ಭಾನುವಾರ, ಆಗಸ್ಟ್ 25, 2019
20 °C
ಕ್ಷಣಮಾತ್ರದಲ್ಲಿ ನಮ್ಮ ಕೆಲಸಗಳನ್ನು ಮಾಡಿ ಮುಗಿಸುವ ತಾಂತ್ರಿಕ ಸಾಧನಗಳಿದ್ದರೂ ನಮ್ಮವರೊಂದಿಗೆ ಮಾತನಾಡಲೂ ನಮಗೆ ಸಮಯವಿಲ್ಲ!

ತಂತ್ರಜ್ಞಾನದ ಅವಲಂಬನೆ: ಎಡವಿದ್ದೆಲ್ಲಿ?

Published:
Updated:
Prajavani

ಥೋರ್‌ಸ್ಟೈನ್ ವೆಬ್‌ಲೆನ್ ಎನ್ನುವ ಅಮೆರಿಕದ ಅರ್ಥಶಾಸ್ತ್ರಜ್ಞ ಹಲವು ದಶಕಗಳ ಹಿಂದೆಯೇ ಕೈಗಾರಿಕಾ ಕ್ರಾಂತಿಯ ಪರಿಣಾಮಗಳ ಹಿನ್ನೆಲೆಯಲ್ಲಿ ಮಾನವರ ಬದುಕಿನ ಹಲವು ಆಯಾಮಗಳ ನಿರ್ಧಾರಕ
ವಾಗಿ ತಂತ್ರಜ್ಞಾನವನ್ನು ಕಂಡಿದ್ದರು.

ಈ ಸಿದ್ಧಾಂತವನ್ನು ಅವರು ಟೆಕ್ನಲಾಜಿಕಲ್ ಡಿಟರ್ಮಿನಿಸಂ ಎಂದು ಕರೆದಿದ್ದರು. ಅವರ ಪ್ರಕಾರ, ಮಾನವನ ಆವಿಷ್ಕಾರದ ಫಲವಾಗಿ ಹುಟ್ಟಿಕೊಂಡಿದ್ದ ತಂತ್ರಜ್ಞಾನಗಳೇ ಜನರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಜೀವನದ ನಿರ್ಧಾರಕಗಳಾಗಿ ಕೆಲಸ ಮಾಡುತ್ತವೆ. ಬದುಕನ್ನು ಸರಳೀಕರಿಸಲು, ಸಮಯ ಹಾಗೂ ಶಕ್ತಿಯ ಉಳಿತಾಯಕ್ಕಾಗಿ ಆವಿಷ್ಕರಿಸಿದ ವಸ್ತುಗಳೆಲ್ಲವೂ ಇಂದು ಮಾನವನ ಬದುಕಿನ ನಿಯಂತ್ರಕಗಳು. ಪ್ರತೀ ಮಹತ್ವದ ಆವಿಷ್ಕಾರವೂ ಮಾನವನ ಜೀವನದ ಆಮೂಲಾಗ್ರ ಬದಲಾವಣೆಗೆ ಕೊಡುಗೆ ನೀಡಿದೆ.

ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಇದನ್ನು ಗಮನಿಸುವುದಾದರೆ, ಮಾನವನ ಬದುಕನ್ನು ಸರಳೀಕರಿಸುವ ಸೌಲಭ್ಯಗಳೆಲ್ಲಾ ಕೈಕೊಟ್ಟಾಗ ನಾವು ಅನುಭವಿಸುವ ಸಂಕಷ್ಟಗಳು ವೆಬ್‌ಲೆನ್ ಸಿದ್ಧಾಂತದ ಅನ್ವರ್ಥನಾಮ. ವಿದ್ಯುತ್ ಇಲ್ಲದಿದ್ದರೆ ಮನೆಯಲ್ಲಿ ಅಡುಗೆ ಆಗುವುದಿಲ್ಲ. ಮೊಬೈಲ್ ಇಲ್ಲದಿದ್ದರೆ ಅಂದು ಕೈಕಾಲು ಕಟ್ಟಿಹಾಕಿದ ಅನುಭವ, ವಾಹನವಿಲ್ಲದಿದ್ದರೆ ಅಂದಿನ ಬಹುಮುಖ್ಯ ಕೆಲಸಗಳೆಲ್ಲವೂ ಮುಂದಕ್ಕೆ ಹೋಗುತ್ತವೆ. ನಡುವೆ ಬಂದುಹೋದ ಹಬ್ಬವೊಂದು ಸದ್ದು- ಸಡಗರ ಉಂಟು ಮಾಡುವುದೇ ಇಲ್ಲ.

ಮುನ್ನೆಚ್ಚರಿಕೆಗಾಗಿ ಘೋಷಿಸಿದ ರಜೆಯಿಂದಾಗಿ ಗೃಹಬಂದಿಯಾಗಬೇಕಾದ ಪರಿಸ್ಥಿತಿ ಎದುರಾದಾಗ, ಯುವಜನರಿಗಂತೂ ಅಕ್ಷರಶಃ ಅಂಗವೈಕಲ್ಯವನ್ನು ಅನುಭವಿಸಿದ ಪರಿಸ್ಥಿತಿ. ಸಮಯವೇ ಇಲ್ಲವೆಂದು
ಕೊಂಡ ಜನರಿಗೆ ಕೈಕಾಲು ಮುದುರಿಕೊಂಡು ಬಿದ್ದಂತಹ ಸಮಯವನ್ನು ಕಂಡು, ನಿಜವಾಗಿಯೂ ದಿನಕ್ಕೆ 24 ಗಂಟೆಗಳು ಇವೆಯೇ ಎಂದು ಆಶ್ಚರ್ಯ. ಹಾಗಿದ್ದರೆ ಸಮಯವನ್ನು ಉಳಿತಾಯ ಮಾಡಿ, ಕ್ಷಣಮಾತ್ರದಲ್ಲಿ ನಮ್ಮ ಕೆಲಸವನ್ನು ಮಾಡಿ ಮುಗಿಸಿ ಬದುಕನ್ನು ಸುಲಭ ಮಾಡಿಕೊಡುತ್ತಿದ್ದ ತಾಂತ್ರಿಕ ವಸ್ತುಗಳು ಸಮಯ
ವನ್ನು ಎಲ್ಲಿ ತಿನ್ನುತ್ತಿದ್ದವು? ಸಂಪರ್ಕ ಕ್ಷೇತ್ರದ ತುತ್ತ ತುದಿಗೇರಿದ ಮಾನವನಿಗೆ ತನ್ನವರೊಂದಿಗೆ ಮಾತನಾ
ಡಲೂ ಸಮಯ ಇಲ್ಲದಂತೆ ಮಾಡಿದ್ದಾದರೂ ಏನು?

ಬಹುಶಃ ಇದಕ್ಕೆ ಉತ್ತರ, ನಾವು ಖರೀದಿಸಿದ ವಸ್ತುಗಳು ನಮ್ಮನ್ನು ನಿಯಂತ್ರಿಸುತ್ತಿವೆಯೇ ಹೊರತು ಅವು ನಮ್ಮ ನಿಯಂತ್ರಣದಲ್ಲಿ ಇಲ್ಲ ಎನ್ನುವುದು. ನಮ್ಮ ನಿರ್ಧಾರ ಏನಿದ್ದರೂ ಆ ವಸ್ತುವನ್ನು ಖರೀದಿಸುವವರೆಗೆ ಮಾತ್ರ. ನಂತರ ನಮ್ಮ ಖರ್ಚುವೆಚ್ಚ, ಸಮಯದ ನಿರ್ವಹಣೆ ಎಲ್ಲವನ್ನೂ ವಸ್ತುಗಳೇ ನಿರ್ಧರಿಸುತ್ತವೆ.

ವೆಬ್‌ಲೆನ್‍ ಅವರ ವಿಚಾರಗಳನ್ನು ಸಂವಹನ ಶಾಸ್ತ್ರಜ್ಞ ಮಾರ್ಷಲ್ ಮೆಕ್ಲುಹನ್‌ ಅವರ ‘ಮೀಡಿಯಂ ಈಸ್ ದಿ ಮೆಸೇಜ್’ ಎನ್ನುವ ತರ್ಕಕ್ಕೆ ತಳಕುಹಾಕಬಹುದು. ಮನುಷ್ಯನ ಜೀವನದ ಮೇಲೆ ಮಾಧ್ಯಮ ಬೀರುತ್ತಿರುವ ಪ್ರಭಾವದ ಹಿನ್ನೆಲೆಯಲ್ಲಿ ಇವರು ‘ಮಾಧ್ಯಮವೇ ಬದಲಾವಣೆಯ ಹಾದಿ’ ಎಂಬುದನ್ನು ವಿಶ್ಲೇಷಿಸಿದ್ದರು. ಅವರ ಪ್ರಕಾರ, ಅದು ಟಿ.ವಿ. ಇರಬಹುದು ಅಥವಾ ಕಂಪ್ಯೂಟರ್ ಇರಬಹುದು, ಮಾಧ್ಯಮಗಳೇ ಜೀವನದ ಸಕಾರಾತ್ಮಕ ಅಥವಾ ನಕಾರಾತ್ಮಕ ಬದಲಾವಣೆಗಳ ಪ್ರೇರಕ ಶಕ್ತಿ.

ಮಾಧ್ಯಮ ಪ್ರಸ್ತುತಪಡಿಸುವ ವಿಷಯಗಳು ಹಾಗೂ ಅವು ಮನುಷ್ಯನ ಮೇಲೆ ಬೀರುತ್ತಿರುವ ಪರಿಣಾಮವನ್ನು ಮೇಲ್ನೋಟಕ್ಕೆ ಗ್ರಹಿಸಿದರೂ ಮೂಲ ಅರ್ಥದಲ್ಲಿ ಮಾಧ್ಯಮವೇ ಮನುಷ್ಯನ ಜೀವನದಲ್ಲಿ ಬದಲಾವಣೆಗಳನ್ನು ತರುತ್ತದೆ. ಇದು ನಮ್ಮ ದಿನನಿತ್ಯದ ನಡವಳಿಕೆಗಳನ್ನೂ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಿಯಂತ್ರಿಸುತ್ತದೆ. ನಮ್ಮ ವಿರಾಮದ ಅವಧಿ, ನಿತ್ಯಕರ್ಮಗಳ ಅವಧಿಯನ್ನೂ ಟಿ.ವಿ, ಮೊಬೈಲ್, ಅಂತರ್ಜಾಲ ನಿಯಂತ್ರಿಸುತ್ತಿವೆ. ಉದಾಹರಣೆಗೆ, ವಿದ್ಯುತ್ ದೀಪದ ಆವಿಷ್ಕಾರವು ನಮ್ಮ ಸಾಮಾಜಿಕ ಚಟುವಟಿಕೆಗಳನ್ನೂ ನಿಯಂತ್ರಿಸಿದಂತೆ. ಕತ್ತಲಾಗುವ ಹೊತ್ತಿಗೆ ಮನೆ ಸೇರುತ್ತಿದ್ದ ಮನುಷ್ಯ ಇಂದು ಮಧ್ಯರಾತ್ರಿಯವರೆಗೂ ಅಡ್ಡಾಡಬಲ್ಲ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳು ತಡರಾತ್ರಿವರೆಗೂ ನಿರಾತಂಕವಾಗಿ ನಡೆಯಬಹುದು. ಹಗಲು ನಡೆಯುತ್ತಿದ್ದ ಕಾರ್ಯಕ್ರಮಗಳೆಲ್ಲವೂ ರಾತ್ರಿ ನಡೆದು, ಸಮಯದ ಅಭಾವಕ್ಕೊಂದು ಪರಿಹಾರ ಹುಡುಕಿಕೊಟ್ಟಿವೆ. ಈ ಅನುಕೂಲ ಹಿಂದಿನ ಕಾಲದ ಮನುಷ್ಯನಿಗೆ ಇರಲಿಲ್ಲ.

ಹಾಗಾದರೆ ತಂತ್ರಜ್ಞಾನ ಹಾಗೂ ಆಧುನಿಕತೆಯೇ ಮನುಷ್ಯನ ಪ್ರಗತಿಯೇ ಎಂದರೆ, ಬಹುಶಃ ಈಗ ಎದುರಿಸುತ್ತಿರುವ ಪ್ರಕೃತಿ ವಿಕೋಪವೇ ಇದಕ್ಕೆ ಉತ್ತರ. ಕನ್ನಡದ ಹಿರಿಯ ವಿದ್ವಾಂಸ ಸೇಡಿಯಾಪು ಕೃಷ್ಣಭಟ್ಟರು ಹೇಳುವಂತೆ ‘ಉಗುರು, ಹಲ್ಲು, ಕಲ್ಲು, ಕವಣೆಗಳಿಂದ ಬೇಟೆಯಾಡುತ್ತಿದ್ದ ಮಾನವನ ಆಯುಧಗಳಲ್ಲೇನೋ ಅಪಾರ ಮಟ್ಟದಲ್ಲಿ ಪ್ರಗತಿಯಾಯಿತು. ಆದರೆ ಅದರಿಂದ ಅವನ ಪಶುತ್ವವೇನಾದರೂ ಪಳಗಿದೆಯೇ? ಸುಖ ಸಾಧನಗಳಲ್ಲಿ ಪ್ರಗತಿಯಾದಂತೆ ಸುಖದಲ್ಲಿ ಪ್ರಗತಿಯಾದುದು ಕಂಡು ಬರುತ್ತದೆಯೇ? ಪ್ರಗತಿಗಾಗಿ ನಡೆಸಿದ ಹೋರಾಟದಲ್ಲಿ ಪ್ರಗತಿ ಸಾಧ್ಯವಾಯಿತಾದರೂ ಸೌಖ್ಯದಲ್ಲಿ ಏನಾದರೂ ಪ್ರಗತಿಯಾಗಿದೆಯೇ?’

ಹಿಂದೆ ಮಾನವ ಎದುರಿಸುತ್ತಿದ್ದ ರೋಗರುಜಿನಗಳು ಹಾಗೂ ಸಾವುನೋವಿಗೆ ಹೋಲಿಸಿದರೆ ಇಂದು ಏನಾದರೂ ಬದಲಾವಣೆ ಕಾಣುತ್ತಿದ್ದೇವೆಯೇ ಎನ್ನುವುದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದ ವಿಚಾರ. ಹಾಗಿದ್ದರೆ ನಾವು ಎಡವಿದ್ದೆಲ್ಲಿ? ಅಭಿವೃದ್ಧಿ ಹೊಂದಿದ್ದೇವೆ ಎಂದು ತೋರಿಸಿಕೊಳ್ಳಲು ನಮ್ಮ ಶಕ್ತಿಯನ್ನೂ ಸಂಪತ್ತನ್ನೂ ವ್ಯಯಿಸಿದ್ದಲ್ಲಿಯೇ ಅಥವಾ ಈ ಪ್ರಯತ್ನದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಗಣನೆಗೆ ತೆಗೆದುಕೊಳ್ಳದೆ ಇದ್ದುದಕ್ಕಾಗಿಯೇ?

Post Comments (+)