ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೊಳಗಿನ ‘ದುರ್ಯೋಧನ’ ಕಾಣುತ್ತಿಲ್ಲವೇ?

ಅಕ್ಷರ ಗಾತ್ರ

ಮಹಾಭಾರತ ಇಂದಿಗೂ ಜನಮಾನಸದಲ್ಲಿ ಹಚ್ಚಹಸಿರಾಗಿ ಉಳಿದಿರುವುದು ಅದರಲ್ಲಿರುವ ಸಾರ್ವಕಾಲಿಕ ಮಾನವಗುಣಗಳನ್ನು ಪ್ರತಿಬಿಂಬಿಸುವ ವಸ್ತು ಹಾಗೂ ಪಾತ್ರ ಚಿತ್ರಣದಿಂದಾಗಿಯೇ. ಅಲ್ಲಿನ ಪ್ರತಿಯೊಂದು ಪಾತ್ರವೂ ನಮ್ಮಲ್ಲಿನ ಗುಣಾವಗುಣಗಳನ್ನು ಮೈವೆತ್ತಿಕೊಂಡಿರುವುದು ಅದರ ವಿಶೇಷಗಳಲ್ಲೊಂದು. ಕಾಲ, ಪ್ರದೇಶಗಳನ್ನು ಮೀರಿ ನಿಂತ ಇಂತಹ ಕೃತಿಗಳು ಯಾವತ್ತಿಗೂ ಕೈದೀವಿಗೆಯಾಗಿ ಪ್ರಸ್ತುತವಾಗುತ್ತವೆ. ಅದರಲ್ಲಿಯೂ ಅರ್ಜುನ ಮತ್ತು ದುರ್ಯೋಧನರ ಪಾತ್ರ ಚಿತ್ರಣಗಳು ನಮ್ಮಲ್ಲಿಯೂ ಜೀವಂತವಾಗಿರುವ ‘ಅರ್ಜುನ’ ಮತ್ತು ‘ದುರ್ಯೋಧನ’ರನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗುತ್ತವೆ.

ಒಬ್ಬ ಒಳ್ಳೆಯ ವಿದ್ಯಾರ್ಥಿಗೆ ಇರಬೇಕಾದ ಗುಣಗಳನ್ನು ಪ್ರತಿನಿಧಿಸುವ ಪಾರ್ಥನು, ದ್ರೋಣಾಚಾರ್ಯರ ಬಿಲ್ವಿದ್ಯೆಯ ಪರೀಕ್ಷೆಯಲ್ಲಿ ಪಕ್ಷಿಯ ಕಣ್ಣಿಗೆ ದೃಷ್ಟಿನೆಟ್ಟು ಏಕಾಗ್ರತೆಯನ್ನು ತೋರಿದರೆ, ಗೀತೋಪದೇಶ ಹಾಗೂ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಶ್ರೀಕೃಷ್ಣನಿಗೆ (ಗುರುವಿಗೆ) ವಿಧೇಯನಾಗಿ ಆತನ ಮಾತುಗಳನ್ನು ಪಾಲಿಸುವವನಾಗುತ್ತಾನೆ. ಕೆಲ ಪ್ರತಿಸೃಷ್ಟಿಗಳಲ್ಲಿ (ಪಂಪ ಭಾರತ) ಕಥಾನಾಯಕನ ಪಾತ್ರವಾಗಿಯೂ ಶೋಭಿಸುತ್ತಾನೆ.

ಮಹಾಭಾರತದ ಈ ಕಥೆಗಳನ್ನು ಓದುವಾಗ ಅಥವಾ ಕೇಳುವಾಗ ಶ್ರೀಕೃಷ್ಣನು ಈ ಉಪದೇಶವನ್ನು ದುರ್ಯೋಧನನಿಗೆ ಹೇಳಿದ್ದರೆ, ಭೀಕರವಾದ ಕುರುಕ್ಷೇತ್ರ ಯುದ್ಧವನ್ನು ಹಾಗೂ ಅದರಿಂದಾದ ಅಸಂಖ್ಯ ಸಾವುನೋವನ್ನು ತಪ್ಪಿಸಬಹುದಿತ್ತಲ್ಲ ಎನ್ನುವ ವಿಚಾರ ಸುಳಿಯದೇ ಇರದು. ಅದನ್ನು ಬೆನ್ನುಹತ್ತಿ ಹೊರಟರೆ, ಶ್ರೀಕೃಷ್ಣನು ದುರ್ಯೋಧನನಿಗೆ ಧರ್ಮಾಧರ್ಮಗಳನ್ನು ಕುರಿತು ಹೇಳುವ ಪ್ರಸಂಗವೊಂದು ಕಂಡುಬರುತ್ತದೆ. ಆ ಸಮಯದಲ್ಲಿ ದುರ್ಯೋಧನ ನೀಡುವ ಪ್ರತಿಕ್ರಿಯೆ ಚಿರಂತನವಾಗಿಯೇ ಉಳಿಯುವುದನ್ನು ಕಾಣಬಹುದು. ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ‌‌| ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಃ’ (ಧರ್ಮ ಯಾವುದೆಂದು ತಿಳಿದಿದ್ದರೂ ಆಚರಿಸಲಾಗುತ್ತಿಲ್ಲ, ಅಧರ್ಮ ಯಾವುದೆಂದು ತಿಳಿದಿದ್ದರೂ ಬಿಡಲಾಗುತ್ತಿಲ್ಲ). ಈ ಮಾತುಗಳು ಈಗಿನ ಜನರ ಅದರಲ್ಲಿಯೂ ವಿದ್ಯಾರ್ಥಿಗಳ ಮನಃಸ್ಥಿತಿಯಲ್ಲಿ ಕಂಡುಬರುತ್ತಿರುವುದನ್ನು ಭಾರತದ ಸ್ವಾತಂತ್ರ್ಯೋತ್ತರ ಶಿಕ್ಷಣದ ಕುರಿತು ಅಧ್ಯಯನ ನಡೆಸಿರುವ ಹಲವಾರು ಸಂಶೋಧನೆಗಳು ಬೆಳಕಿಗೆ ತಂದಿರುವುದು ಗಮನಿಸಬೇಕಾದ ಅಂಶ.

ಕನ್ನಡ ಮಾಧ್ಯಮ ಶಾಲೆಗಳ ಅಳಿವು ಉಳಿವಿನ ಕುರಿತು ಘೋಷಣೆಗಳನ್ನು ಕೂಗುವವರು, ಬೆಂಕಿಯುಗುಳುವ ಪದಗಳನ್ನು ಹೊಸೆದು ಲೇಖನಗಳನ್ನು ಬರೆಯುವವರ ಮಕ್ಕಳು, ಮೊಮ್ಮಕ್ಕಳು ದಿನಬೆಳಗಾದರೆ, ಮನೆಯ ಮುಂದೆ ಬಂದು ನಿಲ್ಲುವ ಹಳದಿ ಬಸ್ಸುಗಳನ್ನು ಏರಿ ಟಾಟಾ ಹೇಳುವಾಗ, ನಮ್ಮೊಳಗೆ ಈ ದುರ್ಯೋಧನ ಜೀವಂತವಾಗಿ ನಿಲ್ಲುತ್ತಾನೆ. ಸ್ವಚ್ಛ ಭಾರತ ಅಭಿಯಾನವನ್ನು ಹೊಗಳುತ್ತಲೇ ಬಾಯಲ್ಲಿನ ಕೆಂಪುರಸವನ್ನು ರಸ್ತೆಯ ಮೇಲೆ ಪಿಚಕ್ಕನೆ ಉಗಿದಾಗಲೂ ದುರ್ಯೋಧನ ಪ್ರತ್ಯಕ್ಷನಾಗುತ್ತಾನೆ. ಶಬ್ದಮಾಲಿನ್ಯ, ವಾಯುಮಾಲಿನ್ಯದಂಥ ಮಾಲಿನ್ಯಗಳ ಬಗ್ಗೆ ತಿಳಿದೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅವುಗಳನ್ನು ಹೆಚ್ಚಿಸಲು ಕೊಡುಗೆ ನೀಡುತ್ತಿರುವವರಲ್ಲಿಯೂ ದುರ್ಯೋಧನನ ಈ ಮಾತು ಪ್ರತಿಧ್ವನಿಸುತ್ತದೆ. ತಮ್ಮ ಮುಂದಿರುವ ಗುರಿಯನ್ನು ತಲುಪಲು ಅನುಸರಿಸಬೇಕಾದ ಜೀವನ ಕ್ರಮಗಳೇನು ಎಂಬ ಅರಿವಿದ್ದೂ ಅನುಸರಿಸದೆ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್‌, ಯುಟ್ಯೂಬ್‌ಗಳಲ್ಲಿ ಕಾಲ ಕಳೆಯುವ ನನ್ನಂತಹವರಲ್ಲಿಯೂ ದುರ್ಯೋಧನ ಚಿರಂತನನೇ ಆಗಿದ್ದಾನೆ.

ಮಹಾಭಾರತದ ಪಾತ್ರಗಳಲ್ಲಿನ ನಕಾರಾತ್ಮಕ ಅಂಶಗಳ ಮುಂದುವರಿದ ಅಂಶಗಳಾಗೋ, ಅವುಗಳೆಲ್ಲದರ ಮಿಶ್ರಣವಾಗೋ ಅಥವಾ ಕಲ್ಪನೆಗೂ ಸಿಗದಷ್ಟು ಬೆಳೆದಿರುವ, ಬೆಳೆಯುತ್ತಿರುವ ರಾಜಕೀಯ ಪುಢಾರಿಗಳ ಆಟಗಳಂತೂ ನವಮಹಾಭಾರತವನ್ನು ಬರೆಯಲಿಚ್ಛಿಸುವ ಆಧುನಿಕ ವ್ಯಾಸನ ಅಂಕೆಗೆ ದಕ್ಕುವುದೂ ಕಷ್ಟವೆನಿಸುತ್ತದೆ. ಈ ಮಹಾಭಾರತದ ದುರ್ಯೋಧನ ಕೆಟ್ಟವನಂತೂ ಅಲ್ಲ- ತಿಳಿ ತಿಳಿದೂ ತಪ್ಪುಮಾಡುವವ ಅಷ್ಟೆ. ಈತನು ಛಲದಂಕಮಲ್ಲ, ಕುಟಿಲತೆಯಿಲ್ಲದ ನಿರ್ಮಲ ಮನಸ್ಸಿನವನು, ನುಡಿದಂತೆ ನಡೆಯುವವನು. ಆದರೆ ಈಗ ನಮ್ಮೊಳಗಿನ ದುರ್ಯೋಧನ?

ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ, ರಾಜಕೀಯ ಕೆಸರೆರಚಾಟಕ್ಕಾಗಿ ರಾಮಾಯಣ ಮತ್ತು ಮಹಾಭಾರತದ ಹಲವು ಪಾತ್ರಗಳನ್ನು ರಾಜಕಾರಣಿಗಳು ತಮ್ಮ ಹಾಗೂ ತಮ್ಮ ವಿರೋಧಿಗಳ ಹೆಸರಿನ ಜೊತೆಗೆ ತಳಕು ಹಾಕುತ್ತಿರುವುದು ಸಾಮಾನ್ಯವಾಗಿದೆ. ಈ ಮಹಾಕಾವ್ಯಗಳಿಂದ ನಾವೇನು ಕಲಿತು ಅಳವಡಿಸಿಕೊಳ್ಳಬೇಕು ಎಂಬುದು ಮುಖ್ಯವೇ ಹೊರತು ಅವುಗಳಿಗೆ ಭಾವನಾತ್ಮಕ ರೂಪ ಕೊಟ್ಟು ಜನಸಾಮಾನ್ಯರು ಅದನ್ನು ತಿಳಿದುಕೊಳ್ಳದಂತೆ ಮಾಡುವುದಲ್ಲ ಅಥವಾ ಅವುಗಳಲ್ಲಿ ಬರೆದಿರುವುದೇ ಸತ್ಯ ಮತ್ತು ಅಂತಹ ವ್ಯವಸ್ಥೆಯನ್ನೇ ಪುನರ್‌ಸ್ಥಾಪಿಸಬೇಕು ಎಂಬ ಅಂಧ ವಿಶ್ವಾಸವೂ ಅಲ್ಲ. ಬದಲಾದ ಕಾಲಘಟ್ಟದಲ್ಲಿ ಚಿಂತನೆಗಳು, ಆದರ್ಶಗಳು ಬದಲಾಗಿಲ್ಲವೇ? ಪುರಾಣಗಳ ಕುರಿತು ಹೇಳುತ್ತಾ ಜನರನ್ನು ಸುಲಿಗೆ ಮಾಡುತ್ತಿರುವವರು ನಮ್ಮ ಮಧ್ಯೆ ಎಷ್ಟಿಲ್ಲ? ಅನಕ್ಷರಸ್ಥರು ಎಷ್ಟೊಂದು ಸಲ ನಮಗೆ ಆದರ್ಶವಾಗಿಲ್ಲ? ಈ ನಿಟ್ಟಿನಲ್ಲಿ ಇಂದು ನಮ್ಮನ್ನು ನಾವು ಆತ್ಮಾವಲೋಕನಕ್ಕೆ ಒಳಪಡಿಸಬೇಕಾಗಿದೆ. ಬದಲಾವಣೆಯು ಜಗದ ನಿಯಮ. ಅದನ್ನು ಮನದಲ್ಲಿಟ್ಟುಕೊಂಡು ಸಕಾರಾತ್ಮಕ ಬದಲಾವಣೆಗಾಗಿ ತುಡಿಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT