ಸೋಮವಾರ, ಅಕ್ಟೋಬರ್ 26, 2020
28 °C

ಸಂಗತ: ಬೇಕಾಗಿದೆ ಜ್ಞಾನದ ಹಸಿವು

ಡಾ. ಜ್ಯೋತಿ Updated:

ಅಕ್ಷರ ಗಾತ್ರ : | |

ಮೃಗಾಲಯಗಳಲ್ಲಿ ಅಥವಾ ಸಂರಕ್ಷಿತ ಅರಣ್ಯಗಳಲ್ಲಿ ಪ್ರಾಣಿಗಳ ದುರವಸ್ಥೆಯನ್ನು ನೋಡಿದಾಗ ಅನ್ನಿಸುವುದಿದೆ, ‘ಅರಣ್ಯ ಇಲಾಖೆಗಳಲ್ಲಿ ಕೆಲಸಕ್ಕೆ ಸೇರಲಿಚ್ಛಿಸುವವರು, ಇದೊಂದು ಕೇವಲ ಸಂಬಳಕ್ಕಾಗಿ ಮಾಡುವ ಕೆಲಸವಲ್ಲ, ಶ್ರೇಷ್ಠ ಸೇವೆಯೂ ಅಹುದೆನ್ನುವ ಅರಿವನ್ನು ಮೈಗೂಡಿಸಿಕೊಂಡಿರಬೇಕು. ಮಾತ್ರವಲ್ಲ, ಸಕಲ ಜೀವಸಂಕುಲ ಮತ್ತು ಪರಿಸರದ ಬಗ್ಗೆ ವಿಶೇಷ ಕಾಳಜಿಯಿದ್ದವರಿಗಷ್ಟೇ ಈ ವೃತ್ತಿಯಲ್ಲಿ ಆದ್ಯತೆಯಿರಬೇಕು’ ಎಂದು. ಅದರಂತೆಯೇ, ಶಿಕ್ಷಕ ವೃತ್ತಿಯೂ ಬರೀ ಸಂಬಳಕ್ಕಾಗಿ ಮಾಡುವ ಯಾಂತ್ರಿಕ ಕಾಯಕವಲ್ಲ. ಇದೊಂದು ಮಹೋನ್ನತ ಸಮಾಜ ಸೇವೆ, ಹಸಿಮಣ್ಣನ್ನು ಮಡಕೆಯಾಗಿಸುವ ಕುಂಬಾರ ವೃತ್ತಿ.

ಹೆತ್ತವರು ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಪ್ಪಿಸುವ ಈ ಜವಾಬ್ದಾರಿಯ ಘನತೆಯನ್ನು ಶಿಕ್ಷಕರಾದವರು ಅರಿಯುವುದು ಅಗತ್ಯ. ಯಾಕೆಂದರೆ, ಅಧ್ಯಯನ ಪ್ರಕ್ರಿಯೆಯಲ್ಲಿ ನಿಜವಾಗಿ ನಡೆಯಬೇಕಾದುದು, ಮುಂದಿನ ಪೀಳಿಗೆಯನ್ನು ರೂಪಿಸುವ ಮಹತ್ಕಾರ್ಯ. ಆದುದರಿಂದ, ಕಲಿಸುವುದನ್ನು ಪ್ರೀತಿಸುವ ಸೇವಾ ಮನೋಭಾವ ಹೊಂದಿದವರು ಮಾತ್ರ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಸಮಾಜಕ್ಕೆ ಒಳಿತು.

ವಿಶ್ವ ಶಿಕ್ಷಕರ ದಿನಾಚರಣೆಯ (ಅ. 5) ಈ ಸಂದರ್ಭದಲ್ಲಿ, ಶಿಕ್ಷಕ ವೃತ್ತಿಯು ಬೃಹತ್ ಮಾಹಿತಿ ಸ್ಫೋಟದ ಇಂದಿನ ಕಾಲಘಟ್ಟದಲ್ಲಿ ಹೇಗೆ ತನ್ನ ಮಹತ್ವ ಕಾಯ್ದುಕೊಳ್ಳುತ್ತದೆ ಎಂದು ವಿಮರ್ಶಿಸಬೇಕಾ
ದುದು, ಕಾಲಕಾಲಕ್ಕೆ ಇಂತಹ ಪರಾಮರ್ಶೆಯನ್ನು ಮಾಡಿಕೊಳ್ಳಬೇಕಾದುದು ಅತ್ಯಗತ್ಯ.

ಒಂದು ಕಾಲದಲ್ಲಿ ಮಾಹಿತಿಯ ಕೇಂದ್ರಬಿಂದುವಾಗಿದ್ದ ಶಿಕ್ಷಕ, ಅಗಾಧ ಪ್ರಮಾಣದ ಮಾಹಿತಿ ಲಭ್ಯವಿರುವ ಈ ವರ್ತಮಾನದಲ್ಲಿ, ತನ್ನ ತರಗತಿಯ ಸಂವಹನವನ್ನು ದ್ವಿಮುಖಗೊಳಿಸಿ, ಅವುಗಳ ಸಮಗ್ರ ಚರ್ಚೆ ಮತ್ತು ವಿಶ್ಲೇಷಣೆ ನಡೆಸಬೇಕಾಗಿದೆ. ಜರ್ಮನಿಯ ಶಿಕ್ಷಣತಜ್ಞ ಜೋಸೆಫ್ ಆಲ್ಬರ್ಸ್ ಹೇಳುವಂತೆ, ‘ಉತ್ತಮ ಬೋಧನೆಯೆಂದರೆ ಉತ್ತರ ನೀಡುವುದಲ್ಲ. ಬದಲಾಗಿ, ಸರಿಯಾದ ಪ್ರಶ್ನೆಗಳನ್ನು ಮೂಡಿಸುವುದು’. ಅಂದರೆ, ವಿಮರ್ಶಾತ್ಮಕ ಚಿಂತನೆಯ ಮೂಲಕ ಕಲಿಕೆಯಲ್ಲಿ ಸ್ವಾವಲಂಬನೆ ತರುವುದು. ಆದ್ದರಿಂದ, ಮಾಹಿತಿ ನೀಡುವುದಷ್ಟೇ ಶಿಕ್ಷಕರ ಹೊಣೆಗಾರಿಕೆಯಲ್ಲ. ವಿಶೇಷವಾಗಿ, ಈ ಮಾಹಿತಿಯ ಮೂಲಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕುತೂಹಲ, ಕಲ್ಪನೆ, ಅರಿವು, ಸೃಜನಶೀಲತೆ, ಪ್ರಶ್ನಿಸುವ ಗುಣ ಮತ್ತು ಹೊಸ ಜ್ಞಾನವನ್ನು ಉದ್ದೀಪನಗೊಳಿಸಬೇಕಾಗಿದೆ. ಇದರ ಫಲಶ್ರುತಿಯಾಗಿ, ಸರಿಯಾದ ಪ್ರಶ್ನೆ ಕೇಳುವುದನ್ನು ಕಲಿತವನೇ ಉತ್ತಮ ವಿದ್ಯಾರ್ಥಿ.

ಈ ಘನಕಾರ್ಯ ನೆರವೇರಿಸಲು, ಶಿಕ್ಷಕ ಬಹಳ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ವಿಸ್ತ್ೃತವಾಗಿ ಹೇಳುವುದಾದರೆ, ವಿಷಯದ ಆಳವಾದ ಜ್ಞಾನ, ಬೇರೆ ಜ್ಞಾನ ಶಾಖೆಗಳೊಂದಿಗೆ ಮತ್ತು ಹೊರ ಜಗತ್ತಿನ ವಿದ್ಯಮಾನಗಳೊಂದಿಗೆ ವಿಷಯಕ್ಕಿರುವ ಸಂಬಂಧ, ಇದನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವುದಕ್ಕೆ ಸಮರ್ಪಕ ಉದಾಹರಣೆ ಹಾಗೂ ಕಲಿಕೆಯನ್ನು ಅಳೆಯುವ ಮಾಪನ ಎಲ್ಲವನ್ನೂ ಶಿಕ್ಷಕ ಸಿದ್ಧಗೊಳಿಸಿಕೊಳ್ಳಬೇಕಾಗುತ್ತದೆ.

ಈ ಪ್ರಸ್ತುತತೆಯಲ್ಲಿ, ಒಬ್ಬ ಒಳ್ಳೆಯ ಶಿಕ್ಷಕಸ್ವಕಲಿಕೆಯನ್ನು ಇಷ್ಟಪಡುತ್ತಾನೆ. ಮೂಲತಃ, ತಾನು ಇನ್ನೊಬ್ಬರಿಗೆ ಕಲಿಸುತ್ತೇನೆ ಎನ್ನುವುದು ಮನುಷ್ಯನ ಅಹಂಕಾರ ಮತ್ತು ಆತ್ಮವಿಶ್ವಾಸದ ಸಂಕೇತ. ಯಾಕೆಂದರೆ, ವಿದ್ಯಾರ್ಥಿಗಳಿಗೆ ಜ್ಞಾನ ಕೊಡುವವರು ತಮ್ಮ ಜ್ಞಾನಭಂಡಾರವನ್ನು ನವೀಕರಿಸುತ್ತಲೇ ಇರಬೇಕಾಗುತ್ತದೆ. ಈ ನಿಟ್ಟಿನಲ್ಲಿ, ತರಗತಿಯನ್ನು ಹೊಸ ಅರಿವಿನ ಪ್ರಯೋಗಶಾಲೆ ಎನ್ನಬಹುದು. ಶೇಷ್ಠ ಶಿಕ್ಷಕನಾದವನು, ಕಲಿಸುವುದರೊಂದಿಗೆ ಏನಾದರೂ ಹೊಸತನ್ನು ತಾನೂ ಕಲಿಯುತ್ತಿರುತ್ತಾನೆ. ಸಾಮಾನ್ಯವಾಗಿ ವೈದ್ಯರು ಶಸ್ತ್ರಕ್ರಿಯೆಯ ಮೊದಲು ತನ್ನ ಕ್ಷೇತ್ರದ ತಜ್ಞರೊಂದಿಗೆ ಚರ್ಚಿಸಿ ಕೆಲಸ ಶುರು ಮಾಡುತ್ತಾರೆ. ಇದನ್ನು ಶಿಕ್ಷಕರೂ ಮಾಡಿದರೆ ತರಗತಿ ಪ್ರಯೋಗಗಳು ಹೆಚ್ಚು ಯಶಸ್ವಿಯಾಗುತ್ತವೆ. ಆದರೆ, ಶಿಕ್ಷಕರು ತಮ್ಮ ಸಹೋದ್ಯೋಗಿಗಳೊಂದಿಗೆ ವಿಷಯಗಳ ಕುರಿತು ಚರ್ಚಿಸುವುದನ್ನು ಕಾಣುವುದು ಅಪರೂಪ.

ಶಿಕ್ಷಣದ ಮುಖ್ಯ ಲಕ್ಷ್ಯ ವಿದ್ಯಾರ್ಥಿಯೇ ಹೊರತು ಪಠ್ಯಕ್ರಮವಲ್ಲ. ಅಂದರೆ, ವಿದ್ಯಾರ್ಥಿಯನ್ನು ಸಮಗ್ರ ಅಭಿವೃದ್ಧಿಯ ಮೂಲಕ ಹೊರ ಪ್ರಪಂಚಕ್ಕೆ ಅಣಿಯಾಗಿಸುವುದೇ ಶಿಕ್ಷಣ. ವಿಷಾದವೆಂದರೆ, ಭವಿಷ್ಯ ರೂಪಿಸುವ ಆನಂದದಾಯಕ ಚಟುವಟಿಕೆಯಾಗಿ ಇರಬೇಕಾಗಿರುವ ಶಿಕ್ಷಣಕ್ಕೆ, ಹಾಜರಾತಿ ಕಡ್ಡಾಯಗೊಳಿಸಬೇಕಾದ ಸ್ಥಿತಿಯಲ್ಲಿದ್ದೇವೆ. ಶಿಕ್ಷಣದ ಕೇಂದ್ರಬಿಂದುವಾದ ವಿದ್ಯಾರ್ಥಿ, ಯಾಕೆ ಕಲಿಕೆಯ ಪ್ರಕ್ರಿಯೆಯಲ್ಲಿ ಪರಕೀಯತೆ ಅನುಭವಿಸುತ್ತಿದ್ದಾನೆ ಎನ್ನುವುದರ ಬಗ್ಗೆ ಚಿಂತಿಸಬೇಕಾಗಿದೆ.

ಯಾರು ಕಲಿಸಲು ಧೈರ್ಯ ಮಾಡುತ್ತಾರೋ ಅವರು ಸ್ವಕಲಿಕೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಶಿಕ್ಷಕ ಭವಿಷ್ಯದ ಸಂಪನ್ಮೂಲಗಳಾದ ವಿದ್ಯಾರ್ಥಿಗಳ ವ್ಯವಸ್ಥಾಪಕನೂ ಹೌದು. ಅಮೆರಿಕದ ಲೇಖಕ ಮಾರ್ಟಿನ್ ಹೆನ್ರಿ ಫಿಷರ್ ಹೇಳುವಂತೆ, ‘ನಮ್ಮ ಶಿಕ್ಷಣ ವ್ಯವಸ್ಥೆಯ ಎರಡು ದುರಂತಗಳೆಂದರೆ, ‘ಅಸಮರ್ಥ ವಿದ್ಯಾರ್ಥಿಗಳನ್ನು ಸಮರ್ಥ ಶಿಕ್ಷಕರು ಮತ್ತು ಅಸಮರ್ಥ ಶಿಕ್ಷಕರನ್ನು ಸಮರ್ಥ ವಿದ್ಯಾರ್ಥಿಗಳು ಮುಖಾಮುಖಿಯಾಗಿರುವುದು’. ಆದ್ದರಿಂದ, ನಾವು ನಿನ್ನೆ ಕಲಿಸಿದಂತೆ ಇಂದಿನ ವಿದ್ಯಾರ್ಥಿಗಳಿಗೆ ಕಲಿಸಿದರೆ, ಅವರ ನಾಳೆಯನ್ನು ದೋಚುತ್ತೇವೆ. ಹೀಗಾಗಿ, ಶಿಕ್ಷಕ ನಿರಂತರ ಸ್ವಜ್ಞಾನಾರ್ಜನೆಯೊಂದಿಗೆ, ವಿದ್ಯಾರ್ಥಿಗಳನ್ನು ಮರಿಹುಳುವಿನಿಂದ ಚಿಟ್ಟೆಗಳನ್ನಾಗಿ ಮಾರ್ಪಡಿಸುವ ಕರಕುಶಲ ಕಾರ್ಯದಲ್ಲಿ ಕೈಜೋಡಿಸಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು