ಭಾನುವಾರ, ಜೂನ್ 7, 2020
28 °C
ವೈರಸ್‌ ನಾಶಕ್ಕೆ ಸಹಕರಿಸದ ಯಾರೇ ಆದರೂ ಕ್ಷಮಾರ್ಹರಲ್ಲ

ಕೋಮುವಾದೀಕರಣ ಸಲ್ಲದು | ಮುಸ್ಲಿಂ ಚಿಂತಕರ ಚಾವಡಿ ಪತ್ರಕ್ಕೆ ಪ್ರತಿಕ್ರಿಯೆ

ವಾಚಕರವಾಣಿ Updated:

ಅಕ್ಷರ ಗಾತ್ರ : | |

Prajavani

'ಮುಸ್ಲಿಂ ಚಿಂತಕರ ಚಾವಡಿ'ಯ ಪತ್ರಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಚಿಂತಕ ಚಂದ್ರಕಾಂತ ವಡ್ಡು ಮತ್ತು ವಕೀಲ ಸಿ.ಎಚ್.ಹನುಮಂತರಾಯ ಅವರ ಪ್ರತಿಕ್ರಿಯೆ ಇಲ್ಲಿದೆ. ಈ ಪತ್ರವು 'ವಾಚಕರವಾಣಿ'ಯಲ್ಲಿ ಏಪ್ರಿಲ್ 7ರಂದು ಪ್ರಕಟವಾಗಿತ್ತು.

ಇದನ್ನೂ ಓದಿ: ಹುಂಬತನ ಬೇಡ; ಅಪಪ್ರಚಾರ ನಿಲ್ಲಲಿ | ಮುಸ್ಲಿಂ ಚಿಂತಕರ ಚಾವಡಿ ಪತ್ರ

---

ಕೊರೊನಾ ವೈರಸ್ಸನ್ನು ಹಿಮ್ಮೆಟ್ಟಿಸಲು ನಮ್ಮ ದೇಶದ ಜನರು ಜಾತಿ, ವರ್ಣ, ವರ್ಗ, ಧರ್ಮಗಳನ್ನು ಮೀರಿ, ಮಾನವರೆಲ್ಲ ಒಂದೇ ಎಂಬ ತಿಳಿವಳಿಕೆಯಿಂದ ನಡೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಆತಂಕ ಹುಟ್ಟಿಸುವ ವಿದ್ಯಮಾನವು ಮುನ್ನೆಲೆಗೆ ಬಂದಿದೆ.

ದೆಹಲಿಯಲ್ಲಿ ನಡೆದ ತಬ್ಲೀಗ್‌ ಜಮಾತ್‌ನ ಧರ್ಮಸಭೆಯ ನಂತರ, ಆ ಸಭೆಯಲ್ಲಿ ಭಾಗವಹಿಸಿದ್ದ ಕೆಲವರ ವರ್ತನೆ ಖಂಡನೀಯವಾಗಿದೆ. ವೈದ್ಯರಿಗೆ ಸಹಕರಿಸದಿರುವುದು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿರುವುದು ಸಲ್ಲದ ವರ್ತನೆಯೆಂದು ವಿರೋಧಿಸಲೇಬೇಕು.

ಆದರೆ, ತಬ್ಲೀಗ್‌ ಜಮಾತ್‌ನ ಕೆಲವು ಮೂಢ ಮುಸ್ಲಿಮರ ವರ್ತನೆಯನ್ನು ವಿರೋಧಿಸುವ ನೆಪದಲ್ಲಿ ಮುಸ್ಲಿಮರನ್ನು ಮಾನವಬಾಂಬುಗಳೆಂಬಂತೆ ಬಿಂಬಿಸಿ, ದೇಶದ ಧಾರ್ಮಿಕ ಸಾಮರಸ್ಯವನ್ನು ಹಾಳು ಮಾಡುವ ಹುನ್ನಾರ ನಡೆಯುತ್ತಿರುವುದು ತೀವ್ರ ಖಂಡನೀಯ. ಇದು, ಬೆಂದ ಮನೆಯಲ್ಲಿ ಜಂತೆ ಕೀಳುವ ಕೆಲಸ. ನಿಜಕ್ಕೂ ಮಾನವಬಾಂಬುಗಳಿದ್ದರೆ ಸರ್ಕಾರಕ್ಕೆ ಮಾಹಿತಿ ಕೊಡಲಿ. ಸರ್ಕಾರವು ಯಾವುದೇ ರಿಯಾಯಿತಿ ತೋರಿಸದೆ ಶಿಕ್ಷೆಗೆ ಕ್ರಮ ಕೈಗೊಳ್ಳಲಿ.

ಕೊರೊನಾ ವೈರಸ್‌ ವಿರುದ್ಧ ದೇಶವೇ ಒಂದಾಗಿ ಹೋರಾಡುತ್ತಿರುವಾಗ, ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತೆಯರು ಹಗಲಿರುಳೂ ದುಡಿಯುತ್ತಿರುವಾಗ ‘ಕೊರೊನಾ ಕೋಮುವಾದೀಕರಣ’ಕ್ಕೆ ಮುಂದಾಗುವ ದುಷ್ಟತನವು ದೇಶವನ್ನು ಒಡೆಯುತ್ತದೆ ಎಂದು ಸರ್ಕಾರಗಳು ಮತ್ತು ಮಾನವ ಪ್ರಜ್ಞೆಯ ಪ್ರತಿಯೊಬ್ಬರೂ ದೃಢವಾಗಿ ಹೇಳಬೇಕು.

ಕೊರೊನಾ ವೈರಸ್‌ ನಾಶಕ್ಕೆ ಸಹಕರಿಸದೇ ಇರುವ ಮುಸ್ಲಿಮರಿಗೆ ಬುದ್ಧಿ ಹೇಳಿ, ಸರಿದಾರಿಗೆ ತರುವ ಕೆಲಸವನ್ನು ಮುಸ್ಲಿಂ ಧರ್ಮಗುರುಗಳು ಮತ್ತು ನೇತಾರರು ಮಾಡಬೇಕು. ಸಹಕರಿಸದೇ ಇರುವ ಮುಸ್ಲಿಮರನ್ನಾಗಲೀ ಯಾರನ್ನೇ ಆಗಲಿ ಕ್ಷಮಿಸಬಾರದು. ಕೆಲವು ಮುಸ್ಲಿಮರ ವರ್ತನೆಯನ್ನು ಕೋಮುವಾದೀಕರಣಕ್ಕೆ ಬಳಸಿಕೊಂಡು ಕೊರೊನಾ ವಿರುದ್ಧದ ವೈದ್ಯಕೀಯ ಹೋರಾಟಕ್ಕೆ ಹಿನ್ನಡೆ ಉಂಟು ಮಾಡುವವರನ್ನು ಖಂಡಿತ ಕ್ಷಮಿಸಬಾರದು. ದೇಶವು ಸಂಕಷ್ಟದಲ್ಲಿರುವಾಗ ಜನರ ಏಕತೆಗೆ ಭಂಗವುಂಟು ಮಾಡುವವರು ಯಾವುದೇ ಧರ್ಮದವರಾಗಿ‌ದ್ದರೂ ಕ್ರಮ ಕೈಗೊಳ್ಳಬೇಕು. ಇದು, ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಒತ್ತಾಯ.

- ಬರಗೂರು ರಾಮಚಂದ್ರಪ್ಪ, ಬೆಂಗಳೂರು

***

ಇವರು ಮುಸ್ಲಿಂ ಚಿಂತಕರೇ: ಇದೆಂಥಾ ವಿಪರ್ಯಾಸ?

ರಹಮತ್ ತರೀಕೆರೆ, ಮುಜಾಪ್ಫರ್ ಅಸ್ಸಾದಿ ಮೊದಲಾದ ‘ಮುಸ್ಲಿಂ ಚಿಂತಕರ ಚಾವಡಿ’ ಸದಸ್ಯರು ‘ಹುಂಬತನ ಬೇಡ; ಅಪಪ್ರಚಾರ ನಿಲ್ಲಲಿ’ ಎಂದು (ವಾ.ವಾ., ಏ. 6) ಮನವಿ ಮಾಡಿದ್ದಾರೆ. ಈ ಹೇಳಿಕೆ ನೀಡಿರುವ ಅನೇಕರು ನಾನು ಗಮನಿಸಿದಂತೆ ಧರ್ಮಾತೀತರು, ಪ್ರಗತಿಪರರು. ಇವರು ಅದು ಹೇಗೆ ಒಂದು ಧರ್ಮದ ಚಿಂತಕರ ಚಾವಡಿಯಲ್ಲಿ ಗುರುತಿಸಿಕೊಳ್ಳಲು ಸಾಧ್ಯ?!

ಇವರೆಲ್ಲಾ ಮುಸ್ಲಿಂ ಧರ್ಮದವರಾಗಿ ಗುರುತಿಸಿಕೊಳ್ಳಲು ನಿರ್ಧರಿಸಿದ್ದರೆ ಯಾರೂ ಆಕ್ಷೇಪಿಸಲಾಗದು. ಆ ಸ್ವಾತಂತ್ರ್ಯ ಅವರಿಗಿದೆ. ಒಂದು ಧರ್ಮದ ಮುಖಂಡರಾಗಿ, ಚಿಂತಕರಾಗಿ ಅವರು ತಮ್ಮ ಧರ್ಮದ ಅನುಯಾಯಿಗಳಿಗೆ ಉಪದೇಶ, ನೀತಿಪಾಠ, ಮನವಿ ಮಾಡಲೂಬಹುದು. ಆ ಧರ್ಮದ ವಕ್ತಾರರಾಗಿಯೂ ಮಾತನಾಡಬಹುದು. ಆದರೆ, ಇಲ್ಲಿರುವ ಅನೇಕರ ಹಿನ್ನೆಲೆ ನೋಡಿದರೆ, ಅವರನ್ನು ಈ ಪಾತ್ರದಲ್ಲಿ ಕಾಣಲು, ಒಪ್ಪಿಕೊಳ್ಳಲು ಖಂಡಿತಾ ಸಾಧ್ಯವಾಗುತ್ತಿಲ್ಲ. ಅವರು ಆ ಧರ್ಮದ ಜೊತೆಗೆ ಗುರುತಿಸಿಕೊಳ್ಳಲು ಹುಟ್ಟು, ನಂಬಿಕೆ, ಆಚರಣೆ- ಇವುಗಳಲ್ಲಿ ಯಾವುದು ಕಾರಣ ಎಂಬುದು ಮುಖ್ಯವಾಗುತ್ತದೆ. ಅವರು ಹುಟ್ಟಿನಿಂದ ಮಾತ್ರ ಆ ಧರ್ಮಕ್ಕೆ ಸೇರಿದವರಾಗಿದ್ದು, ನಂಬಿಕೆ ಅಥವಾ ಆಚರಣೆ ವ್ಯತಿರಿಕ್ತವಾಗಿದ್ದರೆ... ಆ ಧರ್ಮದ ಚಿಂತಕರಾಗಿ, ವಕ್ತಾರರಾಗಿ ಗುರುತಿಸಿಕೊಳ್ಳಲು ಹೇಗೆ ಸಾಧ್ಯ? ಆ ಧಾರ್ಮಿಕ ಸಮುದಾಯವು ಹಾಗೆಂದು ಒಪ್ಪಿಕೊಳ್ಳಲು, ಅವರ ಮನವಿಗೆ ಮನ್ನಣೆ ನೀಡಲು ಸಾಧ್ಯವೇ?

ವಿಶಾಲಾರ್ಥದಲ್ಲಿ ಚಿಂತಕರು, ಬುದ್ಧಿಜೀವಿಗಳು ತಮ್ಮನ್ನು ತಾವೇ ಒಂದು ಧಾರ್ಮಿಕ ಸಮುದಾಯಕ್ಕೆ ಸೀಮಿತಗೊಳಿಸಿಕೊಳ್ಳುವುದು ವಿಪರ್ಯಾಸವನ್ನು ಸೂಚಿಸುತ್ತದೆ ಹಾಗೂ ತಪ್ಪು ಸಂದೇಶ ರವಾನಿಸುತ್ತದೆ. ಈ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟಪಡಿಸುವ ಅಗತ್ಯ ಖಂಡಿತ ಇದೆ.

- ಚಂದ್ರಕಾಂತ ವಡ್ಡು, ಬೆಂಗಳೂರು

***

ಅನನ್ಯ ಸ್ಪಂದನ

‘ಹುಂಬತನ ಬೇಡ; ಅಪಪ್ರಚಾರ ನಿಲ್ಲಲಿ’ ಎಂಬ ಹೆಸರಿನಲ್ಲಿ ರಹಮತ್ ತರೀಕೆರೆ ಮತ್ತು ಇತರ 12 ಮಂದಿ ಪ್ರಾಜ್ಞರು ಬರೆದಿರುವ ಪತ್ರದಲ್ಲಿ ವ್ಯಕ್ತಗೊಂಡಿರುವ ಅಭಿಪ್ರಾಯಗಳು ಮರ್ಮಭೇದಕವಾಗಿವೆ. ಯಾವುದೇ ಧರ್ಮದ ಮೂಲಭೂತವಾದಿಗಳು ಪ್ರಸ್ತುತದಂತಹ ಸಂದರ್ಭಗಳಲ್ಲಿ ಅತೀ ಧೂರ್ತರಾಗಬಲ್ಲರು ಎಂದು ಅರ್ಥೈಸಿರುವುದು ವಿಚಾರವತ್ತಾಗಿದೆ. ಮೂಲಭೂತವಾದಿಗಳ ಗುಪ್ತ ಕಾರ್ಯಸೂಚಿಯನ್ನು ಬಯಲಿಗೆಳೆಯುವ ದಿಟ್ಟ ಮತ್ತು ಸಮರ್ಥ ಪ್ರಯತ್ನ ನಡೆದಿದೆ.

‘ಹುಂಬತನ ಮತ್ತು ಉಡಾಫೆ ತೋರುವವರು ಎಲ್ಲ ಧಾರ್ಮಿಕ ಸಮುದಾಯಗಳಲ್ಲೂ ಇದ್ದಾರೆ’ ಎನ್ನುವ ವಿಚಾರ ಹೆಚ್ಚು ಮುಖ್ಯ. ‘ಈ ವಿಷಯದಲ್ಲಿ ಮುಸ್ಲಿಂ ಚಿಂತಕರ ಚಾವಡಿಯು ಸರ್ಕಾರವು ಕೈಗೊಳ್ಳುವ ಎಲ್ಲಾ ಉಪಯುಕ್ತ ಕ್ರಮಗಳನ್ನು ಬೆಂಬಲಿಸುತ್ತದೆ’ ಎನ್ನುವ ಅನನ್ಯ ಸ್ಪಂದನವು ಆಪತ್‌ಧರ್ಮದ ಸಂದರ್ಭದಲ್ಲಿ ಆಲೋಚನಾಶೀಲವಾಗಿದೆ. ಈ ಪತ್ರದಲ್ಲಿನ ಎಲ್ಲ ವಿಚಾರಗಳು ಮುಚ್ಚುಮರೆಯಿಲ್ಲದೆ ಸಂದರ್ಭೋಚಿತ ಮತ್ತು ಅರ್ಥಪೂರ್ಣವಾಗಿವೆ.

- ಸಿ.ಎಚ್.ಹನುಮಂತರಾಯ, ಬೆಂಗಳೂರು

(ನೀವೂ ಪ್ರತಿಕ್ರಿಯಿಸಿ: editpage@prajavani.co.in)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು