ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಭಾರದಿಂದ ನಲುಗುತ್ತಿದ್ದಾಳೆ ಧರಣಿ

ನಿರ್ಜೀವ ವಸ್ತುಗಳ ಭಾರದಿಂದ ಕುಸಿಯುತ್ತಿದೆ ನಮ್ಮ ನೆಲ, ನೆಲೆ
Last Updated 27 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಇಸವಿ 2020, ಜಗತ್ತನ್ನು ಕಾಡಿದ ಕೊರೊನಾ ವೈರಾಣುವಿಗಾಗಿ ನೆನಪಿನಲ್ಲಿ ಉಳಿಯುವ ವರ್ಷ ಮಾತ್ರವಲ್ಲ, ಇನ್ನೊಂದು ಮಹತ್ತರ ಮತ್ತು ಮನುಷ್ಯ ಜಗತ್ತಿಗೆ ಎಚ್ಚರಿಕೆ ನೀಡುವ ವೈಜ್ಞಾನಿಕ ವರದಿ ಪ್ರಕಟವಾದ ವರ್ಷವಾಗಿಯೂ ವಿಶೇಷವೆನಿಸುತ್ತದೆ. ಅದೆಂದರೆ, ವೈಜ್ಞಾನಿಕ ನಿಯತಕಾಲಿಕ ‘ನೇಚರ್’ನಲ್ಲಿ ಡಿ. 9ರಂದು ಪ್ರಕಟವಾದ ಅಧ್ಯಯನ ವರದಿಯೊಂದು ಹೇಳುವಂತೆ, 2020ರಿಂದ, ಮಾನವಜನ್ಯ ವಸ್ತುಗಳು ಭೂಮಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರಾಕೃತಿಕ ಸಂಪನ್ಮೂಲ ಮತ್ತು ಸಮಸ್ತ ಜೀವರಾಶಿಗಳ ಭಾರವನ್ನು ಮೀರಿಸುತ್ತಿವೆ.

ಮಾನವಜನ್ಯ ವಸ್ತುಗಳೆಂದರೆ, ಭೂಮಿಯಲ್ಲಿ ಮನುಷ್ಯ ತನ್ನ ಬದುಕು ಸುಖಕರವಾಗಿರಲೆಂದು ಅಗಾಧ ಪ್ರಮಾಣದಲ್ಲಿ ನಿರ್ಮಿಸುತ್ತಿರುವ ನಿರ್ಜೀವ ಘನ ವಸ್ತುಗಳು. ಮುಖ್ಯವಾಗಿ, ಅಭಿವೃದ್ಧಿ ಮತ್ತು ಮನುಷ್ಯಜೀವನದ ಸೌಕರ್ಯಗಳ ಪೂರೈಕೆಯ ಹೆಸರಲ್ಲಿ ನಾವು ನಿರ್ಮಿಸುತ್ತಿರುವ ಮನೆಗಳು, ಕಟ್ಟಡಗಳು, ಹಡಗುಗಳು, ರಸ್ತೆಗಳು, ಪ್ಲಾಸ್ಟಿಕ್ ಪದಾರ್ಥಗಳು, ಬಟ್ಟೆ, ಎಲೆಕ್ಟ್ರಾನಿಕ್‌ ವಸ್ತುಗಳು, ಗಾಜು, ಲೋಹದಂತಹ ವಸ್ತುಗಳ ತೂಕವು ಪ್ರತೀ 20 ವರ್ಷಗಳಿಗೊಮ್ಮೆ ದ್ವಿಗುಣಗೊಳ್ಳುತ್ತಿದೆ.

ಈ ವಿಶಿಷ್ಟ ಸಂಶೋಧನೆಯಲ್ಲಿ ಪಾಲ್ಗೊಂಡ ವಿಜ್ಞಾನಿ ಎಮಿಲಿ ಎಲ್ಹಾಚಮ್ ಹೇಳುವಂತೆ, ಭೂಮಿಯ ಮೇಲೆ ಹೆಚ್ಚುತ್ತಿರುವ ಮನುಷ್ಯನ ಹೆಜ್ಜೆ ಗುರುತಿನಿಂದಾದ ಈ ಮಹಾನ್ ಪಲ್ಲಟ, ಭೂಮಿಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಬೆಳವಣಿಗೆ.

ಈ ವರದಿಯ ಪ್ರಕಾರ, ಮನುಷ್ಯ ತನ್ನ ಕೃಷಿಕ್ರಾಂತಿಯ ದಿನಗಳಿಂದ ಆರಂಭಿಸಿದ ನೈಸರ್ಗಿಕ ಸಂಪನ್ಮೂಲಗಳ ಅನಿಯಂತ್ರಿತ ಬಳಕೆಯಿಂದಾಗಿ, ಭೂಮಿಯ ಮೇಲಿನ ಜೀವವೈವಿಧ್ಯಗಳಾದ ಸಸ್ಯಗಳು ಮತ್ತು ಪ್ರಾಣಿಗಳ ತೂಕ ಅರ್ಧದಷ್ಟು ಕಡಿಮೆಯಾಗಿದೆ. ತದ್ವಿರುದ್ಧವಾಗಿ, ಮಾನವನಿರ್ಮಿತ ನಿರ್ಜೀವ ವಸ್ತುಗಳ ತೂಕ ಕ್ಷಿಪ್ರಗತಿಯಲ್ಲಿ ಏರುತ್ತಿದೆ. ವಿಶೇಷವೆಂದರೆ, 20ನೇ ಶತಮಾನದ ಆರಂಭದಲ್ಲಿ, ಮಾನವ ನಿರ್ಮಿತ ವಸ್ತುಗಳ ಭಾರ, ಜೀವಸಂಕುಲದ ಭಾರಕ್ಕೆ ಹೋಲಿಸಿದರೆ ಕೇವಲ ಶೇ 3ರಷ್ಟಿತ್ತು. ವಿಶೇಷವಾಗಿ, ಇವುಗಳ ತೀವ್ರಗತಿಯ ಹೆಚ್ಚಳವನ್ನು 1990ರ ನಂತರದ ಜಾಗತೀಕರಣದೊಂದಿಗೆ ಸ್ಪಷ್ಟವಾಗಿ ಗುರುತಿಸಬಹುದು.

ಈ ಅಧ್ಯಯನದಲ್ಲಿ ಪಾಲ್ಗೊಂಡ ಇನ್ನೊಬ್ಬ ವಿಜ್ಞಾನಿ ರೊನ್ ಮಿಲೋ ಹೇಳುವಂತೆ, ಈ ವರದಿ ಪ್ರಸ್ತುತಪಡಿಸಿದ ಆಘಾತಕಾರಿ ಅಂಕಿಅಂಶದಿಂದಾಗಿ, ಭೂಮಿಯ ಉಳಿವಿಗಾಗಿ ತನ್ನನ್ನು ತೊಡಗಿಸಿಕೊಳ್ಳಬೇಕಾದ ಮನುಷ್ಯನ ಜವಾಬ್ದಾರಿ ಹೆಚ್ಚಾಗಿದೆ. ಹೀಗೆಯೇ, ಪ್ರಸಕ್ತ ಬೆಳವಣಿಗೆಯ ದರದಲ್ಲಿ ಮಾನವಜನ್ಯ ವಸ್ತುಗಳ ಉತ್ಪಾದನೆ ಮುಂದುವರಿಯುತ್ತಲೇ ಇದೆ. ಇದಕ್ಕೆ ತದ್ವಿರುದ್ಧವಾಗಿ, ಆದರೆ ಸಹಜವಾಗಿ, ಸಕಲ ಜೀವರಾಶಿಗಳ ಮತ್ತು ಪ್ರಕೃತಿಯ ಅಸ್ತಿತ್ವ ಮಾಸುತ್ತಿದೆ. ಮುಖ್ಯವಾಗಿ, ಅರಣ್ಯನಾಶದಿಂದಾಗಿ ಮತ್ತು ಕೃಷಿ ಚಟುವಟಿಕೆಗಳಿಗೆ ಭೂಬಳಕೆ ಗಣನೀಯವಾಗಿ ಹೆಚ್ಚಾಗಿರುವುದರಿಂದ, ಮಾನವೇತರ ಜೀವರಾಶಿಗಳು ಭೂಮಿಯಿಂದ ಶಾಶ್ವತವಾಗಿ ಕಣ್ಮರೆಯಾಗಲಿವೆ.

ಇದರೊಂದಿಗೆ, ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಇಟ್ಟಿಗೆಯ ಬದಲಾಗಿ ಸಿಮೆಂಟನ್ನು ಹೆಚ್ಚಾಗಿ ಬಳಸುತ್ತಿರುವುದೂ ಮಾನವನಿರ್ಮಿತ ವಸ್ತುಗಳ ಭಾರದ ಹೆಚ್ಚಳಕ್ಕೆ ಕಾರಣವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಸಕ್ತ ದರದಲ್ಲಿ ಸರಾಸರಿಯಂತೆ ಭೂಮಿಯ ಮೇಲಿರುವ ಪ್ರತೀ ಮನುಷ್ಯನ ತೂಕದಷ್ಟು ಮಾನವಜನ್ಯ ವಸ್ತುಗಳ ಭಾರ ವಾರಕ್ಕೊಮ್ಮೆ ಸೇರ್ಪಡೆಯಾಗುತ್ತಿದೆ. ಇಲ್ಲಿ ಕೊಟ್ಟಿರುವ ಒಂದು ಆಘಾತಕಾರಿ ಉದಾಹರಣೆಯಂತೆ, ಸದ್ಯಕ್ಕೆ ಪ್ರಪಂಚದಲ್ಲಿ ಶೇಖರಣೆಯಾಗಿರುವ ಪ್ಲಾಸ್ಟಿಕ್ ವಸ್ತುಗಳ ತೂಕವೇ ಪ್ರಸ್ತುತ ಭೂಮಿ ಮತ್ತು ಸಮುದ್ರದಲ್ಲಿರುವ ಪ್ರಾಣಿಗಳ ತೂಕಕ್ಕಿಂತ ಎರಡು ಪಟ್ಟು ಹೆಚ್ಚಿದೆ.

ಗಮನಾರ್ಹ ಅಂಶವೆಂದರೆ, ಈ ವರದಿಯಲ್ಲಿ ಮಾನವಜನ್ಯ ತ್ಯಾಜ್ಯ ವಸ್ತುಗಳನ್ನು ಪರಿಗಣಿಸಿಲ್ಲ. ಒಂದು ವೇಳೆ ಅವುಗಳನ್ನೂ ಸೇರಿಸಿದ್ದರೆ, 2013ರಿಂದಲೇ ಮಾನವಜನ್ಯ ತ್ಯಾಜ್ಯ ವಸ್ತುಗಳು, ಜೀವರಾಶಿಗಳ ಭಾರಕ್ಕಿಂತ ಹೆಚ್ಚಾಗಲು ಆರಂಭಿಸಿದ್ದವು.

ಕೊನೆಯಲ್ಲಿ, ಅಂತೂ ಮನುಷ್ಯನಿಂದು ಈ ಭೂಮಿಯ ಸಂಪೂರ್ಣ ಒಡೆಯನಾಗಿದ್ದಾನೆ. ಆದರೆ, ಈ ಮಹಾನ್ ‘ಸಾಧನೆ’ಯ ಹಾದಿಯುದ್ದಕ್ಕೂ ಕ್ರೌರ್ಯವಿದೆ, ಹಿಂಸೆಯಿದೆ, ಉಳಿದ ಜೀವರಾಶಿಗಳು ಮತ್ತು ಪ್ರಕೃತಿಯ ಮೌನದ ಕಣ್ಣೀರಿದೆ. ಮಾನವ ಜನಾಂಗ ಒಂದು ಮಹತ್ತರ ‘ಮೈಲಿಗಲ್ಲು’ ಮುಟ್ಟಿದ ಈ ಕ್ಷಣದಲ್ಲಿ, ಮನುಷ್ಯ ನಿಂತಿರುವ ಭೂಮಿ ತನ್ನ ಹಸಿರು ಹೊದಿಕೆ ಕಳಚಿಕೊಂಡು ಮಾನವಜನ್ಯ ನಿರ್ಜೀವ ವಸ್ತುಗಳ ಭಾರದಿಂದ ಕುಸಿಯುತ್ತಿದೆ. ಹಾಗಾಗಿ, ನಾವಿಂದು ಹಿಂದೆಂದಿಗಿಂತಲೂ ಹೆಚ್ಚಿನ ಜವಾಬ್ದಾರಿಯುತ ಸ್ಥಾನದಿಂದ ನಮ್ಮ ನೆಲೆಯನ್ನು ಉಳಿಸಿಕೊಳ್ಳಬೇಕಾಗಿದೆ.

ಪ್ರಸ್ತುತ, ಭೂಮಿಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ ಮತ್ತು ಪರಿಹಾರ ಕೈಮೀರಿ ಹೋಗಿದೆ ಕೂಡ. ಆದರೂ ಮನುಷ್ಯ ತನ್ನ ಅದಮ್ಯ ಇಚ್ಛಾಶಕ್ತಿ ಪ್ರದರ್ಶಿಸಿ, ಜಾಗತಿಕ ಮಟ್ಟದಲ್ಲಿ ಸಾಮೂಹಿಕ ಪ್ರಯತ್ನಗಳಿಂದ, ತೀವ್ರಗತಿಯಲ್ಲಿ ಹೆಚ್ಚುತ್ತಿರುವ ತಾಪಮಾನ, ಹವಾಮಾನ ವೈಪರೀತ್ಯ, ಜೀವ ಪ್ರಭೇದಗಳ ಅಳಿವು ಇತ್ಯಾದಿಗಳನ್ನೂ ಸಮರ್ಪಕವಾಗಿ ತಡೆಹಿಡಿಯುವ ಮಾರ್ಗಗಳನ್ನು ಯೋಚಿಸಬೇಕಾಗಿದೆ.

ಗಾಂಧೀಜಿ ಹೇಳಿದಂತೆ, ಮನುಷ್ಯನ ಅತಿಯಾದ ದುರಾಸೆಗಳನ್ನು ಪೂರೈಸುವಷ್ಟು ಭೂಮಿ ಶಕ್ತಳಾಗಿಲ್ಲ, ಬದಲಾಗಿ ನಾವು ನಮ್ಮ ಜೀವನದೃಷ್ಟಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಇದರ ಮೂಲತತ್ವ, ಸರಳತೆ ಮತ್ತು ಸಹಬಾಳ್ವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT