ಶನಿವಾರ, ಅಕ್ಟೋಬರ್ 31, 2020
18 °C
ನಮ್ಮ ಹಕ್ಕುಗಳನ್ನು ಪ್ರತಿನಿಧಿಸುವ ಹಾದಿಯಲ್ಲಿ, ಇತರರ ದಿನಮಾನದ ನೆಮ್ಮದಿಯ ಹಕ್ಕಿಗೆ ಭಂಗ ತರುವುದು ಸರಿಯಲ್ಲ

ಸಂಗತ | ಬೇಕೇ ಬಂದ್‌ ಬವಣೆ?

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ಕಾಯಕವೇ ಸರ್ವೋನ್ನತಿಗೆ ಏಕೈಕ ಮಾರ್ಗ, ಅದು ಅತಿ ಶ್ರೇಷ್ಠ ತಪಸ್ಸು ಎಂದು ಜಗತ್ತಿನ ಎಲ್ಲ ಸಂಸ್ಕೃತಿಗಳೂ ಇತಿಹಾಸದುದ್ದಕ್ಕೂ ಕಂಡುಕೊಂಡಿವೆ, ಸಾರಿವೆ. ಯಾವುದೇ ಸಂದರ್ಭದಲ್ಲೂ ನಮ್ಮ ನಮ್ಮ ಕರ್ತವ್ಯವನ್ನು ತ್ಯಜಿಸಬಾರದು. ದೈನಂದಿನ ಜೀವನದ ಬಂಡಿ ಎಗ್ಗಿಲ್ಲದೆ ಉರುಳುತ್ತಿರಲೇಬೇಕು. ನಮಗೆ ಅನಾರೋಗ್ಯವಾಗಿ ನಾವು ಎಂತಹ ಚಿಕಿತ್ಸೆ ಪಡೆಯುತ್ತಿದ್ದರೂ ನಮ್ಮ ದೇಹವು ಆಹಾರ ಸೇವನೆಯಿಂದ ಹಿಡಿದು ತ್ಯಾಜ್ಯ ವಿಸರ್ಜನೆ ತನಕ ಒಂದಲ್ಲೊಂದು ರೂಪದಲ್ಲಿ ಎಲ್ಲ ವಿದ್ಯಮಾನಗಳಿಗೆ ಒಳಗಾಗುವುದು. ಅದರ ಕೆಲಸ ಕಾರ್ಯಗಳ ಸ್ಥಗಿತವಿರದು! ನಿಸರ್ಗಕ್ಕಿಂತ ಮಾನವನಿಗೆ ಶ್ರೇಷ್ಠ ಗುರುವಿಲ್ಲ.

ನಮ್ಮ ನೆಲೆಯಾದ ಭೂಮಿಯು ಸೂರ್ಯನ ಗುರುತ್ವದ ದೆಸೆಯಿಂದ ಕ್ರಮಬದ್ಧವಾಗಿ ಅವನನ್ನು ಬಳಸುತ್ತದೆ. ಹಾಗಾಗಿಯೇ ಹಗಲು, ಇರುಳು, ಋತುಮಾನ, ಮೋಡ, ಮಳೆ, ಮಾರುತ, ಬೆಳೆ ಎಲ್ಲ. ಆ ವಿರಾಟ್ ಕುಲುಮೆ ಕ್ಷಣ ಬಿಡುವು ಪಡೆದರೂ ಅಲ್ಲೋಲ ಕಲ್ಲೋಲ ಕಟ್ಟಿಟ್ಟ ಬುತ್ತಿ. ಮರಗಿಡಗಳ ಎಲೆಗಳು ಸೂರ್ಯನ ರಶ್ಮಿಗಳನ್ನು ಪಡೆಯಲು ಪೈಪೋಟಿಗಿಳಿಯವು. ಎಲ್ಲ ಎಲೆಗಳಿಗೂ ಕಿರಣ ಲಭಿಸುವಂತೆ, ಅಂದರೆ ಒಂದು ಇನ್ನೊಂದಕ್ಕೆ ಅಡ್ಡವಿರದ ಹಾಗೆ ಎಲೆಗಳ ರಚನೆಯಾಗಿದೆ.

ಯಾವುದೇ ಬಂದ್‍ನಿಂದ ಸತ್ಪರಿಣಾಮ ಎನ್ನುವುದೇ ಇಲ್ಲ. ಬರೀ ಗೌಜು, ಅಸ್ತವ್ಯಸ್ತ ಸ್ಥಿತಿ. ನೋಡಿ ನಾವು ಸಂಪು ಹೂಡಿದೆವು, ರೈಲು ತಡೆದೆವು, ಧರಣಿ ಕೂತೆವು, ಮಳಿಗೆ ಮುಚ್ಚಿಸಿದೆವು, ಅದರ ಫಲವಾಗಿ ನಮ್ಮ ಅಹವಾಲುಗಳು ಕಾರ್ಯಗತವಾದವು ಎನ್ನುವ ನಿದರ್ಶನಗಳು ವಿರಳ. ಮನುಷ್ಯ ಮನುಷ್ಯರ ನಡುವಿನ ಸಂಘರ್ಷವಾದ ಮುಷ್ಕರ, ಬಂದ್‍ಗೆ ಸುಮಾರು ಮೂರೂವರೆ ಸಹಸ್ರ ವರ್ಷಗಳ ಇತಿಹಾಸವಿದೆ.

ಕ್ರಿ.ಪೂ.1580ರಲ್ಲಿ ಈಜಿಪ್ಟ್‌ನ ಪಿರಮಿಡ್ ನಿರ್ಮಾಣದ ಕಾರ್ಮಿಕರು ತಮಗೆ ವೇತನ ರೂಪದಲ್ಲಿ ಸಂದಾಯವಾಗುತ್ತಿದ್ದ ಬೆಳ್ಳುಳ್ಳಿಯ ಪ್ರಮಾಣ ಹೆಚ್ಚಿಸಬೇಕೆಂದು ಅಂದಿನ ಅರಸನನ್ನು ಒತ್ತಾಯಿಸಿ ಧರಣಿ ನಡೆಸಿದ್ದರು. ಸ್ವಾರಸ್ಯವೆಂದರೆ, ಇತಿಹಾಸದಾದ್ಯಂತ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯು ಪರ, ವಿರೋಧ ಎರಡನ್ನೂ ಕಂಡಿದೆ.

ಒಂದಲ್ಲೊಂದು ಕಾರಣಕ್ಕೆ ಬಂದ್ ಅವ್ಯಾಹತವಾಗುತ್ತಿದೆ. ಯಾವ ತೆರದಿ ನಾವು ನಮ್ಮ ಬೇಡಿಕೆಗಳನ್ನು ಸರ್ಕಾರಗಳ ಮುಂದೆ ಹೇಗೆ ಜನತಂತ್ರದ ಇತಿಮಿತಿಯಲ್ಲಿ ಪರಿಣಾಮಕಾರಿಯಾಗಿ ಇಟ್ಟು ಒತ್ತಾಯಿಸಬೇಕು ಎನ್ನುವುದರತ್ತ ಒಂದೆರಡು ಹೆಜ್ಜೆಗಳನ್ನಾದರೂ ಮುಂದಿಡೋಣ.

ನಮ್ಮ ಜೀವನಶೈಲಿಯನ್ನು ಇಂದು ಬಹುತೇಕ ತಂತ್ರಜ್ಞಾನವೇ ನಿರ್ದೇಶಿಸಿದೆ. ಅದನ್ನೇ ಸಮರ್ಥವಾಗಿ ಬಳಸಿಕೊಳ್ಳಬಹುದಲ್ಲವೇ? ಹಾಗಾಗಿ ನಮ್ಮ ತಲ್ಲಣ, ತವಕಗಳನ್ನು ನಮ್ಮ ಜನಪ್ರತಿನಿಧಿಗಳಿಗೆ ಎಸ್ಎಂಎಸ್‌, ಇ-ಮೇಲ್, ವಾಟ್ಸ್‌ಆ್ಯಪ್, ಟ್ವೀಟ್ ವಗೈರೆ ಮೂಲಕ ಧ್ವನಿಪೂರ್ವಕವಾಗಿ ರವಾನಿಸಬಹುದು. ಯಾವುದೇ ನ್ಯಾಯಬದ್ಧ ಬೇಡಿಕೆಯಿರಲಿ ನಮ್ಮ ಸಾಂವಿಧಾನಿಕ ಇತಿಮಿತಿಯಲ್ಲಿ ಹೇಗೆ ಪರಿಹರಿಸಬಹುದೆಂಬ ಸ್ಥೂಲ ಕಲ್ಪನೆಯಾದರೂ ನಮಗಿದ್ದರೆ ಸರ್ಕಾರಗಳನ್ನು ಒತ್ತಾಯಿಸಲು ಸರಾಗವಾದೀತು. ನಮ್ಮ ಹಕ್ಕುಗಳನ್ನು ಪ್ರತಿನಿಧಿಸುವ ಹಾದಿಯಲ್ಲಿ ಯಾರೊಬ್ಬರ ದಿನಮಾನದ ನೆಮ್ಮದಿಯ ಹಕ್ಕಿಗೂ ಭಂಗವಾಗಬಾರದು ಅಲ್ಲವೇ?

ಬಂದ್‌ನಿಂದ ಮಹತ್ತರವಾದ ತಿರುವೇನೂ ಪ್ರಾಪ್ತವಾಗದೆಂಬುದು ಸ್ವತಃ ಸಂಘಟಕರಿಗೆ ತಿಳಿಯದ್ದೇನಲ್ಲ. ಆದರೆ ಇಲ್ಲೊಂದು ಸೂಕ್ಷ್ಮವೆಂದರೆ, ತನ್ನಲ್ಲಿ ನೇತಾರನೊಬ್ಬನಿದ್ದಾನೆ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ಬಂದ್ ಅವರಿಗೆ ಸಾಧನವಾಗುತ್ತದೆ. ಇದಕ್ಕೆ ಕೆಲವು ಅಪವಾದಗಳಿವೆ. ಬಸ್ಸು, ರೈಲು ನಿಲುಗಡೆಯಿಂದ ವ್ಯಾಪಾರ, ವಹಿವಾಟು ಸ್ತಬ್ಧವಾಗುತ್ತವೆ. ಇದರಿಂದ ಆಗುವ ಆರ್ಥಿಕ ನಷ್ಟ ಕೋಟ್ಯಂತರ ರೂಪಾಯಿ.

ಜಪಾನ್, ಜರ್ಮನಿ, ಫ್ರಾನ್ಸ್ ಮುಂತಾದ ದೇಶಗಳಲ್ಲಿ ಜನ ಯಾವುದೇ ಬಗೆಯಲ್ಲೂ ತಮ್ಮ ದಿನಗಳನ್ನು ಕಳೆದುಕೊಳ್ಳದೆ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಪರಿ ಮಾದರಿಯಾಗಿದೆ. ಪ್ರತಿಭಟನಾರ್ಥವಾಗಿ ಅವರು ಒಂದೆರಡು ತಾಸು ಹೆಚ್ಚುವರಿ ಕೆಲಸ ನಿರ್ವಹಿಸುತ್ತಾರೆ. ಹಗಲು ಪೋಲಾಗಿಸದೆ ರಾತ್ರಿಯ ವೇಳೆ ಕೆಲ ನಿಮಿಷಗಳವರಿಗಷ್ಟೇ ಮೆರವಣಿಗೆ ನಡೆಸುವ ರೂಢಿ ಅನುಪಮ. ರಾಷ್ಟ್ರದ ವರಮಾನವನ್ನು ಹೆಚ್ಚಿಸುವಂತೆ ಅವರ ಚಳವಳಿಗಳು ರೂಪಾಂತರಗೊಳ್ಳುತ್ತವೆ. ಇದಕ್ಕನ್ನಬೇಕಲ್ಲವೇ ದೇಶಪ್ರೇಮ, ಬದ್ಧತೆ ಎಂದು.

ಕೆಲವೊಮ್ಮೆ ಬಂದ್ ಸಂದರ್ಭವನ್ನು ಕಿಡಿಗೇಡಿಗಳು ದುರುಪಯೋಗ ಪಡಿಸಿಕೊಳ್ಳುವುದರಿಂದ ಶಿಸ್ತು, ಕಾನೂನು ಪಾಲನೆ ಅಯೋಮಯವಾಗುವ ಸಾಧ್ಯತೆಯಿದ್ದೇ ಇದೆ. ಹೆಚ್ಚಾಗಿ ಅಮಾಯಕರೇ ಉಪದ್ರವಾನುಭವಿಗಳೆಂದು ಬೇರೆ ಹೇಳಬೇಕಿಲ್ಲ. ಆಸ್ಪತ್ರೆಗಳು ತೆರೆದು, ವೈದ್ಯಕೀಯ ಸೇವೆ ಲಭ್ಯವಿದ್ದರೂ ರೋಗಿಗಳು ಅಲ್ಲಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲದಿದ್ದರೆ ಹೇಗೆ? ತುರ್ತು ಶಸ್ತ್ರಚಿಕಿತ್ಸೆ, ಹೆರಿಗೆಗೆ ಒಳಗಾಗಬೇಕಾದವರ ಪಾಡೇನು?

‘ಹೊಸ ವರ್ಷದಲ್ಲಿ ನಿರಂತರ ಬಂದ್‌ನಿಂದ ನಿಮಗೆ ಬವಣೆಯಾಗದಿರಲಿ’ ಎಂದು ಶುಭಾಶಯ ವಿನಿಮಯ ಮಾಡಿಕೊಳ್ಳುವಂತಹ ಸಂದರ್ಭ ಒದಗುವ ಮುನ್ನವೇ ಜಾಗೃತಿ ಮೂಡಬೇಕಿದೆ! ಪ್ರಜೆಗಳ ಹಕ್ಕುಗಳು, ಹೊಣೆಗಾರಿಕೆಗಳ ಬಗ್ಗೆ ನಮ್ಮ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಆಗಿಂದಾಗ್ಗೆ ಜನಶಿಕ್ಷಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ನಮ್ಮ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರಗಳ ಮೇಲೆ ಆಗ್ರಹಪೂರ್ವಕ ಒತ್ತಾಯವನ್ನು ಯಾರೂ ವಿರೋಧಿಸರು. ಆದರೆ ಆಗ್ರಹದ ಹಾದಿ ಸಾತ್ವಿಕವಾಗಿರಬೇಕು ಎನ್ನುವುದೇ ಎಲ್ಲರ ಅಭಿಲಾಷೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು