ಗುರುವಾರ , ಮಾರ್ಚ್ 23, 2023
28 °C

ಸಂಗತ: ಶೂನ್ಯ ಇಂಗಾಲದತ್ತ ಭಾರತೀಯ ರೈಲ್ವೆ

ಗುರುರಾಜ್ ಎಸ್. ದಾವಣಗೆರೆ Updated:

ಅಕ್ಷರ ಗಾತ್ರ : | |

ಈಗ ಎಲ್ಲೆಲ್ಲೂ ಶೂನ್ಯ ಇಂಗಾಲದ (ನೆಟ್‍ಝೀರೊ) ಬಗ್ಗೆಯೇ ಮಾತು, ಪ್ರತಿಜ್ಞೆ. ಕಲ್ಲಿದ್ದಲು, ಡೀಸೆಲ್, ಪೆಟ್ರೋಲ್, ಮೀಥೇನ್ ಉರಿಸಿ ಶಕ್ತಿ ಸಂಪಾದಿಸಿ ಕೆಲಸ ಮಾಡುವ ದೇಶಗಳೆಲ್ಲ ಮೂವತ್ತು, ಐವತ್ತು ವರ್ಷಗಳಲ್ಲಿ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿ, ಸೂರ್ಯನಿಂದ, ಗಾಳಿಯಿಂದ ಲಭಿಸುವ ಶುದ್ಧ ಇಂಧನವನ್ನೇ ಬಳಸುತ್ತೇವೆ ಎಂದು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಡೆದ ಸಭೆಗಳಲ್ಲಿ ವಿಶ್ವ ಸಮುದಾಯಕ್ಕೆ ಮಾತು ಕೊಟ್ಟಿವೆ.

ಪ್ಯಾರಿಸ್ ಒಪ್ಪಂದಕ್ಕೆ ಬದ್ಧರಾಗಿರುವ ನಾವು, ಇಂಗಾಲಮುಕ್ತ ಶಕ್ತಿ ಉತ್ಪಾದನೆ ಮತ್ತು ಬಳಕೆಗೆ ಭಾರಿ ಬಂಡವಾಳ ಹೂಡಿ ಕೆಲಸ ಶುರು ಮಾಡಿದ್ದೇವೆ. ಇದಕ್ಕೆ ಮುನ್ನುಡಿ ಎಂಬಂತೆ, ಭಾರತೀಯ ರೈಲ್ವೆ ಇನ್ನು ಏಳೇ ವರ್ಷಗಳಲ್ಲಿ ನಮ್ಮೆಲ್ಲ ರೈಲುಗಳನ್ನು ಇಂಗಾಲಮುಕ್ತ ಶಕ್ತಿ ಮೂಲಗಳಿಂದಲೇ ಓಡಿಸುತ್ತೇವೆ ಮತ್ತು ಚಟುವಟಿಕೆಗಳು ಕಾರ್ಬನ್ ಮುಕ್ತವಾಗಿರುತ್ತವೆ ಎಂದಿದೆ.

ವಿಶ್ವದ ನಾಲ್ಕನೆಯ ಅತಿ ದೊಡ್ಡ ರೈಲ್ವೆ ಜಾಲ ಎಂದೇ ಖ್ಯಾತಿ ಇರುವ ಭಾರತೀಯ ರೈಲ್ವೆ ತನ್ನ ಅಸ್ತಿತ್ವದ ನೂರೈವತ್ತು ವರ್ಷಗಳಲ್ಲಿ ಹಲವು ಸಕಾರಾತ್ಮಕ ವಿಕಾಸ ಕಂಡಿದೆ. ಶೂನ್ಯ ಇಂಗಾಲ ಹೊಮ್ಮಿಸುವ ಪ್ರಯತ್ನದ ಆರಂಭವೆಂಬಂತೆ, ಇದೇ ವರ್ಷದ ಅಂತ್ಯದ ವೇಳೆಗೆ, ಓಡುತ್ತಿರುವ ತನ್ನೆಲ್ಲ ರೈಲುಗಳನ್ನು ಎಲೆಕ್ಟ್ರಿಕ್ ರೈಲುಗಳಾಗಿ ಮಾರ್ಪಡಿಸಲು ಕಾರ್ಯಪ್ರವೃತ್ತವಾಗಿದೆ.

2030ರ ವೇಳೆಗೆ ಎಲ್ಲ ರೈಲುಗಳನ್ನೂ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿ ಓಡಿಸುವ ನೀಲನಕ್ಷೆ ತಯಾರಿಸಿದೆ. ಇದು ಸಾಧ್ಯವಾದಲ್ಲಿ 2030ರ ವೇಳೆಗೆ ಶೇ 33ರಷ್ಟು ಇಂಗಾಲ ಹೊಮ್ಮುವಿಕೆಯನ್ನು ಕಡಿತಗೊಳಿಸುತ್ತೇವೆ ಎಂಬ ನಮ್ಮ ಮಾತಿಗೆ ಬಲ ಬರುತ್ತದೆ. 2070ಕ್ಕೆ ಕಾರ್ಬನ್‌ಮುಕ್ತ ಇಂಧನ ಬಳಕೆಯ ಗುರಿ ಸಾಧಿಸಲು ಹುಮ್ಮಸ್ಸು ಬರುತ್ತದೆ.

‘ನೆಟ್‍ಝೀರೊ’ ಎಂದರೆ ನಮ್ಮೆಲ್ಲ ದೈನಂದಿನ ಚಟುವಟಿಕೆಗಳಿಗಾಗಿ ಬಳಸುವ ಇಂಧನ ಮೂಲಗಳಿಂದಾಗಿ ಉತ್ಪತ್ತಿಯಾಗುವ ಶಾಖವರ್ಧಕ ಅನಿಲಗಳನ್ನು ಸಾಧ್ಯವಾದಷ್ಟೂ ಶೂನ್ಯಗೊಳಿಸುವುದು ಎಂದರ್ಥ. ಇದನ್ನು ಸಾಧಿಸಲು ಅನೇಕ ದೇಶಗಳು ಅರಣ್ಯೀಕರಣ ಮತ್ತು ಹಸಿರು ಭೂಮಿಯ ಪುನರ್‌ ಸ್ಥಾಪನೆಗೆ ಕೈಹಾಕಿವೆ. ಪ್ರತಿವರ್ಷ 1 ಕೋಟಿ ಸಸಿ ನೆಟ್ಟಿರುವ ಇಲಾಖೆ, ತನ್ನ ಇಂಗಾಲ ಹೊಮ್ಮುವಿಕೆಯನ್ನು ಕಡಿತಗೊಳಿಸುವ ಗುರಿಯ ಹಿಂದೆ ಬಿದ್ದಿದೆ. ಇದಕ್ಕಾಗಿ ನವೀಕರಿಸಬಹುದಾದ ಇಂಧನವನ್ನೇ ಬಳಸುವ ಇರಾದೆಯಲ್ಲಿದೆ. 2014ರಿಂದ ಡೀಸೆಲ್‌ನಿಂದ ಓಡುವ ರೈಲುಗಳನ್ನು ನಿಲ್ಲಿಸಲು ಶುರುಮಾಡಿದ ಇಲಾಖೆ, ಎಲ್ಲ ಬ್ರಾಡ್‍ಗೇಜ್ ಮಾರ್ಗದ ರೈಲುಗಳನ್ನು ಎಲೆಕ್ಟ್ರಿಕ್ ರೈಲುಗಳನ್ನಾಗಿ ಮಾರ್ಪಡಿಸುತ್ತಿದೆ.

ರೈಲು ಓಡಿಸಲು ಬೇಕಾಗುವ ಶಕ್ತಿಯ ಜೊತೆಗೆ ಇತರ ಚಟುವಟಿಕೆಗಳಿಗೆ ಬೇಕಾದ ಶಕ್ತಿಯನ್ನು ಬ್ಯಾಟರಿಗಳ ಮೂಲಕ ಪಡೆಯುವ ತಯಾರಿ ನಡೆದಿದ್ದು, ಬ್ಯಾಟರಿ ತಯಾರಿಕಾ ತಂತ್ರಜ್ಞಾನಕ್ಕೆ ಬಂಡವಾಳ ಹೂಡುತ್ತಿದೆ. ದಿನದ ಅಷ್ಟೂ ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆಗಾಗಿ ಹಳಿಗಳಿಗೆ ಸಮಾನಾಂತರವಾಗಿ ಸೌರ ಫಲಕ ಅಳವಡಿಸುವ ಯೋಜನೆ ತಯಾರಾಗಿದೆ. ರೈಲುಗಳ ಮೇಲ್ಭಾಗ, ನಿಲ್ದಾಣಗಳ ತಾರಸಿ ಮತ್ತು ಆಡಳಿತಾತ್ಮಕ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್‍ಗಳು ಬರಲಿವೆ. ವಾರ್ಷಿಕ ಸರಕು ಸಾಗಣೆಯ ಪ್ರಮಾಣ ಶೇ 35ರಿಂದ 45ಕ್ಕೆ ಹೆಚ್ಚಲಿದೆ. ರೈಲು ಮಾರ್ಗದ ಸೋಲಾರೀಕರಣಕ್ಕೆ 500 ಕೋಟಿ ಡಾಲರ್‌ಗಳ ಬಂಡವಾಳ ಬೇಕಿದೆ.

ಒಂದು ಲೆಕ್ಕದಂತೆ, ಭಾರತೀಯ ರೈಲ್ವೆಗೆ 20 ಗಿಗಾವಾಟ್‍ನಷ್ಟು ಸೌರಶಕ್ತಿ ಉತ್ಪಾದನೆಯ ಅವಕಾಶಗಳಿವೆ. ರೈಲು ಮಾರ್ಗದ ಬದಿಗಳಲ್ಲಿ ತನ್ನ ಸುಪರ್ದಿಯಲ್ಲಿರುವ ಖಾಲಿ ಜಾಗಗಳಲ್ಲಿ ಸೋಲಾರ್ ವಿದ್ಯುತ್ ಘಟಕ ನಿರ್ಮಿಸುವ ಯೋಜನೆ ಇಲಾಖೆಗೆ ಇದೆ. ಹೋದ ವರ್ಷ ಬಿಡುಗಡೆಯಾದ ‘ಗ್ರೀನ್ ಇಂಡಿಯನ್ ರೈಲ್ವೇಸ್’ ವರದಿಯಲ್ಲಿ, ದೇಶದ 1,000 ರೈಲು ನಿಲ್ದಾಣ ಮತ್ತು ಕಟ್ಟಡಗಳಲ್ಲಿ 111 ಮೆಗಾವಾಟ್‌ ಸಾಮರ್ಥ್ಯದ ಸೌರ ವಿದ್ಯುತ್ ಘಟಕಗಳನ್ನು ಅಳವಡಿಸಿರುವ ಬಗ್ಗೆ ಉಲ್ಲೇಖವಿದೆ. ದೇಶದ 700 ರೈಲು ನಿಲ್ದಾಣಗಳಿಗೆ ISO14001 ಪ್ರಮಾಣಪತ್ರವಿದೆ. ಬ್ರೇಕ್ ಹಾಕಿದಾಗಲೆಲ್ಲ ವಿದ್ಯುತ್ ಉತ್ಪಾದಿಸಬಲ್ಲ ಎಂಜಿನ್ ನಮ್ಮಲ್ಲಿದೆ.

ರೈಲು ಮಾರ್ಗಗಳ ವಿದ್ಯುದೀಕರಣದಿಂದಾಗಿ ಡೀಸೆಲ್ ಬಳಕೆ ಕಳೆದ ಎರಡು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ವಿದ್ಯುದೀಕರಣದಿಂದಾಗಿ ರೈಲುಗಳ ಸರಾಸರಿ ವೇಗವೂ ವೃದ್ಧಿಯಾಗಿದ್ದು, ರೈಲು ಮಾರ್ಗಗಳ ಆಸುಪಾಸಿನಲ್ಲಿ ಅಭಿವೃದ್ಧಿ ಉದ್ಯಮ, ಕೃಷಿ ವಹಿವಾಟುಗಳು ಹೆಚ್ಚಾಗಿವೆ ಎಂಬ ವರದಿ ಇದೆ. 2019- 20ರಲ್ಲಿ 2,100 ಕೋಟಿ ಯುನಿಟ್‌ ವಿದ್ಯುತ್ ಬಳಕೆಯಾಗಿದ್ದು, 2030ಕ್ಕೆ ಅದರ ಪ್ರಮಾಣ 7,200 ಕೋಟಿಯಷ್ಟಾಗಲಿದೆ ಎಂಬ ಅಂದಾಜಿದೆ. ಅದಕ್ಕಾಗಿ 8,200 ಮೆಗಾವಾಟ್ ವಿದ್ಯುತ್ ಬೇಕಾಗುತ್ತದೆ. ಇದಕ್ಕಾಗಿ 30,000 ಮೆಗಾವಾಟ್‌ ಸಾಮರ್ಥ್ಯದ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಬೇಕಾಗುತ್ತದೆ. ಇಲ್ಲಿಯವರೆಗೆ ರೈಲ್ವೆಗಿರುವ ಸ್ಥಾಪಿತ ಸಾಮರ್ಥ್ಯ 245 ಮೆಗಾವಾಟ್‌ ಮಾತ್ರ. ಅಂತರ ತುಂಬಾ ದೊಡ್ಡದಿದೆ. ರೈಲ್ವೆ ಇದನ್ನು ಹೇಗೆ ನಿಭಾಯಿಸುತ್ತದೆ ಎಂಬುದೇ ದೊಡ್ಡ ಪ್ರಶ್ನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು