೆ ಬಂದು, ತೀರ ಅನಿವಾರ್ಯವಲ್ಲದ ಬೇವು- ಮಾವಿನ ಸೊಪ್ಪಿಗೆ ಮುಗಿಬಿದ್ದದ್ದು ಸೋಜಿಗವೆನಿಸಿತು. ಕೆಲವೆಡೆ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸಿ ಜನರನ್ನು ಚದುರಿಸಿದರು.

ನಿರ್ಬಂಧಗಳು ಜಾರಿಯಾಗುವ ಮೊದಲೆರಡು ದಿನ ಪೆಟ್ರೋಲ್ ಬಂಕ್‍ಗಳಲ್ಲಿ ಜನ ಸರದಿಯಲ್ಲಿ ನಿಂತು ಪೆಟ್ರೋಲ್ ತುಂಬಿಸಿಕೊಂಡರು. ಸಾಲದ್ದಕ್ಕೆ ಕೆಲವರು ಕ್ಯಾನ್‍ಗಳಲ್ಲಿ ಮನೆಗೆ ಒಯ್ದು ಶೇಖರಿಸಿಟ್ಟರು. ಹೀಗೆ ಮಾಡಹೋಗಿ ಬಳ್ಳಾರಿಯ ಸರ್ಕಾರಿ ನೌಕರರೊಬ್ಬರ ಮನೆಯಲ್ಲಿ ಬೆಂಕಿ ತಗುಲಿ, ಕುಟುಂಬದ ಸದಸ್ಯರು ಹಬ್ಬ ಮಾಡುವುದು ಬಿಟ್ಟು ಮೈ ಸುಟ್ಟುಕೊಂಡು ಆಸ್ಪತ್ರೆ ಸೇರಬೇಕಾಯಿತು. ಪೆಟ್ರೋಲ್ ಲಭ್ಯತೆ ಅಬಾಧಿತ ವೆಂದು ಮನವರಿಕೆಯಾದ ನಂತರ ಜನ ನಿರಾತಂಕವಾಗಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳು ದಿನನಿತ್ಯದ ಅಗತ್ಯ ವಸ್ತುಗಳ ಸಾಗಾಟ, ಖರೀದಿ, ಮಾರಾಟಕ್ಕೆ ಬಾಧೆ ಇಲ್ಲವೆಂದು ಹಲವಾರು ಬಾರಿ ಸ್ಪಷ್ಟಪಡಿಸಿವೆ. ಆದರೂ ಜನ ಮತ್ತೆ ಸಿಕ್ಕೀತೋ ಇಲ್ಲವೋ ಎಂದು ಹೆಚ್ಚುವರಿಯಾಗಿ ಖರೀದಿಸಿ ಅನ್ಯರಿಗೂ ಸಿಗದಂತೆ ಮಾಡುವ ಸ್ವಾರ್ಥಕ್ಕಿಳಿಯುತ್ತಿದ್ದಾರೆ. ಇದನ್ನೇ ದುರುಪ ಯೋಗಪಡಿಸಿಕೊಳ್ಳುವ ವರ್ತಕರು ದುಪ್ಪಟ್ಟು ಬೆಲೆಗೆ ಸರಕುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಜನರಾದರೂ ಎಂದಿನಂತೆ ವಿವಿಧ ಭಕ್ಷ್ಯ ಭೋಜ್ಯಗಳನ್ನು ಭರ್ಜರಿಯಾಗಿ ಸಿದ್ಧಪಡಿಸಿಕೊಂಡು ತಿನ್ನುವ ಬದಲು, ಕೆಲವು ದಿನಗಳವರೆಗೆ ಆಹಾರ ವೈವಿಧ್ಯವನ್ನು ಕಡಿಮೆ ಮಾಡಿ, ಪಥ್ಯದ ರೂಪದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದು ಎಲ್ಲ ದೃಷ್ಟಿಯಿಂದ ಒಳಿತು. ‘ಸರ್ವೇಜನಾಃ ಸುಖಿನೋ ಭವಂತು’ ಎಂದು ಪ್ರಾರ್ಥಿಸುವ ದೇಶ ನಮ್ಮದು. ಅನಗತ್ಯ ಶೇಖರಣೆಗೆ ಮೊದಲು ನಮ್ಮ ಜನ ಈ ಬಗ್ಗೆ ಸ್ವಲ್ಪ ಯೋಚನೆ ಮಾಡಲಿ.

ಕೊರೊನಾ ಸೋಂಕು ತಡೆಗಟ್ಟುವಲ್ಲಿ ಸರ್ಕಾರದ ಪಾತ್ರ ನಗಣ್ಯ. ಈ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡುವ ಮುನ್ನ ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದು ಸೂಕ್ತ. ನನಗೆ ಬಂದಾಗಿದೆ, ಇನ್ನೊಬ್ಬರಿಗೆ ಬಂದರೆ ನನಗೇನು ಎನ್ನುವುದು ಕ್ರೌರ್ಯವಾಗುತ್ತದೆ. ಇಂಥ ದುಷ್ಕೃತ್ಯ ಎಸಗುವವರ ಕುರಿತ ಮಾಹಿತಿಯನ್ನು ಪೊಲೀಸರ, ಸ್ಥಳೀಯ ಆಡಳಿತಗಳ ಗಮನಕ್ಕೆ ತರುವುದು ನಾಗರಿಕರ ಆದ್ಯ ಕರ್ತವ್ಯವಾಗಿರುತ್ತದೆ.

ಕೊರೊನಾ ‘ಕರ್ಫ್ಯೂ’, ಜನರನ್ನು ಕಂಗೆಡಿಸುವುದು ಸ್ವಾಭಾವಿಕ. ನಮ್ಮ ದೇಶದಲ್ಲಿ ಅಂದಿನ ದುಡಿಮೆಯಿಂದಲೇ ಅಂದಂದಿನ ಅನ್ನವನ್ನು ಸಂಪಾದಿಸುವವರು ಅಸಂಖ್ಯ. ಪರಿಸ್ಥಿತಿ ಹೀಗಿರುವಾಗ, ಉಳ್ಳವರು ಇಂಥವರ ಸಹಾಯಕ್ಕೆ ಬರಬೇಕು. ಸರ್ಕಾರವಾದರೂ ಇಂಥವರ ನೆರವಿಗೆ ನಿಲ್ಲಬೇಕು. ಅಗತ್ಯ ವಸ್ತುಗಳ ಸಾಗಾಣಿಕೆ, ಮಾರಾಟ, ಖರೀದಿಗೆ ಸರ್ಕಾರವು ಸಮಯ ನಿಗದಿಪಡಿಸಿ, ಜನಮಾನಸದಲ್ಲಿ ನೆಲೆ ನಿಂತಿರುವ ಆತಂಕವನ್ನು ದೂರಗೊಳಿಸಬೇಕು. ಕೆಲವೆಡೆ ತರಕಾರಿ ಮಾರುಕಟ್ಟೆಗಳನ್ನೂ ಬಂದ್ ಮಾಡ ಲಾಗಿದೆ. ತರಕಾರಿ ಮಾರುವವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡುವುದನ್ನು ಮಾಧ್ಯಮಗಳಲ್ಲಿ ಜನ ಗಮನಿಸಿದ್ದಾರೆ. ಇದು ಜನರ ಮನಸ್ಸಿನ ಮೇಲೆ ಇನ್ನೂ ಆತಂಕದ ಕಾರ್ಮೋಡವನ್ನು ಬಿತ್ತುತ್ತದೆ.

ಅಮಾಯಕರ ಮೇಲೆ ವಿನಾಕಾರಣ ಲಾಠಿಯ ಬಳಕೆಯಾಗುವುದು ಅಸಮರ್ಥನೀಯ, ಅತಿರೇಕ. ಇಡೀ ದೇಶವೇ ಲಾಕ್‍ಡೌನ್ ಆಗಿದ್ದರೂ ಕೆಲವು ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಸೇವೆಗಳ ಸಿಬ್ಬಂದಿ ಅನಿವಾರ್ಯವಾಗಿ ಅಲ್ಲಲ್ಲಿ ಓಡಾಡಬೇಕಿರುತ್ತದೆ. ಕಂಡಕಂಡವರಿಗೆಲ್ಲ ಹೀಗೆ ಪೊಲೀಸರು ಲಾಠಿ ರುಚಿ ತೋರಿಸಿದರೆ ಅದು ಇನ್ನೊಂದು ರೀತಿ ಪರಿಣಾಮಕ್ಕೆಡೆ ಮಾಡುವ ಸಂಭವ ಇರುತ್ತದೆ. ಅಲ್ಲದೆ ಸಹಜವಾಗಿ ಮನುಷ್ಯ ಸ್ವತಂತ್ರ ಜೀವಿ. ಅವನನ್ನು ಕೂಡಿ ಹಾಕಿದಷ್ಟೂ ಹೊರಬರಬೇಕೆಂಬ ಬಯಕೆ ಹೆಚ್ಚಾಗುತ್ತದೆ. ಸುದೀರ್ಘಾವಧಿಯ ಈ ಸ್ವಯಂಬಂಧನ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮವಾದ ಸಂದರ್ಭವಾಗಿದೆ. ಎಲ್ಲವನ್ನೂ-ಎಲ್ಲರನ್ನೂ ಸಮರ್ಥವಾಗಿ, ಸಮರ್ಪಕವಾಗಿ ನಿಭಾಯಿಸುವ ಕೌಶಲ ನಮ್ಮ ಸರ್ಕಾರದ ಅಧಿಕಾರಿ, ಸಿಬ್ಬಂದಿಗಳದ್ದಾಗಿದೆ.

ಈ ಎಲ್ಲ ನಿರ್ಬಂಧ- ನಿಯಮಗಳು ಯಾರೊಬ್ಬರಿ ಗಾಗಿಯೂ ಅಲ್ಲ. ಇವು ಅಖಂಡ ಭಾರತದ ಸಮಸ್ತ ನಾಗರಿಕರಿಗಾಗಿ ಎಂಬುದನ್ನು ನಾವು ಅರಿತು, ಇತರರಲ್ಲೂ ಅರಿವು ಮೂಡಿಸಬೇಕಾಗಿದೆ. ಪ್ರಸಕ್ತ ವಿದ್ಯಮಾನದಲ್ಲಿ ತ್ಯಾಗ, ಶಿಸ್ತು, ಸ್ವಚ್ಛತೆ, ಸ್ವವಿವೇಚನೆ ನಮ್ಮ ಅನುದಿನದ ಬದುಕಿನ ಭಾಗವಾಗಬೇಕಾದ ಅನಿವಾರ್ಯ ಬಂದೊದಗಿದೆ. ಉದಾಸೀನ ಮಾಡಿದರೆ ಲಿಂಗ-ಜಾತಿ-ವಯೋ-ವರ್ಗಗಳನ್ನು ಗಮನಿಸದೆ ಹೊಸಕಿ ಹಾಕಲು ಕೊರೊನಾ ಕಾದು ಕುಳಿತಿದೆ. ಅದನ್ನು ಹಿಮ್ಮೆಟ್ಟಿಸುವಲ್ಲಿ ಹಿರಿಕಿರಿಯರೆನ್ನದೆ ಎಲ್ಲರೂ ಜಾಗೃತರಾಗಿ ಇರಬೇಕಾದ, ವಿನಾಕಾರಣ ಆತಂಕಕ್ಕೀಡಾಗದೆ, ಅತಿರೇಕವಾಗಿ ವರ್ತಿಸದೆ ಸರ್ಕಾರ ದೊಂದಿಗೆ ಕರಜೋಡಿಸಿ ಕೊರೊನಾಮುಕ್ತ ಭಾರತಕ್ಕೆ ಸಂಕಲ್ಪ ಮಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT